ಕೇಂದ್ರ ಸರ್ಕಾರ ವಿಐಎಸ್‌ಎಲ್ ಉಳಿವಿಗೆ ಯತ್ನಿಸಲಿ
ಕೇಂದ್ರ ಉಕ್ಕು ಪ್ರಾಧಿಕಾರದೊಂದಿಗೆ ಮಾತುಕತೆ: ಸುರೇಂದ್ರನ್
Team Udayavani, Sep 7, 2019, 5:16 PM IST
ಭದ್ರಾವತಿ: ಕೇಂದ್ರ ಸರ್ಕಾರ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಿ ಬೆಳೆಸುವ ಅವಕಾಶಕ್ಕೆ ಇನ್ನೂ ಕಾಲ ಮಿಂಚಿಲ್ಲ ಎಂದು ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುರೇಂದ್ರನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಖಾನೆಯ ಒಳಗೆ ನಮ್ಮ ಸಂಘದ ವತಿಯಿಂದ ಭೇಟಿ ನೀಡಿ ಪರಿಶೀಲಿಸಿದ್ದು, ಪಶ್ಚಿಮ ಬಂಗಾಳದ ದುರ್ಗಾಪುರ್, ತಮಿಳುನಾಡಿನ ಸೇಲಂ ಪ್ಲಾಂಟ್‌ಗಳಿಗೆ ಹೋಲಿಸಿದರೆ ಈ ಕಾರ್ಖಾನೆಯ ಸ್ಥಿತಿ ಉತ್ತಮವಾಗಿಯೇ ಇದೆ. ಆದರೆ ಸೂಕ್ತ ಸಮಯದಲ್ಲಿ ಕೇಂದ್ರ ಉಕ್ಕು ಪ್ರಾಧಿಕಾರ ಇದರ ಉಳಿವು, ಬೆಳವಣಿಗೆಗೆ ಕೊಡಬೇಕಾದಷ್ಟು ಗಮನ ಹರಿಸದಿದ್ದ ಕಾರಣ ಈ ಪರಿಸ್ಥಿತಿ ಎದುರಾಗಿದೆ. ಇಲ್ಲಿನ ಕಾರ್ಮಿಕರಿಗೆ ಕಾರ್ಖಾನೆಯ ಬಗ್ಗೆ ಭಾವನಾತ್ಮಕವಾದ ಸಂಬಂಧವಿರುವುದು ನಮ್ಮ ಗಮನಕ್ಕೆ ಬಂದಿದ್ದು ಈ ಕಾರ್ಖಾನೆಯ ಉಳಿವಿಗೆ ಇಲ್ಲಿನ ಕಾರ್ಮಿಕ ಸಂಘ ನಡೆಸುತ್ತಿರುವ ಹೋರಾಟಕ್ಕೆ ಭಾರತೀಯ ಮಜ್ದೂರ್ ಸಂಘ ಬೆಂಬಲಿಸುತ್ತದೆ. ಜೊತೆಗೆ ಈ ಕಾರ್ಖಾನೆಯ ಪರಿಸ್ಥಿತಿ ಹಾಗೂ ಇದರ ಅಭಿವೃದ್ಧಿಯ ಬಗ್ಗೆ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ನಮ್ಮ ಸಂಘ ರೂಪುರೇಷೆಗಳನ್ನು ತಯಾರಿಸಿ ಆ ಕುರಿತು ಕೇಂದ್ರ ಸರ್ಕಾರದ ಉಕ್ಕು ಮಂತ್ರಿಗಳೊಂದಿಗೆ ಶನಿವಾರ ದೆಹಲಿಯಲ್ಲಿ ಮಾತನಾಡಿ ಮನವಿ ಸಲ್ಲಿಸಲಿದ್ದೇವೆ. ನಮಗೆ ಸರ್ಕಾರ ಮುಖ್ಯವಲ್ಲ, ಕಾರ್ಮಿಕರ ಹಿತ ಕಾಯುವುದೇ ಮುಖ್ಯ. ಅದ್ದರಿಂದ ನಾವು ಪಶ್ಚಿಮ ಬಂಗಾಳದ ದುರ್ಗಾಪುರ್ ಪ್ಲಾಂಟ್, ತಮಿಳುನಾಡಿನ ಸೇಲಂ ಪ್ಲಾಂಟ್, ಕರ್ನಾಟಕದ ವಿಐಎಸ್‌ಎಲ್ ಪ್ಲಾಂಟ್ ಉಳಿಸಲು ಆಯಾ ರಾಜ್ಯಗಳಲ್ಲಿರುವ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದರು.
ಗುತ್ತಿಗೆ ಕಾರ್ಮಿಕರಿಗೆ ತಿಂಗಳಿಗೆ 13-14 ದಿನಗಳು ಮಾತ್ರ ಕೆಲಸ ಸಿಕ್ಕರೆ ಅವರ ಜೀವನ ಹೇಗೆ ಸಾಗಬೇಕು? ಅದಕ್ಕಾಗಿ ಕಾರ್ಖಾನೆಯ ಒಳಗೆ ಉತ್ಪಾದನೆ ಸ್ಥಗಿತಗೊಂಡಿರುವ ಘಟಕಗಳನ್ನು ಪುನರಾರಂಭಿಸಬೇಕು. ಉತ್ಪಾದನೆಗಾಗಿ ಅಗತ್ಯವಾದ ಆರ್ಡರ್‌ಗಳನ್ನು ಕೇಂದ್ರ ಉಕ್ಕು ಪ್ರಾಧಿಕಾರ ತನ್ನ ವ್ಯಾಪ್ತಿಯ ಬೇರೆ ಪ್ಲಾಂಟ್‌ಗಳಿಂದ ಈ ಕಾರ್ಖಾನೆಗೆ ಒದಗಿಸಿಕೊಡಬೇಕು ಆ ರೀತಿ ಆದಾಗ ಉತ್ಪಾದನೆ ಹೆಚ್ಚಾಗಿ ಗುತ್ತಿಗೆ ಕಾರ್ಮಿಕರಿಗೆ ಹೆಚ್ಚು ದಿನಗಳ ಕೆಲಸ ದೊರಕುತ್ತದೆ. ಈ ಬಗ್ಗೆ ಸಹ ನಾವು ಕೇಂದ್ರ ಉಕ್ಕು ಪ್ರಾಧಿಕಾರದೊಂದಿಗೆ ಮಾತನಾಡಲಿದ್ದೇವೆ ಎಂದರು.
ಸಾರ್ವಜನಿಕ ವಲಯದ ಕಾರ್ಖಾನೆಗಳನ್ನು ಖಾಸಗೀಕರಣ ಮಾಡುವುದರಿಂದ ಸಮಸ್ಯೆ ಎಲ್ಲವೂ ಪರಿಹಾರವಾಗುತ್ತದೆ ಎಂಬುದು ನಿಜವಲ್ಲ. ದೇಶದಲ್ಲಿ ಈ ಹಿಂದೆ ಅನೇಕ ವಲಯಗಳನ್ನು ಖಾಸಗೀಕರಣ ಮಾಡಲಾಗಿದೆ. ಆದರೆ ಆ ರೀತಿ ಖಾಸಗೀಕರಣದಿಂದ ನಿರೀಕ್ಷಿತ ಫಲಿತಾಂಶ ದೊರಕದಿರುವ ಅನೇಕ ಉದಾಹರಣೆಗಳಿವೆ. ಆದ್ದರಿಂದ ಕೇಂದ್ರ ಸರ್ಕಾರ ಈ ಕಾರ್ಖಾನೆಯನ್ನು ಡಿಸ್ ಇನ್ವೆಸ್ಟ್‌ಮೆಂಟ್ ಪಟ್ಟಿಯಿಂದ ಕೈಬಿಟ್ಟು ಅಗತ್ಯ ಬಂಡವಾಳ ಹೂಡಿ ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಅಳವಡಿಸಿ ರಕ್ಷಣಾ ಇಲಾಖೆ, ರೈಲ್ವೆ ಇಲಾಖೆ ಮುಂತಾದ ಇಲಾಖೆಗಳಿಗೆ ಅಗತ್ಯವಾದ ಕಬ್ಬಿಣ ಮತ್ತು ಉಕ್ಕಿನ ಸಾಮಗ್ರಿಗಳನ್ನು ಒದಗಿಸುವ ಉತ್ಪಾದನೆಯನ್ನು ಈ ಕಾರ್ಖಾನೆಗಳಲ್ಲಿ ಆರಂಭಿಸುವ ಮೂಲಕ ಇದನ್ನು ಸಾರ್ವಜನಿಕ ವಲಯದಲ್ಲಿ ಉಳಿಸಿಕೊಂಡು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂಬುದನ್ನು ನಮ್ಮ ಸಂಘ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತದೆ ಎಂದರು.
ಸರ್.ಎಂ.ವಿ. ಸ್ಥಾಪಿತ ಕಾರ್ಖಾನೆ ಉಳಿಸಿಕೊಳ್ಳಬೇಕೆಂಬ ಇಲ್ಲಿನ ನಾಗರಿಕರ ಅಚಲ ನಿರ್ಧಾರದ ಹೋರಾಟದಿಂದ ವಿಐಎಸ್‌ಎಲ್ ಕಾರ್ಖಾನೆ ಉಳಿಯುವ ಸಾಧ್ಯತೆ ಖಂಡಿತ ಇದೆ. ಇಲ್ಲಿನ ಕಾರ್ಖಾನೆಯಲ್ಲಿ ನಮ್ಮ ಸಂಘದ ಶಾಖೆ ಇಲ್ಲವಾದರೂ ಕಾರ್ಮಿಕ ಸಂಘ ಹಾಗೂ ಕಾರ್ಖಾನೆಯ ಹಿತದೃಷ್ಟಿಯಿಂದ ನಮ್ಮ ಸಂಘ ಈ ಹೋರಾಟ ಬೆಂಬಲಿಸುವುದರ ಜೊತೆಗೆ ಇಲ್ಲಿನ ಕಾರ್ಮಿಕರ ಬೇಡಿಕೆಯ ಈಡೇರಿಕೆಗಾಗಿ ಕೈಗೊಳ್ಳುವ ನಿರ್ಧಾರಗಳನ್ನು ಕೇಂದ್ರ ಸರ್ಕಾರಕ್ಕೆ ಸಮಂಜಸವಾಗಿ ಮನವರಿಕೆ ಮಾಡಿಕೊಡುವ ಸಂವಾಹಕವಾಗಿ ಕಾರ್ಯ ನಿರ್ವಹಿಸುತ್ತದೆ ಎಂದರು.
ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್ ಮಾತನಾಡಿ, ಕಾರ್ಖಾನೆಯ ಉಳಿವಿಗೆ ನಾವು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಅಗತ್ಯ ಕ್ರಮಕ್ಕೆ ಕೇಂದ್ರ ಸರ್ಕಾರದೊಂದಿಗೆ ಮಾತನಾಡಲು ಮುಂದಾಗಿರುವ ಭಾರತೀಯ ಮಜ್ದೂರ್ ಸಂಘದವರಿಗೆ ಕೃತಜ್ಞತೆಗಳು ಎಂದರು.
ಗೋಷ್ಠಿಯಲ್ಲಿ ವಿಐಎಸ್‌ಎಲ್ ಕಾರ್ಮಿಕ ಸಂಘದ ಕಾರ್ಯದರ್ಶಿ ಬಸಂತ್ ಕುಮಾರ್, ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ದೇವೇಂದ್ರಕುಮಾರ್ ಪಾಂಡೆ, ರಾಜ್ಯ ಸಂಘದ ಕಾರ್ಯದರ್ಶಿ ಲೋಕೇಶ್, ಸಂಘದ ಜಿಲ್ಲಾ ಮುಖಂಡ ಎಚ್.ಎಲ್. ವಿಶ್ವನಾಥ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಧರ್ಮಪ್ರಸಾದ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.