ನಿರಾಶೆ ಮೂಡಿಸಿದ ಅಭ್ಯರ್ಥಿಗಳ ಭರವಸೆ
ಬರ ಎದುರಿಸುತ್ತಿರುವ ಜಿಲ್ಲೆ ಕಾಳಜಿ ಯಾರಿಗೂ ಇಲ್ಲ •ವೈಯಕ್ತಿಕ ಟೀಕೆಗೆ ಹೆಚ್ಚು ಮಹತ್ವ ನೀಡಿದ ಸ್ಪರ್ಧಿಗಳು
Team Udayavani, Apr 22, 2019, 11:36 AM IST
ಬೀದರ: ಕಳೆದ ವರ್ಷ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಪರಿಣಾಮ ಈ ವರ್ಷ ಬರದ ಛಾಯೆ ಎದುರಾಗಿದೆ. ಕುಡಿವ ನೀರಿಗೆ ಎಲ್ಲೆಡೆ ಆಹಾಕಾರ ಉಲ್ಬಣಗೊಂಡಿದೆ. ಆದರೂ ಕೂಡ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಮಾಡುವುದಾಗಿ ಜಿಲ್ಲೆಯ ಜನಪ್ರತಿನಿಧಿಗಳು, ಚುನಾವಣೆ ಎದುರಿಸುತ್ತಿರುವ ಅಭ್ಯರ್ಥಿಗಳು ಭರವಸೆ ನೀಡದಿರುವುದು ಜಿಲ್ಲೆಯ ರೈತರಿಗೆ ಬೇಸರ ಮೂಡಿಸಿದೆ.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿಗಳು ಯಾವ ಭರವಸೆ ನೀಡುತ್ತಾರೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯಾರ ಆಲೋಚನೆಗಳು ಏನು. ಯಾವ ಹಳೆ ಯೋಜನೆಗಳಿಗೆ ಮರು ಜನ್ಮ ನೀಡುವ ಉತ್ಸಾಹ ಹೊಂದಿದ್ದಾರೆ. ಯಾವು ಹೊಸ ಯೋಜನೆಗಳನ್ನು ಜಿಲ್ಲೆಗೆ ತರುವ ಪರಿಕಲ್ಪನೆ ಹೊಂದಿದ್ದಾರೆ. ಈ ಕುರಿತು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆಯಾ ಪಕ್ಷದ ಅಭ್ಯರ್ಥಿಗಳು ಏನು ಹೇಳಬಹುದೆಂಬ ನಿರೀಕ್ಷೆ ಜಿಲ್ಲೆಯ ಜನರದಾಗಿತ್ತು. ಆದರೆ, ವಾಸ್ತವದಲ್ಲಿ ಆಗಿದ್ದೇ ಬೇರೆ. ಜನರ ನೀರಿಕ್ಷೆಯಂತೆ ಚುನಾವಣಾ ಕಣದಲ್ಲಿನ ಅಭ್ಯರ್ಥಿಗಳು ಅಭಿವೃದ್ಧಿಯ ಕುರಿತು ಹೆಚ್ಚಾಗಿ ಮಾತನಾಡದೆ, ವೈಯಕ್ತಿಕ ಟೀಕೆಗೆ ಹೆಚ್ಚು ಮಹತ್ವ ನೀಡಿದ್ದಾರೆ ಎಂಬ ಅಭಿಪ್ರಾಯಗಳನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.
ಚುನಾವಣೆ ಕಾವು: ಲೋಕಸಭೆ ಚುನಾವಣೆಗೆ ಮಾ.28ರಿಂದ ನಾಮಪ್ರ ಸಲ್ಲಿಕೆ ಶುರುವಾದರೆ, ಇನ್ನೊಂದು ಕಡೆ ರಾಷ್ಟ್ರೀಯ ಪಕ್ಷಗಳು ಸಭೆ, ಸಮಾರಂಭಗಳಿಗೂ ಚಾಲನೆ ನೀಡಿದ್ದರು. ಪ್ರಮುಖವಾಗಿ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ತಮ್ಮ ಪಕ್ಷದ ಕಾರ್ಯಕರ್ತರ ಸಭೆಗಳು ನಡೆಸಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದರು. ಅಭ್ಯರ್ಥಿಗಳ ಅಂತಿಮ ಆಯ್ಕೆ ನಂತರ ಭರದ ಸಿದ್ಧತೆಗಳನ್ನು ನಡೆಸಿ, ಅದ್ಧೂರಿ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದ್ದರು. ದಿನ ಕಳೆದಂತೆ ಚುನಾವಣೆಯ ಕಾವು ಕೂಡ ಏರತೊಡಗಿತ್ತು. ಬಹಿರಂಗ ಸಭೆಗಳಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಪರಸ್ಪರ ಮಾತಿನ ಸಮರ ನಡೆಸುವ ಮೂಲಕ ಚುನಾವಣಾ ಕಾವು ಹೆಚ್ಚಿಸಿದ್ದರು. ಅಲ್ಲದೆ, ಇತರೆ ಪಕ್ಷದ ಅಭ್ಯರ್ಥಿಗಳು ಕೂಡ ಕರಪತ್ರ ಮುದ್ರಿಸಿ ಪ್ರಚಾರ ನಡೆಸಿದರು. ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ಪತ್ನಿಯರು ಕೂಡ ಜನರ ಮನೆಮನೆಗೆ ತೆರಳಿ ಮತಯಾಚನೆ ಮಾಡಿದ್ದು ವಿಶೇಷವಾಗಿತ್ತು.
ವಾಕ್ ಸಮರ: ಲೋಕಸಭೆ ಚುನಾವಣೆಯ ಪ್ರತಿಯೊಂದು ಸಭೆಗಳಲ್ಲಿ ಕಾಂಗ್ರೆಸ್-ಬಿಜೆಪಿ ಮುಖಂಡರು ಪರಸ್ಪರ ವಾಕ್ ಸಮರ ನಡೆಸಿದ್ದಾರೆ. ಪಕ್ಷದ ಸಾಧನೆಗಳನ್ನು ಹೇಳಿಕೊಳ್ಳುವ ಜತೆಗೆ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಪರಸ್ಪರ ವೈಯಕ್ತಿ ನಿಂದನೆ ಕೂಡ ಮಾಡಿಕೊಂಡಿದ್ದಾರೆ. ಅಲ್ಲದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಏಕ ವಚನದ ಮಾತುಗಳನ್ನು ಕೂಡ ಆಡಿಕೊಂಡಿದ್ದಾರೆ. ಈ ಇಬ್ಬರ ಭಾಷಣ ಪಕ್ಷದ ಕಾರ್ಯಕರ್ತರಿಗೆ ಹರ್ಷ, ಉತ್ಸಾಹ ನೀಡಿದರೆ, ಜನ ಸಾಮಾನ್ಯರು ರಾಜಕೀಯ ಇಷ್ಟೊಂದು ಕೀಳಾಗಿ ಇದೆಯೇ ಎಂದು ಕೇಳುವಂತಿತ್ತು. ವಾಕ್ ಸಮರದ ಕಾವು ಕೂಡ ಹೆಚ್ಚಾಗಿ ಮತದಾನದ ದಿನ ಸಮೀಪಿಸುತ್ತಿದ್ದಂತೆ ಕಡಿಮೆಗೊಂಡಿತು.
ರಾಷ್ಟ್ರೀಯ ವಿಷಯಗಳೇ ಚರ್ಚೆ: ಈ ಚುನಾವಣೆಯಲ್ಲಿ ಬಹುತೇಕ ಸಭೆ, ಸುದ್ದಿಗೋಷ್ಠಿ ಸೇರಿಂತೆ ಇತರೆ ಮತಯಾಚನೆ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ವಿಷಯಗಳೇ ಚರ್ಚೆಯಾಗಿವೆ. ಕಾಂಗ್ರೆಸ್ ಪಕ್ಷದವರು ಮೋದಿ ವಿರುದ್ಧ, ಬಿಜೆಪಿಯವರು ರಾಹುಲ್ ಗಾಂಧಿ ಹಾಗೂ ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿಕೊಂಡಿದ್ದಾರೆ. ತಮ್ಮ ಪಕ್ಷ ಉತ್ತಮ ಎಂದು ಎರಡೂ ಪಕ್ಷಗಳು ಹೇಳಿಕೊಂಡಿವೆ. ಅನೇಕ ಕಾಮಗಾರಿಗಳು ತಮ್ಮ ಸಾಧನೆ ಎಂದು ತಿಳಿಸಿವೆ ಹೊರತೂ, ಸ್ಥಳೀಯ ಸಮಸ್ಯೆಗಳ ಬಗ್ಗೆ ಯಾರೊಬ್ಬರೂ ಗಮನ ಹರಿಸದಿರುವುದು ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ.
ಜನರ ಅಭಿಪ್ರಾಯ: ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳ ಈಡೇರಿಕೆಗೆ ಒತ್ತು ನೀಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಮುಂದಿನ ಚುನಾವಣೆಯ ಮತಯಾಚನೆ ಸಂದರ್ಭದಲ್ಲಿ ಮುಖಭಂಗ ಅನುಭವಿಸಬೇಕಾ ಗುತ್ತದೆ. ಅಥವಾ ವಿಪಕ್ಷಗಳ ಟೀಕೆಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಚುನಾವಣಾ ಪೂರ್ವದಲ್ಲಿ ಬಿಡುಗಡೆಗೊಳಿಸುವ ಪ್ರಣಾಳಿಕೆಗಳು ಆಯಾ ಪಕ್ಷ ಅಧಿಕಾರಕ್ಕೆ ಬಂದಲ್ಲಿ ತನ್ನ ಸರ್ಕಾರದ ಆಡಳಿತ ಹೇಗಿರಬಹುದೆಂಬ ಅಂದಾಜಿನ ಬಹುಭಾಗವನ್ನು ತೆರೆದಿಡುತ್ತವೆ. ಆದ್ದರಿಂದ ಇದರ ಸಾಧಕ-ಬಾಧಕಗಳನ್ನು ಅರಿಯಬೇಕಾದುದು ಮತದಾರರ ಕರ್ತವ್ಯವಾಗಿದೆ. ಯುವಕರು ಕೂಡ ಪ್ರಣಾಳಿಕೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಯಾರೋ ಹೇಳುವ, ನೀಡುವ ಆಸೆಗಳಿಗೆ ಜನರು ಮರಳಾಗಬಾರದು. ಉತ್ತಮ ಅಭ್ಯರ್ಥಿ, ಪ್ರಗತಿಪರ ಪಕ್ಷಗಳಿಗೆ ಮಹತ್ವ ನೀಡಬೇಕು ಎಂಬುದು ಬುದ್ಧಿವಂತ ಜನರ ಅಭಿಪ್ರಾಯವಾಗಿದೆ.
ಅಂತಿಮ ಕಸರತ್ತು: ಏ.23ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, ಚುನಾವಣೆಯ ಅಂತಿಮ ಕಣ ಸಜ್ಜಾಗಿದೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ ಮತದಾನದ ಅಂತಿಮ ಕ್ಷಣದವರೆಗೂ ಮತದಾರರ ಓಲೈಕೆಗಾಗಿ ಅನೇಕ ರೀತಿಯ ಕಸರತ್ತು ನಡೆಸಲು ಮುಂದಾಗಿದ್ದಾರೆ. ರವಿವಾರ ಬಹಿರಂಗ ಸಭೆಗೆ ತೆರೆಬಿದಿದ್ದು, ಸೋಮವಾರ ಮನೆ-ಮನೆ ಪ್ರಚಾರಕ್ಕೆ ಅವಕಾಶ ಇದೆ. 23ರಂದು ಮತದಾನ ನಡೆಯಲ್ಲಿದ್ದು, ಅಭ್ಯರ್ಥಿಗಳ ಭವಿಷ್ಯ ಮೇ 23ಕ್ಕೆ ಹೊರಬರದಲಿದೆ.
ಸ್ಪರ್ಧೆ ಆರೋಗ್ಯ ಪೂರ್ಣವಾಗಿರಬೇಕು
ಚುನಾವಣೆ ಎಂದ ಮೇಲೆ ಸ್ಪರ್ಧೆ ಇರಲೇಬೇಕು. ಆದರೆ ಬಹಿರಂಗ ಪ್ರಚಾರ ಭಾಷಣಗಳು ವೈಯಕ್ತಿಕ ಕೆಸರಾಟದ ವೇದಿಕೆಯಾಗಿ ಪರಿಣಮಿಸುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ರಾಜಕಾರಣಿ ಜಾತಿ ಲೆಕ್ಕಾಚಾರ ಹಾಕದೇ ಆರ್ಥಿಕವಾಗಿ ಹಿಂದುಳಿದ ಮತ್ತು ಸಮಾಜದ ಅತ್ಯಂತ ಕಟ್ಟಕಡೆ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ಕಲ್ಪಿಸುವ ವಿಶ್ವಾಸ ವ್ಯಕ್ತಪಡಿಸಬೇಕು. ರಾಜಕಾರಣಿಗಳ ಹೇಳಿಕೆ ಸಾರ್ವಜನಿಕರಿಗೆ ಅಸಹ್ಯವಾಗದಂತೆ ನಾಲಿಗೆ ಮೇಲೆ ನಿಯಂತ್ರಣ ಇಟ್ಟುಕೊಂಡಿರಬೇಕು.
•ಮಲ್ಲಿಕಾರ್ಜುನ ಮುತ್ತಂಗಿ
ಬರೀ ಸಿದ್ಧಾಂತ ಹೇಳಿದರೆ ಹೊಟ್ಟೆ ತುಂಬಲ್ಲ
ಹುಮನಾಬಾದ: ಚುನಾವಣೆಯಲ್ಲಿ ವಿವಿಧ ಪಕ್ಷದವರು ಬಂದು ತಮ್ಮ ಸಿದ್ಧಾಂತ ಹೇಳುವುದರಿಂದ ಜನತೆಯ ಹೊಟ್ಟೆ ತುಂಬುವುದಿಲ್ಲ. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಬರೀ ಭಾಷಣಕ್ಕೆ ಸೀಮಿತವಾಗಿದೆ. ಅದಕ್ಕೆ ಎಷ್ಟೇ ಕೋಟಿ ತಗಲಿದರೂ ಹಣ ತಂದು ಪುನರ್ಜನ್ಮ ಕೊಡುತ್ತೇನೆ ಎಂದು ಯಾರೂ ಹೇಳದಿರುವುದು ನೋವಿನ ಸಂಗತಿ. ಬೃಹತ್ ಕಾರ್ಖಾನೆ ಸ್ಥಾಪಿಸಿ, ವಿದ್ಯಾವಂತ ನಿರುದ್ಯೋಗಿ ಯುವಕರಿಗಾಗಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ಯಾವ ಪಕ್ಷದವರೂ ನೀಡಿಲ್ಲ. ಸಾರ್ವಜನಿಕ ಭಾಷಣ ಅಭಿವೃದ್ಧಿ ಆಧರಿತ ಇರಬೇಕು.
• ಮಲ್ಲಿಕಾರ್ಜುನ ಜಿ.ಧೂಳೆ
ಮಹಿಳೆಯರಿಂದ ಪ್ರಚಾರ ಹೆಚ್ಚಿತ್ತು
ಈ ಸಲದ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಅಭ್ಯರ್ಥಿಗಳಿಗಿಂತ ಅಭ್ಯರ್ಥಿಗಳ ಪತ್ನಿಯರ ಪ್ರಚಾರವೇ ಜೋರಾಗಿತ್ತು. ಮಹಿಳಾ ಸದಸ್ಯರ ತಂಡಗಳು ಈ ಚುನಾವಣೆಯಲ್ಲಿ ಭಾರಿ ಪ್ರಚಾರ ನಡೆಸಿದ್ದಾರೆ. ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪತ್ನಿಯರು ಮನೆ-ಮನೆಗೆ ಭೇಟಿನೀಡಿ ಮತಯಾಚನೆ ಮಾಡಿದ್ದಾರೆ. ಪತ್ನಿಯ ಸಹಾಯ ಇಲ್ಲದೆ ಗೆಲುವು ಸಾಧ್ಯವಿಲ್ಲ ಎನ್ನುವ ಸಂದೇಶವನ್ನು ಈ ಚುನಾವಣೆ ಸಾರುವಂತಿತ್ತು.
• ಬಸವಲಿಂಗ ದೇವರು,
ಹುಗ್ಗೆಳ್ಳಿಹಿರೇಮಠ ಖಟಕಚಿಂಚೋಳಿ
ಫಲಿತಾಂಶವೇ ಅಭ್ಯರ್ಥಿಗಳಿಗೆ ಉತ್ತರ
ಲೋಕಸಭಾ ಚುನಾವಣೆಯಲ್ಲಿ ವೈಯಕ್ತಿಕ ಟೀಕೆಗಳಿಗಿಂತಲೂ ಅಭಿವೃದ್ಧಿಯ ಬಗ್ಗೆ ಹೆಚ್ಚು ಮಹತ್ವ ನೀಡಬೇಕಿತ್ತು. ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷದವರು ತಮ್ಮ ಪಕ್ಷದ ಸಾಧನೆ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿ ಮಾಹಿತಿ ನೀಡುವ ಕೆಲಸವನ್ನು ಪ್ರಚಾರದ ವೇಳೆ ಮಾಡಿದ್ದಾರೆ. ಆದರೆ, ಯಾವ ಪಕ್ಷದವರು ಜನರೊಂದಿಗೆ ಎಷ್ಟು ಸ್ಪಂದಿಸಿದ್ದಾರೆ ಎಂಬುದನ್ನು ಫಲಿತಾಂಶವೇ ಅಭ್ಯರ್ಥಿಗಳಿಗೆ ಉತ್ತರವಾಗಲಿದೆ.
•ವಸಂತ ಹುಣಸನಾಳೆ,
ಮಾಜಿ ಅಧ್ಯಕ್ಷರು, ಕಸಾಪ ಭಾಲ್ಕಿ
ಕಳೆದ ಅನೇಕ ವರ್ಷಗಳಿಂದ ಕಾರಂಜಾ ಸಂತ್ರಸ್ತರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಧರಣಿ, ಪ್ರತಿಭಟನೆಗಳನ್ನು ನಿರಂತರ ನಡೆಸಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗಿದೆ. ಈ ಚುನಾವಣೆಯಲ್ಲಿ ಕಾರಂಜಾ ಸಂತ್ರಸ್ತರ ಬಗ್ಗೆ ಮಾತನಾಡಿ ಸರ್ಕಾರ ಮಟ್ಟದಲ್ಲಿ ಸೂಕ್ತ ಪರಿಹಾರ ಕೊಡಿಸುವ ಸಂಕಲ್ಪವನ್ನು ಯಾರಾದರೂ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಯಾರೂ ಆ ಬಗ್ಗೆ ಮಾತನಾಡಿಲ್ಲ. ಬರೀ ರಾಷ್ಟ್ರೀಯ ವಿಷಯಗಳೆ ಅವರಿಗೆ ಮುಖ್ಯವಾಗಿತ್ತು. ಮತ ಹಾಕುವರ ಬಗ್ಗೆ ಕಾಳಜಿ ತೊರಬೇಕಿತ್ತು.
•ನಂದಕುಮಾರ ಪಾಟೀಲ
• ಸೂರ್ಯಕಾಂತ ಔರಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.