ಸಮಸ್ಯೆಗಳ ಸಿರುಗುಪ್ಪದಲ್ಲಿ ಹಾಲಿ-ಮಾಜಿ ಫೈಟ್
Team Udayavani, Apr 8, 2018, 11:06 AM IST
ಸಿರುಗುಪ್ಪ: ಕೂಗಳತೆ ದೂರದಲ್ಲಿ ತುಂಗಭದ್ರಾ ನದಿ ಹರಿದರೂ, ಈ ಕ್ಷೇತ್ರದಲ್ಲಿ ನೀರಿನದ್ದೇ ಸಮಸ್ಯೆ. ಪಟ್ಟಣ ಪ್ರದೇಶದಲ್ಲೇ ಸಮರ್ಪಕ ಕುಡಿವ ನೀರು ದೊರೆಯುತ್ತಿಲ್ಲ. ಪಟ್ಟಣಕ್ಕೆ ಪ್ರತ್ಯೇಕ ಕುಡಿವ ನೀರಿನ ಕೆರೆ ನಿರ್ಮಿಸಬೇಕೆಂಬ ಬೇಡಿಕೆ ಎರಡುವರೆ ದಶಕಗಳಿಂದ ಕೇಳಿಬರುತ್ತಿದ್ದರೂ, ಜನಪ್ರತಿನಿಧಿ ಗಳ ನಿರ್ಲಕ್ಷ್ಯದಿಂದಾಗಿ ಈವರೆಗೂ ಸಾಕಾರಗೊಂಡಿಲ್ಲ. ಈಚೆಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ ಯಾದರೂ, ಕಾಮಗಾರಿ ಚುರುಕು ಪಡೆದುಕೊಳ್ಳುತ್ತಿಲ್ಲ. ಕ್ಷೇತ್ರದಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ, ಜನಪ್ರತಿನಿಧಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಮಾಜಿ ಶಾಸಕರು ಸ್ಪರ್ಧೆಗಳಿಯಲು ಸಜ್ಜಾಗುತ್ತಿದ್ದಾರೆ ಹೊರತು, ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ.
ಸಿರುಗುಪ್ಪ ಕ್ಷೇತ್ರದಲ್ಲಿ ಕುಡಿವ ನೀರಿನ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಪಕ್ಕದಲ್ಲೇ ತುಂಗಭದ್ರಾ, ವೇದಾವತಿ ನದಿಗಳು ಹರಿದರೂ ಕ್ಷೇತ್ರದ ಜನ ಮಾತ್ರ ಕುಡಿವ ನೀರಿನ ಬವಣೆಯಿಂದ ಮುಕ್ತಗೊಂಡಿಲ್ಲ. ಕ್ಷೇತ್ರದ ಕೆಲ ಗ್ರಾಮಗಳಲ್ಲಿ ಇಂದಿಗೂ ಒರತೆ ನೀರನ್ನೇ ಜನ ಬಳಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಶುದ್ಧ ಕುಡಿವ ನೀರಿನ ಘಟಕ ನಿರ್ಮಿಸಿದ್ದರಿಂದ ಸಮಸ್ಯೆ ಸ್ವಲ್ಪ ಮರೆಯಾಗಿದೆ.
ಇನ್ನು ಪಟ್ಟಣದಲ್ಲೂ ಜನರು ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಪಟ್ಟಣಕ್ಕೆ ಪ್ರತ್ಯೇಕ ಕುಡಿವ ನೀರಿನ ಕೆರೆ
ನಿರ್ಮಿಸಬೇಕೆಂದು ಕಳೆದ ಎರಡೂವರೆ ದಶಕಗಳಿಂದ ಹಲವು ಸಂಘಟನೆಗಳು ಜನಪ್ರತಿನಿಧಿಗಳ ಗಮನ ಸೆಳೆಯುತ್ತಿದ್ದರೂ, ಯಾರೊಬ್ಬರೂ ಎಚ್ಚೆತ್ತುಕೊಂಡಿಲ್ಲ. ಈಚೆಗೆ ಕೆರೆ ನಿರ್ಮಾಣಕ್ಕೆ ಚಾಲನೆ ದೊರೆತಿದ್ದರೂ, ಚುರುಕು ಪಡೆದುಕೊಳ್ಳುತ್ತಿಲ್ಲ.
ಇನ್ನು ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ನಿಟ್ಟೂರು-ಸಿಂಗಾಪುರ ನಡುವೆ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣಕ್ಕೆ ಅಧಿಕೃತ ಚಾಲನೆ ದೊರೆಯಬೇಕಿದೆ. ಹಲವು ಸೌಲಭ್ಯಗಳಿಗೆ ಅನುಮೋದನೆ ಸಿಕ್ಕಿದ್ದರೂ, ಆದೇಶ ಕೇವಲ ದಾಖಲೆಗಷ್ಟೇ ಸೀಮಿತವಾಗಿವೆ. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದರೂ, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ.
ಈ ಮೊದಲು 2004 ಮತ್ತು 2008ರಲ್ಲಿ ಬಿಜೆಪಿಯಿಂದ ಜಯಗಳಿಸಿದ್ದ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ
2013ರ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕ ಬಿ.ಎಂ. ನಾಗರಾಜ್ ವಿರುದ್ಧ ಪರಾಭವಗೊಂಡಿದ್ದರು. ಇದೀಗ ಪುನಃ ಬಿಜೆಪಿಯಿಂದ ಸ್ಪರ್ಧಿಸಲು ಸಜ್ಜಾಗುತ್ತಿರುವ ಮಾಜಿ ಶಾಸಕ ಸೋಮಲಿಂಗಪ್ಪ, ಗೆಲ್ಲಲು ಶತಾಯ-ಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಎಸ್‌ಟಿ ಮೀಸಲು ಕ್ಷೇತ್ರವಾದ್ದರಿಂದ ಜೆಡಿಎಸ್ ಪಕ್ಷದಿಂದಲೂ ಹಲವರು ಸ್ಪರ್ಧೆಗಿಳಿದು ಅದೃಷ್ಟ ಪರೀಕ್ಷಿಸಿಕೊಳ್ಳಲು ತೆರೆಮರೆಯ ಪ್ರಯತ್ನ ನಡೆಸುತ್ತಿದ್ದಾರೆ. ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.
ಕ್ಷೇತ್ರದ ಬೆಸ್ಟ್ ಏನು?
ಪಟ್ಟಣಕ್ಕೆ ಪ್ರತ್ಯೇಕವಾಗಿ ಕುಡಿವ ನೀರಿನ ಕೆರೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆಯಾದರೂ, ಕಾಮಗಾರಿ
ಮಂದಗತಿಯಲ್ಲಿ ಸಾಗುತ್ತಿರುವುದು ಕ್ಷೇತ್ರದ ಮತದಾರರಲ್ಲಿ ಬೇಸರ ಮೂಡಿಸಿದೆ. ಕ್ಷೇತ್ರದಲ್ಲಿ ಪ್ರತಿ ಹಳ್ಳಿಯಲ್ಲಿ ಶುದ್ಧ
ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಜನರಿಗೆ ಸಮರ್ಪಕ ಕುಡಿವ ನೀರನ್ನು ಕಲ್ಪಿಸಲಾಗಿದೆ. ಇದರೊಂದಿಗೆ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಉದ್ಯಾನವನ, ಕೃಷಿ
ಹೊಂಡ, ಶುದ್ಧ ಕುಡಿಯುವ ನೀರಿನ ಘಟಕಗಳು, ವಿವಿಧ ಯೋಜನೆಗಳಲ್ಲಿ ಮನೆ ಹಂಚಿಕೆ ಮಾಡಲಾಗಿದೆ
ಕ್ಷೇತ್ರದ ದೊಡ್ಡ ಸಮಸ್ಯೆ?
ಸಿರುಗುಪ್ಪ ನಗರಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಸುವ ಸಲುವಾಗಿ ಪ್ರತ್ಯೇಕ ಕೆರೆ ನಿರ್ಮಿಸಬೇಕೆಂಬ ಬೇಡಿಕೆಗೆ ಜನಪ್ರತಿನಿ ಗಳಿಂದ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ. ಈಚೆಗೆ ಕೆರೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದರೂ ಕಾಮಗಾರಿ ಚುರುಕು ಪಡೆದುಕೊಂಡಿಲ್ಲ. ವೇದಾವತಿ ಹಗರಿ ನದಿಗೆ ರಾರಾವಿ ಸಮೀಪ ಸೇತುವೆ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದೆ. ನಿಟ್ಟೂರು ಮತ್ತು ಸಿಂಗಾಪುರ ನಡುವೆ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣ ಕಾರ್ಯಕ್ಕೆ ಅಧಿಕೃತ ಚಾಲನೆ ಸಿಗಬೇಕಾಗಿದೆ. 2ನೇ ಬೇಸಿಗೆ ಬೆಳೆಗೆ ತುಂಗಭದ್ರಾ ಜಲಾಶಯದಿಂದ ಎಲ್‌ಎಲ್ ಕಾಲುವೆಗೆ ನೀರು ಹರಿಸುವಂತೆ ಕೋರಿದರೂ, ಶಾಸಕರು ನಿರ್ಲಕ್ಷ್ಯ ವಹಿಸಿರುವುದು ಮತದಾರರಲ್ಲಿ ಬೇಸರ ಮೂಡಿಸಿದೆ. ವಸತಿ ರಹಿತರಿಗೆ 2500 ನಿವೇಶನಗಳನ್ನು ಹಂಚಿ, ಮನೆ ಕಟ್ಟಿಕೊಡುವುದಾಗಿ ನೀಡಿದ್ದ ಭರವಸೆ ಈಡೇರಿಲ್ಲ. ಮುಖ್ಯವಾಗಿ ಶಾಸಕರು ಕ್ಷೇತ್ರದ ಜನರ ಕೈಗೆ ಸಿಗುವುದಿಲ್ಲ.
ಶಾಸಕರು ಏನಂತಾರೆ?
ಸಿರುಗುಪ್ಪ ನಗರಕ್ಕೆ ಕುಡಿಯುವ ನೀರಿನ ಕೆರೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರೈತರ ಅನುಕೂಲಕ್ಕಾಗಿ 2500 ಕೃಷಿ ಹೊಂಡಗಳ ನಿರ್ಮಾಣ ಮಾಡಲಾಗಿದೆ. ಎಸ್‌ಸಿ, ಎಸ್‌ಟಿ ಕಾಲೋನಿಗಳಲ್ಲಿ ಚರಂಡಿ, ಸಿ.ಸಿ.ರಸ್ತೆ ನಿರ್ಮಾಣ, ತಾಲೂಕಿ ಪ್ರತಿ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ವಿವಿಧ ವಸತಿ
ಯೋಜನೆಯಡಿ 9000 ಫಲಾನುಭವಿಗಳಿಗೆ ಮನೆಗಳ ಹಂಚಿಕೆ, ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನಾದ್ಯಂತ ಶೇ.70ರಷ್ಟು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ.
ಬಿ.ಎಂ.ನಾಗರಾಜ್
ಕ್ಷೇತ್ರ ಮಹಿಮೆ
ಸಿರುಗುಪ್ಪ ಕ್ಷೇತ್ರ ಪಟ್ಟಣಕ್ಕೆ ಅನತಿ ದೂರದಲ್ಲಿ ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನ ಹೊಂದಿದೆ. ತಾಲೂಕಿನ ಉಡೇಗೋಳು ಮತ್ತು ನಿಟ್ಟೂರು ಗ್ರಾಮಗಳಲ್ಲಿ ಅಶೋಕನ ಶಿಲಾ ಶಾಸನಗಳಿದ್ದು, ಕೆಂಚನಗುಡ್ಡದ ಹತ್ತಿರ ವಿಜಯನಗರ ಕಾಲದ ಆಣೆಕಟ್ಟುಗಳನ್ನು ಕಾಣಬಹುದಾಗಿದೆ. ಮಳೆಗಾಲದಲ್ಲಿ ಇಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ದುಮ್ಮಿಕ್ಕುವ ಜಲಪಾತಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಕ್ಷೇತ್ರದಲ್ಲಿ ಇದೊಂದು ಪ್ರವಾಸೋದ್ಯಮ ಸ್ಥಳವಾಗಿ ಮಾರ್ಪಟ್ಟಿದ್ದು, ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಕ್ಷೇತ್ರವು ಅತಿಹೆಚ್ಚು ನೀರಾವರಿ ಪ್ರದೇಶ, ಸೋನಾಮಸೂರಿ ಭತ್ತದ ಬೆಳೆಪ್ರಮುಖ.
ಎಲ್‌ಎಲ್‌ಸಿ ಕಾಲುವೆ ತಾಲೂಕಿನ ರೈತರ ಜೀವನಾಡಿಯಾಗಿದೆ. ಜಲಾಶಯದಿಂದ ಕಾಲುವೆಗೆ ಸಮರ್ಪಕವಾಗಿ ನೀರು ಹರಿಯದ ಕಾರಣ ರೈತರು ಅನೇಕ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಅಧಿಕಾರಿಗಳು ಕಾಲುವೆಗಳಿಗೆ ಸಮರ್ಪಕ ನೀರು ಹರಿಸುವ ಬಗ್ಗೆ ಮಾಹಿತಿ ನೀಡಿದರೆ ರೈತರಿಗೆ ಯಾವ ಬೆಳೆ ಬೆಳೆಯಬೇಕೆಂಬ ನಿರ್ಧಾರ ಮಾಡಲು ಸಾಧ್ಯವಾಗುತ್ತದೆ.
ರಮೇಶ್, ರೈತ, ಕರೂರು.
ತಾಲೂಕಿನಲ್ಲಿ ನೆರೆಹಾವಳಿಯಿಂದ ಸ್ಥಳಾಂತರಗೊಂಡ 16 ನವಗ್ರಾಮಗಳಲ್ಲಿ ಮನೆಗಳ ನಿರ್ಮಾಣ ಪೂರ್ಣಗೊಂಡಿವೆ.
ಇದರಲ್ಲಿ ಹಚ್ಚೊಳ್ಳಿ ಹೊರತುಪಡಿಸಿ ಇನ್ನುಳಿದ 15 ನವಗ್ರಾಮಗಳಲ್ಲಿ ಫಲಾನುಭವಿಗಳನ್ನು ಗುರುತಿಸಿ ಹಕ್ಕುಪತ್ರ ವಿತರಿಸಿಲ್ಲ. ನಿರ್ಮಾಣಗೊಂಡ ಮನೆಗಳು ದುರ್ಬಲಗೊಂಡು ನಿರಾಶ್ರಿತರಿಗೆ ನಿರಾಸೆ ಉಂಟುಮಾಡಿದೆ. ಹಚ್ಚೊಳ್ಳಿಯಲ್ಲಿ ಮನೆ ಹಂಚಿಕೆ ಮಾಡುವ ಕಾರ್ಯವನ್ನೇ ಮಾಡಿಲ್ಲ.
ಶಿವರಾಜ್ ಸ್ವಾಮಿ, ಹಚ್ಚೊಳ್ಳಿ ಗ್ರಾಮ.
ತಾಲೂಕಿನ ರಾರಾವಿ ಹತ್ತಿರ ವೇದಾವತಿ ಹಗರಿ ನದಿಗೆ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿ 5 ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ, ಇದರಿಂದಾಗಿ ಮಳೆಗಾಲದಲ್ಲಿ ಈ ಭಾಗದ ಜನರ ಸಂಚಾರಕ್ಕೆ ತೊಂದರೆಯಾಗಿದ್ದು, ಸುತ್ತುವರಿದು ಸಿರುಗುಪ್ಪ ಪಟ್ಟಣ ಸೇರಬೇಕಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ, ಸೇತುವೆಯನ್ನು ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಡಬೇಕಾಗಿದೆ.
ಹೊನ್ನೂರಪ್ಪ, ರಾರಾವಿ ಗ್ರಾಮದ ಯುವಕ
ನಿರೀಕ್ಷಿತ ಮಟ್ಟದಲ್ಲಿ ಕ್ಷೇತ್ರದಲ್ಲಿ ಕೆಲಸಗಳಾಗಿಲ್ಲ, ಸಿರುಗುಪ್ಪ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಕೆರೆ ನಿರ್ಮಾಣ ಕಾರ್ಯ ಆರಂಭವಾಗಿದೆ. 5 ವರ್ಷಗಳಲ್ಲಿ ನಗರವಾಸಿಗಳಿಗೆ ನಿವೇಶನ ಹಂಚಿಕೆಯಾಗಿಲ್ಲ, ತಾಲೂಕಿಗೆ ವಿಶೇಷ ಸೌಲಭ್ಯ ಏನೂ ತಂದಿಲ್ಲ, ಸಿರುಗುಪ್ಪ ನಗರದಲ್ಲಿ ಒಳಚರಂಡಿ ವ್ಯವಸ್ಥೆಗೆ ಸರ್ವೆ ಕಾರ್ಯ ಮುಗಿದಿದ್ದರೂ, ಅನುದಾನ ಬರದ ಕಾರಣ ಕಾಮಗಾರಿ ಪ್ರಾರಂಭವಾಗಿಲ್ಲ. ಇದರಿಂದ ನಗರದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ.
ರಫಿ, ನಗರ ನಿವಾಸಿ
ಬಸವರೆಡ್ಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
MUST WATCH
ಹೊಸ ಸೇರ್ಪಡೆ
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.