ನಾವದಗಿ ಶಾಲೆ ಕುಸಿದು ಬೀಳುವ ಭಯ!
ಮಳೆ ಬಂದರೆ ಬೆಚ್ಚಿ ಬೀಳುವ ವಿದ್ಯಾರ್ಥಿಗಳು •ಐದು ದಶಕದ ಶಾಲೆಗಿಲ್ಲ ಕಟ್ಟಡ ಸೌಲಭ್ಯ
Team Udayavani, Jul 8, 2019, 1:15 PM IST
ಭಾಲ್ಕಿ: ನಾವದಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಸಿಮೆಂಟ್ ಪದರು ಕಳಚಿ ಬಿದ್ದು ಶಿಥಿಲಗೊಂಡ ಕಟ್ಟಡದಲ್ಲೇ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು
ಜಯರಾಜ ದಾಬಶೆಟ್ಟಿ
ಭಾಲ್ಕಿ: ಮಳೆಗಾಲ ಆರಂಭವಾದರೆ ಸಾಕು ಇಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೆಚ್ಚಿ ಬೀಳುತ್ತಾರೆ. ನಿತ್ಯ ಮಳೆ ಬಂದರೆ ಶಾಲೆಗೆ ಬರಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಾರೆ. ಇದು ನಾವದಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವ್ಯಥೆ!
1975ನೇ ಸಾಲಿನಲ್ಲಿ ನಿರ್ಮಿಸಲಾದ ಈ ಶಾಲೆಯ ಕಟ್ಟಡ ಒಟ್ಟು ಐದು ಕೋಣೆಗಳನ್ನು ಹೊಂದಿದೆ. ಇಲ್ಲಿಯ ಎಲ್ಲಾ ಕೋಣೆಗಳ ಛಾವಣಿಯ ಸಿಮೆಂಟ್ ಪದರು ಕಳಚಿಬಿದ್ದು, ಕಬ್ಬಿಣದ ಸರಳುಗಳು ಹೊರ ಬಂದಿವೆ. ಗೋಡೆಗಳಲ್ಲಿ ಸಣ್ಣ ಬಿರುಕು ಬಿಟ್ಟು ಪ್ಲಾಸ್ಟರ್ ಕೂಡ ಹಾಳಾಗಿದೆ. ಮಳೆಗಾಲದಲ್ಲಿ ಎಲ್ಲ ತರಗತಿ ಕೋಣೆಗಳು ಸೋರುತ್ತವೆ. ಹಾಗಾಗಿ ಮಳೆ ಜೋರಾಗಿ ಬಂದರೆ ತರಗತಿಗಳಿಗೆ ಅನಿವಾರ್ಯವಾಗಿ ರಜೆ ಘೋಷಿಸಬೇಕಾಗುತ್ತದೆ.
ಇತ್ತೀಚೆಗೆ ಮುಖ್ಯಮಂತ್ರಿಗಳು ಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಆ ಸಂದರ್ಭದಲ್ಲಿ ಅವರಿಗೆ ಜಿಲ್ಲೆಯ ಇಂತಹ ಶಾಲೆಗಳ ವರದಿ ಸಿಕ್ಕಿರಲಿಲ್ಲವೇ ಎನ್ನುವುದು ಈ ಗ್ರಾಮಸ್ಥರ ಅಳಲು.
ಕೆಲವು ದಿನ ಹಿಂದೆ ಬಸವಕಲ್ಯಾಣದ ಒಂದು ಮನೆ ಛಾವಣಿ ಕುಸಿದು ಮನೆಯಲ್ಲಿದ್ದ ಒಂದೇ ಕುಟುಂಬದ 6 ಮಂದಿ ಮೃತಪಟ್ಟ ಘಟನೆ ಎಲ್ಲರನ್ನೂ ಚಿಂತೆಗೀಡು ಮಾಡಿತ್ತು. ಕಾರಣ ಸಂಬಂಧಪಟ್ಟ ಅಧಿಕಾರಿಗಳು, ಈ ಕಡೆ ಗಮನ ಹರಿಸಿ ಶಾಲೆಯ ನವೀಕರಣಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುವುದು ಪಾಲಕರ ಆಶಯವಾಗಿದೆ.
ಒಂದು ಕಾಲದಲ್ಲಿ ನೂರಾರು ವಿದ್ಯಾರ್ಥಿಗಳನ್ನು ಹೊಂದಿದ್ದ ಈ ಶಾಲೆಯಲ್ಲಿ ಕಟ್ಟಡ ಶಿಥಿಲ ಗೊಂಡಿರುವ ಕಾರಣ ಪಾಲಕರು ಇಲ್ಲಿ ಮಕ್ಕಳನ್ನು ದಾಖಲಿಸಲು ಭಯ ಪಡುತ್ತಿದ್ದಾರೆ. ಹೀಗಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿದೆ.
ಪ್ರಾರಂಭದಲ್ಲಿ ಈ ಶಾಲೆಗೆ ಪಕ್ಕದ ಹಳ್ಳಿಗಳಾದ ಮಾವಿನ ಹಳ್ಳಿ, ಕಪಲಾಪೂರ, ಬಾಜೋಳಗಾ ಗ್ರಾಮದ ವಿದ್ಯಾರ್ಥಿಗಳು ಬಂದು ವಿದ್ಯಾಭ್ಯಾಸ ಮಾಡಿದ್ದಾರೆ. ಆದರೆ ಇಲ್ಲಿಯ ಪರಿಸ್ಥಿತಿ ಕಂಡು ಗ್ರಾಮದ ವಿದ್ಯಾರ್ಥಿಗಳೇ ಬೇರೆ ಗ್ರಾಮಕ್ಕೆ ತೆರಳಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಶಾಲೆಯಲ್ಲಿ 1ರಿಂದ 8ನೇ ತರಗತಿ ವರೆಗೆ ಸುಮಾರು 60 ವಿದ್ಯಾರ್ಥಿಗಳಿದ್ದಾರೆ. ಮುಖ್ಯ ಶಿಕ್ಷಕ ಸೇರಿ ಐದು ಜನ ಶಿಕ್ಷಕರಿದ್ದಾರೆ. ಶಾಲಾ ಕಟ್ಟಡ ಮತ್ತು ಅಲ್ಲಿಯ ಪರಿಸರ ಸುಂದರವಾದರೆ ಇನ್ನೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿ, ಹೆಚ್ಚಿನ ಶಿಕ್ಷಕರೂ ಬರುತ್ತಾರೆ. ಕಾರಣ ಯಾವುದೇ ಅನಾಹುತ ಆಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲಾ ಕಟ್ಟಡ ನವೀಕರಣ ಮಾಡಬೇಕಿದೆ.
ಪ್ರಾಥಮಿಕ ಶಾಲೆ ಕಟ್ಟಡ ನವೀಕರಣಕ್ಕಾಗಿ ಸಾಕಷ್ಟು ಸಲ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
•ಸಿದ್ದಲಿಂಗ ಸ್ವಾಮಿ, ಗ್ರಾಮಸ್ಥರು
ಮಳೆಗಾಲ ಬಂತೆಂದರೆ ಶಾಲೆಯಲ್ಲಿ ಕುಳಿತು ಕೆಲಸ ಮಾಡಲು ಭಯವಾಗುತ್ತಿದೆ. ಏನು ಮಾಡುವುದು. ಸರ್ಕಾರಿ ಕೆಲಸ, ಎಲ್ಲಿಯಾದರೂ ಕುಳಿತು ಕೆಲಸ ಮಾಡಬೇಕಾಗಿದೆ.
•ಹೆಸರು ಹೇಳಲಿಚ್ಛಿಸದ ಶಿಕ್ಷಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.