ಸಚಿವರ ಕ್ಷೇತ್ರದಲ್ಲೇ ಕಾಂಗ್ರೆಸ್‌ಗೆ ಮುಖಭಂಗ
ಮತಬ್ಯಾಂಕ್‌ನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ, ತುಕಾರಾಂ ಕ್ಷೇತ್ರದಲ್ಲಿ 38675 ಇದ್ದ ಲೀಡ್ 1353ಕ್ಕೆ ಕುಸಿತ
Team Udayavani, May 25, 2019, 12:09 PM IST
ಬಳ್ಳಾರಿ: ‘ಕರ್ಣನ ಸಾವಿಗೆ ಸಾವಿರಾರು ಕಾರಣ’ ಎಂಬ ಗಾದೆ ಮಾತಿನಂತೆ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಹಿಂದೆಯೂ ಹಲವಾರು ಕಾರಣಗಳು ಅಡಗಿದ್ದು, ಫಲಿತಾಂಶದ ನಂತರ ಒಂದೊಂದೇ ಹೊರಬೀಳುತ್ತಿದೆ. ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಾವಿರಾರು ಮತಗಳ ಲೀಡ್ ನೀಡಿದ್ದ ವಿಧಾನಸಭಾ ಕ್ಷೇತ್ರಗಳಲ್ಲೂ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಲೀಡ್ ದೊರಕಿದ್ದು, ಕೇವಲ 7 ತಿಂಗಳಲ್ಲಿ ಆದ ಈ ಬದಲಾವಣೆ ಮೈತ್ರಿ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಸೇರಿ ಜಿಲ್ಲೆಯ ಕಾಂಗ್ರೆಸ್ ನಾಯಕರು, ಮುಖಂಡರಿಗೆ ಮರ್ಮಾಘಾತ ನೀಡಿದೆ.
ಗಣಿಜಿಲ್ಲೆ ಬಳ್ಳಾರಿ ದಶಕಗಳಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಇಲ್ಲಿ ಕಾಂಗ್ರೆಸ್ ತನ್ನದೇ ಆದ ಮತಬ್ಯಾಂಕ್ ಹೊಂದಿದೆ. ಪರಿಣಾಮ ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಜಯಗಳಿಸಿದ್ದರು. ಆದರೆ ಜಿಲ್ಲೆಯಲ್ಲಿನ ಕಾಂಗ್ರೆಸ್ ಮತಬ್ಯಾಂಕ್‌ನ್ನು ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಮುಖಂಡರು, ನಾಯಕರು ವಿಫಲರಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಜಿಲ್ಲೆಯ ಇಬ್ಬರು ಶಾಸಕರು ಸಚಿವರಾಗುವುದಕ್ಕೂ ಮುನ್ನ ನಡೆದ ಉಪಚುನಾವಣೆಯಲ್ಲಿ ಅವರ ಸ್ವಂತ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಸಾವಿರಾರು ಮತಗಳ ಲೀಡ್ ಲಭಿಸಿತ್ತು. ಆದರೆ, ಸಚಿವರಾದ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಭಾರಿ ಮುಖಭಂಗ ಅನುಭವಿಸಿದೆ. ಸಚಿವ ತುಕಾರಾಂ ಕ್ಷೇತ್ರ ಸಂಡೂರಲ್ಲಿ 1353 ಮತಗಳು ಕಾಂಗ್ರೆಸ್‌ಗೆ ಲೀಡ್ ನೀಡಿದರೆ, ಹಡಗಲಿ ಕ್ಷೇತ್ರದಲ್ಲಿ 14945 ಮತಗಳು ಬಿಜೆಪಿಗೆ ಲೀಡ್ ದೊರೆತಿದೆ. ಮತಬ್ಯಾಂಕ್‌ನ್ನು ಸಮರ್ಪಕವಾಗಿ ಬಳಸಿಕೊಳ್ಳದ ಆ ಪಕ್ಷದ ಮುಖಂಡರು, ನಾಯಕರು ಈ ಚುನಾವಣೆಯಲ್ಲಿ ಸೋತಿದ್ದಾರೆ ಹೊರತು ಕಾಂಗ್ರೆಸ್ ಪಕ್ಷ ಸೋತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಈಚೆಗೆ ನಡೆದ ಉಪಚುನಾವಣೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರ ಜಿಲ್ಲೆಯಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಅತಿಹೆಚ್ಚು 38,675 ಮತಗಳನ್ನು ಲೀಡ್ ನೀಡಿತ್ತು. ಅದೇ ರೀತಿ ಕಂಪ್ಲಿ 34,448, ಹಡಗಲಿ 31,419, ಹ.ಬೊ.ಹಳ್ಳಿ 30,262, ವಿಜಯನಗರ 29,460, ಬಳ್ಳಾರಿ ಗ್ರಾಮೀಣ 33,255, ಬಳ್ಳಾರಿ ನಗರ 23,273, ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ 22,029 ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಲೀಡ್ ನೀಡುವ ಮೂಲಕ ಅಂದಿನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿ.ಎಸ್.ಉಗ್ರಪ್ಪರನ್ನು 2.43 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ್ದರು. ಆದರೆ, ಉಪಚುನಾವಣೆ ನಡೆದ ಬಳಿಕ ಕೇವಲ 7 ತಿಂಗಳ ಅವಧಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರದ ನಾಲ್ಕು ವಿಧಾನಸಭೆ ಕ್ಷೇತ್ರಗಳನ್ನು ಹೊರತುಪಡಿಸಿದರೆ, ಪಶ್ಚಿಮ ತಾಲೂಕುಗಳಲ್ಲಿ ಬಿಜೆಪಿಗೆ ಭರ್ಜರಿ ಮತಗಳು ಲಭಿಸಿವೆ. ಹಡಗಲಿಯಲ್ಲಿ ಬಿಜೆಪಿಗೆ 14,945, ಹ.ಬೊ.ಹಳ್ಳಿ 21,766, ವಿಜಯನಗರದಲ್ಲಿ 18,494, ಕೂಡ್ಲಿಗಿಯಲ್ಲಿ 22,062 ಮತಗಳ ಲೀಡ್ ಲಭಿಸಿದ್ದು, ಬಿಜೆಪಿಯ ವೈ.ದೇವೇಂದ್ರಪ್ಪ 55,707 ಮತಗಳ ಅಂತರದಿಂದ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು 13,945 ಮತಗಳ ಲೀಡ್ ನೀಡಿರುವ ಬಳ್ಳಾರಿ ಗ್ರಾಮೀಣ ಕ್ಷೇತ್ರ ಉಗ್ರಪ್ಪರನ್ನು ಕೈ ಹಿಡಿದಿದೆ ಹೊರತು, ಉಳಿದಂತೆ ಬಳ್ಳಾರಿ ನಗರ 4234, ಕಂಪ್ಲಿ 3431, ಸಂಡೂರು 1353 ಮತಗಳ ಲೀಡ್ ಸಿಕ್ಕರೂ ಪ್ರಯೋಜನವಾಗಿಲ್ಲ.
ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದರೂ, ಇಲ್ಲಿನ ಮತಬ್ಯಾಂಕ್‌ನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಆ ಪಕ್ಷದ ಮುಖಂಡರು, ನಾಯಕರು ಪದೇ ಪದೇ ಎಡವುತ್ತಿದ್ದಾರೆ. ಕೈ ಪಕ್ಷದಡಿ ಯಾರು ನಿಂತರೂ ಶೇಕಡಾವಾರು ಮತಗಳು ಲಭಿಸಲಿದ್ದು, ಉಪಚುನಾವಣೆಯಲ್ಲಿ ಲಭಿಸಿದ 2.43 ಲಕ್ಷ ಮತಗಳ ಅಂತರವನ್ನು 7 ತಿಂಗಳ ಅವಧಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯವರು ತಲುಪುವುದು ಕಷ್ಟಸಾಧ್ಯ. ಒಂದುವೇಳೆ ತಲುಪಿದರೂ, ಅಲ್ಪ ಮತಗಳ ಅಂತರದಿಂದಾರೂ ಕಾಂಗ್ರೆಸ್ ಗೆಲುವು ಖಚಿತ ಎಂದು ಉಪಚುನಾವಣೆಯ ಗುಂಗಿನಲ್ಲೇ ಮೈಮರೆತ ಕಾಂಗ್ರೆಸ್ ನಾಯಕರು, ಮುಖಂಡರಿಗೆ ಜಿಲ್ಲೆಯ ಮತದಾರ ಫಲಿತಾಂಶದ ಮೂಲಕ ಚಾಟಿಯೇಟು ನೀಡಿದ್ದಾನೆ.
ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.