ಖಾಲ್ಸಾ ಪಬ್ಲಿಕ್ ಶಾಲೆಗೆ ಜಿಪಂ ಸಿಇಒ-ಡಿಡಿಪಿಐ ಭೇಟಿ
Team Udayavani, Jul 26, 2019, 3:04 PM IST
ಬೀದರ: ಜಿಪಂ ಸಿಇಒ ಮಹಾಂತೇಶ ಬೀಳಗಿ ಹಾಗೂ ಡಿಡಿಪಿಐ ಚಂದ್ರಶೇಖರ ಖಾಲ್ಸಾ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಬೀದರ: ಪರವಾನಗಿ ಇಲ್ಲದೇ ನಗರದಲ್ಲಿ ಶಾಲೆ ನಡೆಸುತ್ತಿರುವ ದೂರಿನ ಹಿನ್ನೆಲೆಯಲ್ಲಿ ಜಿಪಂ ಸಿಇಒ ಮಹಾಂತೇಶ ಬೀಳಗಿ ಹಾಗೂ ಡಿಡಿಪಿಐ ಚಂದ್ರಶೇಖರ ಗುರುವಾರ ಮಾಧವನಗರದಲ್ಲಿರುವ ಖಾಲ್ಸಾ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳು, ಶಾಲಾ ದಾಖಲೆಗಳ ಮಾಹಿತಿ ಪಡೆದರು. ಈ ವೇಳೆ ಹೊರಗಡೆ ಬಾಗಿಲು ಮುಚ್ಚಿ ಒಳಗಡೆ ಮಕ್ಕಳಿಗೆ ಪಾಠ ಮಾಡುತ್ತಿರುವುದು ಕಂಡು ಬಂದಿತು. ಶಾಲೆಯ ಒಳಗಡೆ ಸಂಚರಿಸಿದ ಅಧಿಕಾರಿಗಳು ಶಿಕ್ಷಕರೊಂದಿಗೆ ಮಾತನಾಡಿದರು. ತಾವು ಏನು ಓದಿದ್ದೀರಿ?, ಎಷ್ಟು ಸಂಬಳ ಕೊಡುತ್ತಾರೆ?, ಇಲ್ಲಿ ಎಷ್ಟು ವಿದ್ಯಾರ್ಥಿಗಳು ಓದುತ್ತಿದ್ದಾರೆ? ಎಂದು ಪ್ರಶ್ನಿಸಿ ಮಾಹಿತಿ ಪಡೆದರು. ಅಲ್ಲದೆ, ಶಾಲೆಗೆ ಇಲಾಖೆಯಿಂದ ಅನುಮತಿ ಇಲ್ಲದೇ ಯಾಕೆ ಶಾಲೆ ನಡೆಸುತ್ತಿದ್ದೀರಿ ಎಂದು ಶಾಲಾ ಮುಖ್ಯಸ್ಥರನ್ನು ಪ್ರಶ್ನಿಸಿದರು.
ಈ ವೇಳೆ ಶಾಲೆ ಮುಖ್ಯಸ್ಥರು ಶಾಲೆ ತೆರೆಯಲು ಅನುಮತಿ ಕೋರಿ ಈಗಾಗಲೇ ಬಿಇಒ ಕಚೇರಿಗೆ ಪತ್ರ ಬರೆದಿದ್ದೇವೆ. ಅನುಮತಿ ಸಿಗುವುದಾಗಿ ಶಾಲೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳಿಗೆ ಉತ್ತರಿಸಿದರು. ಈ ಸಂದರ್ಭದಲ್ಲಿ ಸಿಇಒ ಡಿಡಿಪಿಐ ಚಂದ್ರಶೇಖರ ಅವರನ್ನು ಪ್ರಶ್ನಿಸಿ, ಶಾಲೆ ಬಗ್ಗೆ ನಿಮಗೆ ಮಾಹಿತಿ ಇದೆಯಾ? ಅನುಮತಿ ಇಲ್ಲದೇ ಅನಧಿಕೃತವಾಗಿ ನಡೆಯುತ್ತಿರುವ ಈ ಶಾಲೆ ಮೇಲೆ ಕ್ರಮ ಜರುಗಿಸಿದ್ದೀರಾ? ಎಂದು ವಿಚಾರಿಸಿದರು. ಇದಕ್ಕೆ ಉತ್ತರಿಸಿದ ಡಿಡಿಪಿಐ ಈ ಹಿಂದೆ ಈ ಶಾಲೆ ಬಗ್ಗೆಯೇ ದೂರು ಕೇಳಿ ಬಂದಿತ್ತು. ಸದರಿ ಈ ಶಾಲೆ ಮುಚ್ಚಿಸುವಂತೆ ಇಲ್ಲಿನ ಬಿಇಒ ಅವರಿಗೆ ಹಲವಾರು ಬಾರಿ ನೋಟಿಸ್ ನೀಡಿ ಸೂಚನೆ ನೀಡಲಾಗಿತ್ತು. ಶಾಲೆಗೂ ಕೂಡ ನೋಟಿಸ್ ನೀಡಲಾಗಿದೆ. ದೂರು ನೀಡಿದವರಿಗೆ ಕೂಡ ಹಿಂಬರಹ ನೀಡಿದ್ದಾಗಿ ಡಿಡಿಪಿಐ ಮಾಹಿತಿ ನೀಡಿದರು.
ಬಿಇಒ ವಿರುದ್ಧ ಕ್ರಮ: ಯಾವುದೇ ಅನುಮತಿ ಇಲ್ಲದೇ ಶಾಲೆ ನಡೆಯುತ್ತಿದ್ದರೂ ಈ ವಿಷಯ ಗಂಭೀರವಾಗಿ ತೆಗೆದುಕೊಂಡು ಸರಿಯಾದ ಕ್ರಮವಹಿಸದೇ ಶಾಲೆ ಮುಂದುವರೆಯುತ್ತಿರುವ ಆಧಾರದ ಹಿನ್ನೆಲೆಯಲ್ಲಿ ಬೀದರ ಕ್ಷೇತ್ರ ಶಿಕ್ಷಣಾಧಿಕಾರಿ ಮೇಲೆ ಶಿಸ್ತು ಕ್ರಮಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ವರದಿ ಮಾಡುವುದಾಗಿ ಸಿಇಒ ತಿಳಿಸಿದರು.
ಅಮಾನತಿಗೆ ಸೂಚನೆ: ಪ್ರತಿಯೊಂದಕ್ಕೂ ಹಣ ವಸೂಲಿ ಮಾಡುತ್ತಾರೆ. ಹೊಸ ಶಾಲೆಗಳಿಗೆ ಅನುಮತಿ ಕೊಡುವಾಗ ಹಣ ಕೇಳುತ್ತಾರೆ. ಈ ಶಾಲೆ ಬಂದ್ ಮಾಡಿಸುವಲ್ಲಿ ಕೂಡ ವೈಫಲ್ಯ ತೋರಿದ್ದಾರೆ ಎನ್ನುವ ಹಲವಾರು ದೂರುಗಳ ಆಧಾರದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿರುವ ಶಿವಶಂಕರ ಅವರನ್ನು ಕೂಡಲೇ ಅಮಾನತು ಮಾಡುವುದಾಗಿ ಸಿಇಒ ಇದೇ ಸಂದರ್ಭದಲ್ಲಿ ತಿಳಿಸಿದರು.
ಶಾಲೆಗೆ ಬೀಗ: ಶಾಲೆಗೆ ಭೇಟಿ ನೀಡಿದ ವೇಳೆ, ಶಾಲೆಯನ್ನು ಕೂಡಲೇ ಮುಚ್ಚಿಸುವಂತೆ ಡಿಡಿಪಿಐ ಅವರಿಗೆ ಸಿಇಒ ಮಹಾಂತೇಶ ಬೀಳಗಿ ನಿರ್ದೇಶನ ನೀಡಿದರು. ಬಳಿಕ ಡಿಡಿಪಿಯು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿ, ಅನಧಿಕೃತವಾಗಿ ನಡೆಯುತ್ತಿದ್ದ ಶಾಲೆಗೆ ಬೀಗ ಹಾಕಿಸಿದರು.
ಅನಧಿಕೃತ ಶಾಲೆಯಲ್ಲಿ ಓದುವ ಮಕ್ಕಳಿಗೆ ಸರ್ಕಾರದ ಯಾವುದೇ ಸೌಲಭ್ಯ ದೊರೆಯುವುದಿಲ್ಲ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪಾಲಕರು ಮಕ್ಕಳನ್ನು ಯಾವುದೇ ಕಾರಣಕ್ಕೂ ಅನಧಿಕೃತ ಶಾಲೆಗಳಿಗೆ ಸೇರಿಸಬಾರದು ಎಂದು ಸಿಇಒ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.