ರೈತರಿಗೆ ಸಂಜೀವಿನಿಯಾದ ಎಲೆಕೋಸು!
ಚಿತ್ರದುರ್ಗ-ದಾವಣಗೆರೆ ಜಿಲ್ಲೆಗಳ ಪ್ರಮುಖ ತರಕಾರಿ ಬೆಳೆ ಕಡಿಮೆ ನೀರು-ಬಂಡವಾಳದಲ್ಲಿ ಅಧಿಕ ಲಾಭ
Team Udayavani, Oct 17, 2019, 2:59 PM IST
ಎಚ್.ಬಿ. ನಿರಂಜನ ಮೂರ್ತಿ
ಭರಮಸಾಗರ: ತರಕಾರಿ ಬೆಳೆ ಎಲೆಕೋಸನ್ನು ನೀರಾವರಿ ಮತ್ತು ಮಳೆ ಆಶ್ರಯದಲ್ಲಿ ಬೆಳೆದಿರುವ ಚಿತ್ರದುರ್ಗ ಮತ್ತು ದಾವಣಗೆರೆ ತಾಲೂಕಿನ ಹಲವು ಗ್ರಾಮಗಳ ರೈತರು ಲಾಭದಾಯಕ ಬೆಳೆಯನ್ನಾಗಿಸಿಕೊಂಡಿದ್ದಾರೆ.
ಕಡಿಮೆ ನೀರು, ಖರ್ಚು, ಅವಧಿಯಲ್ಲಿ ಬೆಳೆ ಬರುತ್ತದೆ. ಉತ್ತಮ ಆದಾಯದ ಬೆಳೆ ಇದಾಗಿರುವ ಕಾರಣ ಕಳೆದ ಹಲವು ವರ್ಷಗಳಿಂದ ಎಲೆಕೋಸು ಬೆಳೆ ಬರದ ಜಿಲ್ಲೆ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನು ವ್ಯಾಪಿಸಿಕೊಂಡಿದೆ.
ಎಲ್ಲೆಲ್ಲಿ ಬೆಳೀತಾರೆ ಎಲೆಕೋಸು?: ಚಿತ್ರದುರ್ಗ ತಾಲೂಕಿನ ಭರಮಸಾಗರ, ಅಳಗವಾಡಿ, ಹಳವುದರ, ಸಿಗೇಹಳ್ಳಿ, ಕೊಳಹಾಳು, ಕಾಲಗೆರೆ, ಎಮ್ಮೆಹಟ್ಟಿ, ಬೇಡರಶಿವನಕೆರೆ, ಕಬ್ಬಿಗೆರೆ, ಹೆಗಡೆಹಾಳು, ಹಳೆ ರಂಗಾಪುರ, ಹಳವುದರ ಹಟ್ಟಿ, ಇಸಾಮುದ್ರ, ಅಜ್ಜಪ್ಪನಹಳ್ಳಿ, ಸುಲ್ತಾನಿಪುರ, ಹರಳಕಟ್ಟೆ, ನೆಲ್ಲಿಕಟ್ಟೆ, ಗೊಲ್ಲರಹಳ್ಳಿ, ಚೌಲಿಹಳ್ಳಿ ಹಾಗೂ ದಾವಣಗೆರೆ ತಾಲೂಕಿನ ಹುಣಸೆಕಟ್ಟೆ, ಮಂಡಲೂರು, ಕಾಟೀಹಳ್ಳಿ, ಹಾಲುವರ್ತಿ, ಕೆಂಚಮ್ಮನಹಳ್ಳಿ, ಆನಗೋಡು, ಸುಲ್ತಾನಿಪುರ, ಕೊಡಗನೂರು ಕ್ರಾಸ್, ಗಂಗನಕಟ್ಟೆ, ಬಾವಿಹಾಳ್, ಸಿದ್ದನೂರು, ಕಬ್ಬೂರು, ನರಗನಹಳ್ಳಿ, ಅಣ್ಣಾಪುರ ಸೇರಿದಂತೆ ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿ ಎಲೆ ಕೋಸು ಬೆಳೆಯಲಾಗುತ್ತಿದೆ.
ಪ್ರಸ್ತುತ ಕೆಜಿ ಎಲೆ ಕೋಸಿಗೆ 14 ರಿಂದ 17 ರೂ. ದರ ಇದೆ. ಎಕರೆಗೆ 16 ರಿಂದ 18, 20 ಟನ್ ಇಳುವರಿ ಬರುತ್ತದೆ. ಮಳೆಗಾಲದಲ್ಲಿ ತೂಕ ಕಡಿಮೆ. ಬೇಸಿಗೆಯಲ್ಲಿ ಕೋಸಿನ ತೂಕ ಉತ್ತಮವಾಗಿರುತ್ತದೆ. ಎಕರೆಗೆ ಬರೋಬ್ಬರಿ ಎರಡರಿಂದ ಮೂರು ಲಕ್ಷ ರೂ. ಆದಾಯವಿದೆ.
ದರ ಗಗನಕ್ಕೇರಿದ ವೇಳೆ 5 ಲಕ್ಷದವರೆಗೆ ಆದಾಯ ಕಂಡ ರೈತರಿದ್ದಾರೆ. ಸಸಿ ನಾಟಿಯಿಂದ ಕಟಾವಿನವರೆಗೆ ಎಕರೆಗೆ 30 ರಿಂದ 40 ಸಾವಿರ ರೂ. ಖರ್ಚು ಬರುತ್ತದೆ. ಎರಡೂವರೆ ತಿಂಗಳ ಸೀಮಿತ ಅವಧಿಯ ಬೆಳೆ ಇದಾಗಿದೆ.
ಒಂದು ಎಕರೆಗೆ 40 ರಿಂದ 45 ಸಾವಿರ ಸಸಿ ನಾಟಿ ಮಾಡಲಾಗುತ್ತದೆ. ಕೆಲವರು ನರ್ಸರಿಗಳಿಂದ ಸಸಿ ಖರೀದಿ ಮಾಡಿದರೆ ಹಲವರು ಸ್ವಂತಕ್ಕೆ ಬೀಜ ತಂದು ಮಡಿ ಮಾಡಿ ಬೆಳೆಸಿ ನಾಟಿ ಮಾಡುತ್ತಾರೆ. ಸಾಲಿನಿಂದ ಸಾಲಿಗೆ ಒಂದರಿಂದ ಎರಡು ಅಡಿ ಅಂತರ ಹಾಗೂ ಸಸಿಯಿಂದ ಸಸಿಗೆ ಒಂದು ಅಡಿ ಅಂತರದಲ್ಲಿ ಕೋಸು ಬೆಳೆಯಲಾಗುತ್ತದೆ.
ಎರಡು ಬಾರಿ ಡಿಎಪಿ, 20-20-20, ಅಮೋನಿಯಂ ಸಲ್ಫೇಟ್, ಇತರೆ ಅವಶ್ಯಕ ರಾಸಾಯನಿಕ ಗೊಬ್ಬರಗಳನ್ನು ನೀಡಲಾಗುತ್ತದೆ. 4 ರಿಂದ 5 ಬಾರಿ ಕೀಟ ನಾಶಕ ಸಿಂಪಡಣೆ ಮಾಡಲಾಗುತ್ತದೆ. ಕಳೆ ನಿರ್ಮೂಲನೆ ಇತರೆ ಕೃಷಿ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ.
ಜಮೀನಿಗೇ ಬರ್ತಾರೆ ವ್ಯಾಪಾರಸ್ಥರು: ಎಲೆಕೋಸಿಗೆ ಉತ್ತಮ ದರವಿರುವ ಕಾರಣ ಖರೀದಿದಾರರು ನೇರವಾಗಿ ರೈತರ ಜಮೀನಿಗೆ ಬಂದು ಖರೀದಿ ಮಾಡುತ್ತಾರೆ. ಈ ಭಾಗಗಳಲ್ಲಿ ಬೆಳೆದ ಕೋಸು ಬೆಂಗಳೂರು, ದೂರದ ದೆಹಲಿ, ಪಶ್ವಿಮ ಬಂಗಾಳ, ಹರಿಯಾಣ, ಪಂಜಾಬ್, ಮಹಾರಾಷ್ಟ್ರಗಳವರೆಗೆ ರಫ್ತಾಗುತ್ತದೆ. ಈರುಳ್ಳಿ ದರ ಗಗನಮುಖೀ ಆಗುತ್ತಿದ್ದಂತೆ ಎಲೆಕೋಸಿನ ದರ ಕೂಡ ಏರಿಕೆಯಾಗುತ್ತದೆ. ಒಂದು ವೇಳೆ ಈರುಳ್ಳಿ ದರ ಕುಸಿದರೆ ಅದರ ಬೆನ್ನ ಹಿಂದೆಯೇ ಕೋಸಿನ ದರವೂ ಕಡಿಮೆ ಆಗುತ್ತದೆ. ಕೆಲವೆಡೆ ಈರುಳ್ಳಿಗೆ ಪೂರಕವಾಗಿ ಎಲೆಕೋಸನ್ನು ಪ್ರಮುಖ ಆಹಾರ ಖಾದ್ಯಗಳಲ್ಲಿ ಬಳಕೆ ಮಾಡುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಗೌರಮ್ಮನಹಳ್ಳಿ ಗ್ರಾಮದ ಎಲೆಕೋಸು ವ್ಯಾಪಾರಸ್ಥರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.