ದೇವಸ್ಥಾನ ಜಾಗ ಪ್ರಕರಣ: ಎಸಿಪಿ ಕಚೇರಿಗೆ ಮುತ್ತಿಗೆ
ಹೊನ್ನಿಹಾಳ ಮಹಾಲಕ್ಷ್ಮೀ ದೇಗುಲ ಜಾಗ ಮಾರಾಟಕ್ಕೆ ಆಕ್ರೋಶ
Team Udayavani, Jun 10, 2022, 12:38 PM IST
ಬೆಳಗಾವಿ: ತಾಲೂಕಿನ ಹೊನ್ನಿಹಾಳ ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜಾಗವನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದ್ದು, ಈ ಜಾಗವನ್ನು ಮರಳಿ ದೇವಸ್ಥಾನಕ್ಕೆ ನೀಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಗುರುವಾರ ಗ್ರಾಮೀಣ ಠಾಣೆ ಎಸಿಪಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಹೊನ್ನಿಹಾಳ ಗ್ರಾಮ ರಚನೆ ಆದಾಗಿನಿಂದ ಅಂದರೆ ಸುಮಾರು 700-800 ವರ್ಷಗಳ ಹಿಂದಿನಿಂದ 4.28 ಎಕರೆ ಜಮೀನು ಗ್ರಾಮದೇವಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಸೇರಿದ್ದಾಗಿದೆ. ಈ ಬಗ್ಗೆ ದಾಖಲೆಗಳೂ ಇವೆ. ದೇವಸ್ಥಾನಕ್ಕಾಗಿಯೇ ಈ ಜಾಗವನ್ನು ಬಳಕೆ ಮಾಡಿಕೊಂಡು ಬರಲಾಗುತ್ತಿದೆ. 11 ವರ್ಷಗಳ ಹಿಂದೆ ದೇವಸ್ಥಾನದ ಪೂಜಾರಿ ಆಗಿದ್ದ ಕಾಶಪ್ಪ ಬಡಿಗೇರ 4.28 ಎಕರೆ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಂಡು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.
ದೇವಸ್ಥಾನದ ಜಾಗ ಮಾರಾಟದ ಬಗ್ಗೆ ಗ್ರಾಮಸ್ಥರು ಪೂಜಾರಿಯನ್ನು ಕರೆಯಿಸಿ ತಾಕೀತು ಮಾಡಿದಾಗ, ಇದನ್ನು ಸರಿಪಡಿಸಿ ದೇವಸ್ಥಾನಕ್ಕೆ ಜಾಗ ನೀಡುವುದಾಗಿ ಒಪ್ಪಿಕೊಂಡಿದ್ದನು. ನಂತರ ಪೂಜಾರಿ ಊರಿನಲ್ಲಿ ಇಲ್ಲ. ಈ ಜಾಗ ಖರೀದಿಸಿದವರು ಮತ್ತೂಬ್ಬರಿಗೆ ಮಾರಾಟ ಮಾಡಿದ್ದಾರೆ. ಸಾಂಬ್ರಾ ಗ್ರಾಮದ ಕಾಂಗ್ರೆಸ್ ಮುಖಂಡ ನಾಗೇಶ ದೇಸಾಯಿ ಜಾಗ ಖರೀದಿಸಿ ಇದರಲ್ಲಿಯ 2.18 ಎಕರೆ ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಿ, ಇಲ್ಲಿದ್ದ ದೇವರ ಗದ್ದುಗೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದರು.
ಬೆಳಗಾವಿ ಗ್ರಾಮೀಣ ಬಿಜೆಪಿ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿ, ದೇವಸ್ಥಾನದ ಅಸ್ಮಿತೆ ಹಾಳಾಗಬಾರದು ಎಂಬ ಉದ್ದೇಶದಿಂದ 2-3 ತಿಂಗಳ ಹಿಂದೆ ಎಲ್ಲರೂ ಸೇರಿ ಗದ್ದುಗೆಯನ್ನು ಸ್ಥಾಪಿಸಿ ಉಪವಿಭಾಗಾಕಾರಿ ಕಚೇರಿಯಲ್ಲಿ ಜಾಗದ ಅಕ್ರಮ ಮಾರಾಟದ ಬಗ್ಗೆ ದೂರು ನೀಡಲಾಗಿದೆ. ಆದರೆ ಜಾಗ ಖರೀದಿಸಿದವರು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ದಾಂಧಲೆ ಮಾಡಿ ಹೆದರಿಸಿ ನಮ್ಮ ವಿರುದ್ಧವೇ ಎಸಿಪಿಗೆ ದೂರು ನೀಡಿದ್ದಾರೆ ಎಂದು ಆರೋಪಿಸಿದರು.
ದೇವಸ್ಥಾನದ ಜಾಗದ ಮೇಲೆ ಗ್ರಾಮಸ್ಥರ ಹಕ್ಕಿದೆ. ಎಲ್ಲ ದಾಖಲೆಗಳಲ್ಲೂ ಮೊದಲಿನಿಂದಲೂ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜಾಗ ಎಂದು ನಮೂದಿದೆ. ಈ ಜಾಗ ದೇವಸ್ಥಾನಕ್ಕೆ ಸೇರಬೇಕು. ಸಾಂಬ್ರಾ ಗ್ರಾಮದ ಕಾಂಗ್ರೆಸ್ ಮುಖಂಡ ನಾಗೇಶ ದೇಸಾಯಿ ತಕರಾರು ಮಾಡುತ್ತಿದ್ದಾರೆ. ಇದು ಇತ್ಯರ್ಥ ಆಗುವವರೆಗೂ ಯಾರೂ ಗ್ರಾಮಕ್ಕೆ ಬರಬಾರದು ಎಂದು ಗ್ರಾಮಸ್ಥರು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.
ಈ ಜಾಗವನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಪ್ರಕರಣ ಕೋರ್ಟಿನಲ್ಲಿದೆ. ಅಲ್ಲಿಯೇ ಇತ್ಯರ್ಥವಾಗಲಿ ಎಂದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಮುಖಂಡ ನಾಗೇಶ ದೇಸಾಯಿ, ನನ್ನ ಮೇಲೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಕಾನೂನು ಪ್ರಕಾರವೇ ಜಮೀನು ಖರೀದಿಸಿದ್ದೇನೆ. ಕೋರ್ಟಿನಲ್ಲಿ ಇದು ಇತ್ಯರ್ಥ ಆಗಲಿ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾಯ್ದೆ, ಕಾನೂನು ಬಿಟ್ಟು ಬಿಡೋಣ, ಮಹಾಲಕ್ಷ್ಮೀ ಮೇಲೆ ವಿಶ್ವಾಸ ಇದ್ದರೆ, ಸತ್ಯ ಇದ್ದವರಿಗೆ ಈ ಜಾಗ ಸಿಗುತ್ತದೆ ಎಂದರು.
ಖರೀದಿಸಿದ 8 ವರ್ಷದ ನಂತರ 2.18 ಎಕರೆ ಮಾರಾಟ ಮಾಡಿದ್ದೇನೆ. ನನ್ನ ಹೆಸರಿನಲ್ಲಿ ಸದ್ಯ 2.10 ಎಕರೆ ಜಾಗವಿದ್ದು, ಕೃಷಿ ಮಾಡುತ್ತಿದ್ದೇನೆ. 800 ವರ್ಷಗಳಿಂದ ಯಾವುದೇ ಗದ್ದುಗೆ ಇಲ್ಲ. ಇದು ತಪ್ಪು ಸಂದೇಶ ಎಂದರು.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ದೇವಸ್ಥಾನ ಜಾಗದಲ್ಲಿ ಯಾವುದೇ ಪೂಜಾರಿ ಹೆಸರು ಬರಬಾರದು. ಈ ಜಾಗವನ್ನು ಮಾರಾಟ ಮಾಡಲು ಬರುವುದಿಲ್ಲ. ಹೀಗಾಗಿ ಹೊನ್ನಿಹಾಳದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಜಾಗ ವಾಪಸ್ಸು ಬರಬೇಕು. –ಧನಂಜಯ ಜಾಧವ, ಅಧ್ಯಕ್ಷರು, ಬಿಜೆಪಿ ಗ್ರಾಮೀಣ ಮಂಡಲ
ಕಾನೂನು ಪ್ರಕಾರವೇ ಜಾಗ ಖರೀದಿಸಿದ್ದೇನೆ. ನಾನು ಖರೀದಿಸುವಾಗ ದೇವಸ್ಥಾನದ ಜಾಗ ಎಂದು ಯಾರೂ ಹೇಳಿಲ್ಲ. ಈಗ ಏಕಾಏಕಿ ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ. ದೇವಸ್ಥಾನ ಜಾಗ ಎಂಬುದು ತಪ್ಪು ಮಾಹಿತಿ ಇದೆ. –ನಾಗೇಶ ದೇಸಾಯಿ, ಕಾಂಗ್ರೆಸ್ ಮುಖಂಡರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.