ಸಮಸ್ಯೆಗೆ ಸ್ಪಂದಿಸುವ ಅಭ್ಯರ್ಥಿಗಳಿಗೆ ರೈತರ ಮತ: ದರೂರು
ತುಂಗಭದ್ರಾ ಡ್ಯಾಂನಲ್ಲಿ ಹೂಳು ತುಂಬಿರುವ ಬಗ್ಗೆ ಸಂಸತ್‌ನಲ್ಲಿ ಚರ್ಚಿಸಬೇಕು
Team Udayavani, Apr 11, 2019, 2:51 PM IST
ಬಳ್ಳಾರಿ: ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಳ್ಳಾರಿ: ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ವಿವಿಧ ಪಕ್ಷಗಳಿಂದ
ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವವರನ್ನು
ಬೆಂಬಲಿಸುವುದಾಗಿ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಕೇವಲ
ತಾತ್ಕಾಲಿಕ ಯೋಜನೆಗಳನ್ನು ಜಾರಿಗೆ ತರುವಂತಾಗಬಾರದು. ತುಂಗಭದ್ರಾ
ಜಲಾಶಯ ಮಾದರಿಯಲ್ಲಿ ದೀರ್ಘಾವಧಿ ಯೋಜನೆಗಳನ್ನು ಜಾರಿಗೆ
ತರಬೇಕು. ಈ ನಿಟ್ಟಿನಲ್ಲಿ ಕರ್ನಾಟಕ -ಆಂಧ್ರ-ತೆಲಂಗಾಣ ಮೂರು
ರಾಜ್ಯಗಳ ಒಟ್ಟು ಹನ್ನೆರಡೂವರೆ ಲಕ್ಷ ಎಕರೆಗೆ ನೀರುಣಿಸುವ ತುಂಗಭದ್ರಾ
ಜಲಾಶಯದಲ್ಲಿ 33 ಟಿಎಂಸಿ ನೀರು ಸಂಗ್ರಹವಾಗಿದೆ. ರಾಜ್ಯದ ಮೂರು ಜಿಲ್ಲೆಗಳು ಸಹ ಸವಳು ಭೂಮಿಯಂತಾಗಿದ್ದು, ಭತ್ತ ಬಿಟ್ಟರೆ
ಬೇರೇನು ಬೆಳೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಭದ್ರಾ
ಮೇಲ್ದಂಡೆ ಯೋಜನೆಗೆ 30 ಟಿಎಂಸಿ, ತುಂಗಾ ಮೇಲ್ದಂಡೆ ಯೋಜನೆಗೆ
ಏಳೂವರೆ ಟಿಎಂಸಿ, ಸಿಂಗಟಾಲೂರು ಯೋಜನೆಗೆ 18 ಟಿಎಂಸಿ ನೀರು
ಹೋಗಲಿದೆ. ಹೀಗಾಗಿ ಜಿಲ್ಲೆಯ ರೈತರಿಗೆ ನೀರಿನ ಅವಶ್ಯಕತೆ ಇದ್ದು,
ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯಲು ಸಂಸತ್
ನಲ್ಲಿ ಚರ್ಚಿಸಬೇಕು. ಅಂತಹ ಅಭ್ಯರ್ಥಿಗಳನ್ನು ರೈತರು ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.
ಕೃಷ್ಣಾ ನದಿಯಿಂದ ಪ್ರತಿವರ್ಷ ಹೆಚ್ಚುವರಿಯಾಗಿ ಹರಿಯುವ ನೀರನ್ನು
ಪರ್ಯಾಯ ಕಾಲುವೆ ನಿರ್ಮಿಸಿ ತುಂಗಭದ್ರಾ-ಕೃಷ್ಣಾ ನದಿ ಜೋಡಣೆ
ಮಾಡಬೇಕು. ದಶಕದ ಹಿಂದೆ ರೈತರಿಂದ ವಶಪಡಿಸಿಕೊಂಡಿರುವ ಜಮೀನುಗಳಲ್ಲಿ ಕೂಡಲೇ ಕೈಗಾರಿಕೆ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಭೂ ಸಂತ್ರಸ್ತ ಕುಟುಂಬಕ್ಕೆ ಉದ್ಯೋಗ ಒದಗಿಸಬೇಕು. ಇಲ್ಲಿನ ನೀರು, ಗಣಿ, ಜಮೀನು
ಎಲ್ಲವನ್ನು ಪಡೆದುಕೊಳ್ಳುತ್ತಿರುವ ಜಮೀನುಗಳ ಮಾಲೀಕರು ಕೈಗಾರಿಕೆ
ಸ್ಥಾಪನೆ ಮಾಡಿ ಸ್ಥಳೀಯ ಉದ್ಯೋಗ ಕೊಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಅವಕಾಶ ನೀಡದೆ ಕೈಗಾರಿಕೆಗಳನ್ನೇ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸರ್ಕಾರಿ ಇಲಾಖೆಗಳನ್ನೆಲ್ಲ
ಒಂದೆಡೆ ಇರುವ ಸಲುವಾಗಿ ಮಿನಿ ವಿಧಾನಸೌಧಗಳನ್ನು ನಿರ್ಮಿಸಲಾಗಿದೆ.
ಆದರೆ, ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಸರ್ಕಾರಿ ಕಚೇರಿಗಳು ಅಲ್ಲೊಂದು,
ಇಲ್ಲೊಂದು ಎಂಬಂತಾಗಿದೆ. ಆದ್ದರಿಂದ ಅನ್ಯ ಕೆಲಸ ಕಾರ್ಯ
ನಿಮಿತ್ತ ಜಿಲ್ಲಾ ಕೇಂದ್ರಕ್ಕೆ ಆಗಮಿಸುವ ಸಾರ್ವಜನಿಕರು, ರೈತರ
ಅನುಕೂಲಕ್ಕಾಗಿ ನಗರದಲ್ಲೂ ಮಿನಿ ವಿಧಾನಸೌಧವನ್ನು ನಿರ್ಮಿಸಬೇಕು.
ಈ ನಿಟ್ಟಿನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ರಾಜಕೀಯ ಪಕ್ಷಗಳ ಅಭ್ಯರ್ಥಿ ಕ್ರಮ ಕೈಗೊಳ್ಳಬೇಕು.
ಹಗರಿ (ವೇದಾವತಿ) ನದಿಯಲ್ಲಿ ತಡೆಗೋಡೆಗಳನ್ನು ನಿರ್ಮಿಸುವ
ಮೂಲಕ ಅಂತರ್ಜಲವನ್ನು ಹೆಚ್ಚಿಸಬೇಕು. ಸುತ್ತಮುತ್ತಲ ರೈತರಿಗೆ
ಅನುಕೂಲ ಕಲ್ಪಿಸಬೇಕು. ರೈತರ ಈ ಎಲ್ಲ ಬೇಡಿಕೆಗಳ ಬಗ್ಗೆ ಚರ್ಚಿಸುವ, ಸಂಸತ್ ನಲ್ಲಿ ಚರ್ಚಿಸುವ ಅಭ್ಯರ್ಥಿಗಳನ್ನು ರೈತರು ಬೆಂಬಲಿಸಲಿದ್ದಾರೆ. ಇದೇ ಏ.20 ರೊಳಗಾಗಿ ಅಭ್ಯರ್ಥಿಗಳು ಭರವಸೆ ನೀಡಬೇಕು. ಇಲ್ಲದಿದ್ದರೆ ಏ.21 ರಿಂದ
ರೈತರಿಗೆ ಇಂಥ ಅಭ್ಯರ್ಥಿಗಳಿಗೆ ಮತ ನೀಡುವಂತೆ ದೂರವಾಣಿ ಕರೆ ಮಾಡಿ
ಮನವಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗಂಗಾವತಿ ವೀರೇಶ್, ಡಿ.ಶಿವಯ್ಯ, ಪಂಪಾಪತಿ,
ನಾಗನಗೌಡ, ಮಲ್ಲಪ್ಪ, ರಂಜಾನ್ ಸಾಬ್, ಸಿದ್ರಾಮನಗೌಡ, ಶ್ರೀಧರ್, ಕೆ.ರಾಜಶೇಖರ್, ಶರಣನಗೌಡ ಸೇರಿದಂತೆ ಇನ್ನಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.