ಉಮೇಶ ಕತ್ತಿ ಉತ್ತರಾಧಿಕಾರಿ ಯಾರು?
ಪುತ್ರ ನಿಖೀಲ್, ಇಲ್ಲವೇ ಸಹೋದರ ರಮೇಶ ಸ್ಪರ್ಧೆ ಸಾಧ್ಯತೆ ; ಸಚಿವಗಿರಿಗೆ ರಾಜೀವ್, ಜಾರಕಿಹೊಳಿ, ಸವದಿ ಪೈಪೋಟಿ
Team Udayavani, Sep 22, 2022, 3:58 PM IST
ಬೆಳಗಾವಿ: ಹಿರಿಯ ನಾಯಕ ಉಮೇಶ ಕತ್ತಿ ನಿಧನದಿಂದ ತೆರವಾದ ಸ್ಥಾನಕ್ಕೆ ಯಾರು? ಬೆಳಗಾವಿ ಜಿಲ್ಲೆಯಲ್ಲಿ ಯಾರಿಗೆ ಈ ಅವಕಾಶ ದೊರೆಯಲಿದೆ?
ಇಂತಹ ಹಲವಾರು ಪ್ರಶ್ನೆ ಮತ್ತು ಚರ್ಚೆಗಳು ಈಗ ನಡೆದಿವೆ. ಉಮೇಶ ಕತ್ತಿ ಸ್ಥಾನ ತುಂಬುವ ಕೆಲಸ ಅಂದುಕೊಂಡಷ್ಟು ಸರಳವಾಗಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಅದು ಒಂದು ರೀತಿಯಲ್ಲಿ ಜೇನುಗೂಡಿಗೆ ಕೈ ಹಾಕಿದಂತೆ. ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಪುನಾರಚನೆ ಮಾಡಬೇಕೋ ಎಂಬ ಗೊಂದಲದಲ್ಲಿರುವ ಸರ್ಕಾರ ಮತ್ತು ಪಕ್ಷದ ವರಿಷ್ಠರು ಇದೇ ಕಾರಣಕ್ಕೆ ಯಾವುದನ್ನೂ ಅನವಶ್ಯಕವಾಗಿ ಮೈಮೇಲೆಳೆದುಕೊಳ್ಳಲು ತಯಾರಿಲ್ಲ.
ಜತೆಗೆ ಗುತ್ತಿಗೆದಾರ ಸಂತೋಷ ಪಾಟೀಲ ವಿಷಯದಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿ ರಾಜೀನಾಮೆ ನೀಡಿದ್ದ ಕೆ.ಎಸ್.ಈಶ್ವರಪ್ಪ ಸಹ ಕ್ಲೀನ್ ಚಿಟ್ ಪಡೆದು ಮತ್ತೆ ಸಚಿವ ಸ್ಥಾನಕ್ಕೆ ಒತ್ತಾಯ ಮಾಡಿದ್ದಾರೆ. ಹೀಗಾಗಿ ಉಮೇಶ ಕತ್ತಿ ಸ್ಥಾನಕ್ಕೆ ಯಾರು ಬರಬಹುದು, ಯಾರಿಗೆ ಅದೃಷ್ಟ ಒಲಿಯಬಹುದು ಎಂಬ ಚರ್ಚೆ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಜಿಲ್ಲೆಯಲ್ಲಿ 13 ಬಿಜೆಪಿ ಶಾಸಕರು: ಹಾಗೆ ನೋಡಿದರೆ ಉಮೇಶ ಕತ್ತಿ ಸ್ಥಾನಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ದೊಡ್ಡ ಪೈಪೋಟಿಯೇ ಇದೆ. ಒಟ್ಟು 18 ವಿಧಾನಸಭಾ ಕ್ಷೇತ್ರಗಳಿರುವ ಜಿಲ್ಲೆಯಲ್ಲಿ 13 ಜನ ಬಿಜೆಪಿ ಶಾಸಕರಿದ್ದಾರೆ. ಆದರೆ ಉಮೇಶ ಕತ್ತಿ ಅಗಲಿಕೆ ನಂತರ ಜಿಲ್ಲೆಯನ್ನು ಪ್ರತಿನಿಧಿಸುವ ಶಶಿಕಲಾ ಜೊಲ್ಲೆ ಮಾತ್ರ ಸಚಿವರಾಗಿದ್ದಾರೆ. ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪಕ್ಕದ ಬಾಗಲಕೋಟೆ ಜಿಲ್ಲೆಯವರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಜಿಲ್ಲೆಯಿಂದ ನಾಲ್ವರು ಸಚಿವರಾಗಿದ್ದರು. ಅದು ಈಗ ಕೇವಲ ಒಂದು ಸಂಖ್ಯೆಗೆ ಬಂದು ನಿಂತಿದೆ.
ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ವರಿಷ್ಠರು ಉಮೇಶ ಕತ್ತಿ ಸ್ಥಾನ ತುಂಬಲು ನಿರ್ಧರಿಸಿದರೆ ಇದಕ್ಕೆ ಸಾಕಷ್ಟು ಪೈಪೋಟಿ ನಡೆಯಲಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವ ರಮೇಶ ಜಾರಕಿಹೊಳಿ ಸಚಿವರಾಗಬೇಕೆಂಬ ಪ್ರಯತ್ನದಲ್ಲಿರುವ ಪ್ರಮುಖರು. ಇಬ್ಬರೂ ನಾಯಕರು ಕಳೆದ ಹಲವಾರು ತಿಂಗಳಿಂದ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ. ಇವರಿಬ್ಬರ ಹೊರತಾಗಿ ಶಾಸಕರಾದ ಅಭಯ ಪಾಟೀಲ, ಪಿ.ರಾಜೀವ ಹೆಸರು ಸಹ ಪ್ರಮುಖವಾಗಿ ಕೇಳಿಬರುತ್ತಿದೆ. ಆದರೆ ಈಗಿನ ಬೆಳವಣಿಗೆ ನೋಡುವುದಾದರೆ ಪಕ್ಷದ ವರಿಷ್ಠರು ಸಂಪುಟ ವಿಸ್ತರಣೆ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅಂತಹ ಯಾವುದೇ ಚಟುವಟಿಕೆಗಳು ಪಕ್ಷದ ವಲಯದಲ್ಲಿ ನಡೆದಿರುವಂತೆ ಕಂಡು ಬರುತ್ತಿಲ್ಲ.ಜಿಲ್ಲೆಯಲ್ಲೂ ಹೊಸ ರಾಜಕೀಯ ಚಟುವಟಿಕೆಗಳು ಕಾಣುತ್ತಿಲ್ಲ.
ಸಮರ್ಥ ನಾಯಕ: ಹಿರಿಯ, ಅನುಭವಿ ರಾಜಕಾರಣಿ ಉಮೇಶ ಕತ್ತಿ ಅಗಲಿಕೆ ಅನಿರೀಕ್ಷಿತ. ಸದಾ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುತ್ತಿದ್ದ ಕತ್ತಿ ಅವರು ಕೊನೆಗೆ ಅದನ್ನು ಸಮರ್ಥನೆ ಮಾಡಿಕೊಳ್ಳುವುದರಲ್ಲಿ ಹಿಂದೆ ಬೀಳುತ್ತಿರಲಿಲ್ಲ. ಇದರ ಜತೆಗೆ ಸರ್ಕಾರ ಹಾಗೂ ಪಕ್ಷಕ್ಕೆ ಸಮಸ್ಯೆಗಳು ಉಂಟಾದಾಗ ಅವುಗಳನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸುವ ಸಾಮರ್ಥ್ಯ ಅವರಲ್ಲಿತ್ತು. ಈಗ ಈ ಎಲ್ಲ ಕೊರತೆಗಳು ಕಾಡುತ್ತಿವೆ.
ಇನ್ನು ಜಿಲ್ಲಾ ರಾಜಕಾರಣದಲ್ಲೂ ತಮ್ಮದೇ ಆದ ಪ್ರಭಾವ ಮತ್ತು ಶಕ್ತಿ ಹೊಂದಿದ್ದ ಉಮೇಶ ಕತ್ತಿ, ಡಿಸಿಸಿ ಬ್ಯಾಂಕ್ ರಾಜಕಾರಣದಲ್ಲಿ ಬಹಳ ಪಳಗಿದ್ದರು. ಸಾಕಷ್ಟು ಪೈಪೋಟಿ ಇದ್ದರೂ ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿಗಳನ್ನೇ ಹಿಡಿದು ತಮ್ಮ ಸಹೋದರ ರಮೇಶ ಕತ್ತಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಸಿಗುವಂತೆ ಮಾಡಿದ್ದರು. ಈಗ ಇವೆಲ್ಲವೂ ನೆನಪು ಮಾತ್ರ. ಆದರೆ ಅವರ ಈ ಸ್ಥಾನ ಹಾಗೂ ಸಾಮರ್ಥ್ಯ ತುಂಬಬಲ್ಲವರು ಯಾರೆಂಬ ಪ್ರಶ್ನೆ ಎದ್ದಿದೆ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ತಮ್ಮೆಲ್ಲ ಅನುಭವ-ಶಕ್ತಿಯನ್ನು ಪಣಕ್ಕಿಟ್ಟು ಸಚಿವರಾಗಿದ್ದ ಉಮೇಶ ಕತ್ತಿ ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಎರಡೂ ಮಹತ್ವದ ಖಾತೆಗಳನ್ನು ನಿರ್ವಹಿಸುತ್ತಿದ್ದರು.
ಉತ್ತರಾಧಿಕಾರಿ ಯಾರು?:
ಉಮೇಶ ಕತ್ತಿ ಅನಿರೀಕ್ಷಿತ ಅಗಲಿಕೆ ನಂತರ ಹುಕ್ಕೇರಿ ಕ್ಷೇತ್ರ ಅಕ್ಷರಶಃ ಅನಾಥವಾಗಿದೆ. ಮನೆಯಲ್ಲಿ ಹಿರಿಯರು ಇಲ್ಲದಂತೆ ಭಾಸವಾಗುತ್ತಿದೆ. ಇದರ ಬೆನ್ನಲ್ಲೇ ಉಮೇಶ ಕತ್ತಿ ರಾಜನಂತೆ ಆಳಿದ ಹುಕ್ಕೇರಿ ಕ್ಷೇತ್ರಕ್ಕೆ ನೂತನ ಉತ್ತರಾಧಿಕಾರಿ ಯಾರೆಂಬ ಪ್ರಶ್ನೆ ಎದುರಾಗಿದೆ. ಉತ್ತರಾಧಿಕಾರಿ ಪಟ್ಟ ಅದೇ ಕುಟುಂಬಕ್ಕೆ ಹೋಗುತ್ತದೆ ಎಂಬುದರಲ್ಲಿ ಬೇರೆ ಅಭಿಪ್ರಾಯಗಳಿಲ್ಲ. ಆದರೆ ಮುಂದಿನ ಚುನಾವಣೆಯಲ್ಲಿ ಹುಕ್ಕೇರಿ ಕ್ಷೇತ್ರದಿಂದ ಸಹೋದರ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಸ್ಪರ್ಧೆ ಮಾಡುತ್ತಾರೋ ಅಥವಾ ಉಮೇಶ ಕತ್ತಿ ಪುತ್ರ ನಿಖಿಲ್ ಕಣಕ್ಕಿಳಿಯುತ್ತಾರೋ ಎಂಬ ಕುತೂಹಲ ಮಾತ್ರ ಇದೆ. ಇದರ ಬಗ್ಗೆ ಇನ್ನೂ ಬಹಿರಂಗ ಚರ್ಚೆಗಳು ಆರಂಭವಾಗಿಲ್ಲ.
ಉಪಚುನಾವಣೆ ಯಾರಿಗೂ ಬೇಕಿಲ್ಲ!
ಮುಂದಿನ ದಿನಗಳಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಕತ್ತಿ ಕುಟುಂಬದಿಂದ ಯಾರು ಸ್ಪರ್ಧಿಸುತ್ತಾರೆಂಬುದು ಕುತೂಹಲಕ್ಕೆ ಕಾರಣವಾಗಲಿದೆ. ಸದ್ಯದ ಬೆಳವಣಿಗೆ ಪ್ರಕಾರ ತಕ್ಷಣವೇ ಹುಕ್ಕೇರಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವುದು ಅನುಮಾನ. ಮುಂದಿನ ವರ್ಷ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಇರುವುದರಿಂದ ಈಗ ಉಪಚುನಾವಣೆ ಬಗ್ಗೆ ಯಾರಿಗೂ ಅಷ್ಟಾಗಿ ಆಸಕ್ತಿ ಇಲ್ಲ. ಹೀಗಾಗಿ ಉಪಚುನಾವಣೆ ಬದಲು ಸಾರ್ವತ್ರಿಕ ಚುನಾವಣೆಗೆ ಹೋಗುವುದು ಒಳ್ಳೆಯದು ಎಂಬ ಮಾತುಗಳು ಕೇಳಿ ಬಂದಿವೆ.
ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
MUST WATCH
ಹೊಸ ಸೇರ್ಪಡೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.