ಖೇಣಿ ವಿರುದ್ಧ ಅಬ್ರಾಹಂ ಅಖಾಡಕ್ಕೆ
Team Udayavani, Apr 2, 2018, 1:31 PM IST
ಬೀದರ: ನೈಸ್ ಅಕ್ರಮ ಮತ್ತು ಅಮೆರಿಕದ ನಾಗರಿಕತ್ವಕ್ಕೆ ಸಂಬಂಧಿಸಿದಂತೆ ಶಾಸಕ ಅಶೋಕ ಖೇಣಿ ವಿರುದ್ಧ ಕಳೆದ ಹಲವು ವರ್ಷಗಳಿಂದ ಕಾನೂನು ಸಮರ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಇದೀಗ ಖೇಣಿ ವಿರುದ್ಧ ಮತ್ತೂಮ್ಮೆ ಚುನಾವಣಾ ಅಖಾಡಕ್ಕಿಳಿದು ಮಣಿಸಲು ಸಜ್ಜಾಗಿದ್ದಾರೆ.
ನೈಸ್ ರಸ್ತೆ ನಿರ್ಮಾಣದಲ್ಲಿನ ಅಕ್ರಮ ಕುರಿತಂತೆ ಕಳೆದ ಕೆಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಶುರು ಮಾಡಿದ್ದ ಅಬ್ರಾಹಂ, ನಂತರ ಖೇಣಿ ಅವರ ಪೌರತ್ವ ಪ್ರಶ್ನಿಸಿ ಮತ್ತು ಮತದಾನ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕುರಿತು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ಮೊಕದ್ದಮೆಗಳನ್ನು ಹೂಡಿ, ಕಾನೂನು ಸಮರ ನಡೆಸುತ್ತ ಬಂದಿದ್ದಾರೆ.
ಈಗ ಎರಡನೇ ಬಾರಿಗೆ ಚುನಾವಣಾ ಕದನದಲ್ಲಿ ಖೇಣಿ ವಿರುದ್ಧ ಮುಖಾಮುಖೀ ಆಗಲು ನಿರ್ಧರಿಸಿದ್ದಾರೆ. ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ ಖೇಣಿ ಅವರು 2013ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಮಕ್ಕಳ ಪಕ್ಷದಿಂದ ತವರು ಕ್ಷೇತ್ರ ಬೀದರ ದಕ್ಷಿಣದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆ ವೇಳೆ ಸಾಂಕೇತಿಕವಾಗಿ ಸ್ಪರ್ಧಿಸಿದ್ದ ಟಿ.ಜೆ. ಅಬ್ರಾಹಂ, ಈ ಬಾರಿ ಖೇಣಿಯವರನ್ನು ಸೋಲಿಸುವ ಶತಾಯಗತಾಯ ಪ್ರಯತ್ನಕ್ಕಿಳಿದಿದ್ದಾರೆ. ಇದಕ್ಕಾಗಿ ಜೆಡಿಎಸ್ ಮತ್ತು ಬಿಜೆಪಿಯ ಬಾಗಿಲು ತಟ್ಟಿದ್ದಾರೆ.
ಈ ಹಿಂದಿನ ಚುನಾವಣೆಯಲ್ಲಿ ಅಬ್ರಾಹಂ ಅವರು ಶಾಸಕ ಖೇಣಿ ವಿರುದ್ಧ ಸ್ವತಂತ್ರವಾಗಿ ಕಣಕ್ಕಿಳಿದಿದ್ದರು. ಖೇಣಿ ಒಬ್ಬ ಭ್ರಷ್ಟರಾಗಿದ್ದು, ಅಕ್ರಮಗಳ ಮೂಲಕ ವಂಚಿಸುತ್ತಿದ್ದಾರೆ. ಹಾಗಾಗಿ ತಮಗೆ ಮತ ಹಾಕದಿದ್ದರೂ ಪರವಾಗಿಲ್ಲ, ಖೇಣಿಗೆ ಓಟ್ ಹಾಕಬೇಡಿ ಎಂದು ಚುನಾವಣಾ ಪ್ರಚಾರದ ವೇಳೆ ಕರ ಪತ್ರಗಳನ್ನು ಹಂಚಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಆಗ ಅತಿ ಕಡಿಮೆ ಮತಗಳನ್ನು ಪಡೆದಿದ್ದರು.
ಸಧ್ಯ ಕಾಂಗ್ರೆಸ್ ಪಾಳಯಕ್ಕೆ ಜಿಗಿದಿರುವ ಖೇಣಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಇನ್ನೊಂದೆಡೆ ಖೇಣಿ ವಿರುದ್ಧ ತೊಡೆ ತಟ್ಟಿರುವ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿರುವ ಅಬ್ರಾಹಂ ಮತ್ತೂಮ್ಮೆ ಬೀದರ ದಕ್ಷಿಣ ಕ್ಷೇತ್ರದಿಂದ ನಾಮಪತ್ರ ಪತ್ರ ಸಲ್ಲಿಸಲು ಮುಂದಾಗಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ತಮ್ಮ ಪಕ್ಷದ ಚಿಹ್ನೆಯಡಿ ಖೇಣಿ ವಿರುದ್ಧ ಸ್ಪರ್ಧಿಸಲು ಸಮ್ಮತಿ ಸೂಚಿಸುವಂತೆ ಕೋರಿರುವ ಅವರು, ಪಕ್ಷಗಳಿಂದ ಟಿಕೆಟ್ ಕೊಡದಿದ್ದರೂ ಖೇಣಿ ವಿರುದ್ಧ ನಾನು ಸ್ಪ ರ್ಧಿಸುವುದು ಖಚಿತ ಎಂದು ಹೇಳಿದ್ದಾರೆ
ಜನ ಜಾಗೃತರಾಗಿದ್ದಾರೆ
ಅಶೋಕ್ ಖೇಣಿ ವಿರುದ್ಧ ಅಕ್ರಮಗಳ ಕುರಿತಂತೆ ಹಲವು ಮೊಕದ್ದಮೆಗಳನ್ನು ನ್ಯಾಯಾಲಯದಲ್ಲಿ ಹೂಡಿ ರೈತರು ಮತ್ತು ಸರ್ಕಾರಕ್ಕೆ ಅವರು ಮೋಸ ಮಾಡಿರುವುದನ್ನು ಬಯಲಿಗೆಳೆದಿರುತ್ತೇನೆ. ಕಳೆದ ಬಾರಿ ಚುನಾವಣೆಯಲ್ಲಿ ಖೇಣಿ ವಿರುದ್ಧ ಸಾಂಕೇತಿಕವಾಗಿ ಸ್ಪ ರ್ಧಿಸಿ ಮತದಾರರಲ್ಲಿ ಅಕ್ರಮಗಳ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೆ. ಆದರೆ, ಬೀದರ ದಕ್ಷಿಣ ಕ್ಷೇತ್ರದ ಮುಗ್ಧ ಮತದಾರರು ಖೇಣಿಯವರ ಬಣ್ಣ ಬಣ್ಣದ ಮಾತುಗಳನ್ನು ನಂಬಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದರು. ಈಗ ಜನರು ಜಾಗೃತರಾಗಿದ್ದು, ಅಕ್ರಮದ ವಿರುದ್ಧ ಹೋರಾಡುತ್ತಿರುವ ತಮಗೆ ಈ ಬಾರಿ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ.
ವಿಶೇಷ ವರದಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.