ಯೋಗದಿಂದ ಆರೋಗ್ಯಕರ ಸಮಾಜ
•ಯೋಗಾಭ್ಯಾಸ ಮಾಡಿ ಗಮನ ಸೆಳೆದ ಜಿಲ್ಲಾಧಿಕಾರಿ ಡಾ| ಮಹಾದೇವ-ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ
Team Udayavani, Jun 22, 2019, 10:13 AM IST
ಬೀದರ: ಜಿಲ್ಲಾಡಳಿತ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಉದ್ಘಾಟಿಸಿದರು.
ಬೀದರ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಪತಾಂಜಲಿ ಯೋಗ ಸಮಿತಿ, ಆರ್ಟ್ ಆಫ್ ಲಿವಿಂಗ್ ಹಾಗೂ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಹಾಗೂ ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಅವರು ಯೋಗಾಭ್ಯಾಸ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಯೋಗ ಶಿಕ್ಷಕರಾದ ಶಿವಲೀಲಾ ಚಿದ್ರಿ ಹಾಗೂ ಸತ್ಯಪ್ರಕಾಶ ಅವರಿಂದ ಯೋಗಾಭ್ಯಾಸ ಮತ್ತು ಯೋಗ ಪ್ರದರ್ಶನ ನಡೆಯಿತು.
ಈ ವೇಳೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಚಿದ್ರಿ ಮಾತನಾಡಿ, ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದ್ದು, ಯೋಗಾಭ್ಯಾಸದಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ| ಶಾರದಾ ಸಾಂಬ್ರೆಕರ್, ಯೋಗದ ಮಹತ್ವ ಕುರಿತು ವಿವರಣೆ ನೀಡಿದರು. ಆರ್ಟ್ ಆಫ್ ಲಿವಿಂಗ್‌ನ ಜಯಲಕ್ಷಿ ್ಮೕ ಮಾತನಾಡಿದರು.
ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ರವೀಂದ್ರ ಮೂಲಗೆ, ಸಿದ್ರಾಮೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಡಾ| ರೂಪೇಶ ಏಕಲಾರಕರ, ಎನ್.ಕೆ.ಜಾಬಶೆಟ್ಟಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಾಗರಾಜ ಮೂಲಿಮನಿ, ಶಾಹೀನ್ ಶಿಕ್ಷಣ ಸಂಸ್ಥೆಯ ಡಾ| ಅಬ್ದುಲ್ ಖದೀರ್, ಪತಾಂಜಲಿ ಯೋಗ ಸಮಿತಿ, ಆರ್ಟ್ ಆಫ್ ಲಿವಿಂಗ್ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.