ಪ್ರತ್ಯೇಕತೆ ಕಾವು; ಉತ್ತರ ನಿರ್ಲಕ್ಷ್ಯದ ವಿರುದ್ಧ ಹೆಚ್ಚಿದೆ ದನಿ
Team Udayavani, Jul 28, 2018, 6:00 AM IST
ಬಳ್ಳಾರಿ: ಉತ್ತರ ಕರ್ನಾಟಕ ನಿರ್ಲಕ್ಷ್ಯ ವಿಚಾರ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ನಿರ್ಲಕ್ಷ್ಯ ಮುಂದುವರಿದರೆ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂದು ಉತ್ತರ ಕರ್ನಾಟಕದ ವಿವಿಧ ನಾಯಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿರುವ ಕುರಿತು ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸವಾಲು ಹಾಕಿರುವ ಬೆನ್ನಲ್ಲೇ ಬಿಜೆಪಿ ನಾಯಕ ಶ್ರೀರಾಮುಲು, ಜನರನ್ನು ಪದೇ ಪದೇ ಕೆಣಕಬೇಡಿ ಎಂದು ಎಚ್ಚರಿಸಿದ್ದಾರೆ. ವಿವಿಧ ಮಠಾಧೀಶರೂ ಉತ್ತರ ಕರ್ನಾಟಕದ ಅಭಿವೃದ್ಧಿಯತ್ತ ಗಮನಹರಿಸಿ ಎಂದು ಕಿವಿಮಾತು ಹೇಳಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು, ಉತ್ತರ ಕರ್ನಾಟಕ ಅಭಿವೃದ್ಧಿಯತ್ತ ನಿರ್ಲಕ್ಷ್ಯ ವಹಿಸಿದರೆ ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣ ಮಾದರಿಯಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಬಿಜೆಪಿ ನಾಯಕ ಬಿ.ಶ್ರೀರಾಮುಲು ಎಚ್ಚರಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದ್ದಾರೆ. ಸಾಲಮನ್ನಾಕ್ಕಾಗಿ ಕೊಪ್ಪಳದಲ್ಲಿ ರೈತರು ಪ್ರತಿಭಟಿಸಿದ್ದನ್ನು ಟೀಕಿಸಿದ್ದಾರೆ. ಉತ್ತರ ಕರ್ನಾಟಕದ ರೈತರು, ಜನರನ್ನು ಪದೇ ಪದೇ ಕೆಣಕುತ್ತಿದ್ದಾರೆ ಎಂದು ದೂರಿದರು.
ಉತ್ತರ ಕರ್ನಾಟಕದ ನಿರ್ಲಕ್ಷ್ಯ ಕುರಿತು ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಅವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಮುಂದುವರಿದರೆ ಉತ್ತರ ಕರ್ನಾಟಕವನ್ನು ಪ್ರತ್ಯೇಕಗೊಳಿಸಬೇಕೆಂಬ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜೀನಾಮೆ ಹೊಸದಲ್ಲ
ನನಗೆ ರಾಜಕೀಯ ಮುಖ್ಯವಲ್ಲ. ರಾಜೀನಾಮೆ ಕೊಡುವುದು ಹೊಸದೇನಲ್ಲ. ಹಿಂದೆಯೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸದನಾಗಿದ್ದೇನೆ. ಹೀಗಾಗಿ ನನಗೆ ಜನರೇ ಮುಖ್ಯ. ಮೈತ್ರಿ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಯೋಜನೆಗಳ ಅನುಷ್ಠಾನ, ಅನುದಾನ ನೀಡುವಲ್ಲಿ ಅನ್ಯಾಯ ಮುಂದುವರಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣ ಮಾದರಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಮುಲು ಎಚ್ಚರಿಸಿದರು.
ಕುಮಾರಸ್ವಾಮಿಯವರು ಕೇವಲ ಐದಾರು ಜಿಲ್ಲೆಗಳ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ದೊರೆತ ನಂತರ ನಾಡಿನ ಜನರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಇಂಥ ಮುಖ್ಯಮಂತ್ರಿಯನ್ನು ರಾಜ್ಯದ ಜನ ಹಿಂದೆಂದೂ ಕಂಡಿರಲಿಲ್ಲ. ಸಾಲಮನ್ನಾ ವಿಚಾರದಲ್ಲಿ ವಚನ ಭ್ರಷ್ಟರಾದ ಕುಮಾರಸ್ವಾಮಿ, ರೈತರಲ್ಲಿ ಅನಾವಶ್ಯಕ ಗೊಂದಲ ಮೂಡಿಸುತ್ತಿದ್ದಾರೆ ಎಂದರು.
ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿಲ್ಲ ಎಂದು ಕುಮಾರಸ್ವಾಮಿ ನಾಟಕವಾಡುತ್ತಿದ್ದಾರೆ. ಮೈತ್ರಿ ಸರ್ಕಾರ ರಚನೆಯಾಗಿ ಎರಡು ತಿಂಗಳಾದರೂ ಟೇಕ್‌ಆಫ್ ಆಗದೆ ನಿಷ್ಕಿಯಗೊಂಡಿದೆ. ಸಿಎಂ ಆದ ಬಳಿಕ ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳದೆ ಕೇವಲ ಹಾಸನ, ಮಂಡ್ಯ, ರಾಮನಗರ ಸೇರಿ ಐದಾರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಆರೋಪಿಸಿದರು.
ಅಭಿವೃದ್ಧಿ ಅಲಕ್ಷ್ಯವೇ ಈ ಕೂಗಿಗೆ ಕಾರಣ ದಿಂಗಾಲೇಶ್ವರ ಶ್ರೀ
ದಾವಣಗೆರೆ: ಸಮಗ್ರ ಕರ್ನಾಟಕ ಒಂದೇ ಎಂಬ ಭಾವನೆಯಿಂದ ಅಭಿವೃದ್ಧಿ ಮಾಡಿದ್ದೇ ಆದಲ್ಲಿ ಪ್ರತ್ಯೇಕ ರಾಜ್ಯದ ಅವಶ್ಯಕತೆ ಇಲ್ಲ. ಆದರೆ, ಈಗಿನ ಧೋರಣೆಯೇ ಮುಂದುವರಿದಲ್ಲಿ ಪ್ರತ್ಯೇಕತೆ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಸ್ವಾಮೀಜಿಗಳು ಚಿಂತನೆ ನಡೆಸುವ ಕಾಲ ಬಂದೀತು ಎಂದು ಗದಗ ಜಿಲ್ಲೆ ಬಾಳೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯ ಸ್ಥಾಪನೆ ಆಗಬೇಕು ಎನ್ನುವ ಪ್ರಸಂಗ ಸದ್ಯಕ್ಕೆ ಇಲ್ಲವಾದರೂ ಅಭಿವೃದ್ಧಿ ವಿಚಾರವಾಗಿ ತಾರತಮ್ಯ ಮಾಡುತ್ತಿರುವುದೇ ಪ್ರತ್ಯೇಕತೆ ಕೂಗಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಿದರು.
ಚುನಾವಣೆ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಬಹು ಮುಖ್ಯ ವಿಚಾರ, ಸಮಸ್ಯೆ ಪ್ರಸ್ತಾಪಿಸಿ, ಸರ್ಕಾರ ರಚನೆ ನಂತರ ಉತ್ತರ ಕರ್ನಾಟಕವನ್ನು ನಿರ್ಲಕ್ಷé ಮಾಡುವುದನ್ನು ಕಾಣುತ್ತಲೇ ಬರುತ್ತಿದ್ದೇವೆ. ಉತ್ತರ ಕರ್ನಾಟಕವನ್ನು “ಬಳಕೆ ಕರ್ನಾಟಕ’…ದಂತೆ ಮಾಡಿಕೊಳ್ಳುವ ಧೋರಣೆ ಕೈ ಬಿಡಬೇಕು. ಇದೇ ಧೋರಣೆ ಮುಂದುವರೆದಲ್ಲಿ ತೆಲಂಗಾಣ, ಸೀಮಾಂಧ್ರ ಮಾದರಿಯಲ್ಲಿ ಪ್ರತ್ಯೇಕಿಸುವ ಕಾಲ ಸನ್ನಿಹಿತ ಆಗಬಹುದು. ಅಭಿವೃದ್ಧಿ ವಿಚಾರವಾಗಿ ತಾರತಮ್ಯ ಮುಂದುವರಿದಿದ್ದೇ ಆದಲ್ಲಿ ಪ್ರತ್ಯೇಕ ರಾಜ್ಯದ ಕೂಗಿಗೆ ಉತ್ತರ ಕರ್ನಾಟಕದ ಸ್ವಾಮೀಜಿಗಳು ಚಿಂತನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.
ಉತ್ತರ ಕರ್ನಾಟಕದವರಿಗೆ ರಾಜ್ಯ ಇಬ್ಭಾಗಿಸುವ ಬಯಕೆ ಇಲ್ಲ: ಜಯ ಮೃತ್ಯುಂಜಯ ಸ್ವಾಮೀಜಿ
ದಾವಣಗೆರೆ: ಕರ್ನಾಟಕವನ್ನು ಎರಡು ಭಾಗ ಮಾಡಬೇಕು ಎಂಬುದು ಉತ್ತರ ಕರ್ನಾಟಕದ ಜನರ ಯಾರ ಹೃದಯದಲ್ಲೂ ಇಲ್ಲ. ಅನ್ಯಾಯ, ನಿರೀಕ್ಷಿತ ಸೌಲಭ್ಯ ಸಿಗದೇ ಹೋದಾಗ ಪ್ರತ್ಯೇಕತೆ ಕೂಗು ಸಾಮಾನ್ಯ. ಆ ಕೂಗು ಶಮನವಾಗಲು ಸಂಬಂಧಿತರು ಉತ್ತರ ಕರ್ನಾಟಕಕ್ಕೆ ಸೂಕ್ತ ನ್ಯಾಯ ಒದಗಿಸಲು ಮುಂದಾಗಬೇಕು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಆ. 2 ರಂದು ಕರೆ ನೀಡಿರುವ 13 ಜಿಲ್ಲೆಗಳ ಬಂದ್ ಹಿನ್ನೆಲೆಯಲ್ಲಿ ಈಗಾಗಲೇ ಬೆಳಗಾವಿಯಲ್ಲಿ ಉತ್ತರ ಕರ್ನಾಟಕದ ಸ್ವಾಮೀಜಿಗಳ ಸಭೆ ನಡೆದಿದೆ. ಮತ್ತೂಮ್ಮೆ ಜು. 31 ರಂದು ಉತ್ತರ ಕರ್ನಾಟಕದ ಸ್ವಾಮೀಜಿಗಳ ಸಭೆ ನಡೆಯಲಿದೆ. ಆ ಸಭೆಯ ಉದ್ದೇಶ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ವಿಚಾರವಾಗಿಯೇ ಹೊರತು ಬೇರೆ ಯಾವುದೇ ವಿಚಾರಕ್ಕಾಗಿ ಅಲ್ಲವೇ ಅಲ್ಲ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.
ಉತ್ತರ ಕರ್ನಾಟಕ ಭಾಗಕ್ಕೆ ಈ ಹಿಂದೆ ಅನ್ಯಾಯವಾದಾಗ, ಸೌಲಭ್ಯ ಸಿಗದಿದ್ದಾಗ ಹಲವಾರು ಬಾರಿ ಪ್ರತ್ಯೇಕತೆ ಕೂಗು ಕೇಳಿ ಬಂದಿದೆ. 70 ವರ್ಷಗಳಿಂದ ಉತ್ತರ ಕರ್ನಾಟಕ ಹಿಂದುಳಿದ ಪ್ರದೇಶವಾಗಿದೆ. ಕೃಷ್ಣಾ ನದಿ, ಮಹದಾಯಿ ವಿಚಾರದಲ್ಲಿ ಅನ್ಯಾಯವಾದಾಗ ಅಂತಹ ಕೂಗು ಕೇಳಿ ಬಂದಿತ್ತು. ಈಗ ಮತ್ತೆ ಕೇಳಿ ಬರುತ್ತಿದೆ. ನಮಗೆ ಅನ್ಯಾಯವಾಗಿದೆ ಎಂದು ಆ ರೀತಿ ಹೇಳುತ್ತಿದ್ದಾರೆ. ಉತ್ತರ ಕರ್ನಾಟಕದವರಿಗೆ ಪ್ರತ್ಯೇಕ ಆಗಬೇಕು ಎಂಬ ಬಯಕೆ ಇಲ್ಲ. ಅಭಿವೃದ್ಧಿ ಆಗಬೇಕು ಎಂಬ ಬಯಕೆ ಇದೆ ಎಂದರು.
ಪ್ರತ್ಯೇಕ ರಾಜ್ಯ ಬೇಡಿಕೆ ಸರಿಯಲ್ಲ: ಸಂಸದೆ ಶೋಭಾ
ಮೈಸೂರು: ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಂಸದೆ ಶೋಭಾ ಕರಂದ್ಲಾಜೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಎಲ್ಲಾ ಸಮಸ್ಯೆಗಳಿಗೂ ಉತ್ತರ ಸಿಗುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕೆಂಬ ಬೇಡಿಕೆ ಇಟ್ಟಿರುವುದು ಸರಿಯಲ್ಲ. ಅಲ್ಲದೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ ಮಾತ್ರಕ್ಕೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುವುದಿಲ್ಲ ಎಂದರು.
ಈಗಾಗಲೇ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳು ಪ್ರತ್ಯೇಕವಾದ ನಂತರ ಈ ರಾಜ್ಯಗಳು ದುರ್ಬಲಗೊಂಡಿದ್ದು, ಈ ಪರಿಸ್ಥಿತಿ ನಮ್ಮ ರಾಜ್ಯಕ್ಕೂ ಬರಬಾರದು. ಅಲ್ಲದೆ ಮಹದಾಯಿ, ಕೃಷ್ಣ, ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ನ್ಯಾಯ ಸಿಗಬೇಕಾದರೆ ಇಡೀ ರಾಜ್ಯದ ಜನರು ಒಗ್ಗಟ್ಟಿನಿಂದಿರಬೇಕು. ಉತ್ತರ ಕರ್ನಾಟಕದ ಜನರೊಂದಿಗೆ ಬಿಜೆಪಿ ಸದಾ ಇರಲಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ರಾಜನಾಗಿದ್ದು, ರಾಜ್ಯದ ಎಲ್ಲಾ ಭಾಗಗಳ ಜನರ ಸಮಸ್ಯೆಗೆ ಮುಖ್ಯಮಂತ್ರಿಗಳು ಸಮಾನವಾಗಿ ಸ್ಪಂದಿಸಬೇಕು. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೇವಲ ಮೂರ್ನಾಲ್ಕು ಜಿಲ್ಲೆಗೆ ಮಾತ್ರ ಸೀಮಿತರಾಗಿದ್ದು, ಇದೇ ಕಾರಣದಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಕೂಗು ಎದ್ದಿದೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದ.ಕ.ದ ವೈಭವಿ, ಉಡುಪಿಯ ಧೀರಜ್ ಐತಾಳ್ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ
D.K. Shivakumar: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಬಗ್ಗೆ ಚರ್ಚೆ
KEA: ಎಂಎಸ್ಸಿ ನರ್ಸಿಂಗ್: ಅರ್ಜಿ ಸಲ್ಲಿಕೆಗೆ ಡಿ. 2 ಕೊನೆ ದಿನ
Karnataka: ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಸಲು ಡಿ. 9 ಕಡೇ ದಿನ
ಸಾಹಿತ್ಯ ಸಮ್ಮೇಳನನ ಖರ್ಚು ಕಡಿತಗೊಳಿಸಿ ಹಂಪಿ ಕನ್ನಡ ವಿ.ವಿ.ಗೆ ನೆರವು: ಜೋಶಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.