ಅರಿಷಿಣ ಸಂಸ್ಕರಣೆ ಘಟಕ ಸ್ಥಾಪನೆಗೆ ಸಬ್ಸಿಡಿ
ಆಧುನಿಕ ಉತ್ಪಾದನಾ ತಾಂತ್ರಿಕತೆಗಳ ತರಬೇತಿ
Team Udayavani, Jun 2, 2022, 5:04 PM IST
ಮೂಡಲಗಿ: ಅರಿಷಿಣ ಬೆಳೆಯುವ ರೈತರಿಗಾಗಿ ಸಂಸ್ಕರಣೆ ಘಟಕ ಸ್ಥಾಪಿಸಲು ಶೇ.40 ಸಬ್ಸಿಡಿ ಕೊಡುವ ಯೋಜನೆಯಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೆಳಗಾವಿ ಜಿಪಂ ತೋಟಗಾರಿಕೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಹೇಳಿದರು.
ಅರಭಾವಿ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಮತ್ತು ರಾಜಾಪುರ ವಿವೇಕಾನಂದ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ “ಅರಿಷಿಣ ಬೆಳೆಯಲ್ಲಿ ಆಧುನಿಕ ಉತ್ಪಾದನಾ ತಾಂತ್ರಿಕತೆಗಳು’ ತರಬೇತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹನಿ ನೀರಾವರಿ ಸೌಲಭ್ಯವು ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗಿದ್ದು, ಶೇ.90 ಎಸ್ಸಿ-ಎಸ್ಟಿ, ಶೇ.75 ಇನ್ನುಳಿದ ವರ್ಗದ ರೈತರಿಗಿದ್ದು, ಒಟ್ಟಾರೆ 5 ಹೆಕ್ಟೇರ್‌ವರೆಗೆ ಈ ಸೌಲಭ್ಯ ಒಬ್ಬ ರೈತರಿಗೆ ಸಿಗುವುದಾಗಿ ತಿಳಿಸಿದರು.
ಕಲ್ಲೋಳಿ ಪ್ರಗತಿಪರ ರೈತ ಬಾಳಪ್ಪ ಬೆಳಕೂಡ ಮಾತನಾಡಿ, ಅರಿಷಿಣ ಬೆಳೆ ಬೆಳೆಯುವ ಮುನ್ನ ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿ, ಭೂಮಿಗೆ ಹೆಚ್ಚಿನ ಸಾವಯವ ಗೊಬ್ಬರ ಮತ್ತು ಅಣುಜೀವಿ ಗೊಬ್ಬರ ಹಾಕಿ ವೈಜ್ಞಾನಿಕವಾಗಿ ಅರಿಷಿಣ ಬೆಳೆದರೆ ಪ್ರತಿ ಎಕರೆಗೆ 50-55 ಕ್ವಿಂಟಲ್ ಇಳುವರಿ ಪಡೆಯಬಹುದು ಎಂದು ಮಾಹಿತಿ ನೀಡಿದರು.
ರಾಜಾಪುರ ವಿವೇಕಾನಂದ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ರಾಜು ಬೈರುಗೋಳ ಮಾತನಾಡಿ, ಸಮಗ್ರ ಕೃಷಿ ಪದ್ಧತಿಯಲ್ಲಿ ಅರಿಷಿಣ ಬೆಳೆಯುವುದರಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದರು.
ಮಹಾವಿದ್ಯಾಲಯದ ಡೀನ್ ಡಾ| ಎಂ.ಜಿ. ಕೆರುಟಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ವಿಜ್ಞಾನಿಗಳನ್ನು ಸಂಪರ್ಕಿಸಿ ಹೆಚ್ಚಿನ ಇಳುವರಿ ಕೊಡುವ ತಳಿಗಳು, ಹನಿ ನೀರಾವರಿ, ರಸಾವರಿ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಕೀಟ-ರೋಗ ನಿರ್ವಹಣೆ, ಪ್ರತಿ ಎಕರೆಗೆ ತಗಲುವ ವೆಚ್ಚ-ಆದಾಯದ ವಿಷಯ ತಿಳಿದು ಅರಿಷಿಣ ಬೆಳೆದರೆ ಹೆಚ್ಚಿನ ಇಳುವರಿ ಮತ್ತು ಲಾಭ ಪಡೆಯಬಹುದು ಎಂದರು.
ಬಾಗಲಕೋಟೆ ತೋ.ವಿ.ವಿ ಯ 2020-21ರ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಕಾಂತ ಸೊಲ್ಲಾಪುರೆ ಅರಿಷಿಣ ಬಿತ್ತುವ ಯಂತ್ರ ಮತ್ತು ರಾಮಪ್ಪ ಉಪ್ಪಾರ ಸಾವಯವ ಕೃಷಿ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಮಹಾವಿದ್ಯಾಲಯದ ಡಾ| ಜೆ.ಎಸ್ .ಹಿರೇಮಠ ಅರಿಷಿಣ ಬೆಳೆಯ ಸುಧಾರಿತ ತಳಿಗಳು, ಶ್ರೀಕಂಠ ಪ್ರಸಾದ ಡಿ. ಆಧುನಿಕ ಉತ್ಪಾದನಾ ತಾಂತ್ರಿಕತೆಗಳು, ಡಾ| ದಿಲೀಪ ಕುಮಾರ ಮಸೂತಿ ಒಂಟಿ ಕಣ್ಣಿನ ಸಸಿ ಉತ್ಪಾದನಾ ತಾಂತ್ರಿಕತೆ ಮತ್ತು ಬೀಜೋಪಚಾರದ ವಿವರ ಮತ್ತು ಪ್ರಾತ್ಯಕ್ಷಿಕೆ, ರೇಣುಕಾ ಹಿರೇಕುರಬರ ಸಮಗ್ರ ಕೀಟಗಳ ನಿರ್ವಹಣೆ, ಡಾ| ಪ್ರಶಾಂತ ಎ. ಸಮಗ್ರ ರೋಗಗಳ ನಿರ್ವಹಣೆ, ಡಾ| ವಿಜಯಮಹಾಂತೇಶ ದ್ರವರೂಪದ ಸಾವಯವ ಗೊಬ್ಬರಗಳ ತಯಾರಿಕೆ ಮತ್ತು ಬಳಕೆ, ಡಾ| ಸಚಿನಕುಮಾರ ನಂದಿಮಠ ಉತ್ಪಾದನಾ ಖರ್ಚು ವೆಚ್ಚಗಳ ವಿಶ್ಲೇಷಣೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗೋಕಾಕ, ಮೂಡಲಗಿ, ರಾಯಬಾಗ, ಸವದತ್ತಿ ಮತ್ತು ಅಥಣಿ ತಾಲೂಕಿನ ಪ್ರಗತಿಪರ ರೈತರು ಭಾಗವಹಿಸಿದ್ದರು. ಡಾ| ಸಚಿನಕುಮಾರ ನಂದಿಮಠ ನಿರೂಪಿಸಿದರು. ಡಾ| ಕಾಂತರಾಜು ವಿ. ವಂದಿಸಿದರು.
ಬೆಳಗಾವಿ ಜಲ್ಲೆಯಲ್ಲಿ ಸುಮಾರು 72 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದ್ದು, ಸುಮಾರು 8 ಸಾವಿರ ಹೆಕ್ಟೇರ್‌ನಲ್ಲಿ ಸಾಂಬಾರು ಬೆಳೆಗಳಿದ್ದು, ಸುಮಾರು 6500 ಹೆಕ್ಟೇರ್ ಪ್ರದೇಶದಲ್ಲಿ ಅರಿಷಿಣ ಬೆಳೆಯಲಾಗುತ್ತಿದೆ. ತೋಟಗಾರಿಕೆ ಬೆಳೆಗಳಿಗೆ ಸಿಗುವ ಸೌಲಭ್ಯ ತಿಳಿಸುತ್ತ, ರೈತ ಉತ್ಪಾದಕರ ಕಂಪನಿಗಳಿಗೆ ಅರಿಷಿಣ ಒಣಗಿಸುವ ಯಂತ್ರದ (ಡ್ರೆçಯರ್) ಯೋಜನೆಯಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು. –ಮಹಾಂತೇಶ ಮುರಗೋಡ, ಬೆಳಗಾವಿ ಜಿಪಂ ತೋಟಗಾರಿಕೆ ಉಪ ನಿರ್ದೇಶಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.