ಕೋಟಿ ಖರ್ಚಾದರೂ ಸುರಕ್ಷತೆಗಿಲ್ಲ ಗಮನ
ದೊಡ್ಡ ಕೆರೆ ಏರಿ ಅಭಿವೃದ್ಧಿ ಕಾಮಗಾರಿ ಅಪೂರ್ಣ ಯಾಮಾರಿದರೆ ವಾಹನಗಳು ಕೆರೆಗೆ ಬೀಳ್ಳೋದು ಗ್ಯಾರಂಟಿ
Team Udayavani, Dec 2, 2019, 6:48 PM IST
ಎಚ್.ಬಿ. ನಿರಂಜನ ಮೂರ್ತಿ
ಭರಮಸಾಗರ: ಆರು ವರ್ಷಗಳ ಹಿಂದೆ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಇಲ್ಲಿನ ದೊಡ್ಡಕೆರೆ ಏರಿ ರಸ್ತೆ ಅಗಲೀಕರಣ ಮತ್ತು ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಕಾಮಗಾರಿ ಕೈಗೊಂಡ ಬಳಿಕವೂ ಕೆರೆ ಏರಿ ರಸ್ತೆ ಸುರಕ್ಷತಾ ಕೆಲಸಗಳು ಪೂರ್ಣಗೊಂಡಿಲ್ಲ ಎಂಬ ಆಕ್ಷೇಪ ಗ್ರಾಮಸ್ಥರಿಂದ ವ್ಯಕ್ತವಾಗಿದೆ.
ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡಕೆರೆ ಏರಿ ರಸ್ತೆಯ ಸುಮಾರು ಒಂದೂವರೆ ಕಿಮೀ ಉದ್ದದ ಸಂಚಾರ ಜನರಲ್ಲಿ ಭಯ ಹುಟ್ಟಿಸುತ್ತಿತ್ತು. ಬಹು ದಿನಗಳಿಂದ ಕೆರೆ ಏರಿ ರಸ್ತೆ ಅಗಲೀಕರಣಕ್ಕೆ ಜನರ ಒತ್ತಡ ಇತ್ತು. ಆರು ವರ್ಷಗಳ ಹಿಂದೆ ಕೆರೆ ಕೋಡಿ ಎತ್ತರ ಹೆಚ್ಚಳ ಸೇರಿದಂತೆ ಸುಮಾರು 30 ರಿಂದ 40 ಅಡಿ ಎತ್ತರದವರೆಗೆ ರಸ್ತೆಯ ಎತ್ತರವನ್ನು ಹೆಚ್ಚಿಸುವ ಮೂಲಕ ದೊಡ್ಡ ಮಟ್ಟದ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಈ ಕಾಮಗಾರಿಯಿಂದ ಕೆರೆ ಏರಿ ರಸ್ತೆಯ ಅಭಿವೃದ್ಧಿಯೊಂದಿಗೆ ಕೆರೆಗೆ ಸುರಕ್ಷತೆಯನ್ನೂ ಒದಗಿಸಲಾಗಿತ್ತು.
ಆದರೆ ಕೆರೆ ಏರಿ ರಸ್ತೆ ಅಗಲೀಕರಣದ ಬಳಿಕ ಭರಮಸಾಗರ ಭಾಗದಿಂದ ಕೋಡಿರಂಗವ್ವನಹಳ್ಳಿ ಕಡೆ ಸಂಚರಿಸುವ ಕಡೆ ಬಲ ಭಾಗದಲ್ಲಿ ಸುಮಾರು ಅರ್ಧದವರೆಗೆ ತಡೆಗೋಡೆ ನಿರ್ಮಾಣವಾಗಿಲ್ಲ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ರಸ್ತೆ ಉತ್ತಮವಾಗಿರುವುದರಿಂದ ವಾಹನಗಳ ವೇಗ ಕೆರೆ ಏರಿ ಮೇಲೆ ಹೆಚ್ಚಿರುತ್ತದೆ.ಸ್ಪಲ್ವ ಯಾಮಾರಿದರೂ ಸುಮಾರು 25 ಅಡಿ ಆಳದ ಕೆರೆಯೊಳಗೆ ವಾಹನಗಳು ಉರುಳುವ ಭೀತಿ ಇದೆ.
ಬೀದಿದೀಪಗಳ ಸ್ಥಿತಿಯೂ ಅಷ್ಟಕ್ಕಷ್ಟೇ: ಜಿಲ್ಲಾ ಪಂಚಾಯತ್ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನಲಾದ ಕೆರೆ ಏರಿ ಮೇಲಿನ 10 ವಿದ್ಯುತ್ ದೀಪದ ಕಂಬಗಳು ಕಳಪೆಯಾಗಿದ್ದು, ತಳದಲ್ಲೇ ತುಕ್ಕು ಹಿಡಿದು ನೆಲಕ್ಕೆ ಉರುಳುವ ಹಂತ ತಲುಪಿವೆ. ಆರಂಭದಲ್ಲಿ ಕೆಲವು ದಿನ ದೀಪಗಳು ಬೆಳಗಿದ್ದು ಬಿಟ್ಟರೆ ಇದುವರೆಗೆ ಪದ ಕಂಬಗಳು ಬೆದರುಗೊಂಬೆಗಳಾಗಿ ನಿಂತಿವೆ.
ಕೆಲವು ಕಂಬಗಳಲ್ಲಿನ ವಿದ್ಯುತ್ ಬಲ್ಬ್ ಜೋಡಣೆ ಮಾಡುವ ಕಿಟ್ ಇಲ್ಲದೆ ಕೇವಲ ಕಬ್ಬಿಣದ ಕಂಬ ಇರುವುದನ್ನು ಕಾಣಬಹುದು. ಕೆಲವು ದೀಪ ಕಂಬಗಳಲ್ಲಿನ ಬಲ್ಬ್ ಹಾಗೂ ಗಾಜುಗಳನ್ನು ಕಿಡಿಗೇಡಿಗಳು ಕಲ್ಲುಗಳಿಂದ ಒಡೆದು ಪುಡಿ ಮಾಡಿದ್ದಾರೆ. ಆರು ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಹೊಸದಾಗಿ ನಿರ್ಮಿಸಿದ ಚೌಡಮ್ಮ ಗುಡಿ ಬಳಿ ಕೂಡ ಸುರಕ್ಷತೆ ದೃಷ್ಟಿಯಿಂದ ನಿರ್ಮಿಸಬೇಕಾಗಿದ್ದ ತಡೆಗೋಡೆ ನಿರ್ಮಾಣವಾಗಿಲ್ಲ. ಕೆರೆ ಏರಿ ಮೇಲಿನ ರಸ್ತೆ ಅಕ್ಕಪಕ್ಕದ ಗಿಡ ಗಂಟಿಗಳನ್ನು ಸ್ವಚ್ಛಗೊಳಿಸಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.