ಟಿಬಿ ಡ್ಯಾಂನಿಂದ ದಾಖಲೆ ನೀರು ಬಳಕೆ
ಮಾ.31ರವರೆಗೆ 177.539 ಟಿಎಂಸಿ ಅಡಿ ನೀರು ಬಳಕೆ ಸಾಧ್ಯತೆ ದಶಕದ ಬಳಿಕ ಎರಡನೇ ಬೆಳೆಗೂ ಲಭಿಸಿದ ನೀರು
Team Udayavani, Feb 19, 2020, 12:48 PM IST
ಬಳ್ಳಾರಿ: ಕರ್ನಾಟಕ-ಆಂಧ್ರಪ್ರದೇಶ ಜನರ ಜೀವನಾಡಿ ತುಂಗಭದ್ರಾ ಜಲಾಶಯದಿಂದ ಈ ಬಾರಿ ದಾಖಲೆ ಪ್ರಮಾಣದ ನೀರು ಬಳಕೆ ಮಾಡಿಕೊಳ್ಳಲಾಗಿದೆ. ಕೃಷಿ, ಕುಡಿಯುವ ನೀರು ಸೇರಿ ಈಗಾಗಲೇ 160ಕ್ಕೂ ಹೆಚ್ಚು ಟಿಎಂಸಿ ಅಡಿ ನೀರು ಬಳಕೆಯಾಗಿದೆ. ಮಾ.31ರೊಳಗಾಗಿ 177.539
ಟಿಎಂಸಿ ನೀರು ಬಳಕೆಯಾಗುವ ಸಾಧ್ಯತೆಯಿದ್ದು, ಕಳೆದ 11 ವರ್ಷಗಳಲ್ಲೇ ಅತೀ ಹೆಚ್ಚು ನೀರು ಈ ಬಾರಿ ಬಳಕೆಯಾದಂತಾಗಿದೆ.
ಒಂದು ದಶಕದಿಂದ ಮಳೆ ಕೊರತೆ ಉಂಟಾಗಿ ನಿರೀಕ್ಷಿತ ಪ್ರಮಾಣದ ನೀರು ಜಲಾಶಯಕ್ಕೆ ಹರಿದು ಬಂದಿರಲಿಲ್ಲ. ಪರಿಣಾಮ ಕೃಷಿ ಕಾರ್ಯಕ್ಕೂ ಸರಿಯಾಗಿ ನೀರು ದೊರಕಿರಲಿಲ್ಲ. ಜಲಾಶಯದ ನೀರನ್ನು ಅವಲಂಬಿಸಿರುವ ರೈತರಿಗೆ ಎರಡು ಬೆಳೆ ಬೆಳೆಯಲು ನೀರು ಸಿಕ್ಕಿರಲಿಲ್ಲ. 2018ರಲ್ಲಿ ಮುಂಗಾರು ಉತ್ತಮವಾಗಿ ಸುರಿದು ಜಲಾಶಯ ಭರ್ತಿಯಾದರೂ ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ಎರಡನೇ ಬೆಳೆಗೆ ನೀರು ಸಿಗದೆ ಸಮಸ್ಯೆ ಉಂಟಾಯಿತು.
ಆದರೆ 2019ರಲ್ಲಿ ಮಲೆನಾಡು ಭಾಗ ಹಾಗೂ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾದ ಪರಿಣಾಮ ತುಂಗಭದ್ರಾ ಜಲಾಶಯ ಎರಡು ಬಾರಿ ಭರ್ತಿಯಾಗಿ ಕುಡಿಯುವ ನೀರಲ್ಲದೆ, ಎರಡನೇ ಬೆಳೆಗೂ ರೈತರಿಗೆ ನೀರು ಒದಗಿಸಲಾಗಿದೆ. ತುಂಗಭದ್ರಾ ಜಲಾಶಯದ ನೀರು ಬಳಕೆಗೆ ಸಂಬಂ ಧಿಸಿದಂತೆ ಫೆ.15ರಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಸಭೆ ನಡೆದಿದ್ದು, ಇದರಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಕೆ ಮಾಡಿಕೊಂಡಿರುವ ವಿಷಯ ಚರ್ಚೆಯಾಗಿದೆ.
212 ಟಿಎಂಸಿ ಅಡಿ ಅಂದಾಜು ಯೋಜನೆ
ತುಂಗಭದ್ರಾ ಜಲಾಶಯ ನಿರ್ಮಾಣವಾದ ಬಳಿಕ ಜಲಾಶಯದಲ್ಲಿ 212 ಟಿಎಂಸಿ ಅಡಿ ನೀರು ಹರಿದು ಬರಲಿದೆ ಎಂದು ಅಂದಾಜಿಸಿ ಯೋಜನೆ ರೂಪಿಸಲಾಗಿತ್ತು. ಈ ಪೈಕಿ ಕರ್ನಾಟಕಕ್ಕೆ 138.99 ಟಿಎಂಸಿ ಅಡಿ, ಆಂಧ್ರಪ್ರದೇಶಕ್ಕೆ 66.5
ಟಿಎಂಸಿ ಅಡಿ, ತೆಲಂಗಾಣಕ್ಕೆ 6.5 ಟಿಎಂಸಿ ಅಡಿ ನೀರನ್ನು ನೀಡಬೇಕು ಎಂದು ಉಭಯ ರಾಜ್ಯಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದಂತೆ ಉಭಯ ರಾಜ್ಯಗಳಿಗೂ ಸಮರ್ಪಕವಾಗಿ ನೀರು ಹಂಚಿಕೆಯಾಗುತ್ತಿತ್ತು. ಆದರೆ, ಕಳೆದ ಒಂದು ದಶಕದಲ್ಲಿ ಮಳೆ ಅಭಾವದಿಂದ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬರಲಿಲ್ಲ. ಇದರಿಂದ ಸಮಸ್ಯೆ ಉಂಟಾಗಿತ್ತು. ಆದರೆ 2019ರಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯದ ಅತೀ ಹೆಚ್ಚು ನೀರು ಸದ್ಬಳಕೆಯಾಗಿದೆ.
ಎಷ್ಟೆಷ್ಟು ನೀರು ಬಳಕೆ?
ನೀರು ಬಳಕೆಗೆ ಸಂಬಂಧಿಸಿದಂತೆ ಕಳೆದ ವರ್ಷ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ಬಾರಿ ಜಲಾಶಯದಿಂದ 166 ಟಿಎಂಸಿ ಅಡಿ ನೀರು ಬಳಕೆಗೆ ಅಧಿಕಾರಿಗಳು ಯೋಜನೆ ರೂಪಿಸಿದ್ದರು. 2019ರಲ್ಲಿ ತುಂಗಭದ್ರಾ ನದಿ ಪಾತ್ರದ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾದ್ದರಿಂದ ಒಟ್ಟು 357.66 ಟಿಎಂಸಿ ಅಡಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ಈ ಪೈಕಿ ಐಸಿಸಿ ಸಭೆಯಲ್ಲಿ ತುಂಗಭದ್ರಾ ಜಲಾಶಯದ ಕರ್ನಾಟಕ ಭಾಗದ ಎಡದಂಡೆಯ ಎಲ್‌ಎಲ್‌ಸಿ, ಎಚ್‌ಎಲ್‌ಸಿ, ರಾಯ, ಬಸವ, ವಿಜಯನಗರ ಕಾಲುವೆಗಳಿಗೆ 116.04 ಟಿಎಂಸಿ ಅಡಿ, ಬಲದಂಡೆಯ ಎಲ್‌ಎಲ್‌ಸಿ, ಎಚ್‌ಎಲ್‌ಸಿಗೆ 28 ಟಿಎಂಸಿ ಅಡಿ, ನೆರೆಯ ಆಂಧ್ರಕ್ಕೆ 55.52 ಟಿಎಂಸಿ ಅಡಿ, ತೆಲಂಗಾಣಕ್ಕೆ 5.435 ಟಿಎಂಸಿ ಅಡಿ ನೀರು ಹರಿಸಿ ಈವರೆಗೆ ಬಳಕೆ ಮಾಡಲಾಗಿದೆ. ಒಟ್ಟಾರೆಯಾಗಿ ಮಾ.31ರೊಳಗೆ 177.539 ಟಿಎಂಸಿ ನೀರು ಬಳಕೆಯಾಗುವ ಸಾಧ್ಯತೆಯಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ 14 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ಬಳಕೆಯಾಗಲಿದೆ. ತುಂಗಭದ್ರಾ ಜಲಾಶಯದಲ್ಲಿ 36.83 ಟಿಎಂಸಿ ಅಡಿ ನೀರು ಸಂಗ್ರಹವಿದೆ. 8906 ಕ್ಯೂಸೆಕ್ ನೀರನ್ನು ಕಾಲುವೆಗಳಿಗೆ ಹರಿಸಲಾಗುತ್ತಿದೆ.
ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.