ಮತ್ತೆ ಅದೃಷ್ಟ ಅರಸಿ ಜೋಡೋ ಸಮಾವೇಶ!
ಈ ಹಿಂದಿನ ಪಾದಯಾತ್ರೆ ಯಶಸ್ಸಿನಿಂದಲೇ ಬಳ್ಳಾರಿಯಲ್ಲಿ ಸಮಾವೇಶ ; ಕೇಂದ್ರ-ರಾಜ್ಯ ಸರಕಾರ ಕಿತ್ತೂಗೆಯಲು ಸಮಾವೇಶದಲ್ಲಿ ಕರೆ
Team Udayavani, Oct 16, 2022, 2:45 PM IST
ಬಳ್ಳಾರಿ: ರಾಜ್ಯ ರಾಜಕಾರಣದಲ್ಲಿ ಬಳ್ಳಾರಿಗೆ ಯಾವಾಗಲೂ ವಿಶೇಷ ಸ್ಥಾನ ಹಾಗೂ ಮಹತ್ವವಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಈ ನೆಲ ಅಧಿಕಾರ ತಂದುಕೊಡುವ ಅದೃಷ್ಟದ ಗಣಿ. ಹೀಗಾಗಿಯೇ ಭಾರತ್ ಜೋಡೋ ಯಾತ್ರೆಯ ಸಮಾವೇಶವನ್ನೂ ಇಲ್ಲಿಯೇ ನಡೆಸಲಾಗಿದೆ.
ನಗರದ ಮುನ್ಸಿಪಲ್ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಭಾರತ್ ಜೋಡೋ ಯಾತ್ರೆಯ ಬೃಹತ್ ಸಮಾವೇಶದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರುವ ಉದ್ದೇಶದಿಂದಲೇ ಇಲ್ಲಿ ಯಾತ್ರೆ ಆಯೋಜಿಸಿದೆ ಎಂಬ ಮಾತುಗಳು ಕೇಳಿಬಂದವು.
ಅಮೇಥಿಯಲ್ಲಿ ಗೆಲುವು ಅನುಮಾನ ಎಂಬ ಕಾರಣಕ್ಕೆ 1999ರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಲೋಕಸಭೆಗೆ ಸ್ಪರ್ಧಿಸಿದಾಗ ಈ ಜಿಲ್ಲೆಯ ಜನ ಕೈ ಹಿಡಿದಿದ್ದರು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಸುಷ್ಮಾ ಸ್ವರಾಜ್ ಪರಾಭವಗೊಂಡರು. ಆದರೆ, ಅಮೇಥಿಯಲ್ಲೂ ಗೆದ್ದ ಕಾರಣಕ್ಕೆ ಸೋನಿಯಾ ಗಾಂಧಿ ಬಳ್ಳಾರಿ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಾಗ ಮತ ಹಾಕಿದವರು ಅಸಮಾಧಾನಗೊಂಡಿದ್ದರು.
ಆ ನಂತರದ ಸರದಿ ಸಿದ್ದರಾಮಯ್ಯ ಅವರದ್ದು. ವಿಧಾನಸಭೆಯಲ್ಲಿ ಜನಾರ್ದನ ರೆಡ್ಡಿ ಎದುರು ತೊಡೆ ತಟ್ಟಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿ ಇದೇ ಮುನ್ಸಿಪಲ್ ಮೈದಾನದಲ್ಲಿ ಸಮಾವೇಶ ನಡೆಸಿ ಸರ್ಕಾರ ರಚನೆಗೆ ವೇದಿಕೆ ಸಿದ್ಧಪಡಿಸಿದ್ದರು. ಅಂದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ರಾಜ್ಯದಲ್ಲಿ ಹೊಸ ಇತಿಹಾಸವೇ ಸೃಷ್ಟಿಯಾಯಿತು.
ಆದರೆ ನಂತರದ ದಿನಗಳಲ್ಲಿ ಬಳ್ಳಾರಿ ಬಿಜೆಪಿಯ ಭದ್ರಕೋಟೆಯಾಗುತ್ತಲೇ ಹೋಯಿತು. ಸೋನಿಯಾ ಗಾಂಧಿ ಅವರು ಈ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು ಹೋದ ನಂತರ ಉಂಟಾದ ಗೊಂದಲವನ್ನು ಅವರ ಪುತ್ರ ರಾಹುಲ್ ಗಾಂಧಿ ಮೂಲಕ ಸರಿಪಡಿಸಿ, ಬಳ್ಳಾರಿ ಜನರ ಬೆಂಬಲ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಮಾಸ್ಟರ್ ಪ್ಲ್ರಾನ್ ಮಾಡಿದೆ. ಇದರ ಭಾಗವೇ ಭಾರತ್ ಜೋಡೋ ಯಾತ್ರೆ ಸಾವಿರ ಕಿ.ಮೀ. ಪೂರೈಸಿದ ನೆಪದಲ್ಲಿ ನಡೆದ ಬೃಹತ್ ಸಮಾವೇಶ.
ಮುಂದಿನ ಲೋಕಸಭಾ ಹಾಗೂ ರಾಜ್ಯ ವಿಧಾನಸಭಾ ಚುನಾವಣೆ ಉದ್ದೇಶದಿಂದ ಪಾದಯಾತ್ರೆ ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದ್ದರೂ ಇದು ಚುನಾವಣಾ ಪೂರ್ವ ತಯಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ಹಿಂದೆ ಬಳ್ಳಾರಿ ಪಾದಯಾತ್ರೆ ನಡೆಸಿದ್ದಾಗ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೇರಿತ್ತು. ಹೀಗಾಗಿ ಬಳ್ಳಾರಿ ನೆಲ ಕಾಂಗ್ರೆಸ್ ಪಾಲಿಗೆ ಅದೃಷ್ಟ ತಂದುಕೊಡುವ ಸ್ಥಳ ಎಂಬ ನಂಬಿಕೆಯಿಂದಲೇ ಜೋಡೋ ಯಾತ್ರೆಯ ಸಮಾವೇಶವನ್ನೂ ಇಲ್ಲಿಯೇ ಆಯೋಜಿಸಲಾಗಿದೆ ಎನ್ನಲಾಗುತ್ತಿದೆ. ಸಮಾವೇಶದಲ್ಲಿ ಭಾಷಣ ಮಾಡಿದ ಕಾಂಗ್ರೆಸ್‌ನ ಕೇಂದ್ರ-ರಾಜ್ಯ ಮುಖಂಡರೆಲ್ಲರೂ ರಾಹುಲ್ ಗಾಂಧಿಯವರು ಚುನಾವಣೆ ಗಮನದಲ್ಲಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿಲ್ಲ ಎಂದು ಸಮಜಾಯಿಷಿ ಕೊಡುವ ಯತ್ನ ಮಾಡಿದರು. ಆದರೆ ಮಾತು ಮಾತಿಗೂ ಕೇಂದ್ರ-ರಾಜ್ಯ ಸರಕಾರ ಹಾಗೂ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಿಜೆಪಿ ಸರಕಾರವನ್ನು ಕಿತ್ತೆಸೆಯಬೇಕು. ಕಾಂಗ್ರೆಸ್ ಬೆಂಬಲಿಸಬೇಕು ಎನ್ನುತ್ತ ಚುನಾವಣಾ ಪ್ರಚಾರ ಮಾಡಿದ್ದು ಯಾತ್ರೆಯ ಉದ್ದೇಶ ಏನು ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದಂತಿತ್ತು.
ಸಿದ್ದು ಟಾರ್ಗೆಟ್ ಶ್ರೀರಾಮುಲು?
ಬಳ್ಳಾರಿ ಭಾಗದ ಪ್ರಬಲ ನಾಯಕ ಶ್ರೀರಾಮುಲು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಿ ಇಕ್ಕಟ್ಟಿಗೆ ಸಿಲುಕಿಸಿದ್ದರು. ಸಿದ್ದರಾಮಯ್ಯ ಈ ಕಹಿಯನ್ನು ಮರೆತಂತೆ ಕಾಣುತ್ತಿಲ್ಲ. ಕಳೆದ ಚುನಾವಣೆ ಬಳಿಕ ಈವರೆಗೂ ಆಗಾಗ ಸಿದ್ದರಾಮಯ್ಯ ಹಾಗೂ ಶ್ರೀರಾಮುಲು ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಈಗ ಮತ್ತೆ ಚುನಾವಣೆ ಹತ್ತಿರವಾಗುತ್ತಿದ್ದು, ಸಿದ್ದರಾಮಯ್ಯ ಶ್ರೀರಾಮುಲು ವಿರುದ್ಧ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದ್ದಾರೆ ಎನ್ನಲಾಗಿದೆ. ಭಾರತ್ ಜೋಡೋ ಸಮಾವೇಶದಲ್ಲಿ ಕೂಡಾ ಸಿದ್ದರಾಮಯ್ಯ ಭಾಷಣದಲ್ಲಿ ಶ್ರೀರಾಮುಲು ವಿರುದ್ಧ ಮುಗಿಬಿದ್ದರು. ಬಳ್ಳಾರಿಗೆ ನಿಮ್ಮ ಕೊಡುಗೆ ಏನಿದೆ. ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬದ ಇತಿಹಾಸ ಗೊತ್ತಿಲ್ಲ ನಿನಗೆ ಎಂದು ವಾಗ್ಧಾಳಿ ನಡೆಸಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಈ ಬಾರಿಯೂ ಸಿದ್ದರಾಮಯ್ಯ ಹಾಗೂ ಶ್ರೀರಾಮುಲು ನಡುವೆ ಚುನಾವಣಾ ಹೋರಾಟ ಕದನ ಕೌತುಕವಾಗಲಿದೆಯೇ ಎಂಬ ಪ್ರಶ್ನೆ ಮೂಡಿಸಿದೆ.
ಸಂಗನಕಲ್ಲು ಹೊರವಲಯದಲ್ಲಿ ರಾಹುಲ್ ವಾಸ್ತವ್ಯ
ಬಳ್ಳಾರಿ: ಕಳೆದ ಎರಡು ದಿನಗಳಿಂದ ನಗರದಲ್ಲಿ ಪಾದಯಾತ್ರೆ ಕೈಗೊಂಡು ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಯವರು ಸಭೆಯ ಬಳಿಕ ನೇರವಾಗಿ ತಾಲೂಕಿನ ಸಂಗನಕಲ್ಲು ಗ್ರಾಮದ ಹೊರವಲಯದಲ್ಲಿ ವ್ಯವಸ್ಥೆ ಮಾಡಿರುವ ಕ್ಯಾಂಪ್‌ನಲ್ಲಿ ಶನಿವಾರ ರಾತ್ರಿ ತಂಗಿದ್ದಾರೆ. ಭಾನುವಾರ ಬೆಳಗ್ಗೆ 6.30ಕ್ಕೆ ಪಾದಯಾತ್ರೆ ಮುಂದುವರಿಯಲಿದ್ದು, ಬೆಳಗ್ಗೆ 11 ಗಂಟೆಗೆ ಮೋಕಾ ಬಳಿ ಉಪಾಹಾರ ಸೇವಿಸಿ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಸಂಜೆ ನಾಲ್ಕು ಗಂಟೆಗೆ ಪುನಃ ಪಾದಯಾತ್ರೆ ಮೂಲಕ ತೆರಳಿ ನೆರೆಯ ಆಂಧ್ರದ ಚತ್ರಗುಡಿ ಮೂಲಕ ಆಂಧ್ರಪ್ರದೇಶಕ್ಕೆ ಪ್ರವೇಶಿಸಲಿದ್ದಾರೆ. ಅ. 16ರಂದು ರಾತ್ರಿ ಚತ್ರಗುಡಿ ಆಂಜನೇಯ ದೇವಸ್ಥಾನ ಬಳಿ ವಾಸ್ತವ್ಯ ಹೂಡಲಿದ್ದಾರೆ. ಅ. 17ರಂದು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಪಾದಯಾತ್ರೆಗೆ ಬ್ರೇಕ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ತಿಪ್ಪೇಸ್ವಾಮಿ ನಾಕೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.