ವಿಜಯನಗರದ ವಿಜಯಿ ಯಾರು?
ಕೈ-ಕಮಲ ಲೆಕ್ಕಾಚಾರ ಮತ ಒಡೆದ ಜೆಡಿಎಸ್, ಬಿಜೆಪಿ ಬಂಡಾಯ ಅಭ್ಯರ್ಥಿ
Team Udayavani, Dec 7, 2019, 2:33 PM IST
ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಮತಸಮರ ಗುರುವಾರ ಮುಗಿದಿದ್ದು, ಕ್ಷೇತ್ರದ ಜನರ ಚಿತ್ತ ಡಿ.9 ರ ಮತ ಎಣಿಕೆಯತ್ತ ನೆಟ್ಟಿದೆ.
ಚುನಾವಣೆಯಲ್ಲಿ ಕಡಿಮೆ ಮತದಾನವಾದಷ್ಟು ಕಾಂಗ್ರೆಸ್‌ಗೆ ಲಾಭ ಎಂಬ ಮಾತೊಂದು ಚಾಲ್ತಿಯಲ್ಲಿದೆ. ಕೆಲವೊಮ್ಮೆ ಈ ಲೆಕ್ಕಾಚಾರ ಸರಿಯಾದದ್ದೂ ಇದೆ. ವಿಜಯನಗರ ಕ್ಷೇತ್ರದಲ್ಲಿ 2013ರ ಸಾರ್ವತ್ರಿಕ ಚುನಾವಣೆಯಲ್ಲಿ 72.81 ರಷ್ಟು, 2018ರ ಚುನಾವಣೆಯಲ್ಲಿ ಶೇ.68 ರಷ್ಟು ಮತದಾನವಾಗಿತ್ತು. ಈ ಉಪಚುನಾವಣೆಯಲ್ಲಿ ಕೇವಲ ಶೇ.64.95 ರಷ್ಟು ಮತದಾನವಾಗಿದ್ದು, ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.
ಕ್ಷೇತ್ರದಲ್ಲಿ ಈ ಹಿಂದೆ ನಡೆದ ಎರಡು ಉಪಚುನಾವಣೆಗಳಿಗಿಂತಲೂ ಈ ಬಾರಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದ್ದು, ಬಿಜೆಪಿ ಗೆಲುವು ಖಚಿತ ಎಂಬ ವಿಶ್ವಾಸದ ನುಡಿಗಳೂ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಹೀಗಾಗಿ ವಿಜಯನಗರದಲ್ಲಿ ವಿಜಯದ ಮಾಲೆ ಯಾರು ಧರಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಮತದ ಮೌಲ್ಯ ವೃದ್ಧಿಸದ ಕಾಂಗ್ರೆಸ್?: ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಆನಂದ್‌ಸಿಂಗ್ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷಕ್ಕೆ ಬಲಿಷ್ಠ ಅಭ್ಯರ್ಥಿ ಕೊರತೆ ಎದುರಾಗಿದ್ದು, ಕೊನೆಗೆ ಸಂಡೂರು ರಾಜವಂಶಸ್ಥರಾದ ವೆಂಕಟರಾವ್ ಘೋರ್ಪಡೆಯವರನ್ನು ಕರೆತಂದು ಕಣಕ್ಕಿಳಿಸಿದೆ. ಪರಿಣಾಮ ಕ್ಷೇತ್ರದಲ್ಲಿ ಸ್ಥಳೀಯ ಹಾಗೂ ಹೊರಗಿನ ಅಭ್ಯರ್ಥಿ ಎಂಬುದು ಹೆಚ್ಚು ಪ್ರಚಾರ ಪಡೆದಿದ್ದು, ಬಲಿಷ್ಠ ಆನಂದ್‌ಸಿಂಗ್ ವಿರುದ್ಧ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ ಎಂಬುದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಆರೋಪ. ಮೇಲಾಗಿ ಕ್ಷೇತ್ರದಲ್ಲಿ ಮತದ ಮೌಲ್ಯವನ್ನು ಬಿಜೆಪಿಯಷ್ಟು ವೃದ್ಧಿಸುವಲ್ಲೂ ಕಾಂಗ್ರೆಸ್ ವಿಫಲವಾಗಿದೆ ಎನ್ನಲಾಗುತ್ತಿದೆ.
ಇನ್ನು ಬಿಜೆಪಿಯಲ್ಲೂ ಒಳಬೇಗುದಿ ಹೆಚ್ಚಿದ್ದು, ಆನಂದ್‌ಸಿಂಗ್ ಮೇಲೆ ಅಸಮಾಧಾನಗೊಂಡಿದ್ದ ಮೂಲ ಬಿಜೆಪಿಗರು ಎಷ್ಟರ ಮಟ್ಟಿಗೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ ಎಂಬುದು ಡಿ.9ರ ಫಲಿತಾಂಶದ ದಿನ ಬಹಿರಂಗಗೊಳ್ಳಲಿದೆ.
ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಮಾಜಿ ಶಾಸಕ ಎನ್.ಎಂ.ನಬಿ, ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್ ಅರಸ್ ಕಣದಲ್ಲಿ ಇದ್ದರೂ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಪೈಪೋಟಿ ನಡೆದಿದೆ. ಜೆಡಿಎಸ್ ಅಭ್ಯರ್ಥಿ ಕಾಂಗ್ರೆಸ್ ಮತಗಳಿಗೆ ಕೈ ಹಾಕಿದರೆ ಬಿಜೆಪಿ ಬಂಡಾಯ ಅಭ್ಯರ್ಥಿಯೂ ಮತ ಒಡೆಯುವ ಸಾಧ್ಯತೆಯಿದೆ. ಆದರೆ, ಯಾವ ಪ್ರಮಾಣದಲ್ಲಿ ಮತ ಒಡೆದಿದ್ದಾರೆ ಎಂಬುದರ ಮೇಲೆ ಕಾಂಗ್ರೆಸ್-ಬಿಜೆಪಿಯ ಸೋಲು-ಗೆಲುವು ನಿರ್ಧಾರವಾಗಲಿದೆ.
ಇದಲ್ಲದೆ ಇನ್ನು ಹೊಸಪೇಟೆ ನಗರದಲ್ಲಿನ ಮಾರುಕಟ್ಟೆಗೆ ಗುರುವಾರ ರಜೆಯಿದ್ದು, ಮತದಾನವೂ ಅಂದೇ ನಡೆದಿದೆ. ಅಲ್ಲದೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ರಜೆಯನ್ನೂ ಘೋಷಿಸಲಾಗಿದ್ದು, ಮತದಾರರು ಹಕ್ಕು ಚಲಾಯಿಸಲು ಮನೆಯಿಂದ ಅಷ್ಟಾಗಿ ಹೊರಬಂದಿಲ್ಲ ಎನ್ನಲಾಗುತ್ತಿದೆ ಇದು ಕೂಡ ಅಭ್ಯರ್ಥಿಗಳ ಪಾಲಿಗೆ ಹಿನ್ನಡೆಯಾಗಲಿದೆ. ಪಕ್ಷದ ಕಾರ್ಯಕರ್ತರಲ್ಲಿದ್ದ ಅಸಮಾಧಾನ ಶಮನಗೊಳಿಸಿ, ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ದೇವೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಕಡಿಮೆ ಎಂದರೂ 30 ಸಾವಿರ ಮತಗಳ ಅಂತರದಿಂದ ಜಯಗಳಿಸುವ ಸಾಧ್ಯತೆಯಿದೆ ಎಂಬ ವಿಶ್ವಾಸ ಬಿಜೆಪಿಯವರದ್ದಾಗಿದೆ.
ಅದೇ ರೀತಿ ಕಾಂಗ್ರೆಸ್‌ನವರು ಸಹ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿ ಆನಂದ್‌ಸಿಂಗ್‌ಗೆ ತುಂಬಾ ವಿರೋಧವಿದೆ. ಜತೆಗೆ ಅವರ ಪಕ್ಷದಲ್ಲೂ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.
ಆನಂದ್‌ಸಿಂಗ್ ಕಳೆದ 18 ತಿಂಗಳಿಂದ ಕ್ಷೇತ್ರದ ಕಾರ್ಯಕರ್ತರ ಕೈಗೆ ಸಿಕ್ಕಿಲ್ಲ. ಅವರ ವೈಫಲ್ಯಗಳು ಕಾಂಗ್ರೆಸ್‌ಗೆ ಅನುಕೂಲವಾಗಲಿವೆ. ಮೇಲಾಗಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆಯವರು ಯಾವುದೇ ಆರೋಪಗಳನ್ನು ಹೊಂದಿಲ್ಲ. ಪಕ್ಷದ ಕಾರ್ಯಕರ್ತರು ಸಹ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದ್ದೇವೆ. ಮತದ ಮೌಲ್ಯ ವೃದ್ಧಿಸಿಲ್ಲ ಎಂಬುದನ್ನು ಹೊರತುಪಡಿಸಿ ಉಳಿದಂತೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಯಾವುದೇ ಅಡ್ಡಿಯಿಲ್ಲ ಎಂಬುದು ಕಾಂಗ್ರೆಸ್‌ನವರ ವಿಶ್ವಾಸದ ಮಾತು. ಒಟ್ಟಾರೆ ವಿಜಯನಗರ ಕ್ಷೇತ್ರದಲ್ಲಿ ಲೆಕ್ಕಚಾರ ಜೋರಾಗಿದ್ದು, ಯಾರ ಲೆಕ್ಕ ಸರಿಯಾಗಲಿದೆ ಎಂಬುದು 9 ರಂದು ತಿಳಿಯಲಿದೆ.
ಹೊಸಪೇಟೆ ನಗರದಲ್ಲಿ ಗುರುವಾರ ಮಾರುಕಟ್ಟೆ ರಜೆ ಇದ್ದು, ಉಪಚುನಾವಣೆಯ ಮತದಾನವೂ ಅಂದೇ ನಡೆದಿದ್ದು ಮತದಾರರು ಹಕ್ಕು ಚಲಾಯಿಸಲು ಮನೆಗಳಿಂದ ಹೊರ ಬಂದಂತಿಲ್ಲ. ಕಾರಣ ಹಿಂದಿನ ಎರಡು ಚುನಾವಣೆಗಳಿಗಿಂತಲೂ ಈ ಬಾರಿ ಶೇ.64.95 ರಷ್ಟು ಮತದಾನವಾಗಿರಬಹುದು. ಆದರೂ, ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ 30 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲುವು ಖಚಿತ. ರಾಜ್ಯದ 15 ಕ್ಷೇತ್ರಗಳಲ್ಲೂ ವಿಜಯನಗರ ಕ್ಷೇತ್ರದ ಅಭ್ಯರ್ಥಿಯೇ ಅತಿಹೆಚ್ಚು ಅಂತರದಿಂದ ಗೆಲುವು ದಾಖಲಿಸುವ ವಿಶ್ವಾಸವಿದೆ.
.ಚನ್ನಬಸವನಗೌಡ ಪಾಟೀಲ,
ಬಿಜೆಪಿ ಜಿಲ್ಲಾಧ್ಯಕ್ಷರು, ಬಳ್ಳಾರಿ.
ವಿಜಯನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಗೆಲುವು ಶೇ.100 ರಷ್ಟು ಖಚಿತ. ಕ್ಷೇತ್ರದಲ್ಲಿನ ಆನಂದ್‌ಸಿಂಗ್ ವೈಫಲ್ಯಗಳು ಕಾಂಗ್ರೆಸ್ ಗೆಲುವಿಗೆ ಪ್ಲಸ್ ಆಗಲಿವೆ. ವೆಂಕಟರಾವ್ ಘೋರ್ಪಡೆಯವರ ಮೇಲೆ ಆರೋಪಗಳು ಇಲ್ಲ. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಯಾವುದೇ ಸಮಸ್ಯೆಯಿಲ್ಲ. ಮತದ ಮೌಲ್ಯ ವೃದ್ಧಿಸಿಲ್ಲ ಎಂಬುದನ್ನು ಬಿಟ್ಟರೆ ಕಾಂಗ್ರೆಸ್ ಗೆಲುವಿಗೆ ಯಾವುದೇ ಅಡ್ಡಿಯಿಲ್ಲ. ಕಾರ್ಯಕರ್ತರು ಸಹ ಒಗ್ಗೂಡಿ ಕೆಲಸ ಮಾಡಿದ್ದು, ಕಾಂಗ್ರೆಸ್ ಗೆಲುವಿನಲ್ಲಿ ಅನುಮಾನವಿಲ್ಲ.
.ಬಿ.ವಿ.ಶಿವಯೋಗಿ,
ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಬಳ್ಳಾರಿ.
ವಿಜಯನಗರ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎನ್.ಎಂ. ನಬಿ ಅವರು ಸಹ ಗೆಲುವಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಗೆಲುವಿನ ನಿರ್ಣಯವನ್ನು ಮತದಾರರಿಗೆ ಬಿಟ್ಟಿದ್ದಾರೆ. ಗೆಲ್ಲುವ ವಿಶ್ವಾಸವಿದೆ. ಡಿ.9ರವರೆಗೆ ಕಾಯ್ದು ನೋಡಬೇಕಾಗಿದೆ.
.ಎನ್.ಟಿ.ಬೊಮ್ಮಣ್ಣ,
ಜೆಡಿಎಸ್ ಜಿಲ್ಲಾಧ್ಯಕ್ಷರು, ಬಳ್ಳಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.