ನೂರಾರು ಕೋಟಿ ಖರ್ಚಾದರೂ ಸಿಕ್ಕಿಲ್ಲ ನೀರು
•ಔರಾದನಲ್ಲಿ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆಗಳು ಸಂಪೂರ್ಣ ವಿಫಲ
Team Udayavani, May 8, 2019, 11:08 AM IST
ಬೀದರ: ಔರಾದ ತಾಲೂಕು ಹಾಲಹಳ್ಳಿ ಸಮೀಪ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ಹನಿ ನೀರು ಇಲ್ಲ.
ಬೀದರ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ ಔರಾದ ತಾಲೂಕು ಪ್ರಸಕ್ತ ಸಾಲಿನಲ್ಲಿ ಭೀಕರ ಬರಗಾಲಕ್ಕೆ ತುತ್ತಾಗಿದೆ. ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆಗಳು ಸಂಪೂರ್ಣ ವಿಫಲವಾಗಿವೆ. ನೂರಾರು ಕೋಟಿ ರೂ. ವೆಚ್ಚದ ಕಾಮಗಾರಿ ನಡೆದರು ಕೂಡ ಹನಿ ನೀರು ಪೂರೈಕೆಯಾಗದಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ 2007ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಿಂದ (ಕೆಬಿಜಿಎನ್‌ಎಲ್) ಔರಾದ ತಾಲೂಕು ಹಾಲಹಳ್ಳಿ ಬಳಿ ಮಾಂಜ್ರಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಇದರ ಮೂಲಕ ಔರಾದ ಪಟ್ಟಣ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಶಾಶ‌್ವತವಾಗಿ ಬಗೆಹರಿಯಬಹುದು ಎಂದು ಈ ಭಾಗದ ಜನರು ನಿರೀಕ್ಷಿಸಿದ್ದರು. ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಔರಾದ ತಾಲೂಕಿನ ಜನರು ಗಂಭೀರ ಸಮಸ್ಯೆ ಎದುರಿಸುತಿದ್ದಾರೆ.
ಮಾಂಜ್ರಾ ನದಿಯಲ್ಲಿ ನಿಂತಿಲ್ಲ ನೀರು: 2007-08ರಲ್ಲಿ ಆರಂಭವಾದ ಸೇತುವೆ ಕಾಮಗಾರಿಗೆ 58 ಕೋಟಿ ರೂ. ಹಾಗೂ ಗೋಡಬಾಲೆ ಗೇಟ್‌ಗಳಿಗೆ 20 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾಮಗಾರಿಗೆ ಒಟ್ಟು 78 ಕೋಟಿ ರೂ. ವೆಚ್ಚ ಮಾಡಲಾಗಿದೆಯಾದರೂ ಮಾಂಜ್ರಾ ನದಿ ನೀರು ಮಾತ್ರ ಈ ಸ್ಥಳದಲ್ಲಿ ನಿಂತಿಲ್ಲ.
ಮಳೆ ನೀರು ತಡೆಯುವ ಶಕ್ತಿ ಗೇಟ್‌ಗಳಿಗಿಲ್ಲ: 2016ರಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿಕೊಂಡಿರುವ ಅಧಿಕಾರಿಗಳು ಆ ವರ್ಷದಲ್ಲಿ ಸುರಿದ ಭಾರಿ ಮಳೆಗೆ ಸೇತುವೆ ಗೇಟ್‌ಗಳಿಗೆ ತಡೆಯುವ ಶಕ್ತಿ ಇಲ್ಲದ್ದರಿಂದ ನೀರು ಹರಿದು ಹೋಗಿದೆ. ಕಳಪೆ ಕಾಮಗಾರಿ ನಡೆದಿದೆ ಎಂದು ಅನೇಕರು ಆ ಸಂದರ್ಭದಲ್ಲಿ ಆರೋಪಿಸಿದ್ದರು. ಆರೋಪ ಮಾಡಿದವರು ನಂತರದ ದಿನಗಳಲ್ಲಿ ಸೇತುವೆ ಕಡೆಗೆ ಹೋಗುವುದನ್ನೇ ಮರೆತಿದ್ದಾರೆ.
ನೀರಿನ ಸಾಮರ್ಥ್ಯ: 26 ಗೇಟ್‌ಗಳ ಬೃಹತ್ ಗಾತ್ರದ ಬ್ರಿಜ್ ಕಂ ಬ್ಯಾರೇಜ್ 0.54 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಔರಾದ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಶಾಶ‌್ವತ ಕುಡಿಯುವ ನೀರು ಪೂರೈಕೆಗೆ ಹಾಗೂ ಸುಮಾರು 3,366 ಹೆಕ್ಟೇರ್ ಪ್ರದೇಶ ನೀರಾವರಿಗೊಳಿಸುವ ಯೋಜನೆ ಇದಾಗಿದೆ.
ತಾಂತ್ರಿಕ ವೈಫಲ್ಯ: ತಾಂತ್ರಿಕ ವೈಫಲ್ಯದಿಂದಾಗಿ ನೀರು ತಡೆಯುವಲ್ಲಿ ಬ್ಯಾರೇಜ್‌ನ ಗೋಡಬಾಲೆ ಗೇಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮಳೆ ನೀರನ್ನು ಸರಾಗವಾಗಿ ಗೇಟ್ ಆಚೆಗೆ ಚೆಲ್ಲುತ್ತಿವೆ. ಹಾಗಾಗಿ ಬೇಸಿಗೆ ಮುನ್ನವೇ ಬ್ಯಾರೇಜ್ ಖಾಲಿಯಾಗುತ್ತಿದೆ. ಮಳೆ ದಿನಗಳಲ್ಲಿ ಹರಿದುಬರುವ ನೀರು ನಿಗದಿತ ಪ್ರಮಾಣದಲ್ಲಿ ನಿಂತು ಹೆಚ್ಚಾದ ನೀರು ಗೇಟ್ ಮೇಲಿಂದ ಹರಿಯಬೇಕು. ಆದರೆ, ಮಳೆಗಾಲದಲ್ಲಿ ಬರುವ ನೀರು ಗೇಟ್ ಕೆಳಗಡೆಯಿಂದಲೂ ಹರಿದು ಹೋಗುತ್ತಿದೆ ಎಂಬುದು ಸ್ಥಳೀಯರ ಆರೋಪ.
ಪೈಪ್‌ಲೈನ್-ಟ್ಯಾಂಕ್ ನಿರ್ಮಾಣ: ಹಾಲಹಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಆರಂಭವಾದ ನಂತರ ಶಾಶ್ವ್ವತ ಕುಡಿಯುವ ನೀರು ಪೂರೈಕೆಯಾಗುತ್ತದೆ ಎಂದು ನಂಬಿರುವ ವಿವಿಧ ಗ್ರಾಪಂ ಹಾಗೂ ಔರಾದ ಪಪಂ ಕ್ರಿಯಾ ಯೋಜನೆ ತಯಾರಿಸಿ ಸಂಬಂಧಿಸಿದ ಇಲಾಖೆಗೆ ಸಲ್ಲಿಸಿದೆ. ಕಳೆದ ಮೂರು ವರ್ಷಗಳ ಹಿಂದೆ ವಿವಿಧ ಗ್ರಾಮಗಳಲ್ಲಿ ಹಾಗೂ ಔರಾದ ಪಟ್ಟಣದವರೆಗೆ ಪೈಪ್‌ಲೈನ್ ಅಳವಡಿಸಲಾಗಿದೆ. ನೀರು ಶೇಖರಣೆಗೆ ವಿವಿಧೆಡೆ ಟ್ಯಾಂಕ್ ಸಹ ನಿರ್ಮಿಸಲಾಗಿದೆ. ಆದರೆ, ಇಂದಿಗೂ ಹನಿ ನೀರು ಬಾರದಿರುವುದು ಔರಾದ ತಾಲೂಕಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜಕಾರಣಿಗಳು ಮೌನ: ಔರಾದ ತಾಲೂಕು ಕುಡಿಯುವ ನೀರಿಗಾಗಿ ಪದೇ ಪದೇ ಗಂಭೀರ ಸಮಸ್ಯೆ ಎದುರಿಸುತ್ತಿದ್ದರು ಕೂಡ ರಾಜಕಾರಣಿಗಳು ಯಾವ ಕಾರಣಕ್ಕೆ ಹಾಲಹಳ್ಳಿ ಬ್ಯಾರೇಜ್ ಬಗ್ಗೆ ಮಾತಾಡುತ್ತಿಲ್ಲ. ಕಾರಂಜಾ ಜಲಾಶಯದಿಂದ ನೀರು ನೀಡಿ ಎಂದು ಪತ್ರ ಬರೆಯುತ್ತಾರೆ. ಆದರೆ ಆ ನೀರು ಎಲ್ಲಿ ಸಂಗ್ರಹಿಸುತ್ತಾರೆ ಎಂಬ ಆಲೋಚನೆ ಕೂಡ ಅವರಿಗೆ ಇಲ್ಲವೇ? ರಾಜಕಾರಣಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿರುವ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದೆ ಎಂದು ವಿವಿಧ ಗ್ರಾಮಗಳ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಯಿಲ್ಲ
ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಎಷ್ಟು ಖರ್ಚಾಗಿದೆ? ಯೋಜನೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲ. ಹೆಚ್ಚಿನ ಮಾಹಿತಿಗೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಭೀಮರಾಯನಗುಡಿಯಲ್ಲಿರುವ ಇಲಾಖೆಗೆ ಸಂಪರ್ಕಿಸಬೇಕು. ಆದರೆ, ಸದ್ಯ ಕಾಮಗಾರಿ ನಡೆಯುತ್ತಿದ್ದು, ಮೇ ತಿಂಗಳ ಅಂತ್ಯದಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿದೆೆ. ಈ ವರ್ಷದ ಮಳೆಗಾಲದಲ್ಲಿ ಮಳೆ ನೀರು ನಿಲ್ಲುವ ವಿಶ್ವಾಸವಿದೆ.
•ಮಾರುತಿ ಗಾಯಕವಾಡ,
ಎಇಇ ಕೆಬಿಜೆಎನ್‌ಎಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.