ಜಾನುವಾರು ಕಿವಿ ಗುಂಡಿ ಅಳವಡಿಕೆ
Team Udayavani, Aug 18, 2018, 11:44 AM IST
ಬೀದರ: ಜಾನುವಾರುಗಳಿಗೆ ಕಿವಿ ಗುಂಡಿಗಳನ್ನು ಅಳವಡಿಸುವ ಕಾರ್ಯ ಒಳ್ಳೆಯ ಉದ್ದೇಶ ಹೊಂದಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಜಿಲ್ಲಾದ್ಯಂತ ಈ ಕಾರ್ಯಕ್ರಮವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆರ್.ಸೆಲ್ವಮಣಿ ಹೇಳಿದರು.
ಗೂನ್ನಳ್ಳಿಯಲ್ಲಿ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಬೀದರ ಹಾಗೂ ಬೀದರ ಕಲಬುರಗಿ ಯಾದಗಿರಿ ಹಾಲು ಒಕ್ಕೂಟ ಕಲಬುರಗಿ ಸಂಯುಕ್ತಾಶ್ರಯದಲ್ಲಿ ಇನಾಪ್ ಯೋಜನೆಯಡಿ ಗುರುವಾರ ನಡೆದ ಜಾನುವಾರುಗಳಿಗೆ ಕಿವಿ ಗುಂಡಿಗಳನ್ನು ಅಳವಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ| ರವಿ ಭೂರೆ ಪ್ರಾಸ್ತಾವಿಕ ಮಾತನಾಡಿ,
ಜಿಲ್ಲೆಯಲ್ಲಿ ಒಟ್ಟು 1.50 ಲಕ್ಷ ಕಿವಿಗುಂಡಿಗಳನ್ನು ಹಾಕಬೇಕಿದೆ. ಆದ್ದರಿಂದ ನಾವು ಈ ಕಾರ್ಯವನ್ನು ಸಮಾರೋಪಾದಿಯಲ್ಲಿ
ಮಾಡಬೇಕಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು. ಕಿವಿ ಗುಂಡಿಗಳನ್ನು ಅಳವಡಿಸಿಕೊಳ್ಳಲು ಜನರು ಮುಂದೆ ಬರಬೇಕು. ಇದಕ್ಕೆ ಜನರು ಬೇಡ ಅನ್ನಬಾರದು ಎಂದು ತಿಳಿಸಿದರು.
ಚಿಟ್ಟಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರತಿಭಾ ವಿದ್ಯಾಸಾಗರ ಸ್ವಾಮಿ ಮಾತನಾಡಿ, ಜಾನುವಾರುಗಳು ದೇವರಿದ್ದಂತೆ.
ಹಸು ಹಾಗೂ ಎಮ್ಮೆ ಹಾಲಿನಲ್ಲಿ ಹೆಚ್ಚು ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ. ಮಕ್ಕಳು ಆರೋಗ್ಯದಿಂದ
ಬಾಳಿ ಬದುಕಲು ಹಾಲು ಅತಿ ಅವಶ್ಯವಾಗಿದೆ. ಆದ್ದರಿಂದ ಪ್ರತಿ ಮನೆಯಲ್ಲೂ ಹಸು, ಎಮ್ಮೆಗಳನ್ನು ಸಾಕಲು ಜನರು
ಮುಂದಾಗಬೇಕು ಎಂದು ತಿಳಿಸಿದರು. ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ ಮಾತನಾಡಿ, ಜಾನುವಾರುಗಳಿಗೆ ಕಿವಿ ಗುಂಡಿಗಳನ್ನು ಹಾಕುವುದರಿಂದ ರೈತರಿಗೆ ಬಹಳ ಅನುಕೂಲವಾಗಲಿದೆ. ಆದ್ದರಿಂದ ಜಿಲ್ಲೆಯ ಪ್ರತಿಯೊಬ್ಬ ರೈತರು ತಮ್ಮ ಜಾನುವಾರುಗಳಿಗೆ ಕಿವಿ ಗುಂಡಿಗಳನ್ನು ಅಳವಡಿಸಲು ಕಾಳಜಿ ವಹಿಸಬೇಕು. ದೇಶಿ ಆಕಳು ಸಾಕಣೆ ಪ್ರಮಾಣ ಕಡಿಮೆಯಾಗಿದೆ.
ಆದ್ದರಿಂದ ರೈತರು ಜಾನುವಾರು ಸಾಕುವುದನ್ನು ಪರಿಪಾಠವನ್ನಾಗಿಸಿಕೊಳ್ಳಬೇಕು. ರೈತರು ಜಾನುವಾರುಗಳನ್ನು ಹೆಚ್ಚು ಸಂಖ್ಯೆಯಲ್ಲಿ ಸಾಕುವುದರಿಂದ ಬೆಳೆ ಉತ್ಪಾದನಾ ವೆಚ್ಚ ಕಡಿಮೆಯಾಗಲಿದೆ. ಇದನ್ನು ಪ್ರತಿಯೊಬ್ಬ ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸ್ಥಳೀಯ ಗ್ರಾಮ್ ಪಂಚಾಯತ್ ಉಪಾಧ್ಯಕ್ಷೆ ಲಾಲಮ್ಮ ನರಸಪ್ಪ, ಸದಸ್ಯ ಗಫಾರ್‌ಸಾಬ್, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಚಂದ್ರಕಲಾ, ಕೆಎಂಎಫ್ ವ್ಯವಸ್ಥಾಪಕ ಡಾ| ಸುನೀಲಕುಮಾರ, ಉಪ ವ್ಯವಸ್ಥಾಪಕ ಮನೋಹರ ಕುಲಕರ್ಣಿ, ಪ್ರಗತಿಪರ ರೈತ ಹಣಮಂತಪ್ಪ, ಬೆಂಗಳೂರಿನ ಡಾ| ಮಲಗೋಳ್, ಡಾ| ಧನರಾಜ, ಡಾ| ಶೇಶಪ್ಪ, ಡಾ| ಓಂಕಾರ ಪಾಟೀಲ, ಡಾ| ಚಂದ್ರಶೇಖರ ಪಾಟೀಲ, ಲಲಿತಾಬಾಯಿ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.