ಕೃಷಿ ಜಮೀನು ನುಂಗಿದ ಕಲ್ಲುಗಳ ರಾಶಿ
Team Udayavani, Dec 16, 2019, 1:04 PM IST
ಬೆಳಗಾವಿ: ಮೂರ್‍ನಾಲ್ಕು ತಿಂಗಳ ಹಿಂದೆ ಅಪ್ಪಳಿಸಿದ ಪ್ರವಾಹದಿಂದ ರೈತರ ಬದುಕು ಕೊಚ್ಚಿ ಹೋಗುವುದರ ಜತೆಗೆ ಹೊಲಗಳೂ ಕೊಚ್ಚಿ ಹೋಗಿವೆ. ತಾಲೂಕಿನ ಸಿದ್ಧನಹಳ್ಳಿ ಗ್ರಾಮದಲ್ಲಿ ಬಳ್ಳಾರಿ ನಾಲಾ ಪ್ರವಾಹದಿಂದ ರಾಶಿ ರಾಶಿಯಾಗಿ ಬಿದ್ದ ಕಲ್ಲಿನ ಗುಡ್ಡೆಗಳಿಂದ ಹೊಲಗಳು ಮುಚ್ಚಿ ಹೋಗಿವೆ. ಗುಡ್ಡದಂತೆ ಬಿದ್ದಿರುವ ಕಲ್ಲುಗಳನ್ನು ತೆಗೆಯುವುದೇ ದುಸ್ಥರವಾಗಿದೆ.
ಸಿದ್ಧನಹಳ್ಳಿ ಗ್ರಾಮದ ಪಕ್ಕದಲ್ಲಿ ಹರಿದು ಹೋಗುವ ಬಳ್ಳಾರಿ ನಾಲಾ ಇಡೀ ರೈತರ ಬದುಕನ್ನೇ ನುಂಗಿ ಹಾಕಿದೆ. ಜತೆಗೆ ರೈತರ ಹೊಲಗಳಿಗೂ ಕೊಳ್ಳೆ ಇಟ್ಟಿದ್ದು, ಎಲ್ಲವನ್ನೂ ನುಂಗಿ ನೀರು ಕುಡಿದಿದೆ. ಹಿಂದೆಂದೂ ಕಂಡು ಕೇಳರಿಯದಷ್ಟು ಬಳ್ಳಾರಿ ನಾಲಾದಲ್ಲಿ ನೀರು ಬಂದು ಸುತ್ತಲಿನ ಕೃಷಿ ಜಮೀನುಗಳನ್ನೇ ನುಂಗಿ ಹಾಕಿದೆ. ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಸಿದ್ಧನಹಳ್ಳಿ ಎಂಬ ಮುಳುಗಡೆ ಪ್ರದೇಶದ ಹೊಲಗಳು ಯಾವುದಕ್ಕೂ ಉಪಯೋಗಕ್ಕೆ ಬಾರದಂತಾಗಿವೆ.
ಬೆಳೆ ಹಾನಿ ಸಮೀಕ್ಷೆಯೇ ಇಲ್ಲ: ನೆರೆ ಬಂದೂ ನಾಲ್ಕು ತಿಂಗಳು ಗತಿಸಿದರೂ ಇಲ್ಲಿಯ ರೈತರ ಕಡೆಗೆ ಯಾರೂ ತಿರುಗಿಯೋ ನೋಡುತ್ತಿಲ್ಲ. ಪ್ರವಾಹದ ನೆಪದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಭೇಟಿ ನೀಡಿದ್ದು ಬಿಟ್ಟರೆ ಇನ್ನೂವರೆಗೆ ಒಬ್ಬರೂ ಬಂದಿಲ್ಲ. ಬೆಳೆ ಹಾನಿ ಸಮೀಕ್ಷೆಯೂ ಇಲ್ಲ, ಪರಿಹಾರವೂ ಇಲ್ಲದೇ ರೈತರು ಜಾತಕ ಪಕ್ಷಿಯಂತೆ ಕಾಯುತ್ತ ಕುಳಿತಿದ್ದಾರೆ.
ಪರಿಹಾರ ಮಾತುಗಳೇ ಇಲ್ಲ: ಫಲವತ್ತಾದ ಜಮೀನು ಹೊಂದಿರುವ ಈ ಗ್ರಾಮದ ಸುಮಾರು 20ಕ್ಕೂ ಹೆಚ್ಚು ಎಕರೆ ಜಮೀನು ಹಾನಿಯಾಗಿದೆ. ಬೆಳೆ ಹಾನಿಯಾದರೆ ಮತ್ತೂಂದು ಹಂಗಾಮಿನಲ್ಲಿ ಬೆಳೆಯಬಹುದು. ಆದರೆ ಇಡೀ ಜಮೀನಿಗೆ ಜಮೀನೇ ಅಲ್ಲಿ ನಿರ್ನಾಮಗೊಂಡಿದೆ. ಸಾವಿರಾರು ಟ್ರಾಕ್ಟರ್‌ಗಳಷ್ಟು ಕಲ್ಲಿನ ರಾಶಿಗಳು ಹೊಲದಲ್ಲಿ ಬಿದ್ದಿವೆ. ಅವುಗಳನ್ನು ಹೊರಗೆ ತೆಗೆದು ಕೃಷಿ ಚಟುವಟಿಕೆ ನಡೆಸುವುದು ಕಷ್ಟದ ಮಾತಾಗಿದೆ. ಇನ್ನೂವರೆಗೆ ಯಾವುದೇ ಜನಪ್ರತಿನಿಧಿಗಳಾಗಲೀ ಅಥವಾ ಅಧಿಕಾರಿಗಳಾಗಲೀ ಬಂದು ಭೇಟಿ ನೀಡಿ ಪರಿಹಾರ ನೀಡುವ ಮಾತುಗಳನ್ನು ಆಡಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಹರೇವಾರಿ ತರಕಾರಿ ಫಸಲು ನೀಡುವ ಈ ಬಂಗಾರದಂಥ ಜಮೀನಿನಲ್ಲಿ ಕಲ್ಲು ಬೆಳೆದಂತಾಗಿದೆ. ನೀರಿನಲ್ಲಿ ಹರಿದು ಬಂದಿರುವ ಕಲ್ಲುಗಳು ಹೊಲಗಳಲ್ಲಿ ಗಟ್ಟಿಯಾಗಿ ನೆಲೆಯೂರಿ ಕುಳಿತಿವೆ. ಮಣ್ಣು ಹಾಗೂ ನೀರಿನ ಹೊಡೆತಕ್ಕೆ ಬಂದು ಬಿದ್ದಿರುವ ಈ ಕಲ್ಲುಗಳು ನೆಲದಲ್ಲಿ ತಳವೂರಿ ಕುಳಿತಿದ್ದು, ಕೈಯಿಂದ ಇದನ್ನು ತೆಗೆದು ಹಾಕುವುದು ಕಷ್ಟಕರ.
ಕಲ್ಲು ಬೇರೆಡೆ ಸಾಗಿಸುವುದು ಕಷ್ಟ: ಆಗ ರೈತರು ಭತ್ತ, ಜೋಳ, ಗೋವಿನ ಜೋಳ, ತರಕಾರಿ ಬೆಳೆದಿದ್ದರು. ಆದರೆ ಈಗ ಹೊಲಗಳು ಕಲ್ಲಿನ ಪಾಲಾಗಿವೆ. ಮಣ್ಣೆಲ್ಲ ಕಿತ್ತು ಹೊಲಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳೂ ಬಿದ್ದಿವೆ. ಅದನ್ನು ಸಮತಟ್ಟು ಮಾಡುವುದು, ಕಲ್ಲುಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುವುದು, ಮತ್ತೆ ಬೆಳೆ ಬೆಳೆಯುವುದು ಆಗದ ಮಾತು ಎನ್ನುತ್ತಾರೆ ರೈತರು.
ಮುಳುಗಡೆ ಪ್ರದೇಶ ಇದ್ದರೂ ಯಾವುದೇ ಸೌಲಭ್ಯವೂ ಇಲ್ಲ ಪರಿಹಾರವೂ ಇಲ್ಲ, ಪುನರ್ವಸತಿಯೂ ಕಲ್ಪಿಸಿಲ್ಲ. ಈ ಗ್ರಾಮವನ್ನು ಇನ್ನೂವರೆಗೆ ಸ್ಥಳಾಂತರ ಮಾಡದೇ, ಸೌಲಭ್ಯವನ್ನೂ ಕಲ್ಪಿಸಿಲ್ಲ. ಬಳ್ಳಾರಿ ನಾಲಾ ಅಣೆಕಟ್ಟು ಕಾಮಗಾರಿ ಆರಂಭಗೊಂಡರೂ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಈ ಅಧಿಕಾರಿಗಳಿಗೆ ಇಲ್ಲವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ತರಕಾರಿಯ ತವರೂರು ಎಂದೇ ಈ ಊರಿಗೆ ಕರೆಯಲಾಗುತ್ತಿದೆ. ಟೋಮೆಟೊ, ಕೋತಂಬರಿ,
ಭೇಂಡಿಕಾಯಿ, ಹಾಗಲಕಾಯಿ, ಚವಳಿಕಾಯಿ, ಮೆಣಸಿನಕಾಯಿ, ಹಿರೇಕಾಯಿ, ಸವತೆಕಾಯಿ, ಬದನೆಕಾಯಿ, ಸವರೆಕಾಯಿ, ಫ್ಲಾವರ್, ಎಲೆಕೂಸು(ಕ್ಯಾಬಿಜ್), ಬೀನ್ಸ್ ಸೇರಿದಂತೆ ಅನೇಕ ತರಕಾರಿ ಬೆಳೆಯಲಾಗುತ್ತದೆ. ಇಲ್ಲಿ ವಿವಿಧ ತರಹದ ತರಕಾರಿಗಳನ್ನು ಬೆಳೆದು ದಿನಾಲೂ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕಳುಹಿಸಲಾಗುತ್ತಿದೆ. ನೆರೆ ಬಂದು ಅಪ್ಪಳಿಸಿದಾಗಿನಿಂದ ತರಕಾರಿ ಹೋಗುತ್ತಿಲ್ಲ. ಕೃಷಿಯನ್ನೇ ನಂಬು ಬದುಕುತ್ತಿರುವ ಇಲ್ಲಿಯ ರೈತರು ಪ್ರವಾಹದ ಹೊಡೆತದಿಂದ ಹೊರ ಬಂದಿಲ್ಲ.
-ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.