ಇಡೀ ಊರಿಗೆ ಕೇವಲ 10 ಅಡಿ ಜಾಗ!
ಬೋರಾಳ ಗ್ರಾಮದಲ್ಲಿಲ್ಲ ಸ್ಮಶಾನ ಭೂಮಿಖಾಸಗಿ ವ್ಯಕ್ತಿಗಳ ಹೊಲದ ಅಂಚು ಬಳಕೆ
Team Udayavani, Jan 6, 2020, 1:21 PM IST
ಔರಾದ: ಬೋರಾಳ ಗ್ರಾಮದಲ್ಲಿ ಯಾರಾದರೂ ಮೃತಪಟ್ಟಾಗ, ಖಾಸಗಿ ವ್ಯಕ್ತಿಗಳು ನೀಡಿದ ಹೊಲದ ಅಂಚಿನ ಕಾಲುವೆ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡುವುದೇ ಸವಾಲಿನ ಕೆಲಸವಾಗಿ ಪರಿಣಮಿಸಿದೆ.
ಗ್ರಾಮದಲ್ಲಿ 120ಕ್ಕೂ ಹೆಚ್ಚು ಎಸ್‌ಸಿ ಸಮುದಾಯದ ಕುಟುಂಬಗಳಿವೆ. ಆದರೆ ಇಲ್ಲಿ ಜನರು ಮೃತಪಟ್ಟಾಗ ಅಂತ್ಯಕ್ರಿಯೆ ಮಾಡಲು ಖಾಸಗಿ ವ್ಯಕ್ತಿಗಳು ನೀಡಿದ ಕೇವಲ ಹತ್ತು ಅಡಿ ಕಾಲುವೆಯ ಜಾಗವೇ ಗತಿಯಾಗಿದೆ. ಮಳೆಗಾಲದಲ್ಲಿ ಅದು ನೀರು ಹರಿಯುವ ಸ್ಥಳವಾಗಿದ್ದು, ಇಬ್ಬರು ಸಹೋದರರ ಹೊಲದ ಅಂಚಿನ ಸ್ಥಳ ಆದಾಗಿದೆ. ಹಾಗಾಗಿ ಮಳೆಗಾಲದಲ್ಲಿ ಅಲ್ಲಿ ಮಳೆಯ ನೀರು ಹರಿದು ಹೋವುದರಿಂದ, ಶವ ಹೂಳಲು ಭೂಮಿ ಅಗಿಯುವಾಗ ಗುಂಡಿಯಲ್ಲಿ ತುಂಬಿಕೊಳ್ಳುವ ನೀರು ತೆಗೆಯುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಈ ಕುರಿತು ತಾಲೂಕು ಆಡಳಿತಕ್ಕೆ ಸುಮಾರು 45 ಬಾರಿ ಮನವಿ ಸಲ್ಲಿಸಿದ್ದಾರೆ.
ಗ್ರಾಮದ ಮುಖಂಡ ಹಾಗೂ ದಲಿತ ಸಂಘಟನೆ ತಾಲೂಕು ಅಧ್ಯಕ್ಷ ಉಮಕಾಂತ ಸೋನೆ ಅವರು ಈ ವಿಷಯ ಕುರಿತು ತಾಲೂಕು ಆಡಳಿತಾಧಿಕಾರಿ ಕಚೇರಿ ಎದುರು ಆರು ಬಾರಿ ಪ್ರತಿಭಟನೆ, ಎರಡು ಬಾರಿ ಉಪವಾಸ ಸತ್ಯಾಗ್ರಹ ಮತ್ತು ಒಂದು ಬಾರಿ ತಹಶೀಲ್ದಾರ್ ಕಚೇರಿ ಎದುರು ಶವ ಇಟ್ಟು ಹೋರಾಟ ಮಾಡಿದಾಗ, ಸ್ಮಶಾನ ಭೂಮಿ ನೀಡುವುದಾಗಿ ಹೇಳಿಕೆ ನೀಡಿದ್ದ ತಾಲೂಕು ಆಡಳಿತ ಇಂದಿಗೂ ಈ ಊರಿಗೆ ಸ್ಮಶಾನ ಭೂಮಿ ನೀಡಿಲ್ಲ. ಇದರಿಂದ ದಲಿತ ಬಡಾವಣೆಯಲ್ಲಿ ಜನರು ಮೃತಪಟ್ಟಾಗ ಸಮಸ್ಯೆಗಳಾಗುತ್ತಿದೆ.
ನಮಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಸರ್ಕಾರ ಪ್ರತಿವರ್ಷ ವಿನೂತನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ಅದರಂತೆ ಶಾಶ್ವತ ಸ್ಮಶಾನ ಭೂಮಿ ನೀಡಿದರೆ ನಮ್ಮ ತಲತಲಾಂತರದಿಂದ ಬಂದ ಸ್ಮಶಾನ ಭೂಮಿಯ ಸಮಸ್ಯೆ ಈಡೇರುತ್ತದೆ ಎನ್ನುತ್ತಾರೆ ಅಲ್ಲಿನ ಜನರು.
ಬೋರಾಳ ಗ್ರಾಮದಲ್ಲಿ 30 ಎಕರೆ ಸರ್ಕಾರಿ ಗೋಮಾಳ ಭೂಮಿ ಇದೆ. ಅದರಲ್ಲಿನ ಒಂದು ಎಕರೆ ಭೂಮಿ ನೀಡುವಂತೆ ತಹಶೀಲ್ದಾರ್‌ಗೆ, ಜಿಲ್ಲಾ ಧಿಕಾರಿಗಳಿಗೆ, ಶಾಸಕರಿಗೆ ಎರಡು ವರ್ಷಗಳ ಹಿಂದೆಯೇ ಪತ್ರ ಬರೆಯಲಾಗಿದೆ. ಆದರೂ ನಮ್ಮ ಸಮಸ್ಯೆ ಬಗೆ ಹರಿದಿಲ್ಲ. ಗ್ರಾಮದ ಮುಖಂಡರು ನೀಡಿದ 10 ಅಡಿ ಭೂಮಿಯಲ್ಲಿ ಒಬ್ಬರ ಅತ್ಯಕ್ರಿಯೆ ಮಾಡಲು ಹೋದರೆ ಇನ್ನೊಬ್ಬರ ಕುಣಿ ಅಗೆಯುವ ಕೆಲಸವಾಗುತ್ತಿದೆ. ಎರಡು ಮೂರು ದಿನಗಳ ಅಂತರದಲ್ಲಿ ಇನ್ನೊಬ್ಬರು ಮೃತಪಟ್ಟರೆ ಅತ್ಯಕ್ರಿಯೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಗ್ರಾಮದ ಜನರು.
ಅಧಿಕಾರಿಗಳು ಸರ್ಕಾರಿ ಕಚೇರಿಯಲ್ಲಿ ಕುಳಿತುಕೊಂಡು ವೇತನ ಪಡೆದರೆ ಸಾಲದು.
ನಮ್ಮೂರಿನ ಸಮಸ್ಯೆ ಅರಿತುಕೊಂಡು ಬಗೆ ಹರಿಸಬೇಕು. ಇಲ್ಲವಾದಲ್ಲಿ ಊರಿನ ಜನರೆಲ್ಲ ಸೇರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ರವೀಂದ್ರ ಮುಕ್ತೇದಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.