ಬಿಡಿಸಿಸಿ ಗಾದಿಗೆ ಸಚಿವ ಆನಂದ್ ಸಿಂಗ್ ಸ್ಪರ್ಧೆ?
Team Udayavani, Feb 4, 2021, 8:43 PM IST
ಹೊಸಪೇಟೆ: ಸಹಕಾರಿ ರಂಗದ ಕಡೆ ಒಲವು ತೋರಿರುವ ಸಚಿವ ಆನಂದ್ ಸಿಂಗ್ ಅವರು ಫೆ. 9ರಂದು ನಡೆಯಲಿರುವ ಇಲ್ಲಿನ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಬಿಡಿಸಿಸಿ)ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧೆ ಮಾಡಲು ಅಣಿಯಾಗಿದ್ದಾರೆ.
ಇತ್ತೀಚಿಗಷ್ಟೆ ಬಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾಗಿ ಮೊದಲ ಬಾರಿಗೆ ಆಯ್ಕೆಯಾಗಿರುವ ಆನಂದ್ ಸಿಂಗ್ ಅವರು, ಶತಮಾನ ಪೂರೈಸಿರುವ ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯಲು ಮುಂದಾಗಿದ್ದಾರೆ. ಈಗಾಗಲೇ ಅವರ ಆಪ್ತ ವಲಯದಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಆನಂದ್ ಸಿಂಗ್ ಅವರು ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಅವರ ಆಪ್ತವಲಯದಿಂದಲೇ ಕೇಳಿ ಬರುತ್ತಿದೆ.
ಕಳೆದ ತಿಂಗಳು ಸಿರುಗುಪ್ಪದ ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯ ಅವರು ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬ್ಯಾಂಕ್ ನ ಬಹುತೇಕ ನಿರ್ದೇಶಕರು ಸಚಿವ ಆನಂದ್ ಸಿಂಗ್ ಅವರ ಪರ ಒಲವು ಹೊಂದಿದ್ದು, ಅವರು ಚುಕ್ಕಾಣಿ ಹಿಡಿದರೆ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಕಾಣಲಿದೆ. ಜತೆಗೆ ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂಬ ಆಶಾಭಾವವನ್ನು ನಿರ್ದೇಶಕರು ಹೊಂದಿದ್ದಾರೆ. ಈ ಬ್ಯಾಂಕ್‌ನ ನಿರ್ದೇಶಕರು ಹಾಗೂ ಅಧ್ಯಕ್ಷರಾಗಿ ಮಾಜಿ ಶಾಸಕ ದಿ. ಎಂ.ಪಿ. ರವೀಂದ್ರ ಅವರು ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ಹಲವು ಬಾರಿ ಎಂ.ಪಿ. ರವೀಂದ್ರ ಅವರೇ ಸಹಕಾರ ಕ್ಷೇತ್ರಕ್ಕೆ ಕಾಲಿಡಲು ಆನಂದ್ ಸಿಂಗ್ ಅವರಿಗೆ ಸಲಹೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ಫೆ. 9ರಂದು ಚುನಾವಣೆ ನಿಗದಿಯಾಗಿದೆ. ಸಚಿವ ಆನಂದ್ ಸಿಂಗ್ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಫೆ. 9ರಂದೇ ಎಲ್ಲವೂ ಗೊತ್ತಾಗಲಿದೆ ಎಂದು ಹೆಸರು ಹೇಳಲಿಚ್ಛಿಸದ ನಿರ್ದೇಶಕರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ಪದ್ಮಶ್ರೀ ಪ್ರಶಸ್ತಿ ಕನ್ನಡ ಜನತೆಗೆ ಅರ್ಪಣೆ: ಮಂಜಮ್ಮ ಜೋಗತಿ
ನಾಮಪತ್ರ ಸಲ್ಲಿಕೆ: ಫೆ. 9ರ ಬೆಳಗ್ಗೆ 11 ಗಂಟೆವರೆಗೆ ನಾಮಪತ್ರ ಸಲ್ಲಿಕೆ, ಮಧ್ಯಾಹ್ನ 1 ಗಂಟೆಯಿಂದ 1:15ರ ವರೆಗೆ ನಾಮಪತ್ರಗಳ ಪರಿಶೀಲನೆ, 1:30ರಿಂದ 2 ಗಂಟೆಯವರೆಗೆ ನಾಮಪತ್ರ ವಾಪಾಸಾತಿಗೆ ಅವಕಾಶ. 2:15ಕ್ಕೆ ಅಂತಿಮವಾಗಿ ಕಣದಲ್ಲಿ ಉಳಿದವರ ಹೆಸರು ಪ್ರಕಟ, ಮಧ್ಯಾಹ್ನ 2:30ಕ್ಕೆ ಅವಶ್ಯಕತೆ ಇದ್ದರೆ ಮತದಾನ ಪ್ರಕ್ರಿಯೆ, ಬಳಿಕ ಮತ ಎಣಿಕೆ ಮಾಡಿ ಫಲಿತಾಂಶವನ್ನು ಚುನಾವಣಾ ಕಾರಿ ಆಗಿರುವ ತಹಸೀಲ್ದಾರ್ ಎಚ್. ವಿಶ್ವನಾಥ ಪ್ರಕಟಿಸಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.