ಬೀದರ ನಗರಸಭೆ ನಾವಿಕನಿಲ್ಲದ ದೋಣಿ!
ಎಂಎಲ್‌ಸಿಗಳು ಮತ ಚಲಾಯಿಸುವ ಹಕ್ಕು ಹೊಂದಿರುವುದರಿಂದ ಕಾಂಗ್ರೆಸ್ ಬಲ ಹೊಂದಿದೆ.
Team Udayavani, Jun 1, 2023, 6:20 PM IST
ಬೀದರ: ನಗರಸಭೆ ಚುನಾವಣೆ ನಡೆದು ಬರೋಬ್ಬರಿ ಎರಡು ವರ್ಷ ಗತಿಸಿದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯದೆ ಆಡಳಿತ ವ್ಯವಸ್ಥೆಗೆ ಗ್ರಹಣ ಹಿಡಿದಂತಾಗಿದೆ. ವೈಯಕ್ತಿಕ ಹಿತಾಸಕ್ತಿ ಜತೆಗೆ, ಕೋರ್ಟ್ ತಕರಾರು, ಕೋವಿಡ್ ಮತ್ತು ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಪ್ರಥಮ ಪ್ರಜೆ ಆಯ್ಕೆ ನೆನೆಗುದಿಗೆ ಬೀಳುತ್ತ ಸಾಗಿದೆ.
ಇದರಿಂದ ಆಡಳಿತದಲ್ಲಿ ಅಧಿಕಾರಿಗಳ ದರ್ಬಾರ್ ನಡೆದಿದ್ದು, ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿವೆ. ಕೋರ್ಟ್ ತಕಾರರು ಹಿನ್ನೆಲೆ ಸುಮಾರು ಮೂರು ವರ್ಷಗಳ ಬಳಿಕ 2021ರ ಏ.27ಕ್ಕೆ ಚುನಾವಣೆ ನಡೆದಿತ್ತು. ಆದರೆ, ಕೋರ್ಟ್ ತಡೆ ಹಿನ್ನೆಲೆ ಎರಡು ವಾರ್ಡ್‌ಗಳ ಚುನಾವಣೆ ಬಾಕಿ ಉಳಿದಿದ್ದವು. ನಂತರ ಸೆ.6ರಂದು ಉಳಿದೆರಡು ಕ್ಷೇತ್ರದ ಫಲಿತಾಂಶವೂ ಹೊರ ಬಿದ್ದಿದೆ. ನಂತರ ಕೋವಿಡ್ ನೆಪವೊಡ್ಡಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಚುನಾವಣೆ ಸಂಬಂಧ ಸರ್ಕಾರ ಆದೇಶ ಹೊರಡಿಸದೇ ಮುಂದೂಡಲಾಗಿದ್ದು, ತದನಂತರ ವಿಧಾನ ಪರಿಷತ್ ಮತ್ತು ವಿಧಾನಸಭೆ ಚುನಾವಣೆ ಕಾರಣಕ್ಕೆ ಪ್ರಕ್ರಿಯೆ ಸ್ಥಗಿತಗೊಂಡಿದೆ.
ಹಾಗಾಗಿ ಪ್ರವಾಸಿ ನಗರಿ ಬೀದರ ನಗರಸಭೆಗೆ ಸದ್ಯದ ಪರಿಸ್ಥಿತಿ ನಾವಿಕನಿಲ್ಲದ ದೋಣಿಯಂತಾಗಿದ್ದು, ಇದು ನಗರಸಭೆಯಲ್ಲ, ನರಕಸಭೆ ಅಂತಾ ಸ್ಥಳೀಯ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. ಜನಪ್ರತಿನಿಧಿಗಳ ಆಡಳಿತ ಇಲ್ಲದೇ ಅಧಿಕಾರಿಗಳ
ಆಡಳಿತ ವ್ಯವಸ್ಥೆ ಜಾರಿಯಲ್ಲಿದ್ದು, ಜನರ ಆಶೋತ್ತರಗಳಿಗೆ ಸ್ಪಂದನೆ ಇಲ್ಲದಂತಾಗಿದೆ.
ಯಾವುದೇ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳು ನಗರದಲ್ಲಿ ನಡೀತಿಲ್ಲ, ಒಂದು ಮನೆ, ಖಾತೆ ಸಂಬಂಧನೋ ಅಥವಾ ಇನ್ನೇನಾಕಾದ್ರೂ ಹೋದರೂ ಕೆಲ್ಸ ಆಗುತ್ತಿಲ್ಲ. ಆಗಬೇಕು ಅಂದ್ರೆ ಅನಿವಾರ್ಯವಾಗಿ ಹಣ ಬಿಚ್ಚಲೇ ಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಸ್ಥಳೀಯರು, ಯಾರಾದ್ರೂ ನಮ್ಮ ವಾರ್ಡಿನ ಸದಸ್ಯರು, ಅಧ್ಯಕ್ಷ-ಉಪಾಧ್ಯಕ್ಷರು ಇದ್ದರೆ ಕೇಳಬಹುದು.
ಆದರೆ, ಸದ್ಯ ಇಲ್ಲಿ ಅಧಿಕಾರಿಗಳು ಆಡಿದ್ದೇ ಆಟವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಮಸ್ಯೆಗಳು ಏನೇನು?: ವಿವಿಧ ಹಣಕಾಸು ಯೋಜನೆಗಳಡಿ ನಗರಸಭೆಗೆ ಬಿಡುಗೆ ಆಗಿರುವ ಹಣವನ್ನು ಜನರ ಅಭಿವೃದ್ಧಿಗೆ ಸಮರ್ಪಕವಾಗಿ ವ್ಯಯ ಮಾಡಲು ಆಗುತ್ತಿಲ್ಲ. ಅಕಾಲಿಕ ಮಳೆ ಜತೆಗೆ ಯುಜಿಡಿ ಕಾಮಗಾರಿಯಿಂದ ಬಡಾವಣೆಗಳ ಪ್ರಮುಖ ರಸ್ತೆಗಳು ಗುಂಡಿ ಬಿದ್ದಿವೆ. ಈ ರಸ್ತೆಗಳಿಗೆ ಹೊಸದಾಗಿ ಡಾಂಬರೀಕರಣ ಮಾಡುವುದರಲಿ, ಗುಂಡಿಗಳನ್ನು ಮುಚ್ಚಲು ಆಗುತ್ತಿಲ್ಲ. ಸ್ವಚ್ಛ ಭಾರತ್ ಅಭಿಯಾನದ ಜೊತೆಗೆ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಸಿಎಂಸಿ ಕಚೇರಿಗೆ ಸಮಸ್ಯೆಗಳನ್ನು ಹೊತ್ತು ಬರುವ ಜನರಿಗೆ ಸುಲಭವಾಗಿ ಕೆಲಸಗಳು ಆಗುತ್ತಿಲ್ಲ. ಜನಪ್ರತಿನಿಧಿಗಳು ಇದ್ದರೂ ಇಲ್ಲದಂತಾಗಿದ್ದಾರೆ.
ಈಗ ಬೀದರ ಕ್ಷೇತ್ರದ ಶಾಸಕ ರಹೀಮ್ ಖಾನ್ ಅವರೇ ಪೌರಾಡಳಿತ ಖಾತೆ ಸಚಿವರಾಗಿದ್ದು, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸ್ಥಳೀಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಗೆ ಕಾಲ ಕೂಡಿ ಬರುತ್ತದಾ ಕಾದು ನೋಡಬೇಕಿದೆ.
ಆಡಳಿತ ಸನಿಹಕ್ಕೆ ಕಾಂಗ್ರೆಸ್
ಇಲ್ಲಿನ ನಗರಸಭೆ ಅಧ್ಯಕ್ಷ ಸ್ಥಾನ ಬಿಸಿಎ ಮತ್ತು ಉಪಾಧ್ಯಕ್ಷ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಒಟ್ಟು 35 ವಾರ್ಡ್ ಹೊಂದಿರುವ ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 18 ಸದಸ್ಯರ ಬಲ ಬೇಕು. ಆದರೆ, 16 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಆಡಳಿತದ ಸನಿಹಕ್ಕೆ ಬಂದಿದೆ. ಬಿಜೆಪಿ ಮತ್ತು ಜೆಡಿಎಸ್ ತಲಾ 8 ಸ್ಥಾನ ಗೆದ್ದಿದ್ದರೆ, ಎಂಐಎಂ 2 ಸ್ಥಾನ ಮತ್ತು ಆಮ್ ಆದ್ಮಿ ಪಕ್ಷ ಒಂದು ಸ್ಥಾನ ತನ್ನದಾಗಿಸಿಕೊಂಡಿದೆ. ಎಂಐಎಂ ಮತ್ತು ಆಪ್ ಬೆಂಬಲ ಪಡೆದರೆ ಕೈಗೆ ಬಹುಮತದ ಸಂಖ್ಯೆ ಸಿಗಲಿದೆ. ಇನ್ನೂ ಸ್ಥಳೀಯ ಶಾಸಕ, ಎಂಎಲ್‌ಸಿಗಳು ಮತ ಚಲಾಯಿಸುವ ಹಕ್ಕು ಹೊಂದಿರುವುದರಿಂದ ಕಾಂಗ್ರೆಸ್ ಬಲ ಹೊಂದಿದೆ.
ಐದು ವರ್ಷದಿಂದ ಅಧ್ಯಕ್ಷರಿಲ್ಲ
2013ರ ಫೆಬ್ರವರಿಯಲ್ಲಿ ಬೀದರ ನಗರಸಭೆಗೆ ಚುನಾವಣೆ ನಡೆದಿತ್ತು. ಅವಧಿ ಪೂರ್ಣಗೊಂಡ ನಂತರ ನಿಗದಿಯಂತೆ 2018ರಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ, ಕೆಲ ವಾರ್ಡ್‌ಗಳ ಮೀಸಲಾತಿ ತಕರಾರು ಸಂಬಂಧ ಕೋರ್ಟ್ ನಲ್ಲಿ ದಾವೆ ಹೂಡಿದ್ದರಿಂದ ಚುನಾವಣೆಗೆ ವಿಳಂಬವಾಗಿತ್ತು. ಪ್ರಕರಣ ಇತ್ಯರ್ಥ ಬಳಿಕ ಸರ್ಕಾರ ವಾರ್ಡ್ ಮೀಸಲು ನಿಗದಿಪಡಿಸಿ 2021ರ ಏಪ್ರಿಲ್‌ನಲ್ಲಿ ಚುನಾವಣೆ ನಡೆಸಿದೆ. ಆದರೆ, ಈಗ ಮತ್ತೆ ಹಲವು ಕಾರಣಗಳಿಂದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನೆನೆಗುದಿಗೆ ಬಿದ್ದಿದೆ.
ತಾಂತ್ರಿಕ ಸಮಸ್ಯೆ ಜತೆಗೆ ವೈಯಕ್ತಿಕ ಹಿತಾಸಕ್ತಿಯಿಂದ ಬೀದರ ನಗರಸಭೆಗೆ ಚುನಾವಣೆ ನಡೆದು ಎರಡು ವರ್ಷ ಕಳೆದರೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನೆನೆಗುದಿಗೆ ಬಿದ್ದಿದೆ. ಇದರಿಂದ ಅಧಿಕಾರಿಗಳದ್ದೇ ದರ್ಬಾರ್ ನಡೆದಿದ್ದು, ಆಡಳಿತ ವ್ಯವಸ್ಥೆ ಕುಸಿದಿದೆ. ಬೀದರ ಶಾಸಕರೇ ಪೌರಾಡಳಿತ ಸಚಿವರು ಆಗಿರುವುದರಿಂದ ಶೀಘ್ರದಲ್ಲಿ ನಗರದ ಪ್ರಥಮ ಪ್ರಜೆ ಆಯ್ಕೆಗೆ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಸದಸ್ಯರು ಒತ್ತಡ ಹಾಕುತ್ತೇವೆ.
ಶಶಿ ಹೊಸಳ್ಳಿ, ನಗರಸಭೆ ಸದಸ್ಯ
ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.