ಸಾಲ ವಸೂಲಿ ತಕ್ಷಣ ನಿಲ್ಲಿಸಿ: ಜಿಲ್ಲಾಧಿಕಾರಿ
Team Udayavani, Sep 18, 2019, 10:40 AM IST
ಬೆಳಗಾವಿ: ಜಿಲ್ಲಾಧಿಕಾರಿ ಡಾ| ಎಸ್.ಬಿ. ಬೊಮ್ಮನಹಳ್ಳಿ ಅಧ್ಯಕ್ಷತೆಯಲ್ಲಿ ಮಂಗಳವಾರ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಯಿತು.
ಬೆಳಗಾವಿ: ನೆರೆ ಹಾವಳಿಯಿಂದ ರೈತ ಸಮುದಾಯ ತೀವ್ರ ಸಮಸ್ಯೆಯಲ್ಲಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ರೈತರ ಸಾಲ ವಸೂಲಿ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ| ಎಸ್.ಬಿ.ಬೊಮ್ಮನಹಳ್ಳಿ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಂತ್ರಸ್ತರು ಹಾಗೂ ರೈತರ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿದ ಅವರು, ಒಂದು ವೇಳೆ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿದ್ದರೆ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಅವುಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಬೇಕು ಎಂದು ಬ್ಯಾಂಕುಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ಸಾಲ ವಸೂಲಾತಿಗೆ ನಿಯೋಜಿಸುವ ಏಜೆನ್ಸಿಗಳ ಪೂರ್ವಾಪರ ಪರಿಶೀಲಿಸಿ ಅವರನ್ನು ನೇಮಕ ಮಾಡಿಕೊಳ್ಳಬೇಕು. ಸಾಲ ವಸೂಲಾತಿ ನೆಪದಲ್ಲಿ ಗೂಂಡಾವರ್ತನೆ ಅಥವಾ ದೌರ್ಜನ್ಯ ಸಹಿಸಲಾಗದು ಎಂದು ಎಚ್ಚರಿಕೆ ನೀಡಿದ ಅವರು, ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳು ಜನರ ಪರಿಸ್ಥಿತಿ ಅರಿತುಕೊಂಡು ಕೆಲಸ ಮಾಡಬೇಕು. ಸಾಲಮನ್ನಾ ಅರ್ಹತೆ ಹೊಂದಿರುವ ರೈತರ ವಿರುದ್ಧದ ಪ್ರಕರಣಗಳನ್ನು ಸ್ಥಗಿತಗೊಳಿಸಲು ಕ್ರಮ ವಹಿಸಬೇಕು. ಕೆಲವು ಮೈಕ್ರೋ ಫೈನಾನ್ಸ್ ನವರು ಪರಿಹಾರ ಕೇಂದ್ರಗಳಿಗೆ ತೆರಳಿ ಸಾಲ ವಸೂಲಾತಿಗೆ ಪ್ರಯತ್ನ ಮಾಡಿರುವುದು ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಳೆದ ತಿಂಗಳು 14ರಂದು ರೈಲ್ವೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಬೆಳೆವಿಮೆ ಅವಧಿ ಹಾಗೂ ಸಾಲಮರು ಪಾವತಿ ಅವಧಿ ವಿಸ್ತರಣೆ ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿತ್ತಲ್ಲದೇ ರೈತರು ಸಂಕಷ್ಟದಲ್ಲಿದ್ದು, ಸಾಲ ವಸೂಲಾತಿಗೆ ಒತ್ತಡ ಹಾಕಬಾರದು ಎಂದು ಸಹ ತಿಳಿಸಲಾಗಿತ್ತು. ಇದಲ್ಲದೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾಲ ಹೊಂದಾಣಿಕೆ ಮಾಡಬಾರದು ಹಾಗೂ ಅವಧಿ ವಿಸ್ತರಣೆ ಮಾಡಿ ಕಾಲಾವಕಾಶ ನೀಡಬೇಕು ಎಂದು ಈಗಾಗಲೇ ರಾಜ್ಯಮಟ್ಟದ ಬ್ಯಾಂಕರ್ ಸಭೆಯಲ್ಲಿ ಕೂಡ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು
ನೋಟಿಸ್‌ಗಳಿಗೆ ಭಯಬೇಡ: ಸಾಲ ವಸೂಲಾತಿಗೆ ಸಂಬಂಧಪಟ್ಟಂತೆ ಯಾವುದೇ ನೋಟಿಸ್ ಅಥವಾ ವಾರಂಟ್ ಗಳು ಬಂದಾಗ ಒಮ್ಮೆಲೆ ಭಯಗೊಳ್ಳುವ ಅಗತ್ಯವಿಲ್ಲ. ಅದಕ್ಕೆ ಕಾನೂನು ಪ್ರಕಾರ ರಕ್ಷಣೆ ಒದಗಿಸಲಾಗುವುದು. ನೋಟಿಸ್ ಅಥವಾ ವಾರಂಟ್‌ಗಳ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೆ ಅದಕ್ಕೆ ಸೂಕ್ತ ಕಾನೂನು ನೆರವು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರೈತರಿಗೆ ಭರವಸೆ ನೀಡಿದರು.
ಸಾಲ ನೀಡುವಾಗ ಕೆಲವು ಖಾಸಗಿ ಬ್ಯಾಂಕುಗಳು ಖಾಲಿ ಚೆಕ್ ಪಡೆದುಕೊಳ್ಳಲು ಅವಕಾಶಗಳಿಲ್ಲ. ಮುಂದಿನ ದಿನಾಂಕಗಳನ್ನು ನಮೂದಿಸಿ ಚೆಕ್ ಪಡೆಯುವ ಪದ್ಧತಿ ಇದೆ. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿ ಖಾಲಿ ಚೆಕ್ ಪಡೆದುಕೊಂಡರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದ ಅವರು ಸರಕಾರದ ವಿವಿಧ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ಯಾವುದೇ ರೀತಿಯ ಪಿಂಚಣಿಯನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ನೀಡುವ ಪ್ರಕ್ರಿಯೆಯಲ್ಲಿ ವಿಳಂಬ ಆಗುತ್ತಿದೆ. ಇದೇ ಕಾರಣದಿಂದ ಜನರು ಅನಿವಾರ್ಯವಾಗಿ ಖಾಸಗಿ ಬ್ಯಾಂಕುಗಳ ಮೊರೆ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ರಾಷೀr್ರಕೃತ ಬ್ಯಾಂಕುಗಳು ಸಾಧ್ಯವಾದಷ್ಟು ಸಾಲ ನೀಡುವ ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಪ್ರಕಾಶ ನಾಯಕ ಮಸಗುಪ್ಪಿ, ಅನೇಕ ಗ್ರಾಮಗಳಲ್ಲಿ ಕೆಲ ಬ್ಯಾಂಕ್‌ಗಳು ಪರಿಹಾರ ಕೇಂದ್ರಗಳಿಗೆ ತೆರಳಿ ಸಾಲ ವಸೂಲಾತಿಗೆ ಮುಂದಾಗಿರುವುದು ದುರ್ದೈವದ ಸಂಗತಿ. ಕೆಲವು ಖಾಸಗಿ ಬ್ಯಾಂಕುಗಳು ಸಾಲ ವಸೂಲಾತಿಗೆ ನೇಮಿಸಿರುವ ಏಜೆಂಟರು ಗೂಂಡಾಗಳ ರೀತಿ ವರ್ತಿಸಿ ಸಾಲ ಪಡೆದವರನ್ನು ಶೋಷಿಸಲಾಗುತ್ತಿದೆ ಎಂದು ದೂರಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ರೈತರು ಎಲ್ಲ ಬಗೆಯ ಸಾಲ ವಸೂಲಾತಿಯನ್ನು ತಕ್ಷಣವೇ ನಿಲ್ಲಿಸಬೇಕು. ರೈತರು ಹಾಗೂ ಗ್ರಾಮೀಣ ಜನರ ಶೋಷಣೆ ಮಾಡದೇ ಮರುಪಾವತಿಗೆ ಸೂಕ್ತ ಕಾಲಾವಕಾಶ ನೀಡಬೇಕು. ಬ್ಯಾಂಕ್ ನೋಟಿಸ್ ಹಾವಳಿಯಿಂದ ರೈತರು ಕಂಗೆಟ್ಟಿದ್ದಾರೆ. ಕೃಷಿ ಯಂತ್ರೋಪಕರಣಗಳನ್ನು ಜಪ್ತಿ ಮಾಡುವಾಗ ನಿಯಮಾವಳಿ ಪಾಲನೆ ಮಾಡುತ್ತಿಲ್ಲ. ಯಾವುದೇ ಮುನ್ಸೂಚನೆ ನೀಡದೇ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಂಕುಗಳು ಹಾಗೂ ಸರ್ಕಾರದಿಂದ ನೀಡಲಾಗುವ ಬೆಳೆಸಾಲವನ್ನು ಬೆಳೆಸಾಲ ಎಂದು ಕರೆಯದೇ ಬೆಳೆ ಸಹಾಯಧನ ಎಂದು ಪರಿಗಣಿಸಬೇಕು. ಕೃಷಿ ಸಾಲ ಪದದ ಬದಲಾಗಿ ಕೃಷಿ ಸಹಾಯಧನ ಎಂದು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಮಾತನಾಡಿ, ಹಲವಾರು ಬಾರಿ ನಿರ್ದೇಶನ ನೀಡಿದ ಮೇಲೂ ಕೆಲವು ಖಾಸಗಿ ಬ್ಯಾಂಕುಗಳು ಸಾಲ ವಸೂಲಾತಿಗೆ ಮುಂದಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೂ ಸಾಲ ಮರುಪಾವತಿಗೆ ಒತ್ತಾಯಿಸಿ ನೋಟಿಸ್ ನೀಡುವಂತಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ ಎಂದರು.
ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಬಿಎಸ್.ಲೋಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ರಾಷ್ಟ್ರೀಕೃತ, ಸಹಕಾರಿ ಮತ್ತು ಖಾಸಗಿ ಬ್ಯಾಂಕುಗಳ ಪ್ರತಿನಿಧಿಗಳು, ರೈತ ಮುಖಂಡರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.