ಅಂತಾರಾಜ್ಯ ಗಡಿಯಲ್ಲಿ ಹದ್ದಿನ ಕಣ್ಣಿಡಿ
Team Udayavani, Mar 15, 2019, 11:19 AM IST
ಬಳ್ಳಾರಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗಣಿಜಿಲ್ಲೆ ಬಳ್ಳಾರಿ ಹೊಂದಿಕೊಂಡಿರುವ ನೆರೆಯ ಆಂಧ್ರ ಪ್ರದೇಶದ ಕರ್ನೂಲ್ ಮತ್ತು ಅನಂತಪುರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ 11 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಸಂಚರಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ| ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ-ಆಂಧ್ರಪ್ರದೇಶದ ಅಂತರಾಜ್ಯ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 9 ವಿಧಾನಸಭಾ ಕ್ಷೇತ್ರಗಳಿದ್ದು, 8 ಕ್ಷೇತ್ರಗಳು ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಜಿಲ್ಲೆಯ ಸಿರುಗುಪ್ಪ ಕ್ಷೇತ್ರ ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಸೇರುತ್ತದೆ. ಜಿಲ್ಲೆಯಲ್ಲಿನ ಒಟ್ಟು 10 ತಾಲೂಕುಗಳಲ್ಲಿ ಬಳ್ಳಾರಿ, ಸಂಡೂರು, ಸಿರುಗುಪ್ಪ ತಾಲೂಕುಗಳು ನೆರೆಯ ಆಂಧ್ರಪ್ರದೇಶದ ಅನಂತಪುರ, ಕರ್ನೂಲು ಜಿಲ್ಲೆಗೆ ಗಡಿಯನ್ನು ಹಂಚಿಕೊಂಡಿವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 36 ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಅದರಲ್ಲಿ ಜಿಲ್ಲಾ ಹೆದ್ದಾರಿಗಳಲ್ಲಿ 25 ಚೆಕ್‌ಪೋಸ್ಟ್ ಮತ್ತು 11 ಅಂತರ್‌ರಾಜ್ಯ ಸಂಪರ್ಕ ಕಲ್ಪಿಸುವ ಗಡಿರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳು ಸ್ಥಾಪಿಸಿ ಮದ್ಯ, ಹಣ ಸೇರಿದಂತೆ ಇನ್ನಿತರೆ ಸಾಗಾಣಿಕೆ ವಸ್ತುಗಳ ಮೇಲೆ ಕಣ್ಣಿಡಲಾಗಿದ್ದು, ಚುನಾವಣೆಯನ್ನು ಅತ್ಯಂತ ಶಾಂತಿ, ಸುವ್ಯವಸ್ಥೆಯಿಂದ ನಡೆಸುವ ಸಲುವಾಗಿ ಸಹಕಾರ ನೀಡುವಂತೆ ಆಂಧ್ರದ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳ ಕಂದಾಯ, ಪೊಲೀಸ್ ಅಬಕಾರಿ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮತ್ತು ಹಣ ಹರಿದು ಬರುವ ಸಾಧ್ಯತೆಯಿದೆ. ಅದಕ್ಕೆ ಕಡಿವಾಣ ಹಾಕಲು ಬಳ್ಳಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಅಗತ್ಯವಿರುವೆಡೆ ಚೆಕ್‌ಪೋಸ್ಟ್ ವ್ಯವಸ್ಥೆ ಸೇರಿ ಇನ್ನಿತರೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇನ್ನು ಗಡಿಯಲ್ಲಿ ಮದ್ಯ ಮಾರಾಟ, ಸಾಗಾಣಿಕೆ ಪ್ರಮಾಣದಲ್ಲಿ ಹೆಚ್ಚಳದ ಕುರಿತು ಅನಂತಪುರ, ಕರ್ನೂಲ್, ಬಳ್ಳಾರಿಯ ಜಿಲ್ಲೆಯ ಅಬಕಾರಿ ಅಧಿಕಾರಿಗಳು ಪ್ರತಿನಿತ್ಯ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಅದಕ್ಕಾಗಿ ವಾಟ್ಸ್‌ಆಪ್ ಗ್ರೂಪ್ ರಚಿಸಬೇಕು ಎಂದವರು ಸೂಚಿಸಿದರು.
ಆಂಧ್ರದೊಂದಿಗೆ ಸಂಬಂಧ: ಬಳ್ಳಾರಿ ಜಿಲ್ಲೆ ರಾಜಕೀಯ, ಆರ್ಥಿಕವಾಗಿ ಆಂಧ್ರಪ್ರದೇಶದೊಂದಿಗೆ ಬಹಳಷ್ಟು ಸಂಬಂಧ ಹೊಂದಿದೆ. ಚುನಾವಣೆ ಹಿನ್ನೆಲೆಯಲ್ಲಿ ಮಾಹಿತಿ ವಿನಿಮಯ, ಚೆಕ್‌ಪೋಸ್ಟ್ ಆರಂಭ, ರೌಡಿಶೀಟರ್‌ಗಳ ಚಿತ್ರ ಸಮೇತ ವಿವರ ಸೇರಿ ಇನ್ನಿತರೆ ಮಾಹಿತಿಗಳನ್ನು ಜಿಲ್ಲೆಯ ಅಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಸಭೆಗೆ ಆಗಮಿಸಿದ್ದ ಅನಂತಪುರ, ಕರ್ನೂಲ್ ಜಿಲ್ಲೆಯ ಅಬಕಾರಿ, ಕಂದಾಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಈ ವೇಳೆ ಮಾತನಾಡಿದ ಎಸ್‌ಪಿ ಅರುಣ್ ರಂಗರಾಜನ್, ಆಂಧ್ರ ಪ್ರದೇಶದ ರೌಡಿಶೀಟರ್‌ಗಳು ಗಡಿಭಾಗದ ಹಳ್ಳಿಗಳಿಂದ ನುಸುಳಿ ಬಂದು ಇಲ್ಲಿನ ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದ್ದು, ಕೂಡಲೇ ತಮ್ಮ ಜಿಲ್ಲೆಗಳ ರೌಡಿಶೀಟರ್‌ಗಳ ಮಾಹಿತಿಯನ್ನು ವಿನಿಮಯ ಡಿಕೊಳ್ಳಬೇಕು ಎಂದು ಕೋರಿದರು. ಜತೆಗೆ ಜಿಲ್ಲೆಯ ಗಡಿಭಾಗದಲ್ಲಿನ ಪೊಲೀಸ್ ಠಾಣೆಗಳಲ್ಲಿನ ರೌಡಿಶೀಟರ್‌ಗಳ ಪಟ್ಟಿಯಲ್ಲಿರುವ ಹೆಸರುಗಳನ್ನು ಆಂಧ್ರದ ಅಧಿಕಾರಿಗಳೊಂದಿಗೆ ವಿನಿಮಯ ಮಾಡಿಕೊಳ್ಳಬೇಕು. ಗಡಿಯಲ್ಲಿನ ಚೆಕ್‌ಪೋಸ್ಟ್‌ಗಲ್ಲಿನ ಸಿಬ್ಬಂದಿಗಳು ಈ ಬಗ್ಗೆ ನಿಗಾವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸತೀಶಕುಮಾರ್, ಹೆಚ್ಚುವರಿ ಎಸ್‌ಪಿ ಲಾವಣ್ಯ, ಅಬಕಾರಿ ಉಪ ಅಧೀಕ್ಷಕ ವಿನೋದ ಡಾಂಗೆ, ಬಳ್ಳಾರಿ, ಅನಂತಪುರ, ಕರ್ನೂಲ್ ಜಿಲ್ಲೆಗಳ ಪೊಲೀಸ್, ಕಂದಾಯ, ಅಬಕಾರಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಗಡಿಯಲ್ಲಿ 11 ಚೆಕ್‌ಪೋಸ್ಟ್ ಜಿಲ್ಲೆಯಲ್ಲಿ ಅಂತರಾಜ್ಯ ಗಡಿ ಹಂಚಿಕೊಂಡಿರುವ ಸಿರುಗುಪ್ಪ ತಾಲೂಕಿನಲ್ಲಿ ಕೆ.ಬೆಳಗಲ್ಲು, ಇಟಗಿಹಾಳ್, ಮುರಣಿ, ಮಾಟಸೂಗೂರು, ಬಳ್ಳಾರಿ ತಾಲೂಕಿನಲ್ಲಿ ಹಲಕುಂದಿ, ಎತ್ತಿನಬೂದಿಹಾಳ್, ರೂಪನಗುಡಿ, ಜೋಳದರಾಶಿ, ಕಾರೆಕಲ್ಲು, ಸಿಂಧುವಾಳ, ಸಂಡೂರು ತಾಲೂಕಿನಲ್ಲಿ ಎಂ.ಗಂಗಲಾಪುರ (ದಿಕ್ಕಲದಿನ್ನಿ)ದಲ್ಲಿ ಚೆಕ್ ಪೋಸ್ಟ್‌ಗಳಣ್ನು ಸ್ಥಾಪಿಸಿ ಆಂಧ್ರದಿಂದ ಬರುವ ವಾಹನಗಳ ಮೇಲೆ ನಿಗಾ ವಹಿಸಬೇಕು. ಜಿಲ್ಲೆಯಲ್ಲಿ ಒಟ್ಟು 72 ಹಳ್ಳಿಗಳು ಅಂತರಾಜ್ಯ ಗಡಿ ಹಂಚಿಕೊಂಡಿದ್ದು, ಎಲ್ಲೆಡೆ ಮುಂಜಾಗ್ರತಾ
ಕ್ರಮ ಕೈಗೊಳ್ಳಲಾಗಿದೆ.
ಡಾ| ರಾಮ್ ಪ್ರಸಾತ್ ಮನೋಹರ್, ಜಿಲ್ಲಾ ಚುನಾವಣಾಧಿಕಾರಿ.
ಆಮಿಷ-ಬೆದರಿಕೆ ಹಾಕುವುದು ಅಪರಾಧ
ಸಿರುಗುಪ್ಪ: ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊಪ್ಪಳ ಲೋಕಸಭಾ ಚುನಾವಣೆಯನ್ನು ಕಟ್ಟುನಿಟ್ಟಾಗಿ ನಡೆಸಲು ಅನೇಕ ಕ್ರಮ ಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಮಹಾಂತೇಶ ಮಾಹಿತಿ ನೀಡಿದರು.
ನಗರದ ತಾಲೂಕು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಒಟ್ಟು 226 ಮತಗಟ್ಟೆಗಳಿದ್ದು, ಪುರುಷ ಮತದಾರರ ಸಂಖ್ಯೆ 1,01,451, ಮಹಿಳಾ ಮತದಾರರ ಸಂಖ್ಯೆ 1,03,660, ಇತರೆ 29 ಸೇರಿ ಒಟ್ಟು 2.05,140 ಮತದಾರರಿದ್ದು, ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಹೊಂದಿದ್ದಾರೆ. ಹೊಸದಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಳಿಸಲು ನಮೂನೆ -6ರಲ್ಲಿ 1702, ನಮೂನೆ-07 716, ನಮೂನೆ-08ರಲ್ಲಿ 651, ನಮೂನೆ 8ಎ 69ಅರ್ಜಿ ಸ್ವೀಕರಿಸಲಾಗಿದೆ.
226 ಮತಗಟ್ಟೆಗಳಲ್ಲಿ 185 ಸಾಧಾರಣ, 41 ಅತಿಸೂಕ್ಷ್ಮ ಮತಗಟ್ಟೆಗಳಿದ್ದು, ಇದರಲ್ಲಿ 57 ಭೀತಿಯುಕ್ತ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಇಂತಹ ಮತಗಟ್ಟೆಗಳಲ್ಲಿ ಮತದಾರರಿಗೆ ಭೀತಿ ಮುಕ್ತವಾಗಿ ಮತದಾನ ಮಾಡುವುದಕ್ಕೆ ಚುನಾವಣಾ ಸಾಕ್ಷರತ ಸಮಿತಿಯ ಅಧಿಕಾರಿಗಳು ಮತದಾರರಿಗೆ ಇಂತಹ ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸಲಿದ್ದಾರೆ ಹಾಗೂ ಮುಕ್ತ ಮತದಾನಕ್ಕೆ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಚುನಾವಣಾ ಕಂಟ್ರೂಲ್ ರೂಂ ಸ್ಥಾಪಿಸಲಾಗಿದ್ದು, ರಾಜಕೀಯ ಪಕ್ಷಗಳು ಮತ್ತು ರಾಜಕೀಯೇತರ ಉದ್ದೇಶಗಳ ಕಾರ್ಯಕ್ರಮಗಳಿಗೆ ಪರವಾನಗಿ ನೀಡಲು, ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಚುನಾವಣೆ ಕುರಿತು ದೂರು ನೀಡಲು ಕಂಟ್ರೂಲ್ ರೂಂ (08396-220238) ದೂರವಾಣಿ ಮೂಲಕ ಅಥವಾ ಚುನಾವಣಾ ಆಯೋಗವು ಹೊರ ತಂದಿರುವ ಸಿ-ವಿಜನ್ ಆಪ್‌ನ ಮೂಲಕ ನೇರವಾಗಿ ದೂರು ದಾಖಲಿಸಬಹುದಾಗಿದೆ ಎಂದು ತಿಳಿಸಿದರು. ಸಿರುಗುಪ್ಪ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಗ್ರಾಮ ಮತ್ತು ನಗರಗಳಲ್ಲಿ ನಡೆಯುವ ಧಾರ್ಮಿಕ, ಸಾಮಾಜಿಕ, ಮದುವೆ ಸಮಾರಂಭಗಳಿಗೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.
ಚುನಾವಣೆ ಯಲ್ಲಿ ಮತದಾರರಿಗೆ ಮತದಾನಮಾಡಲು ಅಭ್ಯರ್ಥಿ ಹಾಗೂ ಪಕ್ಷದ ವತಿಯಿಂದ ಆಮಿಷ ಹಾಗೂ ಮದ್ಯಸರಬರಾಜು, ಬೆದರಿಕೆ ಒಡ್ಡುವುದು ಅಪರಾಧವಾಗಿದೆ. ಚುನಾವಣೆಯಲ್ಲಿ ಅಕ್ರಮ ತಡೆಯಲು 21 ಸೆಕ್ಟರ್ ಅಧಿಕಾರಿಗಳು, 21 ಎಸ್‌ಎಸ್‌ಸಿ ತಂಡದ ಅಧಿಕಾರಿಗಳು, 6 ಫ್ಲೆàಯಿಂಗ್ ಸ್ಕ್ವಾಡ್ ತಂಡಗಳು, 3 ವಿವಿಟಿ ತಂಡಗಳು, 4 ವಿಎಸ್‌ಟಿ ತಂಡದ ಅಧಿಕಾರಿಗಳು ಹಾಗೂ ಖರ್ಚು ವೆಚ್ಚ ಕುರಿತು ನಿಗಾವಹಿಸಲು 3 ತಂಡಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕಿನಲ್ಲಿ ಇಬ್ರಾಹಿಂಪುರ, ವತ್ತುಮುರುವಣಿ, ಇಟಿಗಿಹಾಳ್, ಕೆ.ಬೆಳಗಲ್, ಮಾಟಸೂಗೂರು, ದಾಸಾಪುರ ಗ್ರಾಮಗಳಲ್ಲಿ 6 ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಇಲ್ಲಿ ಚುನಾವಣಾ ಸಿಬ್ಬಂದಿ ಸರದಿ ಸಾಲಿನ ಪ್ರಕಾರ ಕಾರ್ಯನಿರ್ವಹಿಸಲಿದ್ದಾರೆ. 6 ಎಂಸಿಸಿ ತಂಡ ನೇಮಿಸಿದ್ದು, ಈ ತಂಡದಲ್ಲಿ ತಹಶೀಲ್ದಾರರು, ತಾಪಂ ಇಒ, ನಗರಸಭೆ ಪೌರಾಯುಕ್ತ, ಪಪಂ ಮುಖ್ಯಾಧಿಕಾರಿ ಹಾಗೂ ತಾಲೂಕಿನ 27 ಗ್ರಾಪಂನ ಪಿಡಿಒಗಳು, ಗ್ರಾಮ ಲೆಕ್ಕಾಧಿಕಾರಿಗಳು, ಹಾಗೂ ಬಿಲ್ ಕಲೆಕ್ಟರ್‌ಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ದಯಾನಂದ ಪಾಟೀಲ್, ತಾಪಂ ಇಒ ಶಿವಪ್ಪ ಸುಬೇದಾರ್ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
Bellary: ಶೀಘ್ರದಲ್ಲೇ ಸಿಎಂ ರಾಜೀನಾಮೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.