ಮಣ್ಣಿನ ಗಣಪಗೆ ಭಾರೀ ಬೇಡಿಕೆ
ಪರಿಸರ ಸ್ನೇಹಿ ವಿಗ್ರಹದತ್ತ ಜನರ ಒಲವು•ಸಿದ್ಧವಾಗ್ತಿದೆ ವಿವಿಧ ರೂಪದ ಮೂರ್ತಿ
Team Udayavani, Aug 26, 2019, 11:57 AM IST
ಬಳ್ಳಾರಿ: ಗಣೇಶನನ್ನು ಕೊಳ್ಳಲು ಬಂದ ಗ್ರಾಹಕರು ವಿಗ್ರಹಗಳನ್ನು ವೀಕ್ಷಿಸುತ್ತಿರುವುದು.
ಬಳ್ಳಾರಿ: ವಿಘ್ನಗಳ ನಿವಾರಕ, ವಿನಾಯಕನ ಹಬ್ಬಕ್ಕೆ ಕೆಲವೇ ದಿನ ಬಾಕಿಯಿದ್ದು, ಗಣಿನಗರಿ ಬಳ್ಳಾರಿಯಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ.
ನಗರದ ಹಲವು ಬೀದಿ, ಬಡಾವಣೆಗಳಲ್ಲಿ ಗಣೇಶನ ಪ್ರತಿಷ್ಠಾಪಿಸಲು ಈಗಾಗಲೇ ಅಗತ್ಯ ಸಿದ್ಧತೆ ನಡೆಯುತ್ತಿದೆ. ತಮಗೆ ಬೇಕಾದ ಆಕಾರದಲ್ಲಿ ಮಣ್ಣಿನ ಗಣಪನ ಮೂರ್ತಿಗಳನ್ನು ಸಿದ್ಧಪಡಿಸಿಕೊಡುವಂತೆ ಮೂರ್ತಿ ತಯಾರಕರಿಗೆ ಜನ ಮುಂಗಡ ಹಣ ಕೊಟ್ಟು ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ವಿಗ್ರಹಗಳ ತಯಾರಿಕೆ ಹಾಗೂ ಮಾರಾಟವನ್ನು ನಿಷೇಧಿಸಿ ಬಳ್ಳಾರಿ ಮಹಾನಗರ ಪಾಲಿಕೆ ಈಗಾಗಲೇ ಆದೇಶ ಹೊರಡಿಸಿದೆ. ಎರಡು ವರ್ಷಗಳಿಂದ ಪಿಒಪಿ ಮೂರ್ತಿ ತಯಾರಿಸುವ ಸ್ಥಳಗಳ ಮೇಲೆ ದಾಳಿ ನಡೆಸಿ, ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚುತ್ತಿದೆ.
ನಾಲ್ಕು ತಿಂಗಳಿಂದ ಸಿದ್ಧತೆ: ಕೊಲ್ಕತ್ತಾ ಮೂಲದ ಸುಭಾಷ್ ಮತ್ತು ಅವರ ತಂಡ ಕಳೆದ ನಾಲ್ಕು ತಿಂಗಳ ಹಿಂದೆಯೇ ಬಳ್ಳಾರಿಗೆ ಆಗಮಿಸಿ ವಿಘ್ನೕಶ್ವರನ ಮೂರ್ತಿಗಳ ತಯಾರಿಕೆಯಲ್ಲಿ ನಿರತವಾಗಿದೆ. ಇದಕ್ಕೆಂದೇ ವಿಶೇಷವಾಗಿ ಕೊಲ್ಕತ್ತಾದಿಂದ ‘ಗಂಗಾ’ ಎಂಬ ಹೆಸರಿನ ಮಣ್ಣನ್ನು ತರಿಸಿಕೊಂಡಿದ್ದಾರೆ. ಅಲ್ಲದೆ ಮೂರ್ತಿ ತಯಾರಿಕೆಗೆ ಬೇಕಾಗಿರುವ ಭತ್ತದ ಹುಲ್ಲು, ಸೆಣಬಿನ ಹಗ್ಗ (ಉರಿಕೋನಿ), ಬಿದಿರನ್ನು ಸಂಗ್ರಹಿಸಿದ್ದಾರೆ. ಕಳೆದ 8 ವರ್ಷಗಳಿಂದಲೂ ನಗರ ಹೊರವಲಯದ ಅಲ್ಲೀಪುರ ಸಮೀಪದ ರಾಮೇಶ್ವರಿ ನಗರದಲ್ಲಿ ತಮ್ಮ ಕಾಯಕವನ್ನು ಮುಂದುವರೆಸಿಕೊಂಡು ಬರುತ್ತಿರುವ ಇವರು, 4 ತಿಂಗಳ ಮುಂಚಿತವಾಗಿಯೇ ಬಂದು ಬಿಡಾರ ಹೂಡಿ ತಮ್ಮ ಕಾಯಕ ಆರಂಭಿಸಿದ್ದಾರೆ. ಮುಖ್ಯವಾಗಿ ಗ್ರಾಹಕರ ಆಯ್ಕೆಗೆ ಅನುಗುಣವಾಗಿ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಕಣ್ಣೆದುರಿಗೆ ಸಿದ್ಧಗೊಳ್ಳುವ ಮಣ್ಣಿನ ಗಣಪ: ಗ್ರಾಹಕರು ತಮ್ಮ ಮೊಬೈಲ್ಗಳಲ್ಲಿ ತೋರಿಸುವ ಗಣೇಶನ ಚಿತ್ರಗಳನ್ನು ಅದೇ ರೀತಿಯಲ್ಲೇ ಸಿದ್ಧಪಡಿಸಿಕೊಡುವಲ್ಲಿ ಮೂರ್ತಿ ತಯಾರಕರು ಮುಂದಾಗಿದ್ದಾರೆ. ಮೊದಲು ಬಿದಿರನ ತುಂಡುಗಳನ್ನು ಜೋಡಿಸಿ, ಅದಕ್ಕೆ ಸೆಣಬಿನ ಹಗ್ಗವನ್ನು ಬಳಸಿ ನಿರ್ದಿಷ್ಟ ಆಕಾರ ಮಾಡಿಕೊಂಡು ಬಳಿಕ ಹದಮಾಡಿಕೊಂಡ ಮಣ್ಣಿನಿಂದ ಮೆತ್ತಿ ಮೂರ್ತಿ ತಯಾರಿಸುತ್ತಿದ್ದಾರೆ. ಮಣ್ಣು ಮೆತ್ತಿ ಆಕಾರ ನೀಡಿದ ಮೂರ್ತಿಯನ್ನು ನಾಲ್ಕೈದು ದಿನಗಳವರೆಗೆ ಹಾಗೆ ಬಿಟ್ಟು ನಂತರ ಅಂತಿಮ ರೂಪ ನೀಡಲಾಗುತ್ತದೆ. ಹೀಗೆ ಹಂತ ಹಂತವಾಗಿ ಮೂರ್ತಿ ಸಿದ್ಧಪಡಿಸುವ ಕಾರ್ಯವನ್ನು ನೋಡುವುದೇ ಒಂದು ವಿಶೇಷ.
ಬಹುರೂಪಿ ಗಣೇಶ ವಿಗ್ರಹಗಳು: ವಿಶೇಷವಾಗಿ ದಾಸವಾಳದ ಹೂವಿನ ಮಧ್ಯೆ ಇರುವ ಗಣಪ, ಶಿವಲಿಂಗದಿಂದ ಉದ್ಭವಿಸುವ ರೀತಿಯ ಗಣಪ, ಗರುಡದ ಮೇಲೆ, ಆನೆ ಮೇಲೆ ಸವಾರಿ ಮಾಡಿಕೊಂಡು ಬರುವ ರೀತಿಯ ಗಣೇಶನ ವಿಗ್ರಹ, ನಂದಿ ಮೇಲೆ ಕುಳಿತ ಶಿವರೂಪಿ ಗಣಪನನ್ನು ತಯಾರಿಸಲಾಗಿದೆ. ಇದಲ್ಲದೆ ತ್ರಿಮುಖ ಆನೆಗಳ ಮೇಲಿರುವ ನವಮುಖ ಗಣಪ, ಡಮರುಗದ ಮೇಲೆ ನಿಂತ ರೀತಿ, ತಬಲದ ಮೇಲೆ ಕೂತಿರುವ, ಸೂಪರ್ ಆಕಾರದ, ಐದು ಹೆಡೆಯ ಸರ್ಪದ ಮೇಲೆ, ರಾಜಹಂಸದ ಮೇಲೆ ಕೂತ ಭಂಗಿ, ಬ್ರಹ್ಮ ಕಮಲದ ಮೇಲೆ, ಗೋಪಾಲ ಕೊಳಲು ಊದುತ್ತಿರುವ ರೀತಿ, ಕೃಷ್ಣ ರೂಪಿ, ಕಮಲದ ಹೂವಿನ ಮಧ್ಯೆ ಕುಳಿತ ಗಣಪ, ಮಹಾರಾಜ ಗಣೇಶ, ಮೂರು ಸಿಂಹಗಳ ಮೇಲೆ ಕುಳಿತಿರುವ, ಅರಳೆಲೆ ಹಾಗೂ ತ್ರಿಶೂಲ ಆಕಾರ, ಸಾಕ್ಷಾತ್ ಪರಮೇಶ್ವರನ ರೀತಿಯಲ್ಲಿರುವ ವಿಘ್ನೕಶ್ವರನ ಮೂರ್ತಿಗಳು ಗಮನ ಸೆಳೆಯುತ್ತಿವೆ.
ನೈಸರ್ಗಿಕ ಬಣ್ಣ ಲೇಪನ: ವಿಗ್ರಹ ತಯಾರಕರು ಮೂರ್ತಿಗಳ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಲು ನಿಸರ್ಗದತ್ತ ಬಣ್ಣಗಳನ್ನೇ ಬಳಕೆ ಮಾಡುತ್ತಿದ್ದಾರೆ. ಇನ್ನೇನು ಸಿದ್ಧಗೊಂಡ ವಿಗ್ರಹಗಳನ್ನು ಕೊಂಡೊಯ್ಯುವ ದಿನದಂದು ಅಂತಿಮವಾಗಿ ಬಣ್ಣ ಹಚ್ಚಿ ನೀಡುವುದೊಂದೇ ಬಾಕಿ ಎನ್ನುತ್ತಾರೆ ತಯಾರಕರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.