ಮೊಹರಂ ಆಚರಣೆ ವೇಳೆ ಕಟ್ಟಡ ಕುಸಿದು ಬಾಲಕಿ ಸಾವು
Team Udayavani, Sep 22, 2018, 6:00 AM IST
ಬಳ್ಳಾರಿ/ಹೊಸಪೇಟೆ: ಮೊಹರಂ ಹಬ್ಬ ಆಚರಣೆ ವೇಳೆ ಹಳೆಯ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ 14 ವರ್ಷದ ಬಾಲಕಿ ಮೃತಪಟ್ಟು, 58 ಜನರು ಗಾಯಗೊಂಡ ಘಟನೆ ನಗರದ ಚಿತ್ತವಾಡ್ಗಿಯಲ್ಲಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.
ಉಷಾ ಹುಲುಗಪ್ಪ (14) ಮೃತ ಬಾಲಕಿ. ಗಂಭೀರವಾಗಿ ಗಾಯಗೊಂಡಿದ್ದ 8 ಜನರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆ
ಯಲ್ಲಿ ದಾಖಲಿಸಲಾಗಿದೆ.ಹೊಸಪೇಟೆ ಪುತ್ತೂರು ಆಸ್ಪತ್ರೆಯಲ್ಲಿ 6, ದೀಪಾಲಿ ಆಸ್ಪತ್ರೆಯಲ್ಲಿ 5, ಸಿಟಿ ಆಸ್ಪತ್ರೆಯಲ್ಲಿ 5, ತೋರಣಗಲ್‌ನ ಜಿಂದಾಲ್ ಸಂಜೀವಿನಿ ಆಸ್ಪತ್ರೆಯಲ್ಲಿ 4, ಕೊಪ್ಪಳ ಮತ್ತು ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ 30 ಮಂದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ: ಮೊಹರಂ ಅಂಗವಾಗಿ ಶುಕ್ರವಾರ ಬೆಳಗಿನ ಜಾವ ಚಿತ್ತವಾಡ್ಗಿಯಲ್ಲಿ ಪ್ರತಿಷ್ಠಾಪಿಸಿದ್ದ ರಾಮಲ್‌ವುಲ್ಲಿಸಾಬ್(ರಾಮಲ್ಲಿಸ್ವಾಮಿ) ಪೀರಲ ದೇವರ ಮೆರವಣಿಗೆ ನಡೆದಿತ್ತು. ಇದನ್ನು ವೀಕ್ಷಿಸಲೆಂದು ರಸ್ತೆ ಬದಿಯ ಹಳೆಯ ಒಂದಸ್ತಿನ ಕಟ್ಟಡ ಮೇಲೆ ಸುಮಾರು 100ಕ್ಕೂ ಹೆಚ್ಚು ಜನರು ಹತ್ತಿದ್ದರು. ಭಾರ ಹೆಚ್ಚಿದ ಪರಿಣಾಮ ಮೊದಲೇ ಶಿಥಿಲಾವಸ್ಥೆ ತಲುಪಿದ್ದ ಕಟ್ಟಡ ಮೇಲ್ಛಾವಣಿ ಕುಸಿದು ಈ ಘಟನೆ ನಡೆದಿದೆ.
ಡೀಸಿ ಡಾ| ರಾಮ್ ಪ್ರಸಾತ್ ಮನೋಹರ್, ಎಸ್ಪಿ ಅರುಣ್ ರಂಗರಾಜನ್, ಬಳ್ಳಾರಿ ಎಸಿ,ಹೊಸಪೇಟೆ ಡಿವೈಎಸ್ಪಿ ಸೇರಿ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಸಚಿವರ ಭೇಟಿ: ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.ಈ ವೇಳೆ ಹೊಸಪೇಟೆ ಎಸಿ ವಿ.ಎನ್.ಲೋಕೇಶ್ ಘಟನೆ ಕುರಿತು ಸಚಿವರಿಗೆ ಮಾಹಿತಿ ನೀಡಿದರು.
ಗಾಯಾಳು ಹೊನ್ನಮ್ಮ ಅವರ ಮಗಳುರೇಣುಕಾಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲವೆಂದು ಸಚಿವರ ಬಳಿ ಗೋಳು ತೋಡಿಕೊಂಡರು.
50 ಸಾವಿರ ಪರಿಹಾರ ಘೋಷಣೆ: ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ, ಮೃತಪಟ್ಟ ಬಾಲಕಿ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ಘೋಷಿಸಲಾಗಿದ್ದು, ಬಳಿಕ ಸರ್ಕಾರದಿಂದ ಎಷ್ಟು ಪರಿಹಾರ ಕೊಡಬೇಕೆಂಬುದನ್ನು ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.
ಗಾಯಾಳುಗಳನ್ನು ಆಸ್ಪತ್ರೆಗೆ ಕರೆ ತಂದಾಗ ಆಸ್ಪತ್ರೆಯಲ್ಲಿ ಕೆಲ ವೈದ್ಯರು ಇರಲಿಲ್ಲವೆಂಬ ದೂರುಗಳು ಕೇಳಿ ಬಂದಿದ್ದು, ಈ ಕುರಿತು ಪರಿಶೀಲಿಸಿ, ವರದಿ ನೀಡುವಂತೆ ಎಸಿಗೆ ಸೂಚಿಸಲಾಗಿದೆ. ಮಾಹಿತಿ ಆಧರಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.