Team Udayavani, Apr 11, 2019, 3:54 PM IST
ಬೆಟಗೇರಿ: ಬೇಸಿಗೆ ಆರಂಭದಲ್ಲಿಯೇ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಿಸಿಲು ದಿನೇದಿನೆ ಏರುತ್ತಿದ್ದು, ಜನರು ಈಗಲೇ ಬಿಸಿಲಿನ ಝಳ ತಾಳಲಾರದೆ ನೆರಳು ಮತ್ತು ತಂಪು ಪಾನೀಯತ್ತ ಮುಖ ಮಾಡುತ್ತಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಈ ದಿಗಳಲ್ಲಿ ಉಷ್ಣಾಂಶ 33 ರಿಂದ 35 ಡಿಗ್ರಿ ಸೆಲ್ಸಿಯಸ್ ಇದ್ದದ್ದು, ಕಳೆದೊಂದು ವಾರದಿಂದ ಇಲ್ಲಿ ಈಗ ಉಷ್ಣಾಂಶ 34-37 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಏಪ್ರಿಲ್ ಮೊದಲ ವಾರದಲ್ಲಿ ಈ ಸ್ಥಿತಿಯಾದರೆ ಇನ್ನೂ ಮೇನಲ್ಲಿ ಹೇಗೆ ಎಂಬ ಚಿಂತೆ ಇಲ್ಲಿಯನ ಜನರು ಚಿಂತೆ ಮಾಡುವಂತಾಗಿದೆ.
ಬಿಸಿಲಿನ ತಾಪಕ್ಕೆ ತಂಪು ಪಾನೀಯ: ಒಂದೆಡೆ ಬಿಸಿಲಿನ ಝಳಕ್ಕೆ ಹೊಟ್ಟೆ ತಂಪಾಗಿಸಿಕೊಳ್ಳಲು ಇಲ್ಲಿನ ಜನರು ಕೋಲ್ಡ್ರಿಂಕ್ಸ್ ಅಂಗಡಿಗಳತ್ತ ಮುಖ ಮಾಡಿ ತಂಪು ಪಾನೀ, ಐಸ್-ಕ್ರೀಮ್, ತೆಂಗಿನ ಎಳೆನೀರು, ಹಣ್ಣಿನ ರಸ ಸೇವಿಸಿದರೆ ಇನ್ನೊಂದೆಡೆ ರೈತರು ತಮ್ಮ ಮನೆಗಳಲ್ಲಿರುವ ಮಣ್ಣಿನ ಮಡಕೆ, ತತ್ರಾನಿಯಲ್ಲಿ ನೀರು ಸಂಗ್ರಹಿಸಿ ತಂಪು ತಟ್ಟು ಹೊದಿಸಿ ತಂಪು ನೀರು ಸೇವಿಸುತ್ತಿದ್ದಾರೆ.
ಮಳೆಯ ನಿರೀಕ್ಷೆಯಲ್ಲಿ ಜನತೆ: ಏಪ್ರಿಲ್ ಮೊದಲ ವಾರ ಈ ಸಲ ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಸಿಲಿನ ತಾಪದಿಂದ ತತ್ತರಿಸುತ್ತಿರುವ ಜನರು ಮಳೆಗಾಗಿ ಆಕಾಶದ ಕಡೆಗೆ ಮುಖ ಮಾಡಿ ನೋಡುವಂತಾಗಿದೆ. ಜನತೆ ಮಳೆಯ ನಿರೀಕ್ಷೆಯಲ್ಲಿದ್ದು, ಒಂದು ದೊಡ್ಡ ಮಳೆಯಾದರೆ ಸಾಕು ಭೂಮಿ ತಂಪಾಗುವುದು, ಬಿಸಿಲಿನ ತಾಪ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಬಹುದೆಂಬ ಲೆಕ್ಕಾಚಾರದಲ್ಲಿದ್ದಾರೆ ರೈತರು.
ಕಳೆದ ವರ್ಷದ ಬೇಸಿಗೆಯ ಬಿಸಿಲಿಗಿಂತ ಈ ವರ್ಷ ಬೇಸಿಗೆಯ ಬಿಸಿಲು ಹೆಚ್ಚಾಗಿದ್ದರಿಂದ ಹಗಲು ಭೂಮಿ ಬಿಸಿಲು ಝಳಕ್ಕೆ ಕಾದು, ತಡರಾತ್ರಿವರೆಗೂ ಬಿಸಿ ಗಾಳಿ ಸೂಸುತ್ತಿರುತ್ತದೆ. ಜನರು ತಮ್ಮ ತಮ್ಮ ಮನೆಗಳ ಹೊರಗೆ ಕಟ್ಟೆಯ ಮೇಲೆ ಕುಳಿತು ಊಸ್ಸ ಅಂತಾ ನಿಟ್ಟುಸಿರು ಬಿಡುವ ಸ್ಥಿತಿ ಎದುರಾಗಿದೆ.
ಬಿಸಿಲಿನ ಧಗೆಯ ಅಬ್ಬರ
ಸಂಬರಗಿ: ಗಡಿ ಗ್ರಾಮಗಳಲ್ಲಿ ಬಿಸಿಲನ ಪ್ರಮಾಣ ಹೆಚ್ಚಾಗಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಬಹುತೇಕ ಬೆಳಗಿನ ಹೊತ್ತಿನಲ್ಲಿಯೇ ಮುಗಿಸಿಕೊಂಡು ಬಿಸಿಲು ನೆತ್ತಿಗೇರುವಷ್ಟರಲ್ಲಿಯೇ ಮನೆಗೆ ವಾಪಸ್ಸಾಗುತ್ತಿದ್ದಾರೆ. ಗ್ರಾಮದಲ್ಲಿ ಕನಿಷ್ಠ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನವಿದ್ದು, ನಿತ್ಯ ಬೆಳಗ್ಗೆ 10 ಗಂಟೆಯ ಬಳಿಕ ತಾಪದ ಪ್ರಮಾಣ ಹೆಚ್ಚುತ್ತಿದೆ. ಬಿಸಿಲಿ ಝಳಕ್ಕೆ ಮಧ್ಯಾಹ್ನ 12 ರಿಂದ 4ರವರೆಗೆ ಕೂಲಿಕಾರರು ಹಾಗೂ ಗ್ರಾಮಸ್ಥರು ಹೊರಗೆ ಬರದಂತಾಗಿದೆ. ಅಲ್ಲದೇ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನು ಬೆಳಗಿನ ಹೊತ್ತಿನಲ್ಲಿಯೇ ಮುಗಿಸಲಾಗುತ್ತಿದೆ.
ಕೆಲವೊಂದು ಕಡೆ ಬೆಳಗ್ಗೆ 6 ಗಂಟೆಯಿಂದಲೇ ನರೇಗಾ ಕೂಲಿ ಕಾರ್ಮಿಕರು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಬಿಸಲಿನ ಝಳಕ್ಕೆ ಕೆಂಡದಂತಾದ ರಸ್ತೆಗಳಲ್ಲಂತೂ ವಾಹನ ಹಾಗೂ ಜನರಿಲ್ಲದೇ ಬೀಕೋ ಎನ್ನುತ್ತಿವೆ.
ಬಿಸಿಲಿನ ಝಳಕ್ಕೆ ಮನೆಯಿಂದ ಹೊರಗೆ ಬರುವುದೇ ಕಷ್ಟಕರವಾಗಿದೆ. ಈಗಲೇ ಹೀಗಾದ್ರೆ ಇನ್ನೂ ಮುಂದೆ ಹೇಗೆ ಎಂಬ ಚಿಂತೆ ಎದುರಾಗಿದ್ದು, ಈ ಬಿಸಲಿನ ಝಳ ನಿವಾರಣೆಗೆ ತಂಪು ಪಾನೀಯಗಳ ಸೇವಿಸುವುದು ಅನಿವಾರ್ಯವಾಗಿದೆ.
ವೀರಣ್ಣ ಚಿಂತಪ್ಪ ಸಿದ್ನಾಳ, ನಾಗರಿಕ