“ಅವರ ಪ್ರೀತಿಯೇ ಇಲ್ಲಿಗೆ ಕರೆತಂದಿದೆ’
Team Udayavani, Oct 22, 2018, 6:10 AM IST
ಗದಗ: “ಎಲ್ಲಿಯೋ ಇದ್ದ ನನ್ನನ್ನು ತಮ್ಮ ಶುಭಾಶೀರ್ವಾದದೊಂದಿಗೆ ಮಠಾಧೀಶರನ್ನಾಗಿ ಮಾಡಿದ್ದು, ಇದೀಗ ತಾವೇ ಪೀಠಾ ಧಿಪತಿಯಾಗಿದ್ದ ಮಠಕ್ಕೆ ಉತ್ತರಾ ಧಿಕಾರಿಯನ್ನಾಗಿ ಮಾಡಿರುವುದು ನೋಡಿದರೆ ನನ್ನ ಮೇಲಿನ ಪ್ರೀತಿ-ವಿಶ್ವಾಸವೇ ಆಗಿರಬೇಕು. ಒಂದಂತೂ ಸ್ಪಷ್ಟ ಗುರುಗಳ ಆಶಯ, ಚಿಂತನೆ, ತತ್ವಗಳಿಗೆ ಚ್ಯುತಿ ಬಾರದಂತೆ ಸಾಗುವೆ’
-ಇದು ಬೆಳಗಾವಿಯ ನಾಗನೂರು-ರುದ್ರಾಕ್ಷಿ ಮಠದ ಪೀಠಾಧಿಪತಿ ಹಾಗೂ ಗದುಗಿನ ತೋಂಟದಾರ್ಯ ಮಠದ ನೂತನ ಉತ್ತರಾಧಿ ಕಾರಿ ಡಾ.ಸಿದ್ದರಾಮ ಸ್ವಾಮೀಜಿಯವರ ಅನಿಸಿಕೆ. ಗುರುಗಳ ಅಕಾಲಿಕ ಅಗಲಿಕೆ, ಆಘಾತದ ಜತೆಗೆ ಶ್ರೀಮಠಕ್ಕೆ ನನ್ನನ್ನು ಉತ್ತರಾಧಿ ಕಾರಿಯನ್ನಾಗಿ ಮಾಡಿದ್ದು ಅಷ್ಟೇ ಅಚ್ಚರಿ ಮೂಡಿಸಿದೆ ಎಂಬುದು ಶ್ರೀಗಳ ಅನಿಸಿಕೆ.
ಗದುಗಿನ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿಯವರ ಅಕಾಲಿಕ ಅಗಲಿಕೆ ನೋವು, ಶ್ರೀಮಠಕ್ಕೆ ತಮ್ಮನ್ನು ಉತ್ತರಾಧಿ ಕಾರಿಯನ್ನಾಗಿ ನೇಮಕ, ಮಠದ ನೂತನ ಪೀಠಾಧಿ ಪತಿಯಾಗಿರುವ ಡಾ.ಸಿದ್ದರಾಮ ಸ್ವಾಮೀಜಿಯವರು
“ಉದಯವಾಣಿ’ಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ತೋಂಟದಾರ್ಯ ಮಠದ ಡಾ.ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಇಂದು ನಿನ್ನೆಯದಲ್ಲ, ಬಾಲಕನಾಗಿದ್ದಾಗಲೂ ನನ್ನ ಮೇಲೆ ಅವರ ಕೃಪೆ ಇದ್ದೇ ಇದೆ. ಆದರೆ ಅವರ ಪ್ರೀತಿ-ವಿಶ್ವಾಸ ಇಷ್ಟರ ಮಟ್ಟಿಗೆ ಇದೆ ಎಂಬುದು ನನ್ನ ಗಮನಕ್ಕೆ ಇರಲಿಲ್ಲ. ನನ್ನನ್ನು ಶ್ರೀಮಠದ ಉತ್ತರಾಧಿ ಕಾರಿಯನ್ನಾಗಿ ಮಾಡಿ ವಿಲ್ ಬರೆದಿಟ್ಟಿರುವುದು ತಿಳಿದು ನನ್ನನ್ನು ಮೂಕವಿಸ್ಮಿತನನ್ನಾಗಿಸಿದೆ ಎಂದರೂ ತಪ್ಪಾಗಲಾರದು.
ಸುಮಾರು 30 ವರ್ಷಗಳ ಹಿಂದೆ ಬೆಳಗಾವಿಯ ನಾಗನೂರು-ರುದ್ರಾಕ್ಷಿ ಮಠಕ್ಕೆ ಪೀಠಾ ಧಿಪತಿಯನ್ನಾಗಿ ಮಾಡಿದ್ದೇ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿಯವರು. ಪ್ರತಿ ಹಂತದಲ್ಲೂ ನನಗೆ ಮಾರ್ಗದರ್ಶನ, ಸಲಹೆ ನೀಡುತ್ತಿದ್ದರು. ಸ್ವಾಮೀಜಿ ಮತ್ತು ನನ್ನ ಸಂಬಂಧ ತಾಯಿ-ಮಗುವಿನ ವಾತ್ಸಲ್ಯದಂತಿತ್ತು. ಸಮಾಜಕ್ಕೊಂದು ಹೊಸ ದಿಕ್ಕು ತೋರಬೇಕು. ಬಸವಾದಿ ಶರಣರ ಪರಂಪರೆಯ ಆಶಯಗಳು ಇನ್ನಷ್ಟು ಬಲಗೊಳ್ಳಬೇಕು. ಸುಖೀ ಸಮಾಜ ರೂಪುಗೊಳ್ಳಬೇಕು ಎಂದೆಲ್ಲ ಸದಾ ಚಿಂತಿಸುತ್ತಿದ್ದ ಸ್ವಾಮೀಜಿಯವರು, ಅಕಾಲಿಕವಾಗಿ ನಮ್ಮೆಲ್ಲರಿಂದ ಭೌತಿಕವಾಗಿ ದೂರವಾಗುತ್ತಾರೆಂದು ಕನಸಿನಲ್ಲಿಯೂ ಅನಿಸಿರಲಿಲ್ಲ. ನನ್ನನ್ನು ಸೇರಿ ಅನೇಕ ಮಠಾಧೀಶರಿಗೆ, ಭಕ್ತ ಸಮೂಹಕ್ಕೆ ಇದೊಂದು ದೊಡ್ಡ ಆಘಾತವಾಗಿದೆ.
ಅಚ್ಚರಿ ಹಾಗೂ ಆಕಸ್ಮಿಕ: ಉತ್ತರಾ ಧಿಕಾರಿ ನೇಮಕ ಸ್ವಾಮೀಜಿಯವರ ಪ್ರೀತಿ-ವಿಶ್ವಾಸದ ಜತೆಗೆ ದೈವಿ ಪ್ರೇರಣೆ ಎಂದೇ ಭಾವಿಸಿದ್ದೇನೆ. ನನ್ನಿಂದಲೇ ಶ್ರೀಮಠದ ಇನ್ನಷ್ಟು ಅಭಿವೃದ್ಧಿ, ಧಾರ್ಮಿಕ, ಸಾಮಾಜಿಕ, ಸಾಹಿತ್ಯ, ಶಿಕ್ಷಣ ಹಾಗೂ ಕೃಷಿ ಕಾರ್ಯ, ಸೇವೆ ಮಾಡಿಸಬೇಕೆಂಬುದು ಗುರುಗಳ ಮನದಾಸೆಯಾಗಿದೆ ಎಂದೆನಿಸುತ್ತದೆ. ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿ ನೇರ, ನಿಷ್ಠುರರಾಗಿದ್ದರು. ತಮಗನಿಸಿದ್ದನ್ನು ನೇರವಾಗಿ ಹೇಳುತ್ತಿದ್ದರು. ಸಮಾಜದ ಹಿತಕ್ಕೆ ಧಕ್ಕೆ ಆಗುತ್ತಿದೆ ಎಂದಾಗ ತಕ್ಷಣಕ್ಕೆ ಧ್ವನಿ ಎತ್ತುತ್ತಿದ್ದರು. ಸತ್ಯ, ನ್ಯಾಯಕ್ಕಾಗಿ ಎಂತಹದ್ದೇ ಸ್ಥಿತಿ ಎದುರಾದರೂ, ವೈಯಕ್ತಿಕವಾಗಿ ಸಮಸ್ಯೆ ಸೃಷ್ಟಿಸುತ್ತಿದ್ದರೂ ಸಮಾಜ ಹಿತದ ವಿಚಾರದಲ್ಲಿ ಅವರೆಂದೂ ರಾಜಿ ಮಾಡಿಕೊಂಡವರಲ್ಲ, ಅವರ ಆ ನಿಷ್ಠುರತೆಯೇ ಅಂತಹದ್ದಾಗಿತ್ತು.
ಶ್ರೀಗಳ ಕೃಷಿ ಪ್ರೀತಿ ಮುಂದುವರಿಕೆ: ಡಾ.ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿಯವರು ಸಮಾಜ, ಧರ್ಮ, ಶರಣ ಪರಂಪರೆ, ಶಿಕ್ಷಣ, ಪುಸ್ತಕ ಕ್ಷೇತ್ರಗಳನ್ನು ಪ್ರೀತಿಸಿದಂತೆ ಇವುಗಳಿಂತಲೂ ಒಂದಿಷ್ಟು ಹೆಚ್ಚು ಎನ್ನುವಂತೆ ಕೃಷಿ ಕಾಯಕವನ್ನು ಪ್ರೀತಿಸುತ್ತಿದ್ದರು. ಕೃಷಿಯ ಹಲವು ಪ್ರಯೋಗಗಳ ಮೂಲಕ ರೈತರಿಗೆ ಮಾದರಿಯಾಗಿದ್ದರು. ನಾಗನೂರು-ರುದ್ರಾಕ್ಷಿ ಮಠವೂ ಕೃಷಿ ಪರಂಪರೆ ಹೊಂದಿದ ಮಠವಾಗಿದ್ದು, ಇಂದಿಗೂ ಸುಮಾರು 200 ಎಕರೆ ಜಮೀನಿನಲ್ಲಿ ಕೃಷಿ ಕಾಯಕ ನಿರಂತರವಾಗಿ ನಡೆಯುತ್ತಿದೆ. ತೋಂಟದಾರ್ಯ ಮಠದ ಕೃಷಿ ಪರಂಪರೆಯನ್ನು ಮುಂದುವರಿಸುವೆ. ಸ್ವಾಮೀಜಿಯವರ ಕೃಷಿ ಆಶಯಕ್ಕೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಳ್ಳುವೆ.
ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಹಾಗೂ ಮಾಗದರ್ಶನದಲ್ಲಿ ಬೆಳೆದಿದ್ದಕ್ಕೋ ಏನೋ ಸ್ವಾಮೀಜಿಯವರ ಹಾಗೂ ನನ್ನ ಆಶಯ, ಚಿಂತನೆ, ವಿಚಾರಗಳಲ್ಲಿ ಬಹುತೇಕ ಸಾಮ್ಯತೆಯಿತ್ತು. ಕೃಷಿ ಕಾಯಕದಲ್ಲೂ ಅದೇ ಸಾಮ್ಯತೆ ಎಂಬುದು ಸ್ಪಷ್ಟ. ಕೃಷಿ ಪರಂಪರೆ, ಹಿನ್ನೆಲೆ ಮಠಗಳಲ್ಲಿ ಕೃಷಿ ಕಾಯಕ ನಿರಂತರವಾಗಿರಬೇಕು. ಇದು ತೋಂಟದ ಸಿದ್ಧಲಿಂಗ ಸ್ವಾಮೀಜಿಯವರ ಹಾಗೂ ನನ್ನ ಆಶಯವೂ ಅಗಿದೆ.
ನಾಗನೂರು-ರುದ್ರಾಕ್ಷಿ ಮಠ ಹಾಗೂ ಗದುಗಿನ ತೋಂಟದಾರ್ಯ ಮಠ ಎರಡೂ ಐತಿಹಾಸಿಕ ಹಾಗೂ ಪ್ರಮುಖ ಮಠಗಳು. ಗುರುಗಳ ಆಶಯದಂತೆ ತೋಂಟದಾರ್ಯ ಮಠಕ್ಕೆ ಉತ್ತರಾಧಿಕಾರಿಯಾಗಿ ಮಾಡಲಾಗಿದೆ. ನಾಗನೂರು-ರುದ್ರಾಕ್ಷಿ ಮಠಕ್ಕೆ ಉತ್ತರಾಧಿ ಕಾರಿ ಕುರಿತಾಗಿ ಭವಿಷ್ಯದಲ್ಲಿ ಏನಾಗುತ್ತೋ ನೋಡೋಣ. ತೋಂಟದಾರ್ಯ ಮಠದ ಪೀಠಾರೋಹಣದ ನಂತರದಲ್ಲಿ ತೋಂಟದ ಸಿದ್ಧಲಿಂಗ ಸ್ವಾಮೀಜಿಯವರ ಹಲವು ಕನಸುಗಳು, ಸಮಾಜಮುಖೀ ಕಾರ್ಯಗಳು, ಈಡೇರದ ಹಲವು ಕೆಲಸ ಕಾರ್ಯಗಳ ಕುರಿತಾಗಿ ಶ್ರೀಮಠದ ಆಡಳಿತ ಮಂಡಳಿ, ಭಕ್ತ ಸಮೂಹ ನಿರ್ಧಾರ ಕೈಗೊಳ್ಳುತ್ತದೆ. ಅದಕ್ಕೆ ತಮ್ಮ ಸಹಕಾರ-ಪ್ರೋತ್ಸಾಹ ಇದ್ದೇ ಇರುತ್ತದೆ.
– ಡಾ. ಶ್ರೀ ಸಿದ್ದರಾಮ ಸ್ವಾಮೀಜಿ. ನಾಗನೂರು ಮಠ
ಬಡತನದಿಂದ ಬಂದ ತಬ್ಬಲಿ ಹುಡುಗ
ಬೆಳಗಾವಿ: ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದಲ್ಲಿ 1958, ಡಿ.12ರಂದು ಜನಿಸಿದ ನಾಗನೂರು ರುದ್ರಾಕ್ಷಿ ಮಠದ ಡಾ.ಸಿದ್ಧರಾಮ ಸ್ವಾಮೀಜಿ (ಮೂಲ ಹೆಸರು ಗುರುಪಾದಯ್ಯ), ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡರು. ಬಡತನದಿಂದ ರೋಸಿ ಹೋಗಿದ್ದ ತಂದೆ ರುದ್ರಯ್ಯ ಮಗನನ್ನು ಎಳೆದುಕೊಂಡು ಬಾವಿಗೆ ಹಾರಲು ಹೊರಟಿದ್ದರು. ಬಳಿಕ, ಬೀಳಗಿಯ ಹಡಪದ ಸಮಾಜದ ಗಂಗಮ್ಮ ಎಂಬ ಮಹಿಳೆಯೇ ಗುರುಪಾದಯ್ಯನನ್ನು ಸಾಕಿದಳು.
ಧಾರವಾಡದ ಕರ್ನಾಟಕ ವಿವಿಯಲ್ಲಿ ತತ್ವಶಾಸ್ತ್ರದಲ್ಲಿ ಎಂ.ಎ, ನಂತರ ಬನಾರಸ ಹಿಂದೂ ವಿವಿಯಲ್ಲಿ ಸಂಸ್ಕೃತ ಹಾಗೂ ಹಿಂದಿ ಎಂಎ ಪದವಿ ಪಡೆದರು. 1989, ನ.24ರಂದು ನಾಗನೂರು ಮಠದ ಪೀಠಾಧಿಪತಿಯಾದರು. 1992ರಲ್ಲಿ ಅಖೀಲ ಭಾರತ ವೀರಶೈವ ಮಹಾಸಭೆ, 1999ರಲ್ಲಿ ಅಖೀಲ ಭಾರತ 5ನೇ ಶರಣ ಸಾಹಿತ್ಯ ಸಮ್ಮೇಳನ, 2001ರಲ್ಲಿ ರಾಜ್ಯಮಟ್ಟದ ಯುವಜನ ಸಮಾವೇಶ, 2003ರಲ್ಲಿ ಕದಳಿ ಸಮಾವೇಶ, 2003ರಲ್ಲಿ ಅಖೀಲ ಭಾರತ 70ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರಾಣಿ ಚನ್ನಮ್ಮ ವಿವಿಯ ಚೊಚ್ಚಲ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದು, ಎಲ್ಲೆಡೆ ಬಸವ ತತ್ವ ಪ್ರಚಾರ ಹಾಗೂ ಕನ್ನಡದ ಕಂಪು ಪಸರಿಸುತ್ತಿದ್ದಾರೆ.
– ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.