ಜಾನುವಾರುಗಳಿಗಿಲ್ಲ ನೆರಳು
Team Udayavani, May 17, 2019, 3:57 PM IST
ಸಾಂದರ್ಭಿಕ ಚಿತ್ರ
ಬಳ್ಳಾರಿ: ಕಳೆದ ವರ್ಷ ಹಿಂಗಾರು ಮಳೆ ಕೈ ಕೊಟ್ಟಿದ್ದರಿಂದ ರಾಜ್ಯ ಸರ್ಕಾರ ಜಿಲ್ಲೆಯ 8 ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಿದರೂ, ಜಿಲ್ಲಾಡಳಿತ ಮಾತ್ರ ಗೋಶಾಲೆಯನ್ನು ತೆರೆಯುವಲ್ಲಿ ನಿರ್ಲಕ್ಷ್ಯ ತಾಳುತ್ತಿದೆ. ಐದು ಕಡೆ ಮೇವು ಬ್ಯಾಂಕ್‌ನ್ನು ತೆರೆದಿರುವ ಜಿಲ್ಲಾಡಳಿತ, ಕೇವಲ ಕೂಡ್ಲಿಗಿ ಗಂಡುಬೊಮ್ಮನಹಳ್ಳಿಯಲ್ಲಿ ಮಾತ್ರ ‘ಗೋಶಾಲೆ’ಯನ್ನು ತೆರೆದಿದ್ದು, ಪೂಜಾರಹಳ್ಳಿಯಲ್ಲಿ ತೆರೆಯಲು ಮೀನಮೇಷ ಎಣಿಸುತ್ತಿದೆ.
ರಾಜ್ಯ ಸರ್ಕಾರ ಬರಪೀಡಿತವೆಂದು ಜಿಲ್ಲೆಯನ್ನು ಘೋಷಿಸುತ್ತಿದ್ದಂತೆ ನಿರ್ವಹಣಾ ಕ್ರಮಕೈಗೊಂಡ ಜಿಲ್ಲಾಡಳಿತ ಕಳೆದ ಫೆಬ್ರವರಿ 25 ರಂದು ಜಿಲ್ಲೆಯ ಕೂಡ್ಲಿಗಿ ತಾಲೂಕು ಗಂಡುಬೊಮ್ಮನಹಳ್ಳಿಯಲ್ಲಿ ‘ಗೋಶಾಲೆ’ ತೆರೆಯಿತು. ಸದ್ಯ ಈ ಗೋಶಾಲೆಯಲ್ಲಿ 3231 ಜಾನುವಾರುಗಳಿಗೆ ಮೇವು, ನೀರು ಪೂರೈಕೆ ಮಾಡಲಾಗುತ್ತಿದೆ. ಈವರೆಗೆ 1072 ಟನ್ ಮೇವು ಮಂಜೂರಾಗಿದ್ದು, 1006 ಟನ್ ಖರ್ಚಾಗಿದೆ. ಪ್ರತಿದಿನ 16 ಟನ್ ಮೇವು ವಿತರಿಸಲಾಗುತ್ತಿದ್ದು, ಸದ್ಯ 66 ಟನ್ ಮೇವು ದಾಸ್ತಾನಿದೆ. ಮುಂದಿನ 5-6 ದಿನಗಳಿಗೆ ಸಾಕಾಗಲಿದ್ದು, ಇನ್ನಷ್ಟು ಮೇವಿನ ಅಗತ್ಯವಿದೆ.
ನೆರಳಿನ ಕೊರತೆ: ಬರ ಆವರಿಸಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಗೋಶಾಲೆಯಲ್ಲಿ ಪುನವ್ಯರ್ವಸ್ಥೆ ಕಲ್ಪಿಸಿರುವ ಜಿಲ್ಲಾಡಳಿತ ಅದರಲ್ಲಿ ನೆರಳಿನ ವ್ಯವಸ್ಥೆ ಮಾಡುವುದನ್ನು ಮರೆತಂತಿದೆ. ಗೋಶಾಲೆಯಲ್ಲಿ 4 ಶಾಶ್ವತ ಶೆಡ್‌ಗಳಿದ್ದು, 20 ತಡಿಕೆಗಳಿಂದ ತಾತ್ಕಾಲಿಕ ಶೆಡ್ ನಿರ್ಮಿಸಲಾಗಿದೆ. ಈ ಶೆಡ್‌ಗಳಲ್ಲಿ ಸುಮಾರು ಸಾವಿರ ಜಾನುವಾರುಗಳು ನಿಲುಗಡೆಗೆ ಅವಕಾಶವಿದೆ. ಹಣವಂತರು ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳುತ್ತಾರೆ. ಬಡವರ, ದೇವರ ಜಾನುವಾರುಗಳು ಬಿಸಿಲಲ್ಲೇ ಇರಬೇಕಾದ ಪರಿಸ್ಥಿತಿಯಿದೆ. ನೀರು ಕುಡಿಯಲು 4 ತೊಟ್ಟಿ ನಿರ್ಮಿಸಲಾಗಿದ್ದು, ಕೆರೆ ದಂಡೆಯಲ್ಲೇ ಗೋಶಾಲೆ ಇದ್ದುದರಿಂದ ಕುಡಿವ ನೀರಿನ ಸಮಸ್ಯೆಯಿಲ್ಲ. ಕಳೆದ ವರ್ಷ 8 ಸಾವಿರ ಇದ್ದ ಜಾನುವಾರುಗಳ ಸಂಖ್ಯೆ ಈ ವರ್ಷ 3 ಸಾವಿರಕ್ಕೆ ಇಳಿಕೆಯಾಗಿದ್ದು, ಉಳಿದ ಜಾನುವಾರುಗಳೆಲ್ಲಿ ಎಂಬ ಪ್ರಶ್ನೆ ಕಾಡುತ್ತಿದೆ. ಅಲ್ಲದೇ, ಕಳೆದ ವರ್ಷ ಗೋಶಾಲೆಗೆ ಜಾನುವಾರು ಕರೆತರುತ್ತಿದ್ದ ರೈತರಿಗೆ ಊಟದ ವ್ಯವಸ್ಥೆಯಿದ್ದು, ಈ ಬಾರಿ ಕಡಿತಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಆರಂಭವಾಗದ ಗೋಶಾಲೆ: ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿಯಲ್ಲಿ ಮತ್ತೂಂದು ಗೋಶಾಲೆ ಆರಂಭವಾಗಬೇಕಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಂದ ಆದೇಶ ಲಭಿಸಿದ್ದು, ಆರಂಭಿಸುವಲ್ಲಿ ಅಧಿಕಾರಿಗಳು ವಿಳಂಬ ತಾಳುತ್ತಿದ್ದಾರೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಸಂಡೂರು ತಾಲೂಕಿನ ವಿಠuಲಾಪುರ, ಮೆಟ್ರಿಕಿ, ರಾಜಾಪುರ, ಕೂಡ್ಲಿಗಿ ತಾಲೂಕು ಗುಂಡಿನಹೊಳೆ ಗ್ರಾಮಗಳಲ್ಲಿ ಕಳೆದ ಫೆಬ್ರವರಿ ತಿಂಗಳಿಂದಲೇ ಮೇವು ಬ್ಯಾಂಕ್ ಆರಂಭಿಸಲಾಗಿದೆ. ಹೆಚ್ಚುವರಿಯಾಗಿ ಕೊಟ್ಟೂರು, ಉಜ್ಜಿನಿಯಲ್ಲೂ ಮೇವು ಬ್ಯಾಂಕ್ ಆರಂಭಿಸಲು ಸಂಬಂಧಪಟ್ಟ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೇ, ಕಳೆದ 2018-19ನೇ ಸಾಲಿನಲ್ಲಿ ಮಳೆಯಿಲ್ಲದೇ, ನಷ್ಟವಾದ ಬೆಳೆಗೆ ಬರಪರಿಹಾರ ಈವರೆಗೂ ಯಾವುದೇ ರೈತರಿಗೆ ವಿತರಿಸಿಲ್ಲ. ಈ ಕುರಿತು ರೈತರಿಂದ ಅಗತ್ಯ ದಾಖಲೆಗಳನ್ನಷ್ಟೇ ಸಂಗ್ರಹಿಸಿಕೊಳ್ಳಲಾಗುತ್ತಿದೆ.
ಬಳ್ಳಾರಿ ಜಿಲ್ಲೆಯನ್ನು ಆವರಿಸಿರುವ ಬರ ಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಲು ಜಿಲ್ಲೆಯಲ್ಲಿ 5 ಮೇವು ಬ್ಯಾಂಕ್ ತೆರೆಯಲಾಗಿದೆ. ಎಲ್ಲ ಕಡೆ ಅಗತ್ಯಕ್ಕೆ ತಕ್ಕಷ್ಟು ಮೇವು ಲಭ್ಯತೆಯಿದೆ. ಗಂಡು ಬೊಮ್ಮನಹಳ್ಳಿಯಲ್ಲಿ ಗೋಶಾಲೆ ತೆರೆಯಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಈ ವಾರದಲ್ಲಿ ಪೂಜಾರಹಳ್ಳಿಯಲ್ಲಿ ಮತ್ತೂಂದು ಗೋಶಾಲೆ ಆರಂಭಿಸಲಾಗುವುದು. 2 ಹಂತದ ಬರ ಪರಿಹಾರ ಬಂದಿದೆ. 40 ಸಾವಿರ ರೈತರ ಹೆಸರು ನೋಂದಣಿ ಕಾರ್ಯ ನಡೆಯುತ್ತಿದ್ದು, ಇನ್ನೊಂದು ವಾರದಲ್ಲಿ ಪರಿಹಾರ ವಿತರಿಸಲಾಗುವುದು.
•ಡಾ. ವಿ.ರಾಮ್ ಪ್ರಸಾತ್ ಮನೋಹರ್,
ಜಿಲ್ಲಾಧಿಕಾರಿ, ಬಳ್ಳಾರಿ.