ನಮ್ಮದು ಬದುಕು ಕಟ್ಟಿಕೊಡುವ ಸರ್ಕಾರ: ಬಸವರಾಜ ಬೊಮ್ಮಾಯಿ
ಹೆಚ್ಚು ಉದ್ಯೋಗ ನೀಡಿದವರಿಗೆ ಹೆಚ್ಚಿನ ರಿಯಾಯತಿ ನೀಡಲಾಗುವುದು.
Team Udayavani, Dec 24, 2021, 6:32 PM IST
ಬೆಳಗಾವಿ: ರಾಜ್ಯದ ಜನರ ಭವಿಷ್ಯದ ಬದುಕು ಕಟ್ಟಿಕೊಡುವ ಸರ್ಕಾರ ನಮ್ಮದು. ಇದೇ ಘೋಷವಾಕ್ಯದೊಂದಿಗೆ ನನ್ನ ಸರ್ಕಾರ ಹೆಜ್ಜೆ ಇಟ್ಟಿದ್ದು ಎಲ್ಲ ಕಾರ್ಯಕ್ರಮಗಳಲ್ಲಿಯೂ ಇದನ್ನು ನಿರೂಪಿಸಿ ತೋರಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಗೋಗಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸರ್ವರಿಗೂ ಉದ್ಯೋಗ ಕಾರ್ಯಕ್ರಮ ಮತ್ತು ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದುವರೆಗೂ ಉದ್ಯೋಗದಾತರಿಗೆ ಒಂದು ಸಾಮಾನ್ಯ ಸೂತ್ರದಡಿ ಪ್ರೋತ್ಸಾಹ ಮತ್ತು ಉತ್ತೇಜಕ ಭತ್ಯೆ ಕೊಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಯಾವ ಸಂಸ್ಥೆಯು ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದೆ ಎಂಬುದನ್ನು ಆಧರಿಸಿ ಪ್ರೋತ್ಸಾಹ ಕೊಡಲಾಗುತ್ತದೆ ಎಂದರು.
ಇದು ಪ್ರಚಾರಕ್ಕಾಗಿ ಮಾಡಿದ ಉದ್ಯೋಗ ಮೇಳ ಅಲ್ಲ. ಇಲ್ಲಿ ಉತ್ತಮ ಭವಿಷ್ಯದ ನಿರ್ಮಾಣಕ್ಕೆ ದಾರಿ ಸಿಗಲಿದೆ. ಒಂದೇ ಕಡೆ ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತದೆ ಎಂಬುದು ಸಾಮಾನ್ಯದ ಮಾತಲ್ಲ. ನನ್ನ ಸರ್ಕಾರ ಜನರ ಭವಿಷ್ಯ ರೂಪಿಸುವ ಉದ್ದೇಶ ಹೊಂದಿದೆ. ಅದನ್ನು ಮಾಡಿ ತೋರಿಸುತ್ತೇನೆ.
ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ, ಕೌಶಲ್ಯ ಪೂರೈಕೆ ಮತ್ತು ಉದ್ಯೋಗ ಸೃಷ್ಟಿ ಈ ಮೂರೂ ಅಂಶಗಳು ಒಂದಾಗಿ ಇರುವಂತಹ ವ್ಯವಸ್ಥೆ ರೂಪಿಸಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಶಿಕ್ಷಣ ಕ್ರಮವನ್ನು ಉದ್ಯೋಗದಾತ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಬೆಸೆಯಲಾಗಿದೆ ಎಂದರು. ಇಂದಿನ ತಾಂತ್ರಿಕ ಯುಗದಲ್ಲಿ ಬದಲಾವಣೆಗಳು ಬಹಳ ವೇಗದಲ್ಲಿ ನಡೆಯುತ್ತಿವೆ. ಬದಲಾವಣೆ ಅರ್ಥ ಮಾಡಿಕೊಂಡವರು ಯಶಸ್ಸು ಸಾಧಿಸುತ್ತಾರೆ.ಮುಖ್ಯವಾಗಿ ಸ್ವಾಭಿಮಾನದ ವ್ಯಕ್ತಿತ್ವ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು.
ಅತ್ಯುತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗಿರುವ ಎಂಜಿನಿಯರ್‌ಗಳಿಗೆ ಸಹ ನೇರವಾಗಿ ಗೆರೆ ಎಳೆಯಲು ಬರುವುದಿಲ್ಲ. ಅದಕ್ಕೆ ಕೌಶಲ ಬೇಕಾಗುತ್ತದೆ. ಇದನ್ನು ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕು ಎಂದರು. ಎಲ್ಲರಿಗೂ ಅನುಕೂಲವಾಗುವಂತಹ ಉದ್ಯೋಗ ನೀತಿ ರೂಪಿಸಲಾಗಿದೆ. ಬೇರೆ ಯಾವ ರಾಜ್ಯದಲ್ಲೂ ಇಂತಹ ನೀತಿಯಿಲ್ಲ. ಹೆಚ್ಚು ಉದ್ಯೋಗ ನೀಡಿದವರಿಗೆ ಹೆಚ್ಚಿನ ರಿಯಾಯತಿ ನೀಡಲಾಗುವುದು. ಸಂಪತ್ತಿನ ಹಂಚಿಕೆಯು ಉದ್ಯೋಗ ನೀಡುವ ಮೂಲಕ ಸಮರ್ಪಕವಾಗಿ ನಡೆಯಲಿ.
ಕೌಶಲ್ಯ ಯಾರ ಸ್ವತ್ತೂ ಅಲ್ಲ. ಯುವ ಜನಾಂಗದಲ್ಲಿ ಅಡಗಿರುವ ಕೌಶಲ್ಯವನ್ನು ಗುರುತಿಸಿ ಅದಕ್ಕನುಗುಣವಾಗಿ ಉದ್ಯೋಗ ಒದಗಿಸುವುದು ಈ ಮೇಳದ ಮುಖ್ಯ ಉದ್ದೇಶ. ಬೆಳಗಾವಿಯಲ್ಲಿ ನಡೆದಿರುವ ಈ ಮೇಳದಲ್ಲಿ ಭಾಗವಹಿಸಿರುವ ಪ್ರತಿಷ್ಠಿತ ಕಂಪನಿಗಳು ಈ ಭಾಗದ ಯುವಕ-ಯುವತಿಯರಲ್ಲಿನ ಕೌಶಲ್ಯಕ್ಕನುಗುಣವಾದ ಉದ್ಯೋಗ ಒದಗಿಸುತ್ತಿರುವುದು ಪ್ರಶಂಸನೀಯ ಕಾರ್ಯ ಎಂದರು.
ಮುಖ್ಯವಾಗಿ ಗಡಿ ಜಿಲ್ಲೆಯ ಯುವಕ-ಯುವತಿಯರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಒಳ್ಳೆಯ ಅವಕಾಶ ಇದಾಗಿದ್ದು, ಉತ್ತಮ ಸಂಸ್ಥೆಗಳ ಸಹಯೋಗದೊಂದಿಗೆ ಕೌಶಲ್ಯ ಅಭಿವೃದ್ಧಿ ಇಲಾಖೆ ವತಿಯಿಂದ ಯುವಕರ ಭವಿಷ್ಯ ರೂಪಿಸಲು ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಇನ್ನೂ ಹೆಚ್ಚು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು ಎಂದರು.
ಸರ್ವರಿಗೂ ಉದ್ಯೋಗದ ಸಂಕಲ್ಪ:
ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ| ಸಿ.ಎನ್. ಅಶ್ವತ್ಥ್ನಾರಾಯಣ ಮಾತನಾಡಿ, ಪ್ರತಿಯೊಬ್ಬ ವಿದ್ಯಾವಂತರಿಗೂ ಅವರಿಗೆ ಆಸಕ್ತಿ ಇರುವಂತಹ ಉದ್ಯೋಗಗಳೇ ದೊರಕುವಂತಾಗಬೇಕು ಎನ್ನುವುದು ಸರ್ಕಾರದ ಸಂಕಲ್ಪ. ಈ ಹಿನ್ನೆಲೆಯಲ್ಲಿ ಸಕಲರಿಗೂ ಉದ್ಯೋಗ ಕಾರ್ಯಕ್ರಮ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರದ ಪುಣೆಗಿಂತಲೂ ದೊಡ್ಡ ಮಟ್ಟಕ್ಕೆ ಬೆಳೆಸಲಾಗುವುದು. ಇಲ್ಲಿನ ಜನರು ಉದ್ಯೋಗಕ್ಕಾಗಿ ವಲಸೆ ಹೋಗಬೇಕಿಲ್ಲ. ಕೈಗಾರಿಕಾ ಸಂಪರ್ಕ ಕಾರ್ಯಕ್ರಮದಡಿ ಕೈಗಾರಿಕೆಗಳವರಿಗೂ ತರಬೇತಿ ನೀಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿಯು ಕೌಶಲ್ಯಯುತ ನಾಡಾಗಿದ್ದು ಇಲ್ಲಿನ ಯುವಕ-ಯುವತಿಯರಿಗೆ ಹೆಚ್ಚಿನ ಉದ್ಯೋಗವಕಾಶಗಳ ಸೃಷ್ಟಿಗಾಗಿ ಹೆಚ್ಚಿನ ಕೈಗಾರಿಕೆಗಳು ಬರುವಂತಾಗಬೇಕು. ಈ ಕೈಗಾರಿಕೆಗಳ ಸ್ಥಾಪನೆಗೆ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದರು. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಐಟಿ-ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ| ಇ.ವಿ.ರಮಣರೆಡ್ಡಿ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತರಾದ ಕೆ.ಜ್ಯೋತಿ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ, ಐಟಿ-ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್, ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಚೇರ್ಮನ್ ರಾಜೇಂದ್ರ ಬೆಳಗಾಂವಕರ ಇದ್ದರು. ಡಾ| ಎಸ್.ಸೆಲ್ವಕುಮಾರ ಸ್ವಾಗತಿಸಿದರು. ಶಂಕರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.