Team Udayavani, Apr 14, 2019, 2:31 PM IST
ಗೋಕಾಕ: ರಾಜ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ತುಘಲಕ ದರ್ಬಾರ್ ನಡೆಸಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು. ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಶನಿವಾರ ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರಕಾರ ಬಜೆಟ್‌ನಲ್ಲಿ ಮಹದಾಯಿ ಹಾಗೂ ಕೃಷ್ಣಾ ಯೋಜನೆ ಬಗ್ಗೆ ಚಕಾರ ಎತ್ತಿಲ್ಲ. ಮಹದಾಯಿ ತೀರ್ಪು ಬಂದರೂ ಅದಕ್ಕಾಗಿ ಒಂದು ಪೈಸೆ ಬಜೆಟ್‌ನಲ್ಲಿ ತೆಗೆದಿರಿಸದೇ ರೈತ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಎಂದು ಗುಡುಗಿದರು. ಬರೀ ಕಮಿಷನ್ ಹಾಗೂ ವರ್ಗಾವಣೆ ದಂಧೆ ನಡೆಸಿದ್ದಾರೆ.
ಹಾಸನದಲ್ಲಿ ಕೆಲಸ ಮಾಡದೇ 1350 ಕೋಟಿ ರೂ. ಗುತ್ತಿಗೆದಾರರಿಗೆ ನೀಡಿ ಕಮಿಷನ್ ಪಡೆದಿದ್ದಾರೆ. ಅದಕ್ಕಾಗಿ ಐಟಿ ಇಲಾಖೆ ಗುತ್ತಿಗೆದಾರರ ಮನೆ ಮೇಲೆ ದಾಳಿ ನಡೆಸಿದಾಗ ಅವರನ್ನು ರಕ್ಷಿಸಲು ಬೀದಿಗಿಳಿದು ಮುಖ್ಯಮಂತ್ರಿ ಹೋರಾಟ ನಡೆಸುತ್ತಿರುವುದು ದುರ್ದೈವ ಎಂದರು.
ಇಡೀ ಜಗತ್ತೇ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಒಪ್ಪಿ ಅವರ ಆರ್ಥಿಕ ನೀತಿ ಶ್ಲಾಘಿಸುತ್ತಿದೆ. ರಷ್ಯಾ ಕೂಡ ನರೇಂದ್ರ ಮೋದಿ ಅವರಿಗೆ “ಸೆಂಟ್ರೋ ಅಂದ್ರೇಯಿ’ ಪ್ರಶಸ್ತಿ ಪ್ರಕಟಿಸಿದೆ. ಪ್ರಧಾನಿ ಮೋದಿ ಭ್ರಷ್ಟಾಚಾರ ಮುಕ್ತ ಆಡಳಿತ, ದೇಶದ ಅಭಿವೃದ್ಧಿ, ದೇಶದ ಗಡಿ ರಕ್ಷಣೆ ಹಾಗೂ ಜಗತ್ತಿನಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಿಸುವ ಈ ನಾಲ್ಕು ಅಂಶಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆಯಿದ್ದು 2014ರ ಲೋಕಸಭೆ ಚುನಾವಣೆ ಹೋಲಿಕೆ ಮಾಡಿದರೆ ಇಡೀ ರಾಜ್ಯದಲ್ಲಿ ಪ್ರತಿಯೊಬ್ಬರೂ ಮೋದಿ-ಮೋದಿ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ 22 ಸ್ಥಾನ ಬರುವುದು ಖಚಿತವಾಗಿದ್ದು, ಅದಕ್ಕಾಗಿ ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರಿಗೆ ತಮ್ಮ ಮತ ನೀಡಿ ಚುನಾಯಿಸಬೇಕೆಂದು ಮನವಿ ಮಾಡಿದರು.
ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಮಾತನಾಡಿ, ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ಬಳಿಕ ಕಳೆದ 5 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ದೇಶದ 130 ಕೋಟಿ ಪ್ರಜೆಗಳಿಗಾಗಿ ಹಲವಾರು ಯೋಜನೆ ಜಾರಿಗೊಳಿಸಿದ್ದಾರೆ. ನರೇಂದ್ರ ಮೋದಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ಜನಿವಾರ ಹಾಕಿಕೊಂಡು ಗೋತ್ರ ಹೇಳುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆಂದು ಹೇಳಿದರು.
ಬೆಳಗಾವಿ ಎರಡನೇ ರಾಜಧಾನಿ ಮಾಡಲು ಸುವರ್ಣ ಸೌಧ ನಿರ್ಮಾಣ, ಬೆಳಗಾವಿ ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸುರೇಶ ಅಂಗಡಿ ಬರಬೇಕಾಯಿತು. ತಮ್ಮ ಅವಧಿಯಲ್ಲಿ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ, ಕ್ಷೇತ್ರದ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಿದ್ದು, ಪಾಸ್‌ಪೋರ್ಟ್ ಕಚೇರಿ ಪ್ರಾರಂಭ ಸೇರಿದಂತೆ ಕಳೆದ ಐದು ವರ್ಷಗಳಲ್ಲಿ ಬೆಳಗಾವಿ ಜನತೆಗೆ ಬೇಕಾದ ಎಲ್ಲವನ್ನು ನೀಡಲಾಗಿದೆ. ತಮಗೆ ಮತ ನೀಡಿ ಆರಿಸಿ ತರಬೇಕೆಂದ ಅಂಗಡಿ ಮಹದಾಯಿ ನೀರು ಕ್ಷೇತ್ರಕ್ಕೆ ತರುವ ವಾಗ್ಧಾನ ಮಾಡಿದರು.
ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಭ್ರಷ್ಟಾಚಾರರಹಿತ ಆಡಳಿತ ನೀಡಿದ ಪ್ರಧಾನಿ
ಮೋದಿ ಮತ್ತೂಮ್ಮೆ ಪ್ರಧಾನಿಯಾಗಲು ಆಶೀರ್ವದಿಸುವಂತೆ ಕೋರಿದ ಅವರು, ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸರಕಾರ ರೈತರ ಸಾಲ ಮನ್ನಾ ಹೆಸರಿನಲ್ಲಿ ಟೋಪಿ ಹಾಕಿದೆ ಎಂದು ತಿಳಿಸಿದರು.
ಶಾಸಕರಾದ ಆನಂದ ಮಾಮನಿ, ಮಹಾದೇವಪ್ಪ ಯಾದವಾಡ, ಮಾಜಿ ಶಾಸಕರಾದ ಸಂಜಯ ಪಾಟೀಲ, ಎಂ.ಎಲ್. ಮುತ್ತೆನ್ನವರ, ಬಿಜೆಪಿ ವಿಭಾಗೀಯ ಪ್ರಭಾರಿ ಈರಣ್ಣ ಕಡಾಡಿ, ಅಶೋಕ ಪೂಜಾರಿ, ಬಿಜೆಪಿ ನಗರ ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷರಾದ ಎಸ್.ವಿ. ದೇಮಶೆಟ್ಟಿ, ವಿರೂಪಾಕ್ಷಿ ಯಲಿಗಾರ, ಪ್ರೇಮಾ ಭಂಡಾರಿ, ಮಲ್ಲಿಕಾರ್ಜುನ ತುಬಾಕಿ ಇದ್ದರು.
ಒಟ್ಟಾಗಿ ದುಡಿದು ಪ್ರಧಾನಿ ಮೋದಿ
ಕೈ ಬಲಪಡಿಸೋಣ: ಬಾಲಚಂದ್ರ ಗೋಕಾಕ: ಸಣ್ಣಪುಟ್ಟ ವ್ಯತ್ಯಾಸ ಮರೆತು ಈ ಚುನಾವಣೆಯಲ್ಲಿ ಎಲ್ಲರೂ ಒಂದಾಗಿ ದುಡಿದು ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪನವರ ಕೈ ಬಲಪಡಿಸಲು ಶ್ರಮಿಸಬೇಕೆಂದು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಶನಿವಾರ ಲೋಕಸಭಾ ಚುನಾವಣೆ ನಿಮಿತ್ತ ಗೋಕಾಕ ಹಾಗೂ ಅರಭಾವಿ ಮತಕ್ಷೇತ್ರಗಳ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಸುರೇಶ ಅಂಗಡಿ ಅವರು ಏನೂ ಕೆಲಸ ಮಾಡಿಲ್ಲ ಎಂದು ದೂರುವುದನ್ನು ಬಿಡಬೇಕು. ಈ ಸಾರಿ ಸುರೇಶ ಅಂಗಡಿ ಆಯ್ಕೆಯಾದ ಬಳಿಕ ಗೋಕಾಕ-ಮೂಡಲಗಿ ತಾಲೂಕಿನಲ್ಲಿ 300 ಕೋಟಿ ರೂ. ವೆಚ್ಚದ ಸಿ.ಆರ್.ಎಫ್. ಯೋಜನೆ ರಸ್ತೆಗಳನ್ನು ಮಾಡಲು ಅನುಮತಿ ದೊರಕಿಸಿ ಕೋಡುವ ಆಶ್ವಾಸನೆ ನೀಡಿದ್ದಾರೆಂದು ತಿಳಿಸಿದರು. ಬಿಜೆಪಿಗೆ ಹೆಚ್ಚಿನ ಪ್ರಮಾಣದಲ್ಲಿ ಮತಗಳು ಪ್ರಾಪ್ತಿಯಾಗಿ ಸುರೇಶ ಅಂಗಡಿ ಅವರು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಶಾಲಿಯಾಗಲಿದ್ದಾರೆ. ಗೋಕಾಕ ಹಾಗೂ ಅರಭಾವಿ ಮತಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಲೀಡ್ ನೀಡುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಸಭೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಶಕ್ತಿ ಪ್ರದರ್ಶನದ ಸಭೆ ಎಂಬಂತೆ ತೋರಿತು. ಸಭೆಯಲ್ಲಿ ಶೇ. 80ರಷ್ಟು ಜನರು ಅರಭಾಂವಿ ಮತಕ್ಷೇತ್ರದವರಾಗಿದ್ದರು. ಇದು ಬಿಜೆಪಿಯಲ್ಲಿನ ಗುಂಪುಗಾರಿಕೆಯನ್ನು ಎತ್ತಿ ತೋರಿಸಿತು.
ಅಶೋಕ ಪೂಜಾರಿ ಮನವೊಲಿಕೆ
ಗೋಕಾಕ: ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕಾರ್ಯಕರ್ತರ ಸಮಾವೇಶ ಆಯೋಜನೆಯಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆಯೆಂದು ದೂರಿ ಅದರಿಂದ ದೂರ ಉಳಿಯಲು ನಿರ್ಧರಿಸಿದ್ದ ಬಿಜೆಪಿ ಮುಖಂಡ ಅಶೋಕ ಪೂಜಾರಿ ನಿವಾಸಕ್ಕೆ ಶನಿವಾರ ಅಭ್ಯರ್ಥಿ ಸಂಸದ ಸುರೇಶ ಅಂಗಡಿ ಭೇಟಿಯಾಗಿ ಭಾಗವಹಿಸುವಂತೆ ಮನವೊಲಿಸಿದರು. ಅಶೋಕ ಪೂಜಾರಿ ಮತ್ತು ಜಯಾನಂದ ಮುನವಳ್ಳಿ ಸಹಿತ ಇನ್ನುಳಿದ ಮುಖಂಡರು ಪಾಲ್ಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು. ತಾವು ಹಾಗೂ ತಮ್ಮ ಗುಂಪಿನ ಪ್ರಮುಖ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೇವಲ ಅರಭಾಂವಿ ಭಾಗದ ಶಾಸಕರ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಏಕಪಕ್ಷೀಯವಾಗಿ ಆಯೋಜಿಸಲಾಗಿದೆ ಎಂದು ಅಶೋಕ ಪೂಜಾರಿ ಸಭೆಯಿಂದ ದೂರ ಉಳಿಯಲು ನಿರ್ಧರಿಸಿದ್ದರು. ಸಂಸದ ಸುರೇಶ ಅಂಗಡಿ, ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಈರಣ್ಣಾ ಕಡಾಡಿ ಮತ್ತು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದ ಅಶೋಕ ಪೂಜಾರಿ ಗೋಕಾಕ ಮತ್ತು ಅರಭಾಂವಿ ಕ್ಷೇತ್ರಗಳ ಸಂಯುಕ್ತ ಸಮಾವೇಶವಾಗಿದ್ದರೂ ಇದು ಕೇವಲ ಅರಭಾಂವಿ ಭಾಗದ ಶಾಸಕರ ಬೆಂಬಲಿಗರ ಸಮಾವೇಶವಾಗುವ ರೀತಿಯಲ್ಲಿ ಆಯೋಜಿಸಲಾಗಿದೆ ಎಂದು ದೂರಿದರು. ಬೆರಳೆಣಿಕೆಯ ಪದಾಧಿಕಾರಿಗಳ ಕಾರ್ಯವೈಖರಿ ಪಕ್ಷದ ಸಂಘಟನೆಗೆ ಹಿನ್ನೆಡೆಯನ್ನುಂಟು ಮಾಡುತ್ತಿರುವುದು ಖೇದದ ಸಂಗತಿಯಾಗಿದೆ. ಆದರೆ ತಾವು ಮಾತ್ರ ಅಭ್ಯರ್ಥಿ ಸುರೇಶ ಅಂಗಡಿ ಅವರ ಪರ ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದು, ನಾಳೆಯಿಂದ ಗೋಕಾಕ ಕ್ಷೇತ್ರದಾದ್ಯಂತ ಸಂಚರಿಸಿ ಬಿರುಸಿನ ಪ್ರಚಾರ ಕೈಗೊಳ್ಳುವುದಾಗಿ ಹೇಳಿದರು. ಬಿಜೆಪಿ ಜಿಲ್ಲಾ ಯುವ ಅಧ್ಯಕ್ಷ ಈರಣ್ಣಾ ಅಂಗಡಿ, ಮಹಾಂತೇಶ ಮಠಪತಿ, ವಾಸುದೇವ ಸವತಿಕಾಯಿ, ಆನಂದ ಮೂಡಲಗಿ ಮುಂತಾದವರು ಇದ್ದರು.