ಕೂಡಿದ ಮನೆಯಲ್ಲಿ ಬಿರುಕು ತಂದ ಪ್ರವಾಹ
ಪರಿಹಾರಕ್ಕಾಗಿ ಅಣ್ಣ-ತಮ್ಮಂದಿರಲ್ಲಿ ಮನಸ್ತಾಪಅವಿಭಕ್ತ ಕುಟುಂಬಕ್ಕೆ ಬರೆ ಹಾಕಿದ ನೆರೆ
Team Udayavani, Oct 31, 2019, 1:26 PM IST
ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಬರೋಬ್ಬರಿ 105 ವರ್ಷಗಳ ಬಳಿಕ ಬಂದ ಭೀಕರ ಪ್ರವಾಹ ಜಿಲ್ಲೆಯ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ಅದಷ್ಟೇ ಅಲ್ಲ, ತಂದೆ-ತಾಯಿ, ಅಣ್ಣ-ತಮ್ಮ ಹೀಗೆ ಎಲ್ಲರೂ ಒಟ್ಟಿಗೆ ಬಾಳುತ್ತಿದ್ದ ಮನೆಗಳ ಅವಿಭಕ್ತ ಕುಟುಂಬಗಳಿಗೂ ನೆರೆ ಎಂಬುದು ಬರೆ ಎಳೆದಿದೆ.
ಹೌದು, 1914ರಲ್ಲಿ ಜಿಲ್ಲೆಯ ನದಿಗಳು ತುಂಬಿ ಹರಿದಿದ್ದವು. ಆಗ ಕೃಷ್ಣಾ ನದಿ ಭಯಂಕರವಾಗಿ ಹರಿದಿತ್ತು. ಬ್ರಿಟಿಷರ ಆಡಳಿತದಲ್ಲಿ ಅಂದು ಬಂದ ಪ್ರವಾಹ, ಎಷ್ಟು ಮಟ್ಟಕ್ಕೆ ನೀರು ಹರಿದಿತ್ತು ಎಂಬುದಕ್ಕೆ ಬ್ರಿಟಿಷ ಅಧಿಕಾರಿಗಳು, ಮಹಾ ಪ್ರವಾಹ ಎಂಬ ಫಲಕದ ಕಲ್ಲು ಹಾಕಿದ್ದಾರೆ. ಈ ಬಾರಿ ಅಂದಿನ ಪ್ರವಾಹದ ವೇಳೆ ಹರಿದ ನೀರಿಗಿಂತ, ಹೆಚ್ಚು ಪ್ರಮಾಣದಲ್ಲಿ ಪ್ರವಾಹ ಉಕ್ಕೇರಿತ್ತು. ಇದರಿಂದ ಹಲವಾರು ಹಳ್ಳಿಗಳು ಸಂಪೂರ್ಣ ನೀರಿನಲ್ಲಿ ಮುಳುಗಿದ್ದವು. ಕೆಲ ಊರುಗಳ ದೇವಸ್ಥಾನದ ಕಳಸ ಮಾತ್ರ ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇಂತಹ ಗಂಭೀರ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತ ಅಷ್ಟೇ ಅಲ್ಲ, ಜಿಲ್ಲೆಯ ಆರ್ಥಿಕ ಪರಿಸ್ಥಿತಿಯನ್ನು ಸುಮಾರು 10ರಿಂದ 15 ವರ್ಷಗಳ ಹಿಂದಕ್ಕೆ ಕೊಂಡೊಯ್ಯಿತು ಎನ್ನಲಾಗಿದೆ.
ಆಸರೆಗೂ ಒಡಕು: ಕಳೆದ 2009ರಲ್ಲಿ ಬಂದಿದ್ದ ಪ್ರವಾಹದಿಂದ ಜಿಲ್ಲೆಯ 60 ಗ್ರಾಮಗಳು ಬಾಧಿತಗೊಂಡಿದ್ದವು. ಆಗ ದಾನಿಗಳು ಹಾಗೂ ಸರ್ಕಾರದ ನೆರವಿನಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಆಸರೆ ಯೋಜನೆಯಡಿ ಸರ್ಕಾರ ನವ ಗ್ರಾಮ ನಿರ್ಮಾಣ ಮಾಡಿತ್ತು. ಆದರೆ, ಒಂದು ಮನೆಯಲ್ಲಿ ಅಣ್ಣ-ತಮ್ಮಂದಿರು ಇದ್ದೇವೆ. ನಮಗೆ ಪ್ರತ್ಯೇಕ ಮನೆ ಕಟ್ಟಿಕೊಡಿ ಎಂದು ಆಗಲೂ ಸಂತ್ರಸ್ತರು ಬೇಡಿಕೆ ಇಟ್ಟಿದ್ದರು. ಆದರೆ, ಸರ್ಕಾರ, ಗ್ರಾ.ಪಂ.ನ ನಮೂನೆ-9ರಲ್ಲಿ ದಾಖಲಾದ ಮನೆಗಳಿಗೆ ಮಾತ್ರ ಆಸರೆ ಮನೆ ಕಟ್ಟಿತು. ಆಗ ಒಂದೊಂದು ಗ್ರಾಮದಲ್ಲಿ ಸುಮಾರು 150ರಿಂದ 400ರವರೆಗೆ ಮನೆ ನಿರ್ಮಾಣಗೊಂಡವು.
ಆದರೆ, ಆಸರೆ ಮನೆಗಳ ಹಕ್ಕುಪತ್ರ ವಿತರಣೆ ವೇಳೆ ದೊಡ್ಡ ಗಲಾಟೆಗಳೇ ನಡೆದವು. ತಂದೆ-ತಾಯಿ ಕಟ್ಟಿದ ಮನೆಯಲ್ಲಿ ನಾವಿದ್ದೇವೆ. ಎರಡೆರಡು ಕೊಠಡಿಯಲ್ಲಿ ಅಣ್ಣ-ತಮ್ಮನ ಕುಟುಂಬವಿದ್ದು, ಇಬ್ಬರಿಗೂ ಪ್ರತ್ಯೇಕ ಮನೆ ಕೊಡಿ ಎಂದು ಕೇಳಿಕೊಂಡರು. ಕೆಲವು ಗ್ರಾಮಗಳಲ್ಲಿ ಜಗಳವೂ ಆದವು. ಹೀಗಾಗಿ 59 ಆಸರೆ ಗ್ರಾಮಗಳ ಪೈಕಿ, ಸುಮಾರು 12 ಗ್ರಾಮಗಳಲ್ಲಿ ಹಕ್ಕುಪತ್ರ ಕೊಡಲಾಗಿಲ್ಲ. ನಿಮ್ಮ ಕುಟುಂಬದ ಸಮಸ್ಯೆ ಬಗೆಹರಿಸಿಕೊಂಡು ಬನ್ನಿ, ಆಗ ಮನೆಯ ಹಕ್ಕುಪತ್ರ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳಿ, ಕೈಚೆಲ್ಲಿದರು. ಮುಂದೆ ಪ್ರವಾಹ ನಿಂತು ಹೋಯಿತು.
ಜನರೂ, ಆಸರೆ ಮನೆಗಾಗಿ ಒತ್ತಡ ಹಾಕಲಿಲ್ಲ. ಇತ್ತ ಆಸರೆ ಮನೆಗಳು ಖಾಲಿ ಬಿದ್ದ ಪರಿಣಾಮ, ಕಿಟಕಿ-ಬಾಗಿಲು ಕಂಡವರ ಪಾಲಾದವು. ಮೊದಲೇ ಕಳಪೆ ಕಾಮಗಾರಿ ಎನ್ನಲಾಗಿದ್ದರ ಫಲವಾಗಿ, ಬಿರುಕುಬಿಟ್ಟ ಗೋಡೆಗಳು ಕುಸಿದು ಬಿದ್ದವು. ಆಸರೆ ಗ್ರಾಮದಲ್ಲೆಲ್ಲ ಮುಳ್ಳು-ಕಂಠಿ ಬೆಳೆದವು. ಇದು 2009ರ ಪ್ರವಾಹದ ಅನುಭವ. ಇದರಿಂದಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿತ್ತು. ಬದಲಾಗಿ, ಅದೇ ನಿರ್ಲಕ್ಷ್ಯ
ಧೋರಣೆ ಮುಂದುವರಿಯಿತು.
ಕೂಡಿದ ಮನೆಗಳಲ್ಲಿ ಒಡಕು:ಕಳೆದ ಆಗಸ್ಟ್‌ನಲ್ಲಿ ಬಂದ ಭೀಕರ ಪ್ರವಾಹ, ಸದ್ಯದ ತಲೆಮಾರಿನ ಜನರು ಹಿಂದೆಂದೂ ಕಂಡಿರಲಿಲ್ಲ. 1914ರ ಪ್ರವಾಹ ನೋಡಿದವರ್ಯಾರೂ ಈಗಿಲ್ಲ. ಬ್ರಿಟಿಷರು ಹಾಕಿರುವ ಕಲ್ಲುಗಳೇ, ಪ್ರವಾಹದ ಭೀಕರತೆ ಹೇಳುತ್ತಿವೆ. ಆಗಸ್ಟ್ 6ರಿಂದ 13ರವರೆಗೆ ಉಂಟಾದ ಪ್ರವಾಹದಿಂದ 195 ಹಳ್ಳಿಗಳು ಮುಳುಗಿದ್ದವು. 43,136
ಕುಟುಂಬಗಳು ಬೀದಿಗೆ ಬಂದಿದ್ದವು. 1,49,408 ಜನರನ್ನು ಜಿಲ್ಲಾಡಳಿತ ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರ ಮಾಡಿತ್ತು. ಕುಟುಂಬಗಳ ಸಂಖ್ಯೆಗೂ, ಜನಸಂಖ್ಯೆಗೂ ಅತಿ ವ್ಯತ್ಯಾಸ ಇರುವುದನ್ನಾದರೂ ಕಂಡು, ಪ್ರತ್ಯೇಕ ಕುಟುಂಬ ದಾಖಲಿಸುವ ಕೆಲಸ ಜಿಲ್ಲಾಡಳಿತ ಮಾಡಬೇಕಿತ್ತು. ಅದು ಆಗಲಿಲ್ಲ.
ಸರ್ಕಾರ ನೀಡಿದ 10 ಸಾವಿರ ತಾತ್ಕಾಲಿಕ ಪರಿಹಾರ, ಮನೆ ಕಟ್ಟಿಕೊಳ್ಳಲು ನೀಡುವ 5 ಲಕ್ಷ ಪರಿಹಾರ ಪಡೆಯಲು, ಸದ್ಯ ಅವಿಭಕ್ತ ಕುಟುಂಬಗಳಲ್ಲಿ ಬಿರುಕು ಬಿಟ್ಟಿದೆ. ಅಣ್ಣನಿಗೆ ಅಥವಾ ತಂದೆಗೆ ಮಾತ್ರ
ಪರಿಹಾರ ಕೊಟ್ಟರೆ, ನಾವೇನು ಮಾಡೋಣ, ನಾವೂ
ಪ್ರವಾಹದಿಂದ ಬೀದಿ ಪಾಲಾಗಿದ್ದೇವೆ. ನಮಗೂ ಪ್ರತ್ಯೇಕ ಪರಿಹಾರ ಕೊಡಿಸಿ ಎಂದು ಜನಪ್ರತಿನಿಧಿಗಳ ದುಂಬಾಲು ಬಿದ್ದಿದ್ದಾರೆ. ಇತ್ತ ಸರ್ಕಾರಿ ನಿಯಮಾವಳಿ ಪ್ರಕಾರ, ಗ್ರಾ.ಪಂ. ನಮೂನೆ 9ರಲ್ಲಿ ದಾಖಲಾದ ಕುಟುಂಬಗಳು ಮಾತ್ರ ಪರಿಹಾರಕ್ಕೆ ಯೋಗ್ಯ.
ಪ್ರತ್ಯೇಕ ಪಡಿತರ ಚೀಟಿ ಹೊಂದಿದ್ದರೂ ಅವರಿಗೆ ಪರಿಹಾರ ಕೊಡಲಾಗುತ್ತಿಲ್ಲ. ಇದು, ಜಿಲ್ಲೆಯ ಜನ ಪ್ರತಿನಿಧಿಗಳಿಗೂ ಏನು ಮಾಡಬೇಕೆಂಬ ದಿಕ್ಕು ತೋಚದಂತಾಗಿದೆ ಎನ್ನಲಾಗಿದೆ. ಅಧಿಕಾರಿಗಳ ಸಲಹೆ ಕೇಳಿದ ಡಿಸಿಎಂ: ಅವಿಭಕ್ತ ಕುಟುಂಬದಲ್ಲಿರುವ ಪ್ರತ್ಯೇಕ ಕುಟುಂಬಗಳಿಗೆ ಅಥವಾ ಒಂದೇ ಮನೆಯಲ್ಲಿ ಬೇರೆ ಬೇರೆ ಕೊಠಡಿಗಳಲ್ಲಿ ವಾಸವಾಗಿರುವ ಕುಟುಂಬಕ್ಕೆ ಪ್ರತ್ಯೇಕ ಪರಿಹಾರ ನೀಡಲು ಅವಕಾಶ ಇದೆಯೇ ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ, ಡಿಸಿಎಂ ಗೋವಿಂದ ಕಾರಜೋಳರು ಅಧಿಕಾರಿಗಳ ಸಲಹೆ ಕೇಳಿದ್ದರು. ಸ್ವತಃ ಜಿಲ್ಲಾಧಿಕಾರಿ, ತಹಶೀಲ್ದಾರ್‌ರು ಸಹಿತ ಕೆಲವು ಕೆಎಎಸ್ ಅಧಿಕಾರಿಗಳೂ ನಿಯಮಾವಳಿ ನೋಡಿ, ಅವಕಾಶವಿಲ್ಲ ಸರ್ ಎಂದುಬಿಟ್ಟರು. ಇದಕ್ಕೆ ಏನಾದರೂ ಮಾಡಲು ಅವಕಾಶವಿದೆಯೇ ಎಂಬ ಡಿಸಿಎಂ ಕಾರಜೋಳರ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.