ನೆರೆ ಪರಿಹಾರಕ್ಕೆ ಕೇಂದ್ರದಿಂದ ಹೆಚ್ಚು ಹಣ ಬಿಡುಗಡೆ ಮಾಡಿಸಿ : ಎಸ್ ಆರ್ ಪಾಟೀಲ್ ಆಗ್ರಹ
Team Udayavani, Dec 17, 2021, 10:30 PM IST
ವಿಧಾನ ಪರಿಷತ್ : ನೆರೆ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಾಳಿದ್ದು, ಭಿಕ್ಷೆ ರೂಪದಲ್ಲಿ ಪರಿಹಾರ ನೀಡುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿ ಹೆಚ್ಚಿನ ಹಣ ಬಿಡುಗಡೆಗೆ ಒತ್ತಾಯಿಸಬೇಕು ಎಂದು ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ್ ಆಗ್ರಹಿಸಿದರು.
ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ನಿಯಮ 68ರ ಅನ್ವಯ, ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹ, ಅತೀವೃಷ್ಠಿಯಿಂದ ರೈತರ ಬೆಳೆನಾಶ ಕುರಿತು ಮಾತನಾಡಿದ ಅವರು, ಬಸವನಾಡಿನಲ್ಲಿ 31 ಸಾವಿರ ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ನಾಶವಾಗಿದೆ.
ಅದರಂತೆ ರಾಜ್ಯದ ವಿವಿಧೆಡೆ 1.5 ಲಕ್ಷಕ್ಕೂ ಹೆಚ್ಚು ಹೆಕ್ಟರ್‌ನಲ್ಲಿ ಬೆಳೆದ ಬೆಳೆ ನಾಶವಾಗಿದೆ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಚಿಕ್ಕಮಗಳೂರು, ಉಡುಪಿ ಸೇರಿದಂತೆ 21 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಭತ್ತ, ರಾಗಿ, ಮುಸುಕಿನ ಜೋಳ, ದ್ರಾಕ್ಷಿ ಸಂಪೂರ್ಣವಾಗಿ ನೀರಿಗೆ ಆಹುತಿಯಾಗಿದೆ. ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಧಾರವಾಡ ಭಾಗದಲ್ಲಿ ತೊಗರಿ ಹಾಗೂ ಸೋಯಾಬಿನ್ ಬೆಳೆದ ರೈತರಿಗೆ ಸಾಕಷ್ಟು ನಷ್ಟವುಂಟಾಗಿದೆ. 2019ರಿಂದ ಮೇಲಿಂದ ಮೇಲೆ ಉಂಟಾದ ಅತೀವೃಷ್ಠಿಯಲ್ಲಿ 2.5 ಲಕ್ಷ ಕೋಟಿ ರೂಪಾಯಿ ಹಾನಿಯಾಗಿದೆ. ರೈತರಿಗೆ, ಜನರಿಗೆ, ಸಾರ್ವಜನಿಕ ಆಸ್ತಿ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ಹೇಳಿದರು.
ಭಕಾಸೂರನ ಹೊಟ್ಟೆಗೆ ಅರೆ ಮಜ್ಜಿಗೆ ಅನ್ನುವಂತೆ ಕೇಂದ್ರ ಸರ್ಕಾರ 2019 ರಲ್ಲಿ 1652 ಹಾಗೂ 2020-21ರಲ್ಲಿ 1311 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಸುಮಾರು 5 ಸಾವಿರ ಕೋಟಿ ರೂಪಾಯಿ ಮೌಲ್ಯದ ರಾಗಿ ಬೆಳೆ ನಷ್ಟವಾಗಿದೆ.
ಕೇವಲ ಎನ್ ಡಿ ಆರ್‌ಎಫ್ ನೆಪ ಹೇಳಿಕೊಂಡು ಕಾಲ ಕಳೆಯಬೇಡಿ, ರಾಜ್ಯ ಸರ್ಕಾರ ಯುದ್ದೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಸರ್ಕಾರದ ಕಿವಿ ಹಿಂಡಿದರು. ಅಲ್ಲದೆ 2 ಹೆಕ್ಟರ್‌ಗಿಂತ ಹೆಚ್ಚು ಜಮೀನು ನಾಶವಾಗಿರುವವರಿಗೂ ಪರಿಹಾರ ನೀಡಿ ಎಂದು ಒತ್ತಾಯಿಸಿದರು. ಈ ವರ್ಷ 35,335 ಮನೆಗಳು ಪ್ರವಾಹಕ್ಕೆ ನಾಶವಾಗಿವೆ. ಅವುಗಳಿಗೂ ಇನ್ನೂ ಕೂಡಾ ಪರಿಹಾರ ಬಿಡುಗಡೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ವಿವಿಗಳು ದೇವಸ್ಥಾನವಿದ್ದಂತೆ, ವಿಜ್ಞಾನಿಗಳು ದೇವರಿದ್ದಂತೆ ಆದರೆ ಇವ್ರು ಕಲ್ಲಿನ ದೇವರ ಹಾಗೆ, ರೈತರು ಸಂಕಷ್ಟದಲ್ಲಿದ್ದರೂ ನೆರವಿಗೆ ಬರಲಿಲ್ಲ. ಜನರ ನೆರವಿಗೆ ವಿಜ್ಞಾನಿಗಳು ಬಂದಿದ್ದರೆ, ದ್ಯಾಮವ್ವ, ದುರುಗವ್ವ ಬಿಟ್ಟು ನಿಮಗೆ ಕೈ ಮುಗಿಯುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ:ಕೊರಟಗೆರೆ: ಕರಡಿ ಕೊಂದು ತಿಂದ 6 ಮಂದಿ ಆರೋಪಿಗಳ ಬಂಧನ
ರಾಜ್ಯವನ್ನು ಪ್ರತಿನಿಧಿಸುವ 25 ಜನ ಸಂಸತ್ ಸದಸ್ಯರಿದ್ದಾರೆ. ಅವರ್ಯಾರೂ ಪ್ರಧಾನಿ ಎದುರಿಗೆ ಮಾತನಾಡುವ ಧೈರ್ಯವಿಲ್ಲ, ಈ ಕಾರಣದಿಂದ ಕೇಂದ್ರ ನಮ್ಮ ರಾಜ್ಯದ ವಿಷಯದಲ್ಲಿ ಆಡಿದ್ದೆ ಆಟ ಎನ್ನುವಂತಾಗಿದೆ.
ಜನಾಶೀರ್ವಾದ ಯಾತ್ರೆ ಮಾಡಿದ್ದೀರಿ. ಆದರೆ ಯಾರೊಬ್ಬರೂ ರೈತರ ಜಮೀನಿಗೆ ತೆರಳಿ ಪರಿಶೀಲಿಸುವ ಕೆಲಸ ಮಾಡಲಿಲ್ಲ. ಕೊನೆ ಪಕ್ಷ ರೈತಣಿಕೆ ಸಾಂತ್ವಾನವನ್ನೂ ಹೇಳಲಿಲ್ಲ.
ಬೆಂಗಳೂರಿನ ರಸ್ತೆಗಳೂ ಹಾನಿಯಾಗಿದ್ದು ಅವುಗಳ ರಿಪೇರಿಗೆ 5 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ಕಳೆದ ವರ್ಷ ನಮ್ಮ ರಾಜ್ಯದಿಂದ ವಿವಿಧ ರೀತಿಯ ತೆರಿಗೆಯ ಮೂಲಕ 35 ಸಾವಿರ ಕೋಟಿ ರೂ. ಆದಾಯ ಹೋಗಿದೆ,ಈ ವರ್ಷ 40 ಸಾವಿರ ಕೋಟಿ ಹೋಗುತ್ತದೆ. ಆದರೂ ಪರಿಹಾರ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಧಾನದಿಂದ ಕೆಲಸ ಆಗೋಲ್ಲ, ನಾನು ಸಮಾಧಾನ ಇದ್ದೆ ಈ ಸಾಲಿಗೆ ಬಂದಿದ್ದೇನೆ ಎಂದು ಟಿಕೆಟ್ ತಪ್ಪಿರುವುದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿಯ ರವಿಕುಮಾರ್ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ, ಆದರೆ ಕಾಂಗ್ರೆಸ್ ಪಕ್ಷದವರೆ ನಿಮಗೆ ಬೆಂಬಲ ನೀಡುತ್ತಿಲ್ಲ ಎಂದು ಛೇಡಿಸಿದರು. ಆಗ ಮದ್ಯೆ ಪ್ರವೇಶಿಸಿದ ಕಾಂಗ್ರೆಸ್ ನ ಬಿ.ಕೆ.ಹರಿಪ್ರಸಾದ್ ನಾವೆಂದು ಅವರನ್ನು ಮಾರ್ಗದರ್ಶಕ ಮಂಡಳಿಗೆ ಕಳಿಸಿಲ್ಲ ಎಂದು ಬಿಜೆಪಿಗೆ ತೀರುಗೆಟು ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.