ಅಂತರ್ಜಲ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಿ
•ಜಲಶಕ್ತಿ ಅಭಿಯಾನ ಅನುಷ್ಠಾನದಲ್ಲಿ ಬಳ್ಳಾರಿಗೆ 5ನೇ ಸ್ಥಾನ: ದಿಲ್ಲಾನ್
Team Udayavani, Jul 28, 2019, 10:55 AM IST
ಬಳ್ಳಾರಿ: ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಜಲಶಕ್ತಿ ಅಭಿಯಾನ ಅನುಷ್ಠಾನದ ಪೂರ್ವಭಾವಿ ಸಭೆಯಲ್ಲಿ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೀತು ದಿಲ್ಲಾನ್ ಮಾತನಾಡಿದರು.
ಬಳ್ಳಾರಿ: ವಿವಿಧ ಇಲಾಖೆಗಳ ಯೋಜನೆಗಳನ್ನು ಸಮೀಕರಿಸಿ ಜಲಶಕ್ತಿ ಅಭಿಯಾನದಡಿ ನಾನಾ ಕೆಲಸಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಮೂಲಕ ಜಲಸಂರಕ್ಷಣೆ ಮತ್ತು ಅಂತರ್ಜಲಮಟ್ಟ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೀತು ದಿಲ್ಲಾನ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಲಶಕ್ತಿ ಅಭಿಯಾನದ ಅನುಷ್ಠಾನಕ್ಕೆ ಸಂಬಂಧಿಸಿದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಲಶಕ್ತಿ ಅಭಿಯಾನದ ಪರಿಣಾಮಕಾರಿ ಅನುಷ್ಠಾನದ ವಿಷಯದಲ್ಲಿ ದೇಶದಲ್ಲಿಯೇ ಬಳ್ಳಾರಿ ಸದ್ಯ 5ನೇ ಸ್ಥಾನದಲ್ಲಿರುವುದು ಅತ್ಯಂತ ಹೆಮ್ಮೆಯ ವಿಷಯ. ಇದೇ ರೀತಿ ಅಂತರ್ಜಲಮಟ್ಟ ಹೆಚ್ಚಳ ಮತ್ತು ಅರಣ್ಯೀಕರಣದಂತ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಜಲಶಕ್ತಿ ಅಭಿಯಾನದ ಉದ್ದೇಶಗಳನ್ನು ಈಡೇರಿಸಬೇಕು ಎಂದು ಅವರು ಹೇಳಿದರು.
ದೇಶದಾದ್ಯಂತ ಅಂತರ್ಜಲ ಕೊರತೆ, ನೀರಿನ ಅಭಾವದ ಆಧಾರದ ಮೇಲೆ 1590 ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಜಿಲ್ಲೆಯ ಹರಪನಹಳ್ಳಿ, ಹಗರಿ ಬೊಮ್ಮನಹಳ್ಳಿ ತಾಲೂಕು ಆಯ್ಕೆಯಾಗಿವೆ. ಅಂತರ್ಜಲಮಟ್ಟ ತೀವ್ರವಾಗಿ ಕುಸಿದಿರುವ ಈ ತಾಲೂಕುಗಳಲ್ಲಿ ವಿವಿಧ ಜಲ ಸಂಬಂಧಿತ ಕ್ರಮಗಳನ್ನು ಕೈಗೊಂಡು ಅಂತರ್ಜಲಮಟ್ಟ ಹೆಚ್ಚಳ ಮಾಡಲಾಗುವುದು. ಈ ನಿಟ್ಟಿನಲ್ಲಿ ಪಾರಂಪರಿಕ ಜಲಮೂಲಗಳಾದ ಕೆರೆ, ಬಾವಿ, ನದಿಗಳ ರಕ್ಷಣೆ, ಜಲಸಂರಕ್ಷಣೆ, ಜಲಮರುಪೂರಣ, ಅರಣ್ಯೀಕರಣ ಮಾಡುವುದು ಜಲಶಕ್ತಿ ಅಭಿಯಾನದ ಪ್ರಮುಖ ಉದ್ದೇಶಗಳಾಗಿವೆ. ಮೊದಲ ಹಂತದ ಅಭಿಯಾನ ಆರಂಭವಾಗಿದ್ದು, ಸೆಪ್ಟೆಂಬರ್ 15ರವರೆಗೆ ನಡೆಯಲಿದೆ ಎಂದರು.
ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಮಾತನಾಡಿ, ನರೇಗಾ, ಗ್ರಾಮೀಣ ಅಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳನ್ನು ಸಮೀಕರಿಸಿ ಜಲಶಕ್ತಿ ಅಭಿಯಾನಕ್ಕೆ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಲಾಗುವುದು. ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅಭಿಯಾನದ ಯಶಸ್ಸಿಗೆ ಶ್ರಮಿಸಲಾಗುವುದು. ಈ ನಿಟ್ಟಿನಲ್ಲಿ ಕೃಷಿಹೊಂಡ ನಿರ್ಮಾಣ, ಕೆರೆ ಹೂಳೆತ್ತುವಿಕೆ, ಇಂಗು ಗುಂಡಿ ನಿರ್ಮಾಣ, ಬದುನಿರ್ಮಾಣ, ಗೋಕಟ್ಟೆ ನಿರ್ಮಾಣ, ಅರಣ್ಯೀಕರಣಕ್ಕೆ ಒತ್ತು, ಮಲ್ಟಿಚೆಕ್ ಡ್ಯಾಂ, ಚೆಕ್‌ಡ್ಯಾಂ ನಿರ್ಮಾಣ ಸೇರಿದಂತೆ ನಾನಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಕೃಷಿ, ಸಣ್ಣ ನೀರಾವರಿ, ಬೃಹತ್ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪಿಆರ್‌ಇಡಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಜಲಶಕ್ತಿ ಅಭಿಯಾನದ ಅನುಷ್ಠಾನಕ್ಕೆ ನರೇಗಾ ಅಡಿ ಮತ್ತು ತಮ್ಮ ಇಲಾಖೆಗಳ ರಾಜ್ಯ ಮತ್ತು ಕೇಂದ್ರ ಸರಕಾರದ ಅನುದಾನದ ಮೂಲಕ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಖನಿಜ ನಿಧಿ ಮತ್ತು ಎಚ್ಕೆಆರ್‌ಡಿಬಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಜಲಸಂರಕ್ಷಣೆ ಮತ್ತು ಅಂತರ್ಜಲಮಟ್ಟದ ಹೆಚ್ಚಳ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಜಿಪಂ ಸಿಇಒ ಕೆ. ನಿತೀಶ್ ಮಾತನಾಡಿದರು. ಈ ಸಂದರ್ಭದಲ್ಲಿ ಕೃಷಿ, ಸಣ್ಣನೀರಾವರಿ, ಬೃಹತ್ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.