“ಪರೀಕ್ಷಾ ಪೇ ಚರ್ಚಾ’ಗೆ ಬೆಳಗಾವಿಯ ಇಬ್ಬರು ವಿದ್ಯಾರ್ಥಿಗಳು
Team Udayavani, Mar 31, 2022, 1:27 PM IST
ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ಪರೀಕ್ಷಾ ಪೇ ಚರ್ಚಾ 5ನೇ ಆವೃತ್ತಿ ಸಂವಾದ ಕಾರ್ಯಕ್ರಮ ಏ. 1ರಂದು ನಡೆಯಲಿದ್ದು, ಭಾರತ ಮತ್ತು ಹೊರದೇಶಗಳಿಂದ ಕೋಟ್ಯಾಂತರ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ವರ್ಚುವಲ್ ಆಗಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸೃಜನಾತ್ಮಕ ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಸುಮಾರು 15.7 ಲಕ್ಷ ಜನ ಉತ್ಸಾಹದಿಂದ ನೋಂದಾಯಿಸಿಕೊಂಡಿದ್ದು, ಏಪ್ರಿಲ್ 1 ರಂದು ಪ್ರಧಾನಿ ಮೋದಿ ಜಗತ್ತಿನಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು, ಮತ್ತು ಪೋಷಕರ ಜೊತೆ ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದಿಂದ 84 ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಜಿಲ್ಲೆಯಿಂದ ಕೇಂದ್ರೀಯ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿಗಳಾದ ಶ್ರೇಯಸ್ ಮಾರ್ಗನಕೊಪ್ಪ, 11ನೇ ತರಗತಿಯ ಜಾಹ್ನವಿ ದ್ವಿವೇದಿ ಆಯ್ಕೆಯಾಗಿದ್ದು, ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದರು.
21ನೇ ಶತಮಾನದ ಜ್ಞಾನಾಧಾರಿತ ಆರ್ಥಿಕತೆಯನ್ನು ನಿರ್ಮಾಣ ಮಾಡುವಲ್ಲಿ ಪಿ.ಪಿ.ಸಿ ಯಂತಹ ಉಪಕ್ರಮಗಳ ಮಹತ್ವವನ್ನು ಒತ್ತಿ ಹೇಳಿದ ಅವರು, ಪ್ರಧಾನ ಮಂತ್ರಿ ಅವರು ವಿದ್ಯಾರ್ಥಿಗಳ ಜೊತೆ ನೇರವಾಗಿ ಸಂವಾದ ಮಾಡಲಿದ್ದಾರೆ. ಆಯ್ದ ವಿದ್ಯಾರ್ಥಿಗಳು ರಾಜ್ಯಪಾಲರ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಲು ರಾಜ ಭವನಕ್ಕೆ ತೆರಳಲಿದ್ದು, ರಾಜ್ಯ ಸರ್ಕಾರಗಳು, ವಿದ್ಯಾರ್ಥಿಗಳು, ಶಿಕ್ಷಕರ ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
5ನೇ ಆವೃತ್ತಿಯು ನವದೆಹಲಿಯ ಪುರಭವನದ ಸಂವಾದ ಮಾದರಿಯಲ್ಲಿ ತಲ್ಕತೋರಾ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. 2021ರ ಡಿಸೆಂಬರ್ 28ರಿಂದ 2022 ಫೆಬ್ರವರಿ 3ರ ವರೆಗೆ ಮೈಗವ್ ವೇದಿಕೆ ಮೂಲಕ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ವರ್ಷ ರಚನಾತ್ಮಕ ಬರವಣಿಗೆ ಸ್ಪರ್ಧೆಗೆ 15.7 ಲಕ್ಷಕ್ಕೂ ಅಧಿಕ ಜನರು ನೊಂದಾಯಿಸಿದ್ದರು. ಆಯ್ಕೆ ಆದವರಿಗೆ ಮೆಚ್ಚುಗೆ ಪತ್ರ ನೀಡಲಾಗುವುದು ಮತ್ತು ಪ್ರಧಾನ ಮಂತ್ರಿ ಅವರು ಬರೆದ ಎಕ್ಸಾಂ ವಾರಿಯರ್ಸ್ ಪುಸ್ತಕ ಇರುವ ವಿಶೇಷ ಪರೀಕ್ಷಾ ಪೇ ಚರ್ಚಾ ಕಿಟ್ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮವು ದೂರದರ್ಶನದಲ್ಲಿ (ಡಿ.ಡಿ.ನ್ಯಾಶನಲ್, ಡಿ.ಡಿ.ನ್ಯೂಸ್, ಡಿ.ಡಿ.ಇಂಡಿಯಾ), ಬಾನುಲಿ ವಾಹಿನಿಗಳಲ್ಲಿ, ಟಿ.ವಿ. ವಾಹಿನಿಗಳಲ್ಲಿ, ಎಜ್ಯು ಮಿನಿಸ್ಟರ್ ಆಫ್ ಇಂಡಿಯಾ, ನರೇಂದ್ರ ಮೋದಿ, ಪಿ.ಎಂ.ಇಂಡಿಯಾ, ಪಿ.ಐ.ಬಿ.ಇಂಡಿಯಾ, ದೂರದರ್ಶನ್ ನ್ಯಾಶನಲ್, ಮೈಗವಿಂಡಿಯಾ, ಡಿ.ಡಿ.ನ್ಯೂಸ್, ರಾಜ್ಯಸಭಾ ಟಿ.ವಿ, ಸ್ವಯಂ ಪ್ರಭಾ ಸಹಿತ ಡಿಜಿಟಲ್ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.