ದೇಶದ ಪ್ರಶ್ನಾತೀತರಾಗಲು ಹೊರಟ ಮೋದಿ
ಬಿಜೆಪಿ ಭಾವನಾತ್ಮಕ ವಿಷಯ ಎದುರಿಟ್ಟು ಚುನಾವಣೆ ನಡೆಸುವುದು ಸರಿಯಲ್ಲ: ದಿನೇಶ್ ಗುಂಡೂರಾವ್
Team Udayavani, Apr 22, 2019, 4:31 PM IST
ಬೀದರ: ನಗರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಧ್ಯಮದವರೊಂದಿಗೆ ಮಾತನಾಡಿದರು.
ಬೀದರ: ನರೇಂದ್ರ ಮೋದಿ ದೇಶದ ಪ್ರಶ್ನಾತೀತರಾಗಲು ಹೊರಟಿದ್ದಾರೆ. ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.
ನಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸುಳ್ಳುಗಳನ್ನು ಹೇಳಿ ಅಧಿಕಾರಕ್ಕೇರಿದ ಮೋದಿ ಕಳೆದ ಐದು ವರ್ಷಗಳಲ್ಲಿ ಒಮ್ಮೆಯೂ ಮಾಧ್ಯಮ ಗೋಷ್ಠಿ ನಡೆಸಿಲ್ಲ. ತಮ್ಮನ್ನು ಯಾರೂ ಪ್ರಶ್ನಿಸಬಾರದು ಎಂಬ ನಿಲುವು ಹೊಂದಿದ್ದಾರೆ. ಇದು ರಾಜಕೀಯದಲ್ಲಿ ಸರಿಯಾದ ಬೆಳವಣಿಗೆ ಅಲ್ಲ ಎಂದು ಕಿಡಿ ಕಾರಿದರು.
ಭಾವನಾತ್ಮಕ ವಿಷಯಗಳನ್ನು ಎದುರಿಟ್ಟು ಚುನಾವಣೆ ನಡೆಸುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಅನೇಕ ಹೋರಾಟ ಮಾಡಿದ ಪಕ್ಷವಾಗಿದೆ. ಆದರೆ, ಚುನಾವಣೆಗೆ ಆ ವಿಷಯಗಳನ್ನು ಯಾವತ್ತೂ ಬಳಸಿಕೊಂಡಿಲ್ಲ ಎಂದರು.
ರೈತರ ಸಮಸ್ಯೆ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಬಿಜೆಪಿ ಚಕಾರ ಎತ್ತುವುದಿಲ್ಲ. ಬರೀ ಪಾಕಿಸ್ತಾನದ ಹೆಸರಲ್ಲಿ ಪ್ರಚಾರ ನಡೆಸುತ್ತಿದೆ. ಇಂಥ ಚುನಾವಣೆಯನ್ನು ತಾವು ತಮ್ಮ ರಾಜಕೀಯ ಜೀವನದಲ್ಲಿ ಒಮ್ಮೆಯೂ ಕಂಡಿಲ್ಲ ಎಂದು ಕುಟುಕಿದರು.
ಮೋದಿ ಆಡಳಿತದಲ್ಲಿ ದೇಶದ ಪ್ರತಿಷ್ಠಿತ ಸಂಸ್ಥೆಗಳ ಮೇಲಿನ ನಂಬಿಕೆ ಕಡಿಮೆಯಾಗುವಂತೆ ಮಾಡಿದ್ದಾರೆ. ಇಡಿ, ಸಿಬಿಐ, ಆರ್‌ಬಿಐ ಮೇಲಿನ ನಂಬಿಕೆ ಕಡಿಮೆಯಾಗಿದೆ. ಈಗ ಚುನಾವಣೆ ಆಯೋಗದ ಮೇಲೂ ಇಂಥವೇ ಅಪವಾದಗಳು ಬರುತ್ತಿವೆ ಎಂದರು.
ದೇಶ ಪ್ರೇಮದ ಬಗ್ಗೆ ಮಾತಾಡುವ ಬಿಜೆಪಿ ಮಧ್ಯಪ್ರದೇಶದ ಭೂಪಾಲ್ ಲೋಕಸಭೆ ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಯಾಗಿ ಮಾಳೆಗಾಂವ್ ಬಾಂಬ್ ನ್ಪೋಟ್ದ ಪ್ರಮುಖ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ. ಉಗ್ರಗಾಮಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪಿಗೆ ಬಿಜೆಪಿ ಅದು ಹೇಗೆ ಟಿಕೆಟ್ ನೀಡಲು ಮುಂದಾಗಿದೆ? ಇದೇ ಕೆಲಸವನ್ನು ಕಾಂಗ್ರೆಸ್ ಮಾಡಿದ್ದರೆ ಸುಮ್ಮನಿರುತ್ತಿದ್ದರಾ? ಬಿಜೆಪಿಯೊಂದು ರಾಷ್ಟ್ರ ವಿರೋಧಿ ಪಕ್ಷವಾಗಿದೆ. ಇದೇ ಪ್ರಜ್ಞಾ ಸಿಂಗ್ ಠಾಕೂರ್, ಆತಂಕವಾದಿಗಳ ಜೊತೆ ನಡೆದ ಕಾಳಗದಲ್ಲಿ ಹುತಾತ್ಮರಾಗಿರುವ ಕರ್ಕರೆ ಸಾವಿಗೆ ತಮ್ಮ ಶಾಪವೇ ಕಾರಣ ಎಂದಿರುವ ಪ್ರಜ್ಞಾ ಮನಸ್ಥಿತಿ ಏನನ್ನು ತೋರಿಸುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.
ಬಾಲಾಕೋಟ್, ಕಾಶ್ಮೀರ ಹೆಸರಲ್ಲಿ ಚುನಾವಣೆ ಪ್ರಚಾರ ನಡೆಸುವ ಬಿಜೆಪಿ ಕೇಂದ್ರದಲ್ಲಿ ಪೂರ್ಣ ಬಹುಮತ ಇದ್ದರೂ ಜಮ್ಮು-ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ 370(ಎ) ರದ್ದುಗೊಳಿಸಲು ಏಕೆ ಸಾಧ್ಯವಾಗಿಲ್ಲ? ಅಲ್ಲಿನ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವ ಪಿಡಿಪಿ ಪಕ್ಷದ ಜೊತೆ ಸೇರಿ ಆಡಳಿತ ನಡೆಸಿದ ಮೋದಿ ಅವರ ಸ್ಥಾನಮಾನ ಏಕೆ ರದ್ದುಗೊಳಿಸಿಲ್ಲ. ಮೋದಿ ಓರ್ವ ಮಹಾನ್ ಸುಳ್ಳುಗಾರ ಎಂದು ಜರಿದರು.
ವೀರಶೈವ-ಲಿಂಗಾಯತ ಮುಗಿದ ಅಧ್ಯಾಯ, ಈ ವಿಷಯಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಈ ವಿಷಯ ಸರ್ಕಾರಕ್ಕೂ ಹಾಗೂ ಆ ಸಮುದಾಯದ ಮುಖಂಡರಿಗೆ ಬಿಟ್ಟಿದ್ದು. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಚುನಾವಣೆಯ ನಂತರ ಕೂಡ ಮೈತ್ರಿ ಸರ್ಕಾರ ಮುಂದುವರಿಯುತ್ತದೆ. ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಕರ್ನಾಟಕದಲ್ಲಿ 21 ಸ್ಥಾನಗಳನ್ನು ಗೆಲ್ಲುವುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆ, ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವ ರಹೀಂ ಖಾನ್, ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ್ ಜಾಬಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.