ಖಾಸಗಿ ಆಸ್ಪತ್ರೆಗಳಲ್ಲಿ ರಕ್ತ ಸಂಗ್ರಹ ಕೊರತೆ
Team Udayavani, Mar 24, 2020, 6:14 PM IST
ಬೆಳಗಾವಿ: ಕೋವಿಡ್ 19 ವೈರಸ್ ಹಾವಳಿ ದಿನದಿಂದ ದಿನಕ್ಕೆ ತನ್ನ ಕಬಂಧಬಾಹು ವಿಸ್ತರಿಸುತ್ತಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತ ಗೊಂಡಿರುವ ಬೆನ್ನಲ್ಲೆ, ಈ ವೈರಸ್ ಹಾವಳಿ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ರಕ್ತ ಸಂಗ್ರಹದ ಕೊರತೆಯ ಆತಂಕ ನಿರ್ಮಾಣ ಮಾಡಿದೆ.
ವೈರಸ್ ಹಾವಳಿಯನ್ನು ಸಾಧ್ಯವಾದಷ್ಟು ನಿಯಂತ್ರಣ ಮಾಡಬೇಕು ಎಂಬ ಉದ್ದೇಶದಿಂದ ಕಠಿಣ ನಿರ್ಧಾರಕ್ಕೆ ಮುಂದಾಗಿರುವ ಸರ್ಕಾರ ಒಂದು ಕಡೆ ಹೆಚ್ಚು ಜನ ಸೇರುವದು, ಸಭೆ, ಸಮಾರಂಭ ಹಾಗೂ ಶಿಬಿರಗಳನ್ನು ಮಾಡುವದರ ಮೇಲೆ ನಿರ್ಬಂಧ ಹಾಕಿದೆ. ಆದರೆ ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲಿ ರಕ್ತದಾನ ಶಿಬಿರ ಮಾಡುವ ಖಾಸಗಿ ಆಸ್ಪತ್ರೆಗಳಿಗೆ ಇದು ಸ್ವಲ್ಪಮಟ್ಟಿನ ಸಮಸ್ಯೆ ತಂದೊಡ್ಡಿದೆ. ಕಳೆದ ಕೆಲವು ದಿನಗಳ ಹಿಂದೆ ಉತ್ತರ ಕರ್ನಾಟಕ ಭಾಗದ ಪ್ರತಿಷ್ಠಿತ ಕೆಎಲ್‌ಇ ಆಸ್ಪತ್ರೆ ಬಹಿರಂಗವಾಗಿಯೇ ರಕ್ತದ ಕೊರತೆ ಉಂಟಾಗಿದ್ದು ರಕ್ತದಾನಿಗಳು ರಕ್ತ ನೀಡಲು ಮುಂದೆ ಬರಬೇಕು ಎಂದು ಮನವಿ ಮಾಡಿಕೊಂಡಿರುವುದೇ ಇದಕ್ಕೆ ಸಾಕ್ಷಿ.
ಆಸ್ಪತ್ರೆಯಲ್ಲಿರುವ ರೋಗಿಗಳ ಶಸ್ತ್ರಚಿಕಿತ್ಸೆ, ಹೆರಿಗೆ ಸಮಯದಲ್ಲಿ ಹಾಗೂ ಥಲಸ್ಲೇಮಿಯಾ ರೋಗಿಗಳಿಗೆ ರಕ್ತದ ಅವಶ್ಯಕತೆ ತುಂಬಾ ಇದೆ. ಆದರೆ ಕೋವಿಡ್ 19 ವೈರಸ್‌ನಿಂದ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಕಾಣುತ್ತಿದ್ದು, ದಾನಿಗಳು ಆಸ್ಪತ್ರೆಗೆ ಆಗಮಿಸಿ ಸ್ವಇಚ್ಚೆಯಿಂದ ರಕ್ತದಾನ ಮಾಡಬೇಕು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಎಂ.ವಿ. ಜಾಲಿ ಮನವಿ ಮಾಡಿದ್ದರು. ಕೋವಿಡ್ 19 ವೈರಸ್ ಹಾವಳಿಯ ಕಾರಣ ಕೆಎಲ್‌ಇ ಆಸ್ಪತ್ರೆಯ ರಕ್ತ ಭಂಡಾರವು ಹೊರಗಡೆ ರಕ್ತದಾನ ಶಿಬಿರಗಳನ್ನು ಏರ್ಪಡಿಸುವುದನ್ನು ನಿಲ್ಲಿಸಿದೆ. ಇದರಿಂದ ಆಸ್ಪತ್ರೆಯಲ್ಲಿ ರಕ್ತದ ಸಂಗ್ರಹದ ಕೊರತೆ ಉಂಟಾಗಿದೆ ಎಂಬುದು ಆಸ್ಪತ್ರೆಯ ವೈದ್ಯರ ಹೇಳಿಕೆ.
ಆದರೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಪ್ರಕಾರ ರಕ್ತದ ಕೊರತೆಯಂತಹ ಯಾವುದೇ ಸಮಸ್ಯೆ ಕಂಡಿಲ್ಲ. ಈಗಲೂ ಆರೋಗ್ಯ ಇಲಾಖೆಯಿಂದ ವಿವಿಧೆಡೆ ರಕ್ತದಾನ ಶಿಬಿರ ನಡೆಯುತ್ತಿದೆ. ಪ್ರತಿದಿನ 25ರಿಂದ 30 ಯುನಿಟ್ ರಕ್ತ ಸಂಗ್ರಹಿಸಲಾಗುತ್ತಿದೆ. ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ರಕ್ತ ಪಡೆಯುವ ಮುನ್ನ ತಪಾಸಣೆ ನಡೆಸಿಯೇ ರಕ್ತ ಪಡೆಯಲಾಗುತ್ತಿದೆ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಹೇಳಿಕೆ.
ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ರಕ್ತ ಸಂಗ್ರಹದ ಕೊರತೆ ಇಲ್ಲ. ಜನರು ಸಹ ಆತಂಕ ಪಡುವದು ಬೇಡ. ಸರ್ಕಾರಿ ಆಸ್ಪತ್ರೆಯಲ್ಲಿರುವ ಬ್ಲಡ್ ಬ್ಯಾಂಕ್ ದಲ್ಲಿ ಈಗ 153 ಯುನಿಟ್ ರಕ್ತ ಸಂಗ್ರಹ ಇದೆ. ಇದಲ್ಲದೆ ವಿವಿಧ ರಕ್ತದಾನ ಶಿಬಿರದಲ್ಲಿ 152 ಯುನಿಟ್ ರಕ್ತ ಸಂಗ್ರಹ ಮಾಡಲಾಗಿದೆ. ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕ್ ಹೊರತಾಗಿ ಖಾಸಗಿ ಬ್ಲಿಡ್ ಬ್ಯಾಂಕ್ ಗಳಲ್ಲಿ ಸಹ ರಕ್ತದ ಸಂಗ್ರಹ ಇದೆ ಎನ್ನುತ್ತಾರೆ ಸರ್ಕಾರಿ ಬ್ಲಡ್ ಬ್ಯಾಂಕ್ ನೋಡಲ್ ಅಧಿಕಾರಿ ಡಾ| ಅನಿಲ ಕೊರಬು.
ಬೆಳಗಾವಿ ವೈದ್ಯಕೀಯ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ ರಕ್ತ ಸಂಗ್ರಹದಲ್ಲಿ ಯಾವ ಕೊರತೆಯೂ ಇಲ್ಲ. ನಾವು ನಿಯಮಿತವಾಗಿ ವಾರದಲ್ಲಿ ಒಂದೆರಡು ಬಾರಿ ರಕ್ತದಾನ ಶಿಬಿರ ಮಾಡುತ್ತಲೇ ಇದ್ದೇವೆ. ಯಾವುದೇ ಸಮಸ್ಯೆ ಆಗಿಲ್ಲ. ಜನರು ಸಹ ಧೈರ್ಯದಿಂದ ರಕ್ತ ನೀಡಲು ಬರಬೇಕು ಎಂಬುದು ಬಿಮ್ಸ್ ವೈದ್ಯ ಡಾ| ವಿನಯ ದಾಸ್ತಿಕೊಪ್ಪ ಅವರ ಹೇಳಿಕೆ.
ಆಸ್ಪತ್ರೆಗೆ ಬಂದು ರಕ್ತದಾನ ಮಾಡಿ : ಕೋವಿಡ್ 19 ವೈರಸ್ ಹಾವಳಿಯಿಂದಾಗಿ ಈಗ ಜಿಲ್ಲೆಯಲ್ಲಿ ಎಲ್ಲಿಯೂ ರಕ್ತದಾನ ಶಿಬಿರಗಳು ನಡೆಯುತ್ತಿಲ್ಲ. ಇನ್ನೊಂದೆಡೆ ಜನರೂ ಸಹ ಹೆದರಿಕೆಯಿಂದ ರಕ್ತ ಕೊಡಲು ಮುಂದೆ ಬರುತ್ತಿಲ್ಲ. ರಕ್ತದಾನ ಮಾಡುವದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ನಾವು ತಿಳಿ ಹೇಳಿದರೂ ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಿಲ್ಲ. ಇದರಿಂದ ಮುಂಬರುವ ದಿನಗಳಲ್ಲಿ ರಕ್ತದ ಕೊರತೆ ಕಾಡುತ್ತದೆ ಎಂಬುದು ಬ್ಲಿಡ್ ಬ್ಯಾಂಕ್ ವೈದ್ಯರ ಆತಂಕ. ಕೋವಿಡ್ 19 ವೈರಸ್ ಜತೆಗೆ ಜನರಲ್ಲಿ ರಕ್ತದಾನದ ಬಗ್ಗೆಯೂ ಸರ್ಕಾರ ಜಾಗೃತಿ ಹಾಗೂ ಧೈರ್ಯ ಮೂಡಿಸಬೇಕು. ಶಿಬಿರದ ಬದಲು ಜನರೇ ಮುಂದೆ ಬಂದು ಆಸ್ಪತ್ರೆ ಇಲ್ಲವೇ ಬ್ಲಿಡ್ ಬ್ಯಾಂಕ್‌ಗಳಲ್ಲಿ ರಕ್ತ ಕೊಡಬೇಕು. ಇದರಿಂದ ಸಮಸ್ಯೆ ಗಂಭೀರವಾಗುವುದನ್ನು ತಪ್ಪಿಸಬಹುದು ಎಂಬುದು ಖಾಸಗಿ ಆಸ್ಪತ್ರೆಯ ವೈದ್ಯರ ಹೇಳಿಕೆ.
ಜಿಲ್ಲೆಯಲ್ಲಿ ರಕ್ತದ ಸಂಗ್ರಹದ ಸಮಸ್ಯೆ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸಂಗ್ರಹ ಮಾಡಿಕೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ದಿನನಿತ್ಯ ಹತ್ತಾರು ರೀತಿಯ ಆಪರೇಷನ್‌ಗಳು ಇರುತ್ತವೆ. ಅದಕ್ಕೆ ಹೆಚ್ಚು ರಕ್ತದ ಅಗತ್ಯತೆ ಇರುತ್ತದೆ. ಹೀಗಾಗಿ ಈ ಆಸ್ಪತ್ರೆಗಳು ತಮ್ಮದೇ ಆದ ವ್ಯವಸ್ಥೆ ಮಾಡಿಕೊಂಡಿವೆ. ಇದುವರೆಗೆ ಅಂತಹ ಸಮಸ್ಯೆ ಎಲ್ಲಿಯೂ ಕಂಡುಬಂದಿಲ್ಲ. -ಡಾ| ಅಪ್ಪಾಸಾಹೇಬ ನರಟ್ಟಿ, ಜಂಟಿ ನಿರ್ದೇಶಕರು, ಆರೋಗ್ಯ ಇಲಾಖೆ
ಈಗ ರಕ್ತದ ಕೊರತೆ ಇಲ್ಲ. ಆದರೆ ಮುಂದೆ ತೊಂದರೆಯಾಗಬಹುದಾದ ಸಾಧ್ಯತೆಗಳಿವೆ. ಕೋವಿಡ್ 19 ಭೀತಿಯಿಂದ ನಾವು ರಕ್ತದಾನ ಶಿಬಿರಗಳನ್ನು ಬಂದ್ ಮಾಡಿದ್ದೇವೆ. ದಾನಿಗಳೂ ಸಹ ಸ್ವಯಂ ಪ್ರೇರಣೆಯಿಂದ ರಕ್ತ ಕೊಡಲು ಬರುತ್ತಿಲ್ಲ. ಜನರಲ್ಲಿ ಹೆದರಿಕೆ ಇದೆ. ಇದರಿಂದಾಗಿ ಏಪ್ರಿಲ್ ಮೊದಲ ವಾರದ ನಂತರ ರಕ್ತದ ಸಂಗ್ರಹ ಸಮಸ್ಯೆ ಆಗಲಿದೆ ಎಂಬುದು ನಮ್ಮ ಆತಂಕ. ಸರ್ಕಾರ ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಆಸ್ಪತ್ರೆಗೆ ಬಂದು ರಕ್ತಕೊಡುವಂತೆ ಪ್ರೇರೇಪಿಸಬೇಕು.– ಗಿರೀಶ ಬುಡರಕಟ್ಟಿ, ಬೆಳಗಾವಿ ಬ್ಲಡ್ ಬ್ಯಾಂಕ್ ಎಂಡಿ
-ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.