‘ಮಹಾ’ ಪ್ರವಾಹಕ್ಕೆ ದ್ವೀಪಗಳಾದ ಗ್ರಾಮಗಳು!
Team Udayavani, Aug 7, 2019, 10:42 AM IST
ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮದ ಜನರನ್ನು ಎನ್‌ಡಿಆರ್‌ಎಫ್ ತಂಡ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.
ಚಿಕ್ಕೋಡಿ: ಮಳೆರಾಯನ ಅಟ್ಟಹಾಸ ಮುಂದುವರಿದು ರಸ್ತೆಗಳ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಚಿಕ್ಕೋಡಿ ಉಪವಿಭಾಗದ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡು ಗ್ರಾಮಗಳು ಅಕ್ಷರಶಃ ನಡುಗಡ್ಡೆಗಳಂತಾಗಿವೆ.
ರಾಜ್ಯದ ಗಡಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಸತತ ಮಳೆ ಸುರಿಯುತ್ತಿರುವುದರಿಂದ ಕೆರೆ, ಬಾವಿ ತುಂಬಿ ತುಳುಕಿ ಹೆಚ್ಚಿನ ನೀರು ರಸ್ತೆಗೆ ನುಗ್ಗಿದೆ, ವಡ್ರಾಳ ಕೆರೆ ತುಂಬಿದ್ದರಿಂದ ನೀರು ಬೆಳಗಾವಿ ಚಿಕ್ಕೋಡಿ ರಸ್ತೆಗೆ ನುಗ್ಗಿದೆ. ಇದರಿಂದ ಮಂಗಳವಾರ ಬೆಳಗ್ಗೆಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೃಷ್ಣಾ ನದಿ ನೀರು ಮಾಂಜರಿ ಹತ್ತಿರ ಚಿಕ್ಕೋಡಿ ಮಿರಜ ರಸ್ತೆ ಮೇಲೆ ಬಂದಿರುವುದರಿಂದ ರಸ್ತೆ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ದೂಧಗಂಗಾ ನದಿ ನೀರು ಬೇಡಕಿಹಾಳ ಇಚಲಕರಂಜಿ ರಸ್ತೆ ಮೇಲೆ ಬಂದಿದೆ. ಹೀಗಾಗಿ ಮಹಾರಾಷ್ಟ್ರ ಸಂಪರ್ಕ ಕಡಿತಗೊಂಡಿದೆ. ಒಟ್ಟಾರೆ ಪರಸ್ಥಳಗಳಿಗೆ ಹೋಗಬೇಕಾದ ಜನರ ಕೈಕಾಲು ಕಟ್ಟಿ ಹಾಕಿದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಕೃಷ್ಣಾ, ದೂಧಗಂಗಾ, ವೇದಗಂಗಾ ಹಾಗೂ ರಾಜ್ಯದ ಗಡಿಗೆ ಹೊಂದಿಕೊಂಡು ಹರಿಯುತ್ತಿರುವ ಪಂಚಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ನದಿ ಪಾತ್ರದಲ್ಲಿರುವ 52 ಗ್ರಾಮಗಳ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಇಲ್ಲಿಯವರಿಗೆ ತೋಟದ ಪ್ರದೇಶದ ಜನವಸತಿ ಪ್ರದೇಶಗಳಿಗೆ ನುಗ್ಗಿದ ನೀರು ಮಂಗಳವಾರ ಗ್ರಾಮಗಳಿಗೆ ನುಗ್ಗಿದೆ. ಇದು ನದಿ ಪಾತ್ರದ ಜನರಲ್ಲಿ ನಡುಕ ಹುಟ್ಟಿಸಿದೆ.
ದೂಧಗಂಗಾ, ವೇಧಗಂಗಾ ಮತ್ತು ಪಂಚಗಂಗಾ ನದಿಗಳ ನೀರಿನ ಮಟ್ಟದಲ್ಲಿ ಮಂಗಳವಾರ ಐದು ಅಡಿಯಷ್ಟು ಹೆಚ್ಚಳವಾಗಿದೆ. ನಾಲ್ಕು ನದಿಗಳು ಸುಮಾರು ಎರಡು ಕಿಮೀ ನಷ್ಟು ವಿಸ್ತಾರಗೊಂಡು ಜನರಲ್ಲಿ ಆತಂಕ ಹುಟ್ಟಿಸಿದೆ. ನದಿ ಭಾಗದಲ್ಲಿರುವ ಗ್ರಾಮಗಳಿಗೆ ನೀರು ಹೋಗಿದೆ. ಎಲ್ಲಿ ನೋಡಿದರೂ ಸಮುದ್ರದಂತೆ ಕಂಡು ಬರುತ್ತಿದೆ.
ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ರಾಯಬಾಗ ಮತ್ತು ಅಥಣಿ ತಾಲೂಕಿನಲ್ಲಿ ಒಟ್ಟು 40,20 ಕುಟುಂಬಗಳಲ್ಲಿ 15,912 ಜನರನ್ನು ಸುರಕ್ಷಿತ ಸ್ಥಳಗಳಿಗೆ ಹೋಗಿದ್ದಾರೆ. 9,119 ಜಾನುವಾರುಗಳನ್ನು ಸ್ಥಳಾಂತರ ಮಾಡಲಾಗಿದೆ.
ಚಿಕ್ಕೋಡಿ ತಾಲೂಕಿನಲ್ಲಿ 10 ಗ್ರಾಮಗಳ 495 ಕುಟುಂಬಗಳ 1,942 ಜನರಿಗೆ ಹಾಗೂ 1,502 ಜಾನುವಾರುಗಳನ್ನು ಸ್ಥಳಾಂತರ ಮಾಡಲಾಗಿದೆ. ಕಾಗವಾಡ ತಾಲೂಕಿನ 10 ಗ್ರಾಮಗಳ 1,691 ಕುಟುಂಬಗಳಲ್ಲಿ 7,409 ಜನರನ್ನು ಮತ್ತು 3,272 ಜಾನುವಾರುಗಳು, ಅಥಣಿ ತಾಲೂಕಿನಲ್ಲಿ 14 ಗ್ರಾಮಗಳ 1,036 ಕುಟುಂಬಗಳಲ್ಲಿ 4,271 ಜನರನ್ನು ಹಾಗೂ 2,511 ಜಾನುವಾರುಗಳನ್ನು ಸ್ಥಳಾಂತರಿಸಿದ್ದಾರೆ. ರಾಯಬಾಗ ತಾಲೂಕಿನ 10 ಗ್ರಾಮಗಳ 308 ಕುಟುಂಬಗಳ 1,287 ಜನರು ಮತ್ತು 2,511 ಜಾನುವಾರುಗಳನ್ನು ಸ್ಥಳಾಂತರಿಸಿದ್ದಾರೆ. ನಿಪ್ಪಾಣಿ ತಾಲೂಕಿನ 12 ಗ್ರಾಮಗಳ 490 ಕುಟುಂಬಗಳ 2,003 ಜನರು ಮತ್ತು 1,061 ಜಾನುವಾರುಗಳನ್ನು ಆಯಾ ತಾಲೂಕಾಡಳಿತ ಸ್ಥಳಾಂತರಿಸಿದೆ ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ತಿಳಿಸಿದರು.
37 ಗಂಜಿ ಕೇಂದ್ರ ಸ್ಥಾಪನೆ: ಚಿಕ್ಕೋಡಿ ಉಪವಿಭಾಗದಲ್ಲಿ ಸಂತ್ರಸ್ತರಿಗೆ 37 ಗಂಜಿ ಕೇಂದ್ರಗಳನ್ನು ತೆಗೆದು ಅವರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಚಿಕ್ಕೋಡಿ ತಾಲೂಕಿನಲ್ಲಿ 5, ಕಾಗವಾಡ 8, ಅಥಣಿ 6, ರಾಯಬಾಗ 8, ನಿಪ್ಪಾಣಿ 10 ಕಡೆಗಳಲ್ಲಿ ಗಂಜಿ ಕೇಂದ್ರ ತೆಗೆದು ಸಂತ್ರಸ್ತರಿಗೆ ಅನುಕೂಲ ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಕಂದಾಯ ಇಲಾಖೆ ಮಾಹಿತಿ ಪ್ರಕಾರ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜದಿಂದ ಕೃಷ್ಣಾ ನದಿಗೆ 2.52 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ದೂಧಗಂಗಾ ಮತ್ತು ವೇದಗಂಗಾ ನದಿಗಳ ಮೂಲಕ 42 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತದೆ. ಒಟ್ಟಾರೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟು 2.94 ಲಕ್ಷ ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ಹಿಪ್ಪರಗಿ ಜಲಾಶಯದಿಂದ 2.83 ಲಕ್ಷ ಕ್ಯೂಸೆಕ್ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ. ಆಲಮಟ್ಟಿ ಜಲಾಶಯದಿಂದ 3.60 ಲಕ್ಷ ಕ್ಯೂಸೆಕ್ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ ಎಂದು ರವೀಂದ್ರ ಕರಲಿಂಗನ್ನವರ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ರಾಜ್ಯೋತ್ಸವ ಮೆರವಣಿಗೆ ವೇಳೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
Belagavi: ಎಂಇಎಸ್ ಕಾರ್ಯಕರ್ತರ ಪುಂಡಾಟ
Rajyotsava Celebration: ಬೆಳಗಾವಿಯಲ್ಲಿ ವೈಭವದ ಕರ್ನಾಟಕ ರಾಜ್ಯೋತ್ಸವ
Belagavi; ಎಂಇಎಸ್ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್ ಜಾರಕಿಹೊಳಿ
ಬೆಳಗಾವಿ: ಆರ್ಥಿಕ ಮುಗ್ಗಟ್ಟು ಮಧ್ಯೆಯೇ ದುಂದುವೆಚ್ಚ: ಪಾಲಿಕೆಯಿಂದ ಲಕ್ಷ, ಲಕ್ಷ ವೆಚ್ಚ!
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.