ಸಾಂಸ್ಕೃತಿಕ ಚಟುವಟಿಕೆ ಪ್ರೋತ್ಸಾಹಿಸಿ
Team Udayavani, Nov 25, 2018, 3:48 PM IST
ಬಳ್ಳಾರಿ: ಯುವಜನರು ಸಾಂಸ್ಕೃತಿಕ ಚಟುವಟಿಕೆಯತ್ತ ಸಕ್ರಿಯರಾಗಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜವಳಿ ರುದ್ರಪ್ಪ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಜನಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸ್ಫೂರ್ತಿ ಕಲಾವಿದರ ಸಂಘದ ಸಹಯೋಗದಲ್ಲಿ ನಗರದ ಡಾ.ರಾಜ್ ರಸ್ತೆಯಲ್ಲಿನ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದರು.
ಅತ್ಯಾಧುನಿಕ ಜಗತ್ತಿನಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಈ ನಾಡಿನ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮರೀಚಿಕೆಯಾಗುತ್ತವೆ. ಅವುಗಳನ್ನು ಉಳಿಸಿ, ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ, ಕ್ರೀಡಾ ಇಲಾಖೆ ಆಯೋಜಿಸುವ ಯುವಜನೋತ್ಸವದಲ್ಲಿ ಯುವಜನರು ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು ಎಂದರು.
ದಶಕಗಳ ಹಿಂದೆ ಯುವಜನ ಕ್ರೀಡಾ ಇಲಾಖೆ ಎಂದರೆ ಯಾರಿಗೂ ಗೊತ್ತೇ ಇರಲಿಲ್ಲ. ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದ ಕಲಬುರಗಿ ವಿಭಾಗೀಯ ಮಟ್ಟದಲ್ಲಿ ಯುವಜನ ಪ್ರಶಸ್ತಿಗಳು ಬರುತ್ತಲೇ ಇರಲಿಲ್ಲ. ಇಲಾಖೆಯಲ್ಲಿ ಹಿಂದೆ ಅಧಿಕಾರಿಗಳಾಗಿದ್ದ ಕರೀ ಮುಲ್ಲಾಸಾಬ್ ಸೇರಿ ಇತರರು ವಿಧಾನಸೌಧಕ್ಕೆ ತಿರುಗಿ ಪ್ರಶಸ್ತಿ ಬರುವಂತೆ ಮಾಡಿದರು. ಆಗ 1990ರಲ್ಲಿ ಜಿಲ್ಲೆಗೆ ಯುವಜನ ಪ್ರಶಸ್ತಿ ನೀಡಲಾಯಿತು. ಅದೇ ರೀತಿ ಪ್ರತಿವರ್ಷವೂ ಸಮಾಜ ಸೇವಕರಿಗೆ ಯುವಜನ ಪ್ರಶಸ್ತಿ ನೀಡಬೇಕು ಎಂದವರು ಕೋರಿದರು.
ಯುವಜನರು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಈ ನಾಡಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸ್ಸನ್ನು ಸಂತೋಷಗೊಳಿಸುವುದರ ಜೊತೆಗೆ ಯುವಜನರ ಮಾನಸಿಕ ಒತ್ತಡ ದೂರವಾಗಿಸಲು ಸಹಕಾರಿಯಾಗಲಿದೆ ಎಂದರು. ಸ್ಫೂರ್ತಿ ಕಲಾವಿದರ ಸಂಘದ ಅಧ್ಯಕ್ಷ ಜಕ್ರಿಯಾ ಮಾತನಾಡಿ, ಕಲೆಗೆ ಎಂಥ ದುಷ್ಟ ಶಕ್ತಿಯನ್ನು ನಿಯಂತ್ರಿಸುವ ಶಕ್ತಿಯಿದೆ. ಹಾಗಾಗಿ, ಯುವಜನರು ಯುವಜನೋತ್ಸವದಲ್ಲಿ ಸಕ್ರಿಯರಾಗಿ ಭಾಗವಹಿಸಿ, ನಾಡಿನ ಕಲೆ ಮತ್ತು ಸಂಸ್ಕೃತಿಯ ಜೀವಂತಿಕೆಗೆ ಶ್ರಮಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ರಹಮತ್ ಉಲ್ಲಾ ಅವರನ್ನು ಸನ್ಮಾನಿಸಲಾಯಿತು. ಜಿಲ್ಲೆಯ ಸಿರುಗುಪ್ಪ, ಹೊಸಪೇಟೆ, ಕೂಡ್ಲಿಗಿ, ಸಂಡೂರು, ಹಡಗಲಿ ಹಾಗೂ ಬಳ್ಳಾರಿ ತಾಲೂಕಿನ ಯುವಜನರ ಹತ್ತಾರು ತಂಡಗಳು ಈ
ಯುವಜನೋತ್ಸವದಲ್ಲಿ ಪಾಲ್ಗೊಂಡಿದ್ದರು.
ವಿವಿಧ ಸ್ಪರ್ಧೆ: ಶಾಸ್ತ್ರೀಯ ನೃತ್ಯಗಳಾದ ಭರತ ನಾಟ್ಯ, ಒಡಿಸ್ಸಿ, ಮಣಿಪುರಿ, ಕೂಚುಪುಡಿ, ಕಥಕ್, ಶಾಸ್ತ್ರೀಯ ವಾದ್ಯಗಳಾದ ತಬಲಾ, ಸಿತಾರ, ಕೊಳಲು, ವೀಣೆ, ಮೃದಂಗ, ಹಾರ್ಮೋನಿಯಂ, ಗಿಟಾರ್, ಶಾಸ್ತ್ರೀಯ ಗಾಯನವಾದ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಗಾಯನೋತ್ಸವ, ಆಶುಭಾಷಣ, ಏಕಾಂಕ ನಾಟಕ ಪ್ರದರ್ಶನ ಸ್ಪರ್ಧೆಗಳು ನಡೆದವು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಯುವ ಕ್ರೀಡಾಪಟು ಮಹಾಂತೇಶ, ಸಂಗೀತ ತರಬೇತುದಾರ ಎಸ್.ಕೆ.ಆರ್.ಜಿಲಾನಿ ಬಾಷಾ,
ಕ್ರೀಡಾ ಇಲಾಖೆ ಅಧಿಕಾರಿಗಳಾದ ರಾಮಸ್ವಾಮಿ, ರಫಿಕ್, ಪ್ರದೀಪ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ
Bellary: ಐದು ವರ್ಷದ ಮಗುವಿನ ಅತ್ಯಾಚಾರ ನಡೆಸಿದ್ದ ಆರೋಪಿಗೆ ಗುಂಡೇಟು
ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ
ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
Makar Sankranti: ಹಂಪಿಗೆ ಹರಿದು ಬಂದ ಭಕ್ತ ಜನ ಸಾಗರ!