ಬಳ್ಳಾರಿ ವಿವಿಧೆಡೆ ಇಕೋ ಪಾರ್ಕ್ ನಿರ್ಮಾಣ
•ತಾಲೂಕಿಗೆ 2 ಉದ್ಯಾನ•ಮಹಿಳಾ ಸ್ವಸಹಾಯ ಸಂಘಗಳಿಗೆ ಉದ್ಯೋಗಕ್ಕೆ ಅವಕಾಶ
Team Udayavani, May 22, 2019, 11:33 AM IST
ಬಳ್ಳಾರಿ: ಇಲ್ಲಿನ ಜಿಪಂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪರಿಸರ ಸ್ನೇಹಿ (ಇಕೊ ಪಾರ್ಕ್) ಉದ್ಯಾನವನ ನಿರ್ಮಿಸಲು ಸಜ್ಜಾಗುತ್ತಿದೆ. ಈ ಮೂಲಕ ಗ್ರಾಮಗಳಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸುವುದರ ಜತೆಗೆ ಕೈ ತೋಟದಲ್ಲಿ ಬೆಳೆಯುವ ಉತ್ಪನ್ನಗಳಿಗೆ ಅಲ್ಲೇ ಮಾರಾಟ ವ್ಯವಸ್ಥೆ ಮಾಡುವ ಮೂಲಕ ಸ್ಥಳೀಯ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಮುಂದಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ಗುಳೆ ಪದ್ಧತಿ ನಿಯಂತ್ರಿಸುವ ಸಲುವಾಗಿ ಈಗಾಗಲೇ ಹಲವಾರು ಯೋಜನೆ ಜಾರಿಗೆ ತಂದಿರುವ ಜಿಪಂ ಅಧಿಕಾರಿಗಳು, ಇದೀಗ ಸಾಮಾಜಿಕ ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಪ್ರತಿ ತಾಲೂಕಿಗೆ 2 ಪರಿಸರ ಸ್ನೇಹಿ ಉದ್ಯಾನವನಗಳನ್ನು ಗ್ರಾಮೀಣ ಭಾಗದಲ್ಲಿ ನಿರ್ಮಿಸಲು ಸಿದ್ಧತೆ ನಡೆಸಿದೆ. ಇದರಲ್ಲಿ ಕೈ ತೋಟ, ಹಣ್ಣಿನ ಮರ ಬೆಳೆಸುವುದು, ಮಕ್ಕಳ ಆಟಕ್ಕೆ ಅಗತ್ಯ ಪರಿಕರ ಅಳವಡಿಸುವುದರ ಜತೆಗೆ ಸ್ಥಳೀಯ ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ಮೂಲಕ ಅವರನ್ನು ಆರ್ಥಿಕವಾಗಿಯೂ ಸಬಲರನ್ನಾಗಿ ಮಾಡಲು ಚಿಂತನೆ ನಡೆಸಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜಮೀನು ಸರ್ವೇ ಕಾರ್ಯಗಳು ಪ್ರಗತಿಯಲ್ಲಿವೆ.
ಪರಿಸರ ಸ್ನೇಹಿ ಉದ್ಯಾನವನ ನಿರ್ಮಾಣಕ್ಕೆಂದು ಈಗಾಗಲೇ ಜಿಲ್ಲೆಯ ಹಡಗಲಿ ತಾಲೂಕು ಸೋವೇನಹಳ್ಳಿಯಲ್ಲಿ 20 ಎಕರೆ ಜಮೀನು ಲಭ್ಯವಿದ್ದು, ಸರ್ವೇ ಕಾರ್ಯ ನಡೆಯುತ್ತಿದೆ. ಜತೆಗೆ ಇಟಗಿ ಗ್ರಾಮದಲ್ಲಿ 5 ಎಕರೆ ಜಮೀನು ಗುರುತಿಸಲಾಗಿದೆ. ಅದರಂತೆ ಇನ್ನುಳಿದ ಬಳ್ಳಾರಿ ತಾಲೂಕು ಗೆಣಿಕೆಹಾಳು, ಎಂ.ಗೋನಾಳು, ಎಮ್ಮಿಗನೂರು, ಚಾನಾಳು, ಹ.ಬೊ.ಹಳ್ಳಿ ತಾಲೂಕಿನಲ್ಲಿ ಬಾಚಿಗೊಂಡನಹಳ್ಳಿ, ಬನ್ನಿಗೋಳ, ಹೊಸಪೇಟೆ ತಾಲೂಕು ಡಣನಾಯಕನಕೆರೆ, ನಂದಿಬಂಡೆ, ಕೂಡ್ಲಿಗಿ ತಾಲೂಕು ಗುಡೇಕೋಟೆ, ಸಂಡೂರು ತಾಲೂಕು ಯಶವಂತನಗರ, ತೋರಣಗಲ್ಲು, ವಿಠಲಾಪುರ, ಸಿರುಗುಪ್ಪ ತಾಲೂಕಿನಲ್ಲಿ ಬಿ.ಎಂ.ಸೂಗೂರು, ಕೆಂಚನಗುಡ್ಡ, ಕುಡದರಹಾಳು ಗ್ರಾಮಗಳಲ್ಲಿ ಈ ಉದ್ಯಾನವನ ನಿರ್ಮಿಸಲು ಜಮೀನನ್ನು ಗುರುತಿಸಲಾಗಿದೆ. ಕನಿಷ್ಠ 4 ಎಕರೆ ಜಮೀನು ಬೇಕಿದ್ದು, ಅದಕ್ಕಾಗಿ ಸಂಬಂಧಪಟ್ಟ ಆಯಾ ಗ್ರಾಪಂ ಅಧಿಕಾರಿಗಳು ಸರ್ವೇ ಕಾರ್ಯ ಮುಂದುವರಿಸಿದ್ದಾರೆ.
ತೋಟಗಾರಿಕೆ ಇಲಾಖೆಯು ಉದ್ಯಾನವನದಲ್ಲಿ ಮೆಕ್ಸಿಕನ್ ಹುಲ್ಲಿನ ಲಾನ್ ನಿರ್ಮಿಸಲಿದೆ. ಹೂವಿನ ಗಿಡಗಳ ಮಡಿ ನಿರ್ಮಿಸಲಾಗುತ್ತದೆ. ಉದ್ಯಾನದ ಮುಖ್ಯರಸ್ತೆಗಳ ಎರಡೂ ಬದಿಗಳಲ್ಲಿ ಅಲಂಕಾರಿಕ ಹೂವಿನ ಗಿಡ ಬೆಳೆಸುವ ಮೂಲಕ ಜನರನ್ನು ಆಕರ್ಷಿಸುವಂತೆ ನಿರ್ಮಿಸಲಾಗುತ್ತದೆ. ಇವುಗಳೊಂದಿಗೆ ವಿವಿಧ ಹಣ್ಣಿನ ಗಿಡಗಳು, ಇತರೆ ತೋಟಗಾರಿಕೆ ಗಿಡ ಬೆಳೆಸಲು ಯೋಜನೆ ರೂಪಿಸಲಾಗಿದೆ.
ಪರಿಸರ ಸ್ನೇಹಿ ಉದ್ಯಾನವನ (ಇಕೋ ಪಾಕ್) ನಿರ್ಮಾಣಕ್ಕೆ ಕನಿಷ್ಠ 4 ಎಕರೆ ಜಮೀನು ಅಗತ್ಯವಿದೆ. ಅಗತ್ಯ ಕೆಲಸ ಕಾರ್ಯಗಳನ್ನೆಲ್ಲ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಮ ಕೈಗೊಳ್ಳಲಾಗುತ್ತದೆ. ಇತರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಚ್ಕೆಆರ್‌ಡಿಬಿ ಅನುದಾನದಲ್ಲಿ ನಿರ್ಮಿಸಲಾಗುತ್ತದೆ. ಈಗಾಗಲೇ ಜಮೀನು ಗುರುತಿಸಲಾಗಿದ್ದು, ಕಾಮಗಾರಿಗಳನ್ನಷ್ಟೇ ಕೈಗೆತ್ತಿಕೊಳ್ಳಬೇಕಾಗಿದೆ.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪರಿಸರ ಸ್ನೇಹಿ (ಇಕೋ ಪಾರ್ಕ್) ಉದ್ಯಾನ ನಿರ್ಮಿಸಲಾಗುವುದು. ಇದಕ್ಕಾಗಿ ಈಗಾಗಲೇ ಜಿಲ್ಲೆಯ ಹಡಗಲಿ ತಾಲೂಕು ಸೋವೇನಹಳ್ಳಿಯಲ್ಲಿ ಜಮೀನು ಸರ್ವೇ ಕಾರ್ಯ ನಡೆದಿದೆ. ಇನ್ನುಳಿದ ಎಲ್ಲ ತಾಲೂಕುಗಳಲ್ಲಿ ಜಮೀನು ಗುರುತಿಸಲು ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಶೀಘ್ರದಲ್ಲೇ ಚಾಲನೆ ಪಡೆದುಕೊಳ್ಳಲಿದೆ. ಸಾಮಾಜಿಕ ಅರಣ್ಯ ಇಲಾಖೆ, ಕೃಷಿ, ತೋಟಗಾರಿಕೆ ಜತೆಗೆ ಆಯಾ ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಇಕೋ ಪಾರ್ಕ್ ನಿರ್ಮಿಸಲಾಗುತ್ತದೆ. ಉದ್ಯಾನವನಗಳಿಂದ ಉತ್ತಮ ವಾತಾವರಣ ನಿರ್ಮಿಸುವುದರ ಜತೆಗೆ ಸ್ಥಳೀಯ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುವುದು ಮುಖ್ಯ ಉದ್ದೇಶವಾಗಿದೆ.
•ಕೆ.ನಿತೀಶ್
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಪಂ.
ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.