ಮತ್ತೆ ಮೂವರ ನಿರ್ಗಮನ?
|ಡಾ. ಅಂಜಲಿ ಕೈಗೆ ಇಡ್ತಾರಾ ತಿಲಾಂಜಲಿ? |ಗಣೇಶ -ಶ್ರೀಮಂತ ಕಾಯ್ದು ನೋಡುವ ತಂತ್ರ |ರಾಜೀನಾಮೆ ವದಂತಿ ಸುಳ್ಳು ಎಂದ ಸತೀಶ ಜಾರಕಿಹೊಳಿ
Team Udayavani, Jul 9, 2019, 8:20 AM IST
ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ರಾಜೀನಾಮೆ ಪರ್ವ ಶುರುವಾದ ಬೆನ್ನಲ್ಲೇ ಗಡಿ ಜಿಲ್ಲೆಗೂ ಇದು ವ್ಯಾಪಿಸಿದ್ದು, ಈಗಾಗಲೇ ಬೆಳಗಾವಿ ಜಿಲ್ಲೆಯ ಇಬ್ಬರು ಅತೃಪ್ತ ಶಾಸಕರು ರಾಜೀನಾಮೆ ನೀಡಿ ಮುಂಬೈನ ರೆಸಾರ್ಟ್ ಸೇರಿದ್ದಾರೆ. ಈಗ ಮತ್ತೆ ಮೂವರು ಶಾಸಕರು ರಾಜೀನಾಮೆ ಕೊಡುತ್ತಾರೆಂಬ ವದಂತಿ ಬಲವಾಗಿ ಹರಡುತ್ತಿದೆ.
ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಇವರ ಆಪ್ತ ಮಹೇಶ ಕುಮಟಳ್ಳಿ ರಾಜೀನಾಮೆ ನೀಡಿ ಮಹಾರಾಷ್ಟ್ರಕ್ಕೆ ಜಿಗಿದಿದ್ದಾರೆ. ಈಗ ಖಾನಾಪುರ ಶಾಸಕಿ ಡಾ| ಅಂಜಲಿ ನಿಂಬಾಳಕರ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ ಕೂಡ ರಾಜೀನಾಮೆ ನೀಡಿ ದೋಸ್ತಿ ಸರ್ಕಾರಕ್ಕೆ ಶಾಕ್ ನೀಡುವ ಸಾಧ್ಯತೆ ಇದ್ದು, ಆದರೆ ಇದನ್ನು ಸಂಪೂರ್ಣವಾಗಿ ಅಂಜಲಿ ಅಲ್ಲಗಳೆದಿದ್ದಾರೆ.
ಇದೇ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ಬೀಗುತ್ತಿರುವ ಅಂಜಲಿ ನಿಂಬಾಳಕರ ಕೈ ಪಾಳೆಯದ ರಾಜ್ಯ ವರಿಷ್ಠರ ಆಪ್ತರಾಗಿದ್ದು, ಮೊದಲ ಸಲ ವಿಧಾನಸಭೆ ಮೆಟ್ಟಿಲೇರಿರುವ ಈ ಶಾಸಕಿ ಕೈಗೆ ಬೈ ಹೇಳುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇದರಿಂದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಚಲಿತರಾಗಿದ್ದಾರೆ.
ಖಾನಾಪುರ ಶಾಸಕಿ ಡಾ| ಅಂಜಲಿ ನಿಂಬಾಳಕರ ರಾಜೀನಾಮೆ ನೀಡುತ್ತಾರೆಂದು ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಗೊಂದಲದಲ್ಲಿದ್ದಾರೆ. ಕಳೆದ ಒಂದು ವಾರದ ಹಿಂದೆಯೇ ಕೆಲ ಆಪ್ತ ಮುಖಂಡರನ್ನೆಲ್ಲ ಕರೆಯಿಸಿದ್ದ ಶಾಸಕಿ ನಿಂಬಾಳಕರ ಅವರು ಮುಂದೆ ತೀರ್ಮಾನ ಏನು ತೆಗೆದುಕೊಳ್ಳಬೇಕು. ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬೇರೆ ಕಡೆಗೆ ಹೋಗಬೇಕೇ ಎಂದು ಅನೌಪಚಾರಿಕ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸತೀಶಗೆ ಆಪ್ತೆ ಈ ಶಾಸಕಿ: ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಆಪ್ತರಾಗಿರುವ ಡಾ| ಅಂಜಲಿ ನಿಂಬಾಳಕರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಅಷ್ಟೊಂದು ಸುಲಭದ ಮಾತಲ್ಲ. ಆದರೆ ಈಗಿನ ರಾಜಕೀಯದಲ್ಲಿ ನಡೆದ ಹಠಾತ್ ಬೆಳವಣಿಗೆ ಆಧಾರದ ಮೇಲೆ ಪಕ್ಷಕ್ಕೆ ಕೈ ಕೊಟ್ಟರೂ ಅಚ್ಚರಿ ಇಲ್ಲ ಎನ್ನುತ್ತಿವೆ ಮೂಲಗಳು.
ಡಾ| ಅಂಜಲಿ ರಾಜೀನಾಮೆ ಕೊಟ್ಟೇ ಬಿಟ್ಟರು ಎಂಬ ಆತಂಕದಿಂದ ಖಾನಾಪುರ ಕಾಂಗ್ರೆಸ್ ಮುಖಂಡರು ಸೋಮವಾರ ಸಭೆ ಕರೆದಿದ್ದರು. ಅದರಂತೆ ಎಲ್ಲ ವಾಟ್ಸಾಆ್ಯಪ್ ಗ್ರುಪ್‌ಗ್ಳಲ್ಲಿ ಈ ಬಗ್ಗೆ ಸುದ್ದಿ ಹರಿದಾಡುತ್ತಿತ್ತು. ಸಭೆಗೆ ಶಾಸಕಿ ನಿಂಬಾಳಕರ ಕೂಡ ಭಾಗವಹಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಶಾಸಕಿ ಖಾನಾಪುರಕ್ಕೆ ಬಾರದೇ ಇರುವುದರಿಂದ ಸಭೆ ರದ್ದುಗೊಳಿಸಲಾಯಿತು ಎಂದು ಮುಖಂಡರೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.
ಕರೆ ಸ್ವೀಕರಿಸದ್ದಕ್ಕೆ ಮುಖಂಡರು ಹೈರಾಣ: ಡಾ| ಅಂಜಲಿ ನಿಂಬಾಳಕರ ಅವರನ್ನು ಮೊಬೈಲ್ಗೆ ಕ್ಷೇತ್ರದ ಬೆಂಬಲಿಗರು, ಮುಖಂಡರ ಕರೆ ಮಾಡಿದರೆ ಶಾಸಕಿ ಅಂಜಲಿ ಕರೆ ಸ್ವೀಕರಿಸುತ್ತಿಲ್ಲ. ರಾಜೀನಾಮೆ ಕೊಡುತ್ತಾರಾ ಅಥವಾ ಕಾದು ನೋಡುವ ತಂತ್ರಕ್ಕೆ ಅಂಜಲಿ ಶರಣಾಗಿದ್ದಾರಾ ಎಂಬುದೇ ಈಗ ಪ್ರಮುಖ ಪ್ರಶ್ನೆ.
ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಪಕ್ಷದ ವಿರುದ್ಧ ಕಳೆದ ಒಂದು ವರ್ಷದಿಂದ ವಿಷ ಕಾರುತ್ತಲೇ ಬಂದಿದ್ದಾರೆ. ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆಯಿಂದ ಇದು ಮತ್ತಷ್ಟು ವಿಕೋಪಕ್ಕೆ ಹೋಗಿತ್ತು. ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ ಬೆಳಗಾವಿಗೆ ಎಂಟ್ರಿ ಆಗುತ್ತಿದ್ದಂತೆ ರಮೇಶ ಅವರ ಪಿತ್ತ ನೆತ್ತಿಗೇರಿತ್ತು. ಬೂದಿ ಮುಚ್ಚಿದ ಕೆಂಡದಂತೆ ತಮ್ಮ ಸಿಟ್ಟು ಹೊರ ಹಾಕುತ್ತ ರಮೇಶ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಬೆನ್ನು ತೋರಿಸಿದ್ದು ಗುಟ್ಟಾಗಿ ಉಳಿದಿಲ್ಲ. ಸತೀಶ ಅವರ ಜೊತೆಗೆ ಇರುವ ಅಂಜಲಿ ಅವರು ರಮೇಶ ಬೆನ್ನು ಹತ್ತಿ ರಾಜೀನಾಮೆ ಕೊಡುತ್ತಿರುವುದು ಜಿಲ್ಲೆಯಲ್ಲಿ ಈಗ ಚರ್ಚೆಯ ವಿಷಯವಾಗಿದೆ.
ಮಂಗಳವಾರ ಸ್ಪೀಕರ್ ಕಚೇರಿಗೆ ಬಂದು ತೆಗೆದುಕೊಳ್ಳುವ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ. ಇನ್ನು ಬೆಳಗಾವಿ ಜಿಲ್ಲೆಯ ಯಾವೊಬ್ಬ ಶಾಸಕರೂ ರಾಜೀನಾಮೆ ಕೊಡುವ ಮಾತೇ ಇಲ್ಲ. ಡಾ| ಅಂಜಲಿ ನಿಂಬಾಳಕರ ಆಗಲಿ, ಶ್ರೀಮಂತ ಪಾಟೀಲ ಆಗಲಿ ರಾಜೀನಾಮೆ ಕೊಡುವುದಿಲ್ಲ. ಅವರು ಕೊಡ್ತಾರೆ, ಇವರು ಕೊಡ್ತಾರೆ ಎಂಬುದು ಎಲ್ಲ ಊಹಾಪೋಹ.• ಸತೀಶ ಜಾರಕಿಹೊಳಿ, ಯಮಕನಮರಡಿ ಶಾಸಕರು
ಶ್ರೀಮಂತ-ಗಣೇಶರ ನಡೆ ಎತ್ತ?
ಖಾನಾಪುರ ಶಾಸಕಿ ಡಾ| ಅಂಜಲಿ ನಿಂಬಾಳಕರ ಜು.9ರಂದು ರಾಜೀನಾಮೆ ನೀಡುವುದು ಬಹುತೇಕ ಖಚಿತ ಆಗಿದ್ದು, ಇನ್ನಿಬ್ಬರು ಶಾಸಕರೂ ಈ ರೇಸ್‌ನಲ್ಲಿದ್ದಾರೆ. ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ ಅವರು ಮಂಗಳವಾರದ ಬೆಳವಣಿಗೆ ನೋಡಿ ಮುಂದಿನ ತೀರ್ಮಾನ ಕೆಗೊಳ್ಳಲಿದ್ದಾರೆ. ಸ್ಪೀಕರ್ ಕ್ರಮದ ಮೇಲೆ ಈ ಇಬ್ಬರ ರಾಜೀನಾಮೆ ನಿರ್ಧಾರ ಅವಲಂಬಿಸಿದೆ. ನಂತರ ರಾಜೀನಾಮೆ ದಿನಾಂಕ ನಿಗದಿಪಡಿಸಲಿದ್ದಾರೆ. ಶ್ರೀಮಂತ ಹಾಗೂ ಗಣೇಶ ಹೆಸರು ಅತೃಪ್ತರ ಪಟ್ಟಿಯಲ್ಲಿ ಕೇಳಿ ಬಂದಿದ್ದರಿಂದ ಇವರ ಕ್ಷೇತ್ರಗಳಲ್ಲೂ ಕೋಲಾಹಲ ಉಂಟಾಗಿದೆ. ಕೈ ಕಾರ್ಯಕರ್ತರು ಇದೇ ಚರ್ಚೆಯಲ್ಲಿ ತೊಡಗಿದ್ದು, ಕರೆ ಮಾಡಿದರೆ ಇಬ್ಬರೂ ಶಾಸಕರು ಸ್ವೀಕರಿಸುತ್ತಿಲ್ಲ. ಹೀಗಾಗಿ ರಾಜೀನಾಮೆ ಅನುಮಾನಕ್ಕೆ ಪುಷ್ಟಿ ನೀಡಿದಂತಾಗಿದೆ.
• ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.