ವಾಲ್ಮೀಕಿ ಹಗರಣ ಮಾದರಿ ನಗರೋತ್ಥಾನದಲ್ಲೂ ನಿಧಿ ತಿರುವು!
ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ನಿಧಿ ತಿರುವು ಪತ್ತೆ
Team Udayavani, Dec 18, 2024, 6:45 AM IST
ಬೆಳಗಾವಿ: ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಪ್ರಕರಣ ಮಾಸುವ ಮುನ್ನವೇ 2014-21ರ ಅವಧಿಯಲ್ಲಿ ನಡೆದಿರುವ ಸಿಎಂ ನಗರೋತ್ಥಾನ ಯೋಜನೆಯಲ್ಲೂ ಇದೇ ರೀತಿ ನಿಧಿ ತಿರುವು ಆಗಿರುವ ಅಂಶ ಪತ್ತೆಯಾಗಿದೆ. ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಅನರ್ಹ ಅಂಶಗಳಿಗೆ 108 ಕೋಟಿ ರೂ. ವರ್ಗಾಯಿಸಲಾಗಿದೆ.
ಅಷ್ಟೇ ಅಲ್ಲದೆ 2ನೇ ಹಂತದ ಕಾಮಗಾರಿಗೆ ಪಡೆದಿದ್ದ 100 ಕೋಟಿ ರೂ. ಸಾಲವನ್ನು 3ನೇ ಹಂತದ ಕಾಮಗಾರಿಗೆ ತಿರುಗಿಸಿರುವುದು ಬೆಳಕಿಗೆ ಬಂದಿದ್ದು, ಕಡಿಮೆ ಬಡ್ಡಿದರಕ್ಕೆ ಸಾಲ ಪಡೆಯುವ ಅವಕಾಶವಿದ್ದರೂ ಹೆಚ್ಚು ಬಡ್ಡಿದರಕ್ಕೆ ಸಾಲ ಪಡೆದಿರುವ ಅಂಶವೂ ಬಹಿರಂಗಗೊಂಡಿದೆ.
ಮೈಸೂರು, ವಿಜಯಪುರ, ತುಮಕೂರು ಮತ್ತು ಬಳ್ಳಾರಿ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಿಎಂ ನಗರೋತ್ಥಾನ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆ ವರದಿಯನ್ನು ರಿಜ್ವಾನ್ ಅರ್ಷದ್ ಅಧ್ಯಕ್ಷತೆಯ ಕರ್ನಾಟಕ ವಿಧಾನಮಂಡಲ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದ್ದು, ಯೋಜನೆ ಅನುಷ್ಠಾನಗೊಳಿಸುವಲ್ಲಿ ಅಂದಿನ ಸರಕಾರಗಳು ಯಾವ ರೀತಿಯ ತಪ್ಪುಗಳನ್ನು ಎಸಗಿವೆ ಎಂಬುದನ್ನು ಬೊಟ್ಟು ಮಾಡಿ ತೋರಿದೆ.
ಇತರ ಯೋಜನೆಗಳ ಅಡಿಯಲ್ಲಿ ತೆಗೆದುಕೊಳ್ಳಲಾದ ಕಾಮಗಾರಿಗಳನ್ನು ಹೊರತುಪಡಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂಬ ನಿಯಮವಿದ್ದರೂ ಬಳ್ಳಾರಿ, ತುಮಕೂರು ಮತ್ತು ವಿಜಯಪುರದಲ್ಲಿ 108 ಕೋಟಿ ರೂ.ಗಳನ್ನು ಅಮೃತ್, ರಾಜೀವ್ ಗಾಂಧಿ ಆವಾಸ್ ಯೋಜನೆ, ನೀರು ಸರಬರಾಜು ಯೋಜನೆಗಳಿಗೆ ನಿಧಿ ತಿರುವು ಮಾಡಿರುವುದಕ್ಕೆ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅನರ್ಹ ಅಂಶಗಳಿಗೆ ನಿಧಿ ಬಳಕೆ ಬಗ್ಗೆ ನಗರಾಭಿವೃದ್ಧಿ ಇಲಾಖೆ ಸ್ಪಷ್ಟ ಉತ್ತರ ನೀಡಿಲ್ಲ. 2021ರ ಡಿಸೆಂಬರ್‌ನಲ್ಲಿ ನಡೆದ ಲೆಕ್ಕಪರಿಶೋಧನೆ ಯಾವುದೇ ಮಹಾನಗರ ಪಾಲಿಕೆಗಳು ಬ್ಯಾಂಕ್ ಗ್ಯಾರಂಟಿ ವಹಿಯನ್ನು (ಬಿಜಿ ರಿಜಿಸ್ಟರ್) ನಿರ್ವಹಣೆ ಮಾಡದೆ ಇರುವುದು ಪತ್ತೆಯಾಗಿದೆ.
91 ಕೋಟಿ ರೂ. ಕಾಮಗಾರಿಯನ್ನೇ ಕೈಗೊಳ್ಳದ ಸರಕಾರ
ಮಹಾನಗರ ಪಾಲಿಕೆಗಳು 2014-17ರ ಅವಧಿಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ, ಹಂತ 3ರಡಿ ಕೈಗೊಳ್ಳಬೇಕಿದ್ದ ಕಾಮಗಾರಿಗಳ ಬಗ್ಗೆ ರಾಜ್ಯದ 10 ಮಹಾನಗರ ಪಾಲಿಕೆಗಳು ಸಮಗ್ರ ಯೋಜನೆ ರೂಪಿಸಿರಲಿಲ್ಲ. 2021ರ ಆಗÓr…ನಿಂದ ಡಿಸೆಂಬರ್‌ವರೆಗಿನ ಮೂಲ ಕ್ರಿಯಾ ಯೋಜನೆಯಲ್ಲಿ ಒಳಗೊಂಡಿದ್ದ 735 ಕಾಮಗಾರಿಗಳ ಪೈಕಿ 91.35 ಕೋಟಿ ರೂ. ವೆಚ್ಚದ 141 ಕಾಮಗಾರಿಗಳನ್ನು ಕೈಗೊಳ್ಳಲೇ ಇಲ್ಲ. ಮೈಸೂರು, ವಿಜಯಪುರ, ತುಮಕೂರು, ಬಳ್ಳಾರಿ ಮಹಾನಗರ ಪಾಲಿಕೆಗಳ ಪೈಕಿ ವಿಜಯಪುರ ವ್ಯಾಪ್ತಿಯಲ್ಲಿ ಮಾತ್ರ ಸಂಚಾರ ನಿರ್ವಹಣೆಗೆ ಸಂಬಂಧಿಸಿದ ಕಾಮಗಾರಿ ಕೈಗೊಂಡಿದ್ದು, ನೀರು ಸರಬರಾಜು ಮತ್ತು ಯುಜಿಡಿ ಕಾಮಗಾರಿಗೆ ಮೀಸಲಿಟ್ಟಿದ್ದ 15 ಕೋಟಿ ರೂ.ಗಳನ್ನು ನಾಲ್ಕೂ ಮಹಾನಗರ ಪಾಲಿಕೆಗಳಲ್ಲಿ ಬಳಕೆಯನ್ನೇ ಮಾಡಿಲ್ಲ.
ಸಾಲ ನಿರ್ವಹಣೆಯಲ್ಲಿ ವ್ಯತ್ಯಯ
ಒಟ್ಟು ಯೋಜನಾ ವೆಚ್ಚವು 931.63 ಕೋಟಿ ರೂ. ಆಗಿದ್ದು, ಈ ಪೈಕಿ 442.18 ಕೋಟಿ ರೂ. (ಶೇ.50) ಹಣವನ್ನು ಕರ್ನಾಟಕ ವಾಟರ್‌ಅಂಡ್ ಸ್ಯಾನಿಟೇಶನ್ ಪೂಲ್ ಫಂಡ್ ಟ್ರಸ್ಟ್ ನಿಂದ (ಕೆಡಬ್‌ಲ್ಯುಎಸ್ ಪಿ ಆಫ್ ಟಿ) ಎರವಲು ಸಾಲದ ರೂಪದಲ್ಲಿ ಪಡೆದು 432.90 ಕೋಟಿ ರೂ. ಸೇರಿ ಒಟ್ಟಾರೆ 922.35 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಸಾಲ ಮರುಪಾವತಿಗೆ ಬಜೆಟ್‌ನಲ್ಲಿ 239.05 ಕೋಟಿ ರೂ. ಹಂಚಿಕೆಯಾಗಿದ್ದರೂ 176.23 ಕೋಟಿ ರೂ. ಬಿಡುಗಡೆ ಮಾಡಿದೆ. 62.82 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಬಜೆಟ್‌ನಲ್ಲಿ ಮೀಸಲಿಟ್ಟಿದ್ದೇಕೆ ಎಂದು ಪ್ರಶ್ನಿಸಿದೆ. ಅಲ್ಲದೆ, ಸಿಎಂ ನಗರೋತ್ಥಾನ ಯೋಜನೆಯ 2ನೇ ಹಂತಕ್ಕೆ 2016 ರ ಸೆ.26 ರಂದು ಸಿಂಡಿಕೇಟ್ ಬ್ಯಾಂಕ್‌ನಿಂದ 60 ಕೋಟಿ ರೂ. ಹಾಗೂ ಬ್ಯಾಂಕ್ ಆಫ್ ಇಂಡಿಯಾದಿಂದ 40 ಕೋಟಿ ರೂ.ಗಳನ್ನು ತಲಾ ಶೇ. 9.95ರ ಬಡ್ಡಿದರಲ್ಲಿ ಪಡೆದಿದ್ದ 100 ಕೋಟಿ ರೂ. ಸಾಲವನ್ನು 3ನೇ ಹಂತದ ಕಾಮಗಾರಿಗೆ ತಿರುಗಿಸಲಾಗಿದೆ.
ಡಿಎಲ್‌ಸಿ ಒಪ್ಪಿಗೆ ಪಡೆಯದೆ ಸರಕಾರದ ಅನುಮೋದನೆ
ಮಹಾನಗರ ಪಾಲಿಕೆಗಳು ಸಿದ್ಧಪಡಿಸಿದ ಕ್ರಿಯಾಯೋಜನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಜಿಲ್ಲಾ ಮಟ್ಟ ಸಮಿತಿ (ಡಿಎಲ್‌ಸಿ) ಮುಂದಿಟ್ಟು ಅನುಮತಿ ಪಡೆಯಬೇಕು. ಆದರೆ 2021ರ ಸೆಪ್ಟಂಬರ್‌ನಿಂದ ನವೆಂಬರ್ ವರೆಗಿನ ಬಳ್ಳಾರಿ ಮತ್ತು ಮೈಸೂರು ಮಹಾನಗರ ಪಾಲಿಕೆಯ ಲೆಕ್ಕಪರಿಶೋಧನೆ ವೇಳೆ 43.57 ಕೊಟಿ ರೂ.ಗಳ ಪರಿಷ್ಕೃತ ಕ್ರಿಯಾಯೋಜನೆಗೆ ಡಿಎಲ್‌ಸಿ ಒಪ್ಪಿಗೆ ಪಡೆಯದೆ, ಸರಕಾರದ ಅನುಮೋದನೆ ಪಡೆದುಕೊಂಡಿದ್ದು, ಇದು ಸಮುದಾಯ ಯೋಜನೆ ಪರಿಕಲ್ಪನೆಗೆ ವಿರುದ್ಧವಾಗಿ ಎಂದು ಸಮಿತಿ ಆಕ್ಷೇಪಿಸಿದೆ. ಕ್ರಿಯಾ ಯೋಜನೆ ಅನುಮೋದಿಸಿ, ಆಡಳಿತಾತ್ಮಕ ಹಾಗೂ ತಾಂತ್ರಿಕ ಮಂಜೂರಾತಿಗಳನ್ನು ಪಡೆದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಕಾಮಗಾರಿ ಅನುಷ್ಠಾನ ವಿಳಂಬವಾದ್ದರಿಂದ 2015-16ರಲ್ಲಿ 27.64 ಕೋಟಿ ರೂ. ಅನುದಾನ ಲ್ಯಾ±Õ… ಆಗಿದೆ. 2014-21ರವರೆಗೆ ಬಿಡುಗಡೆಯಾಗಿದ್ದ 532.78 ಕೋಟಿ ರೂ.ಗಳಲ್ಲಿ ಇದೇ ಕಾರಣದಿಂದ 43.33 ಕೋಟಿ ರೂ. ರದ್ದಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Bill: ಇನ್ನು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ
BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ
Grant: ರಸ್ತೆ ಅಭಿವೃದ್ಧಿಗೆ ಪಕ್ಷಾತೀತವಾಗಿ ಶಾಸಕರಿಗೆ 2 ಸಾವಿರ ಕೋ.ರೂ.: ಮುಖ್ಯಮಂತ್ರಿ
Kannada ಸಾಹಿತ್ಯ ಸಮ್ಮೇಳನ 2 – 3 ವರ್ಷಕ್ಕೊಮ್ಮೆ ನಡೆಯಲಿ
Winter Session: ಸೋಮವಾರ 14.18 ಗಂಟೆ ಕಲಾಪ: ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.