Bidar: ‘ಶಾಹೀನ್’ನಿಂದ ಮಹಮೂದ್ ಗವಾನ್ ಮದರಸಾ ದತ್ತು
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಜತೆ ಒಡಂಬಡಿಕೆ
Team Udayavani, Aug 28, 2024, 3:17 PM IST
ಬೀದರ್: ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ಇಲ್ಲಿಯ ಐತಿಹಾಸಿಕ ಮಹಮೂದ್ ಗವಾನ್ ಮದರಸಾವನ್ನು ದತ್ತು ಸ್ವೀಕರಿಸಿದೆ.
ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ಈ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಸಮೂಹವು ಮುಂದಿನ ಐದು ವರ್ಷಗಳ ಅವಧಿಗೆ ಸ್ಮಾರಕದ ನಿರ್ವಹಣೆ ನೋಡಿಕೊಳ್ಳಲಿದೆ.
ಸ್ಮಾರಕಕ್ಕೆ ಹೊಸ ಕಳೆ ನೀಡಲಿದೆ.
ಶುದ್ಧ ಕುಡಿಯುವ ನೀರು, ಶೌಚಾಲಯ, ತ್ಯಾಜ್ಯ ನಿರ್ವಹಣೆ, ಶಿಶು ಪಾಲನಾ ಕೋಣೆಗಳು, ರ್ಯಾಂಪ್ ನಿರ್ಮಾಣ, ವಿದ್ಯುತ್ ಚಾಲಿತ ರಿಕ್ಷಾ, ಆಹಾರ ಮಳಿಗೆ, ದೀಪಾಲಂಕಾರ, ವಾಚನಾಲಯ, ಪ್ರಥಮ ಚಿಕಿತ್ಸಾ ಕೇಂದ್ರ, ಸಿಸಿಟಿವಿ ಕ್ಯಾಮೆರಾ, ವೈ-ಫೈ ಮೊದಲಾದ ಸೌಲಭ್ಯಗಳನ್ನು ಒದಗಿಸಲಿದೆ.
ಪ್ರವಾಸಿಗರಿಗೆ 14ನೇ ಶತಮಾನದಲ್ಲಿ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿದ್ದ ಮದರಸಾದ ಇತಿಹಾಸವನ್ನು ವಿವರಿಸಲು ಗೈಡ್‍ಗಳನ್ನು ನೇಮಕ ಮಾಡಲಿದೆ. ಮಹಮೂದ್ ಗವಾನ್ ಮದರಸಾ ಹಿಂದೆ ವಿಶ್ವವಿದ್ಯಾಲಯ ಆಗಿತ್ತು. ದೇಶ, ವಿದೇಶದ ವಿದ್ಯಾರ್ಥಿಗಳು ಇಲ್ಲಿಗೆ ಅಧ್ಯಯನಕ್ಕೆ ಬರುತ್ತಿದ್ದರು.
‘ಶಾಹೀನ್’ ಸಹ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಐತಿಹಾಸಿಕ ಸ್ಮಾರಕವನ್ನು ಅಭಿವೃದ್ಧಿಪಡಿಸಲು ಸ್ಮಾರಕ ದತ್ತು ಯೋಜನೆಯಡಿ ದತ್ತು ತೆಗೆದುಕೊಂಡಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದರು.
ಸ್ಮಾರಕವನ್ನು ಐದು ವರ್ಷಗಳ ಅವಧಿಯಲ್ಲಿ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.
ಸಂಘ-ಸಂಸ್ಥೆ ಹಾಗೂ ಸಾರ್ವಜನಿಕರು ಕಲೆ, ಇತಿಹಾಸ, ಪರಂಪರೆಯ ಹೆಗ್ಗುರುತು ಆಗಿರುವ ಜಿಲ್ಲೆಯ ಸ್ಮಾರಕಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈಜೋಡಿಸಬೇಕಿದೆ ಎಂದು ತಿಳಿಸಿದರು.
ಬೀದರ್‍ನಲ್ಲಿ ಇರುವಷ್ಟು ಐತಿಹಾಸಿಕ ಮಹತ್ವದ ಸ್ಮಾರಕಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಇಲ್ಲ. ಆದರೂ, ಅವುಗಳಿಗೆ ಪ್ರಾಮುಖ್ಯತೆ ನೀಡುವ ಕೆಲಸ ಅಷ್ಟಾಗಿಆಗಿಲ್ಲ. ಹರ್ಷ ಗುಪ್ತಾ ಜಿಲ್ಲಾಧಿಕಾರಿ ಆಗಿದ್ದ ಅವಧಿಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕಾರ್ಯಗಳು ಆಗಿದ್ದವು. ಇದೀಗ ಮತ್ತೆ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳು ಇವೆ. ಪ್ರವಾಸೋದ್ಯಮ ಬೆಳೆದರೆ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಶಿಕ್ಷಣ ಕೇಂದ್ರವಾಗಿದ್ದ ಗವಾನ್ ಮದರಸಾ ಬಹಮನಿ ರಾಜವಂಶದ ಪ್ರಧಾನಿ ಆಗಿದ್ದ ಮಹಮೂದ್ ಗವಾನ್ ಅವರು 1472 ರಲ್ಲಿ ಕಟ್ಟಿಸಿದ ಮದರಸಾ ಒಂದು ಕಾಲದಲ್ಲಿ ಪ್ರಸಿದ್ಧ ಶಿಕ್ಷಣ ಕೇಂದ್ರವಾಗಿತ್ತು. ಇಲ್ಲಿ ಒಂದು ಸಾವಿರ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅವಕಾಶ ಇತ್ತು. ಅರೆಬಿಕ್ ಹಾಗೂ ಪರ್ಷಿಯನ್ ಭಾಷೆಗಳಲ್ಲಿ ದೇವತಾ ಶಾಸ್ತ್ರ, ತತ್ವಶಾಸ್ತ್ರ, ಖಗೋಳಶಾಸ್ತ್ರ, ಗಣಿತಶಾಸ್ತ್ರ ಶಿಕ್ಷಣ ನೀಡಲಾಗುತ್ತಿತ್ತು. ಮದರಸಾ 3,000 ಪುಸ್ತಕಗಳ ಗ್ರಂಥಾಲಯ ಹೊಂದಿತ್ತು. ಪ್ರಾರ್ಥನಾ ಸ್ಥಳ, ಉಪನ್ಯಾಸ ಸಭಾಂಗಣ, ಪ್ರಾಧ್ಯಾಪಕರು, ವಿದ್ಯಾರ್ಥಿಗಳ ವಸತಿ ಗೃಹಗಳು ಸೇರಿ ವಿವಿಧ ವ್ಯವಸ್ಥೆಗಳು ಇಲ್ಲಿವೆ.
ಇದನ್ನೂ ಓದಿ: ಹೃದ್ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು KKRDB ಯಿಂದ 50 ಅಂಬ್ಯುಲೆನ್ಸ್: ಡಾ.ಅಜಯ ಸಿಂಗ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.