ಎಂಪಿಎಂಗೆ ಮರುಜನ್ಮ ನೀಡುವರೇ ಸಿಎಂ?
ಕಾರ್ಮಿಕರಲ್ಲಿ ವಿಐಎಸ್‌ಎಲ್- ಎಂಪಿಎಂ ಕಾರ್ಖಾನೆ ಗತವೈಭವ ಮರಳುವ ಆಶಾಭಾವ
Team Udayavani, Aug 3, 2019, 11:49 AM IST
ಕೆ.ಎಸ್. ಸುಧೀಂದ್ರ ಭದ್ರಾವತಿ
ಭದ್ರಾವತಿ: ಮೈಸೂರು ಮಹಾರಾಜರ ಹಾಗೂ ಸರ್.ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಫಲವಾಗಿ ಜನ್ಮ ತಳೆದ ಭದ್ರಾವತಿ ನಗರದ ವಿಐಎಸ್‌ಎಲ್ ಮತ್ತು ಮೈಸೂರು ಕಾಗದ ಕಾರ್ಖಾನೆಗಳು ತಮ್ಮ ಗತ ವೈಭವವನ್ನು ಕಳೆದುಕೊಂಡು ಇತಿಹಾಸದ ಪುಟಗಳನ್ನು ಸೇರುವತ್ತ ಸಾಗಿರುವ ವಿಷಯ ಎಲ್ಲರಿಗೂ ನೋವಿನ ಸಂಗತಿಯಾಗಿದೆ. ಆದರೂ ಈ ಕಾರ್ಖಾನೆಗಳನ್ನು ಉಳಿಸಿ ಗತವೈಭವ ಮರುಕಳಿಸುವಂತೆ ಆಗಬೇಕೆಂಬ ಸದಿಚ್ಛೆಯಿಂದ ಇಲ್ಲಿನ ಕಾರ್ಮಿಕರು ಮತ್ತು ನಾಗರಿಕರು ಹೋರಾಟದ ಹಾದಿಯಲ್ಲಿ ಸಾಗಿದ್ದಾರೆ. ಇದೀಗ ಜಿಲ್ಲೆಯವರೇ ಆದ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿರುವುದರಿಂದ ಕಾರ್ಮಿಕರ ಹೋರಾಟಕ್ಕೆ ಮತ್ತೆ ಜೀವ ಬಂದಿದೆ.
ವಿಐಎಸ್‌ಎಲ್ ಕಾರ್ಖಾನೆ ಕೇಂದ್ರ ಸರ್ಕಾರದ ಉಕ್ಕು ಪ್ರಾಧಿಕಾರಕ್ಕೆ ಸೇರಿದ್ದರೆ ಮೈಸೂರು ಕಾಗದ ಕಾರ್ಖಾನೆ ರಾಜ್ಯ ಸರ್ಕಾರದ ಮಾಲೀಕತ್ವಕ್ಕೆ ಸೇರಿದ ಸ್ವತ್ತಾಗಿದೆ. ಇಂದು ಯಾವುದೇ ಒಂದು ಸಂಸ್ಥೆ ಉಳಿದು ಬೆಳೆಯಬೇಕಾದರೆ ರಾಜಕೀಯ ಇಚ್ಛಾಶಕ್ತಿಯ ಸತ್ವಯುತ ಬೆಂಬಲ ಮತ್ತು ಕಾರ್ಯ ಅತ್ಯಗತ್ಯ ಆಗಿರುವುದರಿಂದ ಈ ಎರಡೂ ಕಾರ್ಖಾನೆಗಳ ಉಳಿವಿಗೆ ಇಲ್ಲಿನ ಕಾರ್ಮಿಕರು ಮತ್ತು ನಾಗರಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರರೂಢ ರಾಜಕಾರಣಿಗಳನ್ನೇ ಅವಲಂಬಿಸಿ ಹೋರಾಟ ಮಾಡುವತ್ತ ಹೆಜ್ಜೆ ಹಾಕಿದ್ದಾರೆ.
ಎಂಪಿಎಂಗೆ ಸಿಎಂ ಮರುಜೀವ ನೀಡುವರೆ?
ರೋಗಗ್ರಸ್ಥ ಕಾರ್ಖಾನೆಯ ಹಣೆಪಟ್ಟಿ ಹೊತ್ತು ಉತ್ಪಾದನೆ ಸ್ಥಗಿತ ಗೊಳಿಸಿ ಮರಣಶಯ್ಯೆಯಲ್ಲಿ ಕೋಮಾಸ್ಥಿತಿಗೆ ಜಾರಿ ಸಾವು ಖಚಿತ ಎನ್ನುವ ಸ್ಥಿತಿಯಲಿರುವ ಎಂಪಿಎಂ ಕಾರ್ಖಾನೆಯಲ್ಲಿ ಬಹುತೇಕ ಕಾರ್ಮಿಕರು ಸ್ವಯಂ ನಿವೃತ್ತಿ ಯೋಜನೆಯನ್ನು ಒಪ್ಪಿ ಅಪ್ಪಿಕೊಂಡು ಅರೆಬರೆ ನಿವೃತ್ತಿ ಹಣ ಪಡೆದು ಗುಳೆ ಹೋಗಿದ್ದಾರೆ. ಉಳಿದ ಕೆಲವೇ ನೂರು ಕಾರ್ಮಿಕರು ಸ್ವಯಂ ನಿವೃತ್ತಿ ಪಡೆಯದೆ ಇಂದಲ್ಲಾ ನಾಳೆ ಈ ಕಾರ್ಖಾನೆ ಮತ್ತೆ ಉಳಿದು ಬೆಳೆಯುತ್ತದೆ ಎಂಬ ಕನಸಿನ ಜಾಡನ್ನು ಹಿಡಿದು ಅದೇ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಉಳಿದಿದ್ದಾರೆ. ಈ ನಡುವೆ ಕೈಗಾರಿಕಾ ಇಲಾಖೆಯ ಕಾರ್ಯದರ್ಶಿಗಳ ಮೌಖೀಕ ಆದೇಶದ ಮೇರೆಗೆ ಕಾರ್ಖಾನೆಯ ಆಡಳಿತ ಮಂಡಳಿ ಸಂಪುಟ ಸಭೆಯಲ್ಲಿ ವಿಷಯ ಮಂಡನೆಯಾಗದೆ, ಮುಚ್ಚಲು ಶಿಫಾರಸ್ಸು ಇಲ್ಲದೇ ಇದ್ದರೂ ಸಹ ಆ. 1ರಂದು ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಎಲ್ಲಾ ತಯಾರಿ ಮಾಡಿಕೊಂಡು ಬೀಗ ಜಡಿಯಲು ನಿಂತ ಪರಿಸ್ಥಿತಿಯಲ್ಲಿ ಕಾರ್ಮಿಕ ಸಂಘದ ಪದಾಧಿಕಾರಿಗಳು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿ ಕಾರ್ಖಾನೆಯನ್ನು ಮುಚ್ಚದೆ ಉಳಿಸಿ ಕಾರ್ಮಿಕರ ಬದುಕಿಗೆ ಕೆಲಸದ ಭದ್ರತೆ ಒದಗಿಸುವಂತೆ ಮಾಡಿಕೊಂಡಿರುವ ಮನವಿಯ ಮೇರೆಗೆ ಮುಖ್ಯಮಂತ್ರಿಗಳು ಮುಂದಿನ ಆದೇಶ ಹೊರಡಿಸುವವರೆಗೆ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಮುಚ್ಚದಂತೆ ಆದೇಶ ಮಾಡಿರುವುದರಿಂದ ಎಂಪಿಎಂ ಕಾರ್ಖಾನೆ ಉಳಿವಿಗೆ ಮರುಜನ್ಮ ಬಂದಿದೆ.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಎಂಪಿಎಂ ಕಾರ್ಖಾನೆಗೆ ನೂರು ಕೋಟಿ ಹಣ ಬಿಡುಗಡೆ ಮಾಡುವ ಮೂಲಕ ಕಾರ್ಖಾನೆಯನ್ನು ಅಂದು ಕೆಲ ಕಾಲ ನಡೆಯುವಂತೆ ಮಾಡಿದ್ದರು. ಈಗ ಯಡಿಯೂರಪ್ಪನವರೇ ಪುನಃ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರದಲ್ಲಿರುವುದರಿಂದ ಹಾಗೂ ಕಾರ್ಮಿಕರ ಬೇಡಿಕೆಗೆ ಸ್ಪಂದಿಸಿ ಕಾರ್ಖಾನೆಯನ್ನು ಮುಚ್ಚದಂತೆ ತಾತ್ಕಾಲಿಕ ಆದೇಶ ನೀಡಿರುವುದರಿಂದ ಇಲ್ಲಿನ ಕಾರ್ಮಿಕರಲ್ಲಿ ಮತ್ತು ಭದ್ರಾವತಿಯ ನಾಗರಿಕರಲ್ಲಿ ಎಂಪಿಎಂ ಕಾರ್ಖಾನೆಯ ಉಳಿಯುವಿಕೆ ಬಗ್ಗೆ ಆಸೆ ಪುನಃ ಚಿಗುರೊಡೆದಿದೆ.
ಜಿಲ್ಲೆಯ ಏಕೈಕ ಕೈಗಾರಿಕಾ ನಗರ: ಜಿಲ್ಲೆಯ ಏಳು ತಾಲೂಕಿನ ಪೈಕಿ ಭದ್ರಾವತಿಯಲ್ಲಿ ಮಾತ್ರ ಎರಡು ಕಾರ್ಖಾನೆಗಳಿರುವುದರಿಂದ ಹಾಗೂ ಈವರೆಗೆ ಯಡಿಯೂರಪ್ಪ ಮುಖ್ಯಮಂತ್ರಿಗಳಾದಾಗಲೆಲ್ಲ ಭದ್ರಾವತಿ ನಗರವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುತ್ತೇನೆ ಎಂದು ಹೇಳುತ್ತಾ ಬಂದಿದ್ದರೂ ಸಹ ಆ ಕಾರ್ಯ ಆಗಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಗಳಾದಾಗ ಅವರ ಸ್ವ-ಕ್ಷೇತ್ರ ಶಿಕಾರಿಪುರಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಅಭಿವೃದ್ಧಿಪಡಿಸಿದ್ದಾರೆ. ಭದ್ರಾವತಿ ಕ್ಷೇತ್ರವನ್ನು ನಿರ್ಲಕ್ಷಿದ್ದಾರೆ ಎಂಬ ಆರೋಪವನ್ನು ಸಹ ಅವರ ಎದುರಾಳಿಗಳು ಮಾಡುತ್ತಲೇ ಬಂದಿದ್ದಾರೆ. ಭದ್ರಾವತಿ ಕ್ಷೇತ್ರದಿಂದ ಕೇವಲ 15-16 ಕಿಮೀ ದೂರದಲ್ಲಿರುವ ಶಿವಮೊಗ್ಗ ಅಭಿವೃದ್ಧಿಯಲ್ಲಿ ನಾಗಾಲೋಟದಲ್ಲಿ ಸಾಗುತ್ತಾ ಸ್ಮಾರ್ಟ್‌ಸಿಟಿ ಪಟ್ಟಿಯಲ್ಲಿ ಸೇರಿ ಬೆಳೆಯುತ್ತಿದೆ. ಆದರೆ ಭದ್ರಾವತಿ ಕ್ಷೇತ್ರ ಮಾತ್ರ ಅಗತ್ಯವಾದ ರಾಜಕೀಯ ಬೆಂಬಲವಿಲ್ಲದೆ ಇಲ್ಲಿನ ಎರಡೂ ಕಾರ್ಖಾನೆಗಳು ಕಣ್ಮುಚ್ಚುತ್ತಿರುವ ಈ ಸಂದರ್ಭದಲ್ಲಿ ನಮ್ಮ ಜಿಲ್ಲೆಯವರೇ ಆದ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿರುವುದರಿಂದ ಎಂಪಿಎಂ ಕಾರ್ಖಾನೆಯ ಮರುಹುಟ್ಟಿಗೆ ಅಗತ್ಯ ಕ್ರಮ ಕೈಗೊಂಡು ರಾಜ್ಯ ಸರ್ಕಾರದಿಂದ ಬಂಡವಾಳ ತೊಡಗಿಸಿ ಸರ್.ಎಂ.ವಿ. ಮತ್ತು ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿತವಾದ ಈ ಕಾರ್ಖಾನೆಯನ್ನು ಉಳಿಸಿ ಬೆಳೆಸಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
ಬಿಎಸ್‌ವೈ ನಿರ್ಧಾರದ ಮೇಲೆ ನಿಂತಿದೆ ಎಂಪಿಎಂ ಭವಿಷ್ಯ
ಇಲ್ಲಿನ ಜನರ ನಾಡಿಮಿಡಿತ ಅರಿತಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ಎಂಪಿಎಂ ಕಾರ್ಖಾನೆಯನ್ನು ಉಳಿಸಿ ಬೆಳೆಸಲು ಅಗತ್ಯ ಕ್ರಮ ಕೈಗೊಂಡು ಕಾರ್ಖಾನೆ ಉಳಿಸುವ ಮೂಲಕ ಈಕ್ಷೇತ್ರದ ಜನರ ಕನಸನ್ನು ನನಸು ಮಾಡುತ್ತಾರಾ ನೋಡಬೇಕಿದೆ. ಜಿಲ್ಲೆಯಲ್ಲಿ ಉಳಿದ ವಿಧಾನಸಭಾ ಕ್ಷೇತ್ರಕ್ಕೆ ಹೋಲಿಸಿದರೆ ಬಿಜೆಪಿ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೂ ಪಕ್ಷದ ಅಭ್ಯರ್ಥಿಯನ್ನು ಶಾಸಕರನ್ನಾಗಿ ಕಾಣಲು ಸಾಧ್ಯವಾಗಿಲ್ಲ. ಒಂದೊಮ್ಮೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂಪಿಎಂ ಉಳಿವಿಗೆ ಪಣ ತೊಟ್ಟು ಉಳಿಸಿದರೆ ಭದ್ರಾವತಿಯಲ್ಲಿ ಬಿಜೆಪಿ ಶಾಸಕರು ಆಯ್ಕೆ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.