ಲೆಕ್ಕಕ್ಕಿಲ್ಲದ ಪ್ರತಿಸ್ಪರ್ಧಿಯಿಂದ ಕಮಲ ಕಿಲಕಿಲ
Team Udayavani, May 9, 2019, 12:16 PM IST
ಬೆಳಗಾವಿ: ದಟ್ಟ ಅರಣ್ಯ, ತಂಪು ಹಾಗೂ ಹಿತವಾದ ವಾತಾರವಣ ಹೊಂದಿರುವ ಮಲೆನಾಡಿನ ಸೆರಗು ಖಾನಾಪುರದಲ್ಲಿ ಮತದಾನೋತ್ತರ ಲೆಕ್ಕಾಚಾರ ಜೋರಾಗಿ ನಡೆದಿದೆ. ಸ್ಥಳೀಯ ಶಾಸಕಿ ಕಾಂಗ್ರೆಸ್‌ನವರಾಗಿದ್ದರೂ ಮೈತ್ರಿ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿದ್ದರಿಂದ ಕೈ ಪಡೆಗೆ ಭಾರೀ ನಿರಾಸೆಯಾಗಿದ್ದು, ಇನ್ನೊಂದೆಡೆ ಐದು ಬಾರಿ ಸಂಸದರಾಗಿರುವ ಹೆಗಡೆ ಬಗ್ಗೆ ಮತದಾರರಲ್ಲಿ ಬೇಸರವಿದ್ದರೂ ಮೋದಿ ಗಾಳಿ ಇವರನ್ನು ಎತ್ತಿಕೊಂಡು ಹೋಗಲಿದೆ.
ಖಾನಾಪುರ ವಿಧಾನಸಭೆ ಕ್ಷೇತ್ರ ಕೆನರಾ ಲೋಕಸಭೆ ವ್ಯಾಪ್ತಿಗೆ ಬರುತ್ತದೆ. ಬೆಳಗಾವಿಗೆ ಅತಿ ಸಮೀಪ ಜಿಲ್ಲೆಯಾಗಿದ್ದರೂ ಕೆನರಾ ವ್ಯಾಪ್ತಿಗೆ ಹೊಂದಿಕೊಂಡಿರುವ ಇಲ್ಲಿ ಜೆಡಿಎಸ್-ಬಿಜೆಪಿ ಮಧ್ಯೆ ಹೋರಾಟ ಎನ್ನುವುದಕ್ಕಿಂತ ಇಬ್ಬರ ಮಧ್ಯೆ ಹಣಾಹಣಿಯೇ ಇಲ್ಲದಂತಾಗಿದೆ. ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ ಈ ಭಾಗದ ಜನರಿಗೆ ಅಪರಿಚಿತರು. ಜತೆಗೆ ಜೆಡಿಎಸ್ ಎಂಬ ಚಿಹ್ನೆಯೇ ಇಲ್ಲಿಯವರಿಗೆ ಗೊತ್ತಿಲ್ಲ. ಆದರೂ ಕಾಂಗ್ರೆಸ್‌ನವರು ಅನಿವಾರ್ಯವಾಗಿ ಇದನ್ನು ಒಪ್ಪಿಕೊಂಡು ವೋಟ್ ಹಾಕಿಸಲು ಶತಾಯಗತಾಯ ಪ್ರಯತ್ನ ಪಟ್ಟಿದ್ದಾರೆ.
ಐದು ಬಾರಿ ಸಂಸದರಾಗಿ ಬೀಗುತ್ತಿರುವ ಅನಂತ ಕುಮಾರ ಹೆಗಡೆಗೆ ಇಲ್ಲಿಯ ಬಿಜೆಪಿ ಸಾಂಪ್ರದಾಯಿಕ ಮತಗಳು ಸುಲಭವಾಗಿ ಒಲಿದು ಬರುತ್ತವೆ. ಪ್ರಚಾರ ಮಾಡದಿದ್ದರೂ ಇಲ್ಲಿಯ ಮತಗಳು ನಿರಂತರವಾಗಿ ಕಮಲ ಪಾಳೆಯದ ಕೈ ಹಿಡಿಯುತ್ತ ಬಂದಿವೆ. ಹೀಗಾಗಿ ಬಿಜೆಪಿಯವರೂ ಇಲ್ಲಿ ಏನೂ ಮತ ಪಡೆಯಲು ಹೋರಾಟ ಮಾಡುವ ಅಗತ್ಯವೂ ಇಲ್ಲ, ಅನಿವಾರ್ಯವೂ ಇಲ್ಲ. ಲೋಕಸಭೆ ಚುನಾವಣೆ ವೇಳೆಗೆ ಬಿಜೆಪಿಯ ಭದ್ರಕೋಟೆಯಾಗಿಯೇ ಇದು ಬಿಂಬಿತವಾಗುತ್ತದೆ.
ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಅಸ್ತಿತ್ವ ಉಳಿಸಿಕೊಡುತ್ತಿದ್ದ ಖಾನಾಪುರ ಕ್ಷೇತ್ರ ಈಗ ಸಂಪೂರ್ಣವಾಗಿ ಕೈ ಕೊಟ್ಟಿದೆ. ವಿಧಾನಸಭೆ ಚುನಾವಣೆಯಲ್ಲಂತೂ ಪ್ರತಿ ಸಲ ಇಲ್ಲಿಯ ನಿರ್ಣಾಯಕ ಮತಗಳನ್ನು ಪಡೆಯುವಲ್ಲಿ ಯಶಸ್ವಿ ಆಗುತ್ತಿತ್ತು. ಆದರೆ ಪ್ರತಿ ಚುನಾವಣೆಯಲ್ಲಿ ಎಂಇಎಸ್‌ಗೆ ಅಸ್ತಿತ್ವವೇ ಇಲ್ಲವಾಗಿದೆ. ಬಿಜೆಪಿ-ಕಾಂಗ್ರೆಸ್ ಗಟ್ಟಿಯಾಗಿದ್ದರಿಂದ ಎಂಇಎಸ್ ಮಕಾಡೆ ಮಲಗಿದೆ. ಮರಾಠಿ ಭಾಷಿಕರ ಸಂಖ್ಯೆ ಹೆಚ್ಚಿದ್ದರೂ ಮತಗಳು ರಾಷ್ಟ್ರೀಯ ಪಕ್ಷಗಳ ಪಾಲಾಗುತ್ತಿವೆ.
ಶಾಸಕಿ ಡಾ| ಅಂಜಲಿ ನಿಂಬಾಳಕರ 2018ರಲ್ಲಿ ಗೆದ್ದು ಬೀಗುತ್ತಿದ್ದು, ಕಾಂಗ್ರೆಸ್ ಮತಗಳನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿ ಆಗಿದ್ದಾರೆ. ಆದರೆ ಲೋಕಸಭೆ ಚುನಾವಣೆ ವೇಳೆಗೆ ಅಂಜಲಿ ಮಾತು ಕೇಳುವ ಮತದಾರರು ಇಲ್ಲಿ ಇಲ್ಲವಾಗಿದ್ದಾರೆ. ಅಂಜಲಿ ಪಡೆದ ಮತಗಳು ಮೈತ್ರಿ ಅಭ್ಯರ್ಥಿಗೆ ಸಿಗುವುದು ಕಷ್ಟಕರ. ಎಷ್ಟೇ ಕಷ್ಟಪಟ್ಟರೂ ಜೆಡಿಎಸ್‌ನತ್ತ ಈ ಮತಗಳು ವಾಲುವುದು ಸುಲಭದ ಮಾತಲ್ಲ. ಇವೆಲ್ಲವೂ ಬಿಜೆಪಿ ಬುಟ್ಟಿಗೆ ಬೀಳಲಿವೆ ಎಂಬುದು ಬಿಜೆಪಿ ಮುಖಂಡರ ಲೆಕ್ಕಾಚಾರ.
ಕೈ ಚಿಹ್ನೆ ಇಲ್ಲದ್ದಕ್ಕೆ ಬೇಸರ: ಕಾಂಗ್ರೆಸ್ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿದ್ದರೆ ಬಿಜೆಪಿಗೆ ಇಲ್ಲಿ ಭಾರೀ ಮುಖಭಂಗವಾಗುತ್ತಿತ್ತು. ಕಾಂಗ್ರೆಸ್ ಚಿಹ್ನೆಯ ಬಗ್ಗೆ ಬಹಳ ಅಭಿಮಾನವಿದೆ. ಈಗ ಕಣದಲ್ಲಿ ಜೆಡಿಎಸ್ ಚಿಹ್ನೆ ಬಂದಿರುವುದು ಇರುಸುಮುರುಸಾಗಿದೆ. ಕೈ ಬಿಟ್ಟು ತೆನೆ ಹೊತ್ತ ಮಹಿಳೆಗೆ ಮತ ಹಾಕಲು ಜನ ಹಿಂಜರಿದಿದ್ದಾರೆ. ಆದರೂ ಸಾಕಷ್ಟು ಪ್ರಚಾರ ನಡೆಸಿದ್ದೇವೆ. ಆರ್.ವಿ. ದೇಶಪಾಂಡೆ, ಅಂಜಲಿ ನಿಂಬಾಳಕರ, ಅಸ್ನೋಟಿಕರ ಅವರಿಂದ ಪ್ರಚಾರ ನಡೆಸಲಾಗಿದೆ. ಬಹಳ ಫೈಟ್ ಇದೆ ಎನ್ನುತ್ತಾರೆ ಕಾಂಗ್ರೆಸ್ ಮುಖಂಡರು.
ಕಳೆದ ಚುನಾವಣೆಗಿಂತಲೂ ಈಗ ಅತಿ ಹೆಚ್ಚಿನ ಮತಗಳ ಅಂತರ ಬಿಜೆಪಿಗೆ ಸಿಗಲಿದೆ. 50 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಬಿಜೆಪಿ ಪಾಲಾಗಲಿದೆ. ಬಿಜೆಪಿ ವರ್ಷದಿಂದ ವರ್ಷಕ್ಕೆ ಭದ್ರವಾಗುತ್ತ ಹೊರಟಿದ್ದು, ಕಳೆದ ವಿಧಾನಸಭೆ ವೇಳೆ ಬಿಜೆಪಿಯ ಆಂತರಿಕ ಕಚ್ಚಾಟದಿಂದಾಗಿ ಮತಗಳು ವಿಭಜನೆಗೊಂಡು ಸೋಲು ಅನುಭವಿಸಬೇಕಾಯಿತು. ಖಾನಾಪುರ ಮಾತ್ರವಲ್ಲ, ಇಡೀ ದೇಶದಲ್ಲಿಯೇ ಕಾಂಗ್ರೆಸ್ ಬೇಡವಾಗಿದೆ ಎನ್ನುತ್ತಾರೆ ಬಿಜೆಪಿಯವರು.
ಬಿಜೆಪಿ ಕಳೆದ ಚುನಾವಣೆಗಿಂತಲೂ ಹೆಚ್ಚಿನ ಮತಗಳ ಲೀಡ್ ಪಡೆಯಲಿದೆ. ಅನಂತಕುಮಾರ ಅವರ ಅಭಿವೃದ್ಧಿ ಕೆಲಸ ಹಾಗೂ ಮೋದಿಯ ಆಡಳಿತ ಮೆಚ್ಚಿ ಬಿಜೆಪಿಗೆ ಮತ ಹಾಕಿದ್ದಾರೆ. 50 ಸಾವಿರಕ್ಕಿಂತ ಹೆಚ್ಚು ಮತಗಳ ಅಂತರ ನಮಗೆ ಸಿಗಲಿದೆ. ಕಾಂಗ್ರೆಸ್, ಎಂಇಎಸ್ ಹಾಗೂ ಜೆಡಿಎಸ್ ಈ ಭಾಗದಲ್ಲಿ ಸಂಪೂರ್ಣವಾಗಿ ಜನರ ವಿಶ್ವಾಸ ಕಳೆದುಕೊಂಡಿವೆ.
• ವಿಠ್ಠಲ ಪಾಟೀಲ, ಖಾನಾಪುರ ಬಿಜೆಪಿ ಬ್ಲಾಕ್ ಅಧ್ಯಕ್ಷರು
ಕಾಂಗ್ರೆಸ್ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿದ್ದರೆ ಈ ಭಾಗದಲ್ಲಿ ನಮ್ಮ ಹವಾ ಬೇರೇ ಆಗಿರುತ್ತಿತ್ತು. ಆದರೂ ಇಲ್ಲಿ 50:50 ಫೈಟ್ ಇದೆ. ಜೆಡಿಎಸ್ ಚಿಹ್ನೆ ಬಗ್ಗೆ ಜನರಿಗೆ ಗೊತ್ತಿಲ್ಲ. ಜೆಡಿಎಸ್ ಇಲ್ಲಿ ಅಸ್ತಿತ್ವ ಇಲ್ಲದಿದ್ದರೂ ಕಾಂಗ್ರೆಸ್ ಮನೆ ಮನೆಗೆ ಪ್ರಚಾರ ನಡೆಸಿ ವೋಟ್ ಹಾಕಿಸುವ ಮೂಲಕ ಮೈತ್ರಿ ಧರ್ಮ ಪಾಲಿಸಿದೆ. ಬಿಜೆಪಿಗೆ ಅಂತರ ಹೆಚ್ಚು ಆಗುವುದೇ ಇಲ್ಲ.
• ಮಹಾದೇವ ಕೋಳಿ, ಖಾನಾಪುರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.