Team Udayavani, Mar 29, 2019, 1:38 PM IST
ಹರಪನಹಳ್ಳಿ: ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ಶೌಚ ನಿರ್ಮಾಣದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿದ್ದು, ಹರಪನಹಳ್ಳಿ ಪಟ್ಟಣವನ್ನು ಸಂಪೂರ್ಣ ಬಯಲು ಶೌಚ ಮುಕ್ತ ಪಟ್ಟಣವನ್ನಾಗಿ ಘೋಷಿಸಿದೆ. ಭಾರತೀಯ ಗುಣಮಟ್ಟ ನಿಯಂತ್ರಣ ಮಂಡಳಿಯಿಂದ ಬಯಲು ಶೌಚ ಮುಕ್ತ ಪಟ್ಟಣ ಪ್ರಮಾಣ ಪತ್ರ ಪಡೆಯುವ ಮೂಲಕ ಹರಪನಹಳ್ಳಿ ಪುರಸಭೆ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ.
ಗ್ರಾಮೀಣ ಪ್ರದೇಶದಲ್ಲಿ ರೂಢಿಯಲ್ಲಿರುವ ಬಯಲಿನಲ್ಲಿ ಮಲ ವಿಸರ್ಜನೆ ಮಾಡುವ ಪದ್ಧತಿಯನ್ನು ತೊಲಗಿಸಲು ಹಾಗೂ ಗ್ರಾಮೀಣ ಸಮುದಾಯದಲ್ಲಿ ಸ್ವತ್ಛತೆ ಹಾಗೂ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಗ್ರಾಮೀಣ ಜನರ ಜೀವನ ಪದ್ಧತಿಯನ್ನು ಸುಧಾರಿಸುವ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೆ ತಂದಿದ್ದ ಸ್ವತ್ಛ ಭಾರತ್ ಮಿಷನ್ ಯೋಜನೆಯಡಿ ಹರಪನಹಳ್ಳಿ ಪಟ್ಟಣ ಬಯಲು ಶೌಚಾಲಯ ಮುಕ್ತ ಪಟ್ಟಣವಾಗಿ ರೂಪುಗೊಂಡಿದೆ. ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಸ್ವತ್ಛತಾ ಪಟ್ಟಣ ಪ್ರಮಾಣ ಕೂಡ ಲಭಿಸಿದೆ.
ಪಟ್ಟಣದ ಒಟ್ಟು 27 ವಾರ್ಡ್‌ಗಳಲ್ಲಿ ಸರ್ಕಾರ ಪಟ್ಟಣದಲ್ಲಿ 2759 ಶೌಚಾಲಯ ನಿರ್ಮಾಣದ ಗುರಿ ನೀಡಲಾಗಿತ್ತು. ಕಳೆದ ಜನವರಿ ತಿಂಗಳಲ್ಲಿಯೇ ಈ ಗುರಿಯನ್ನು ತಲುಪಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ವತ್ಛ ಭಾರತ ಮಿಷನ್ ಯೋಜನೆಯಡಿ ಪ್ರತಿ ಫಲಾನುಭವಿಗೆ 5333 ರೂ. ಅನುದಾನ ಹಾಗೂ ಪುರಸಭೆ ಎಸ್‌ಎಫ್‌ಸಿ ಮತ್ತು ಇತರೆ ನಿಧಿಯಲ್ಲಿ 9667 ರೂ. ಸೇರಿ ಒಟ್ಟು 15 ಸಾವಿರ ರೂ. ಪ್ರತಿ ಫಲಾನುಭವಿಗಳಿಗೆ ವಿತರಿಸಲಾಗಿದೆ.
ಪುರಸಭೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರಂತರ ಪರಿಶ್ರಮದ ಫಲವಾಗಿ ಪ್ರಶಸ್ತಿ ದೊರಕಿದೆ. ಭಾರತೀಯ ಗುಣಮಟ್ಟ ನಿಯಂತ್ರಣ ಮಂಡಳಿಯು ಸದ್ಯ ನೀಡಿರುವ ಪ್ರಮಾಣ ಪತ್ರ 6 ತಿಂಗಳ ಕಲಾವಧಿ ಹೊಂದಿದೆ.
ಭಾರತೀಯ ಗುಣಮಟ್ಟ ನಿಯಂತ್ರಣ ಬಯಲು ಶೌಚಾಲಯ ಮುಕ್ತ ಸ್ಥಿತಿ ಪರಿಶೀಲಿಸಲು ಪಟ್ಟಣಕ್ಕೆ ಎರಡು ಬಾರಿ ಆಗಮಿಸಿ ದಾಖಲಾತಿ ಪರಿಶೀಲನೆ ಹಾಗೂ ನೇರ ಪರಿಶೀಲನೆ ಮಾಡುವ ಮೂಲಕ ಮೌಲ್ಯಮಾಪನ ಮಾಡಿದೆ. ಈ ಸಂದರ್ಭದಲ್ಲಿ
ಪಟ್ಟಣದ ಮುಖ್ಯಸ್ಥರು ಮತ್ತು ವಾರ್ಡ್ ಕೌನ್ಸಿಲರ್ ಘೋಷಣೆ ಒಳಗೊಂಡಿರುತ್ತದೆ.
ಅಲ್ಲದೇ ಗುಣಮಟ್ಟ ನಿಯಂತ್ರಣ ಸಮಿತಿ ಕಳೆದ ಕೆಲವು ವರ್ಷಗಳಲ್ಲಿ ನಿರ್ಮಿಸಲಾದ ಸಾರ್ವಜನಿಕ, ಸಮುದಾಯ ಶೌಚಾಲಯದ ನಿರ್ಮಾಣ, ಕಾರ್ಯ ಯೋಜನೆ, ಸಮೀಕ್ಷೆಗಳು ಸ್ವತ್ಛ ಭಾರತದ ಬಗ್ಗೆ ಹಾಗೂ ಬಯಲು ಶೌಚಾಲಯ ಮುಕ್ತತೆ ಬಗ್ಗೆ ಜಾಗೃತಿ ಹೆಚ್ಚಿಸಲು ಆಯೋಜಿಸಿದ ಆಂದೋಲನಗಳನ್ನು ಪರೀಕ್ಷೆ ನಡೆಸಿದೆ.
ನೇರ ಪರಿಶೀಲನೆಯಡಿ ಒಬ್ಬರು ಅಥವಾ ಇಬ್ಬರು ಸಮೀಕ್ಷೆದಾರರ ತಂಡ ಪಟ್ಟಣದ ಉದ್ದಗಲಕ್ಕೂ ಹರಡಿದ ಕೊಳಚೆ ಪ್ರದೇಶ, ಬಡಾವಣೆಗಳು, ಶಾಲೆ, ವಾಣಿಜ್ಯ ಸ್ಥಳಗಳು, ರೈಲು ನಿಲ್ದಾಣ, ಬಸ್ ನಿಲ್ದಾಣ, ನೀರಿನ ಮೂಲಗಳನ್ನು ಗಮನಿಸಲಾಗುತ್ತದೆ. ಸಮೀಕ್ಷೆಯಲ್ಲಿ ನೀಡಲಾದ ಬಯಲು ಶೌಚಾಲಯ ಮುಕ್ತತೆಯ ಸಂಭಾವ್ಯ ಸ್ಥಳಗಳನ್ನು ಖಚಿತಪಡಿಸಿಕೊಳ್ಳಲು ನಿರ್ದಿಷ್ಟ ನಿಯಮಾವಳಿಗಳ ಪ್ರಕಾರ ಆಯ್ಕೆ ಮಾಡಲಾಗುತ್ತದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಶಸ್ತಿ ಪರಿಶ್ರಮಕ್ಕೆ ಸಿಕ್ಕ ಫಲ ಸ್ವತ್ಛ ಭಾರತದ ಪರಿಕಲ್ಪನೆಯೊಂದಿಗೆ ಬಯಲು ಮಲ ವಿಸರ್ಜನೆಯಿಂದಾಗುವ ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರ ಮತ್ತು ಪುರಸಭೆ ಅಧಿಕಾರಿಗಳು
ಮಾಡುತ್ತಿದ್ದಾರೆ. ಪುರಸಭೆಗೆ ತನ್ನದೇ ಆದ ಜವಾಬ್ದಾರಿಯಿದ್ದು, ಪ್ರಶಸ್ತಿಯೊಂದಿಗೆ ಜವಾಬ್ದಾರಿಯೂ ಹೆಚ್ಚಾಗಿದೆ. ಪುರಸಭೆಯ ಜನಪ್ರತಿನಿಧಿಗಳ, ಅಧಿಕಾರಿಗಳ ಕಠಿಣ ಪರಿಶ್ರಮದ ಫಲವಾಗಿ ಈ ಪ್ರಶಸ್ತಿ ದೊರಕಿದೆ.
ರೇಣುಕಾ ದೇಸಾಯಿ, ಮುಖ್ಯಾಧಿಕಾರಿ, ಪುರಸಭೆ.
ಮನ ಪರಿವರ್ತನೆ ಮಾಡುತ್ತೇವೆ ಸ್ವತ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೈ ಜೋಡಿಸಿದರೆ ಧ್ಯೇಯ
ಪೂರ್ಣಗೊಳ್ಳಲು ಸಾಧ್ಯವೇ ಹೊರತು ಕೇವಲ ಜನಪ್ರತಿನಿಧಿಗಳಿಂದ, ಅಧಿಕಾರಿಗಳಿಂದ ಸಾಧ್ಯವಿಲ್ಲ. ಸ್ವತ್ಛ ಭಾರತ ಇದೊಂದು ನಿರಂತರ ಪ್ರಕ್ರಿಯೆಯಾಗಿದ್ದು, ಇನ್ನೂ ಯಾರು ವೈಯಕ್ತಿಕ ಶೌಚಾಲಯ ಹೊಂದಿಲ್ಲವೋ ಅಂತವರನ್ನು ಗುರುತಿಸಿ ಶೌಚಾಲಯ ನಿರ್ಮಿಸಿಕೊಳ್ಳಲು ಮತ್ತು ಬಳಕೆ ಮಾಡಲು ಮನ ಪರಿವರ್ತನೆ ಮಾಡುವ ಕೆಲಸ ಮಾಡುತ್ತೇವೆ.
ಬಿ.ಮಂಜುನಾಥ್,ಆರೋಗ್ಯ ನಿರೀಕ್ಷಕ, ಪುರಸಭೆ