ಜಾತಿ ತಿರುವು ಪಡೆದ ‘ಬುಡಾ’ ವಿವಾದ
ದಮ್ಮೂರು ಶೇಖರ್ ಬೆನ್ನಿಗೆ ನಿಂತ ಇಡೀ ಕುರುಬ ಸಮುದಾಯ ಮರು ನೇಮ ಕಕ್ಕೆ ಆಗ್ರಹ
Team Udayavani, Nov 1, 2019, 12:28 PM IST
ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಅಧ್ಯಕ್ಷರ ನೇಮಕ ವಿವಾದ ಇದೀಗ ಜಾತಿ ತಿರುವು ಪಡೆದಿದ್ದು, ದಮ್ಮೂರು ಶೇಖರ್ ಬೆನ್ನಿಗೆ ನಿಂತಿರುವ ಕುರುಬ ಸಮುದಾಯ ಅವರನ್ನೇ ಮರು ನೇಮಕ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.
ನೇಮಕಾತಿ ಹಿಂಪಡೆದಿರುವ ಬಗ್ಗೆ ಅಧಿಕೃತ ಆದೇಶ ಹೊರ ಬೀಳದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರೇ ಶೀಘ್ರ ಜಿಲ್ಲೆಯ ಎರಡೂ ಬಣಗಳ ಸಭೆ ಕರೆದು ವಿವಾದಕ್ಕೆ ತೆರೆ ಎಳೆಯಲಿದ್ದಾರೆ ಎನ್ನಲಾಗುತ್ತಿದೆ. ಹಲವು ತಿಂಗಳಿಂದ ಖಾಲಿಯಿದ್ದ ಬಳ್ಳಾರಿ ನಗರಾಭಿವೃದ್ಧಿ ಪ್ರಾ ಧಿಕಾರ ಅಧ್ಯಕ್ಷ ಸ್ಥಾನಕ್ಕೆ ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಶಿಫಾರಸ್ಸಿನಿಂದ ದಮ್ಮೂರು ಶೇಖರ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಕಳೆದ ಅ.25ರಂದು ಆದೇಶ ಹೊರಡಿಸಿತ್ತು. ಬಿಜೆಪಿ ಬಳ್ಳಾರಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಮೌಖೀಕವಾಗಿ ಆದೇಶ ಹಿಂಪಡೆಯುವಂತೆ ಸೂಚಿಸಿದ್ದರೂ ಪ್ರಯೋಜನವಾಗಿಲ್ಲ.
ಇದರಿಂದ ರಾಜೀನಾಮೆ ಸಲ್ಲಿಸಿದ್ದ ಜಿಲ್ಲಾಧ್ಯಕ್ಷರ ನಿರ್ಣಯಕ್ಕೆ ಪಕ್ಷದ ಹಲವು ಹಿರಿಯ ಮುಖಂಡರು, ಕಾರ್ಯಕರ್ತರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಸಾಥ್ ನೀಡಿದರು.
ಇದರಿಂದ ಎಚ್ಚೆತ್ತುಕೊಂಡು ಸಿಎಂ ಯಡಿಯೂರಪ್ಪ ಕೂಡಲೇ ಆದೇಶ ಹಿಂಪಡೆಯುವುದಾಗಿ ಮಾಧ್ಯಮಗಳ ಎದುರು ಹೇಳಿಕೆ ನೀಡಿ, ಪ್ರಕಟಣೆ ಹೊರಡಿಸಿದರು. ಆದರೀಗ ಎರಡು ದಿನಗಳು ಕಳೆದರೂ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಹಾಗಾಗಿ ಬುಡಾ ಅಧ್ಯಕ್ಷರ ನೇಮಕಾತಿ ಗೊಂದಲ ಮುಗಿಯದಾಗಿದೆ.
ವಿವಾದಕ್ಕೆ ಜಾತಿ ತಿರುವು: ಇದೀಗ ಜಿಲ್ಲೆಯ ಇಡೀ ಕುರುಬ ಸಮುದಾಯ ದಮ್ಮೂರು ಶೇಖರ್ ಅವರ ಬೆಂಬಲಕ್ಕೆ ನಿಂತಿದ್ದು, ಅವರನ್ನೇ ಮುಂದುವರಿಸುವಂತೆ ಒತ್ತಾಯಿಸುತ್ತಿದೆ. ಈ ಕುರಿತು ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವ ಸಮುದಾಯ ಮುಖಂಡರು ದಮ್ಮೂರು ಶೇಖರ್ ಅವರನ್ನೇ ಮುಂದುವರಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ಮರುದಿನವೇ ಆದೇಶ ಹಿಂಪಡೆದಿರುವುದು ಸಮುದಾಯಕ್ಕೆ ಮಾಡಿದ ಅಪಮಾನ. ಜಿಲ್ಲೆಯ 60 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಬುಡಾ ಅಧ್ಯಕ್ಷ ಸ್ಥಾನ ಸಮುದಾಯಕ್ಕೆ ಲಭಿಸಿದೆ. ದಮ್ಮೂರು ಶೇಖರ್ ಅವರನ್ನು ಮುಂದುವರಿಸದಿದ್ದಲ್ಲಿ ಕುರುಬ ಸಮುದಾಯ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದೆ.
ಬಾರದ ಅಧಿಕೃತ ಆದೇಶ: ಆದೇಶ ರದ್ದಾಗಿರುವ ಕುರಿತ ಆದೇಶ ಪ್ರತಿ ಬಳ್ಳಾರಿ ಜಿಲ್ಲಾ ಧಿಕಾರಿಗಳಿಗೆ ಮತ್ತು ಬುಡಾ ಅಧ್ಯಕ್ಷರಾಗಿ ಅಧಿ ಕಾರ ಸ್ವೀಕರಿಸಿದ್ದ ದಮ್ಮೂರು ಶೇಖರ್ ಅವರಿಗೂ ತಲುಪಿಲ್ಲ. ಹಾಗಾಗಿ ದಮ್ಮೂರು ಶೇಖರ್ ಅವರೇ ಬುಡಾ ಅಧ್ಯಕ್ಷರಾಗಿ ಮುಂದುವರಿದಿದ್ದು, ಬಳ್ಳಾರಿ ರೆಡ್ಡಿಗಳ ಪ್ರಭಾವ ಮೇಲುಗೈ ಸಾಧಿಸಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಒಟ್ಟಾರೆ ಬುಡಾ ಅಧ್ಯಕ್ಷರ ನೇಮಕ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷರೇ ಎರಡೂ ಬಣಗಳ ಸಭೆ ಕರೆದು ನಿರ್ಣಯ ಕೈಗೊಂಡು ವಿವಾದಕ್ಕೆ ಶೀಘ್ರ ತೆರೆ ಎಳೆಯಲಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ದಮ್ಮೂರು ಶೇಖರ್ ಅವರನ್ನೇ ಮುಂದುವರಿಸುವರೇ ಅಥವಾ ಜಿಲ್ಲೆಯ ಕೋರ್ ಕಮಿಟಿ ಸೂಚನೆ ಮೇರೆಗೆ ಬೇರೆಯವರನ್ನು ನೇಮಿಸುವರೋ ಕಾದು ನೋಡಬೇಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.