ಸುಸಜ್ಜಿತ ಕಟ್ಟಡವಿದ್ದರೂ ಕಾಂಪೌಂಡ್ ಮರೀಚಿಕೆ!
ಭರಮಸಾಗರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ದುಸ್ಥಿತಿ
Team Udayavani, Dec 16, 2019, 1:37 PM IST
ಎಚ್.ಬಿ. ನಿರಂಜನ ಮೂರ್ತಿ
ಭರಮಸಾಗರ: ಬರೋಬ್ಬರಿ 2.70 ಕೋಟಿ ರೂ. ವೆಚ್ಚದಲ್ಲಿ ಇಲ್ಲಿನ ವಿದ್ಯಾನಗರದಲ್ಲಿ 2013-14ನೇ ಸಾಲಿನಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ ಕಾಲೇಜಿಗೆ ಕಾಂಪೌಂಡ್ ಮರೀಚಿಕೆಯಾಗಿರುವುದರಿಂದ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಹಲವು ಸಮಸ್ಯೆ ಎದುರಿಸಬೇಕಾಗಿದೆ.
ಆರಂಭದಲ್ಲಿ ಹಳೆ ಪೊಲೀಸ್ ಠಾಣೆ ಹಾಗೂ ಇತರೆ ಸರ್ಕಾರಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಲ್ಲಿನ ಐಟಿಐ ಕಾಲೇಜಿಗೆ 2013-14ನೇ ಸಾಲಿನಲ್ಲಿ ನಬಾರ್ಡ್‌ನ ಆರ್ ಐಡಿಎಫ್ ಯೋಜನೆಯಡಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿತ್ತು. ಇಂತಹ ಸುಸಜ್ಜಿತ ಕಟ್ಟಡ ನಿರ್ಮಿಸಿದರೂ ಕಾಲೇಜು ಕಟ್ಟಡದ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲಿಲ್ಲ. ಇದರಿಂದಾಗಿ ಕಾಲೇಜಿನ ಸುತ್ತಲೂ ಅನೈರ್ಮಲ್ಯ ಸೃಷ್ಟಿಯಾಗಿ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಬೇಸತ್ತು ಕಾಲೇಜು ಸಿಬ್ಬಂದಿಗಳು ಆಸಕ್ತಿ ವಹಿಸಿ ಕಟ್ಟಡದ ಮುಂಭಾಗದಲ್ಲಿ ಕಲ್ಲು ಕಂಬ ನೆಟ್ಟು ಮುಳ್ಳು ತಂತಿ ಅಳವಡಿಸಿದರೂ ಆವರಣದಲ್ಲಿ ಗಲೀಜು ಮಾಡುವುದು, ಮದ್ಯದ ಬಾಟಲಿ ಎಸೆದು ಗುಟ್ಕಾ ಉಗಿಯುವದು, ಚೀಟಿಗಳನ್ನು ಬಿಸಾಡುವುದು ನಿಂತಿಲ್ಲ. ಕಾಂಪೌಂಡ್ ಇಲ್ಲದೇ ಇರುವುದರಿಂದ ಕಟ್ಟಡದ ಕಿಟಕಿ ಗ್ಲಾಸ್ ಒಡೆಯುವುದು, ರಜಾ ದಿನಗಳಲ್ಲಿ ಪುಂಡರು ಎಲ್ಲೆಂದರಲ್ಲಿ ಠಿಕಾಣಿ ಹೂಡುವುದು, ಕಾಲೇಜು ನಂತರದ ಸಮಯದಲ್ಲಿ ಇಸ್ಪೀಟ್ ಆಡುವುದು ಸೇರಿದಂತೆ ಇತರೆ ಕೃತ್ಯಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.
ಗಿಡ-ಮರ ಬೆಳೆಸೋದಕ್ಕೂ ಬಿಡ್ತಿಲ್ಲ: ಇಷ್ಟಲ್ಲ ಸಮಸ್ಯೆಗಳ ನಡುವೆಯೂ ಹಸಿರೀಕರಣ ಮಾಡಲು ಕಾಲೇಜು ಸಿಬ್ಬಂದಿ ನಾನಾ ಜಾತಿಯ ಗಿಡಗಳನ್ನು ತಂದು ನೆಟ್ಟಿದ್ದಾರೆ. ಆದರೆ ಕೆಲವರು ಇಲ್ಲಿ ದನ ಕರುಗಳನ್ನು ಮೇಯಿಸಿ ವಿಕೃತ ಖುಷಿ ಅನುಭವಿಸುತ್ತಿದ್ದಾರೆ. ಕಾಲೇಜು ನಡೆಯುವ ವೇಳೆಯೇ ಕೆಲವರು ಮುಳ್ಳು ತಂತಿ ತಗ್ಗಿಸಿ ಒಳಗಡೆ ದನ ಕರುಗಳನ್ನು ಬಿಟ್ಟು ಮೇಯಿಸುತ್ತಿರುವುದರಿಂದ ಕಾಲೇಜು ಸಿಬ್ಬಂದಿ ಮತ್ತು ಪ್ರಶಿಕ್ಷಣಾರ್ಥಿಗಳು ಬೇಸತ್ತು ಹೋಗಿದ್ದಾರೆ.
ಕಾಲೇಜಿಗೆ ಆಗಮಿಸುವ ಸುಮಾರು 500 ಮೀಟರ್ ಉದ್ದದ ರಸ್ತೆಯ ಅಕ್ಕ ಪಕ್ಕದ ಜಾಗ ಮಲ ಮೂತ್ರ ವಿಸರ್ಜನೆಯ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಬಿಸಿಎಂ ಹಾಸ್ಟೆಲ್, ಡಿವಿಎಸ್ ಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ಪೋಷಕರು ಮತ್ತು ವಿದ್ಯಾ ನಗರಕ್ಕೆ ತೆರಳುವವರು ನಿವಾಸಿಗಳು ಮೂಗು ಮುಚ್ಚಿಕೊಂಡು ಸಂಚರಿಸಬೇಕಾಗಿದೆ. ಕಟ್ಟಡದ ಸುರಕ್ಷತೆಗೆ ಸಂಬಂಧಿಸಿದವರು ಗಮನ ನೀಡಿ ಕಾಂಪೌಂಡ್ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.
ಗ್ರಾಪಂಗೆ ತಾಂತ್ರಿಕ ಸಮಸ್ಯೆ ಅಡ್ಡಿ
ಐಟಿಐ ಕಾಲೇಜು ಕಟ್ಟಡದ ಹಲವು ಭಾಗಗಳಿಗೆ ಕಿಡಿಗೇಡಿಗಳು ಹಾಳು ಮಾಡಿರುವ ಅನಾಹುತಗಳ ನಡುವೆಯೇ ಕಾಲೇಜು ಚಟುವಟಿಕೆಗಳು ನಡೆಯುತ್ತಿದೆ. ಮಹಿಳಾ ಪ್ರಶಿಕ್ಷಣಾರ್ಥಿಗಳು ಓದುವ ಕಾಲೇಜಿನಲ್ಲಿ ಕಟ್ಟಡದ ಸುರಕ್ಷತೆಗೆ ಬೇಕಾದ ಕಾಂಪೌಂಡ್ ಸೌಲಭ್ಯವಿಲ್ಲದೆ ನಿತ್ಯ ತೊಂದರೆ ಅನುಭವಿಸಬೇಕಾಗಿದೆ. ಕಟ್ಟಡದ ಸುತ್ತ ಕಾಂಪೌಂಡ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ವರ್ಷಗಳೇ ಕಳೆದಿವೆ. ಆದರೆ ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ಜಾಬ್‌ಕಾರ್ಡ್‌ಗಳ ಜೋಡಣೆ ಸೇರಿದಂತೆ ತಾಂತ್ರಿಕ ಸಮಸ್ಯೆಯಿಂದ ಕಾಂಪೌಂಡ್ ಕಾಮಗಾರಿ ಟೇಕಾಪ್ ಆಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.